Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಅನಂತರ ಸರ್ವೇಶ್ವರ, ಮೋಶೆಗೆ ಹೇಳಿದ್ದೇನೆಂದರೆ: “ನೀನು ಫರೋಹನ ಬಳಿಗೆ ಹೋಗಿ ಹೀಗೆಂದು ಹೇಳು: ‘ಹಿಬ್ರಿಯರ ದೇವರಾದ ಸರ್ವೇಶ್ವರನು ತನ್ನನ್ನು ಆರಾಧಿಸಲು ತನ್ನ ಜನರಿಗೆ ನಿಮ್ಮಿಂದ ಹೋಗಲು ಅಪ್ಪಣೆಯಾಗಬೇಕೆಂದು ಹೇಳಿದ್ದರು.
2 : ನೀನು ಅವರಿಗೆ ಅಪ್ಪಣೆಕೊಡದೆ ಇನ್ನೂ ಅವರನ್ನು ತಡೆದೆಯಾದರೆ,
3 : ಸರ್ವೇಶ್ವರನು ನಾಡಿನಲ್ಲಿರುವ ನಿನ್ನ ಎಲ್ಲ ಕುದುರೆ, ಕತ್ತೆ, ಒಂಟೆ, ದನ, ಕುರಿ, ಆಡು ಇವೆಲ್ಲ ಪ್ರಾಣಿಗಳ ಮೇಲೆ ಕೈಯೆತ್ತಿ ದೊಡ್ಡರೋಗ ಬರುವಂತೆ ಮಾಡುವರೆಂದು ತಿಳಿದುಕೊ.
4 : ಇಸ್ರಯೇಲರ ಪಶುಪ್ರಾಣಿಗಳಿಗೂ ಈಜಿಪ್ಟಿನವರ ಪಶು ಪ್ರಾಣಿಗಳಿಗೂ ಆತನು ವ್ಯತ್ಯಾಸಮಾಡುವನು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯುವುದಿಲ್ಲವೆಂದು ಹೇಳು.
5 : ಇದಕ್ಕೆ ಕಾಲವನ್ನೂ ಆತ ನಿಗದಿಮಾಡಿದ್ದಾರೆ; ನಾಳೆಯೇ ಈ ಕಾರ್ಯವನ್ನು ನಡೆಸುವರು,’ ಎಂದು ಹೇಳು.”
6 : ಮಾರನೆಯ ದಿನವೇ ಸರ್ವೇಶ್ವರ ಈ ಕಾರ್ಯವನ್ನು ನೆರವೇರಿಸಿದರು. ಈಜಿಪ್ಟಿನವರ ಪಶುಪ್ರಾಣಿಗಳೆಲ್ಲಾ ಸಾಯುತ್ತಾ ಬಂದವು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯಲಿಲ್ಲ.
7 : ಫರೋಹನು ಆಳುಗಳನ್ನು ಕಳುಹಿಸಿ ವಿಚಾರಿಸಿದನು. ಇಸ್ರಯೇಲರ ಪಶುಪ್ರಾಣಿಗಳಲ್ಲಿ ಒಂದೂ ಸಾಯಲಿಲ್ಲವೆಂದು ತಿಳಿದುಬಂದಿತು. ಆದರೂ ಕೂಡ ಫರೋಹನ ಹೃದಯ ಕಠಿಣವಾಯಿತು. ಆ ಜನರಿಗೆ ಹೊರಡಲಿಕ್ಕೆ ಅವನು ಅಪ್ಪಣೆ ಕೊಡದೆಹೋದನು.
8 : ಸರ್ವೇಶ್ವರ, ಮೋಶೆ ಮತ್ತು ಆರೋನರಿಗೆ, “ನೀವು ಆವಿಗೆಯ ಬೂದಿಯನ್ನು ಕೈ ತುಂಬ ತೆಗೆದುಕೊಳ್ಳಿ. ಮೋಶೆ ಅದನ್ನು ಫರೋಹನ ಕಣ್ಮುಂದೆ ಆಕಾಶಕ್ಕೆ ತೂರಲಿ.
9 : ಅದು ಪುಡಿಪುಡಿಯಾಗಿ ಈಜಿಪ್ಟ್ ದೇಶದಲ್ಲೆಲ್ಲಾ ಹಬ್ಬಿ ಮನುಷ್ಯರಲ್ಲೂ ಪಶುಪ್ರಾಣಿಗಳಲ್ಲೂ ಕುರುಗಳನ್ನೆಬ್ಬಿಸಿ ಒಡೆದು ಹುಣ್ಣಾಗುವಂತೆ ಮಾಡುವುದು,” ಎಂದು ಹೇಳಿದರು.
10 : ಮೋಶೆ ಮತ್ತು ಆರೋನರು ಆವಿಗೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತುಕೊಂಡರು. ಮೋಶೆ ಆ ಬೂದಿಯನ್ನು ಆಕಾಶಕ್ಕೆ ತೂರಿದನು. ಅದು ಮನುಷ್ಯರಲ್ಲೂ ಪಶುಪ್ರಾಣಿಗಳಲ್ಲೂ ಕುರುಗಳನ್ನೆಬ್ಬಿಸಿ ಒಡೆದು ಹುಣ್ಣಾಗುವಂತೆ ಮಾಡಿತು.
11 : ಆ ಹುಣ್ಣುಗಳು ಮಂತ್ರವಾದಿಗಳಲ್ಲೂ ಈಜಿಪ್ಟಿನವರೆಲ್ಲರಲ್ಲೂ ಇದ್ದುದರಿಂದ ಆ ಮಂತ್ರವಾದಿಗಳು ಹುಣ್ಣುಗಳ ನಿಮಿತ್ತ ಮೋಶೆಯ ಮುಂದೆ ನಿಲ್ಲಲಾರದೆ ಹೋದರು.
12 : ಆದರೂ ಸರ್ವೇಶ್ವರ ಮೋಶೆಗೆ ಮುಂತಿಳಿಸಿದಂತೆಯೇ ಆಯಿತು. ಸರ್ವೇಶ್ವರ ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಅವನು ಅವರ ಮಾತಿಗೆ ಕಿವಿಗೊಡದೆ ಹೋದನು.
13 : ಬಳಿಕ ಸರ್ವೇಶ್ವರ ಮೋಶೆಗೆ ಇಂತೆಂದರು: “ನೀನು ಬೆಳಿಗ್ಗೆ ಎದ್ದು ಹೋಗಿ ಫರೋಹನ ಮುಂದೆ ನಿಂತುಕೊಂಡು ಹೀಗೆನ್ನಬೇಕು: ‘ಹಿಬ್ರಿಯರ ದೇವರಾದ ಸರ್ವೇಶ್ವರ ನಿನಗೆ ಮಾಡುವ ಆಜ್ಞೆ ಇದು - ನನ್ನನ್ನು ಆರಾಧಿಸಲು ನನ್ನ ಜನರಿಗೆ ಅಪ್ಪಣೆಕೊಡಬೇಕು.
14 : ಇಲ್ಲವಾದರೆ ಈ ಸಾರಿ ವಿಧಿಸುವ ಈ ಬಾಧೆಗಳು ನಿನ್ನ ಪ್ರಜಾಪರಿವಾರದವರಿಗೆ ಮಾತ್ರವಲ್ಲ ನಿನಗೂ ತಗಲುವುದು. ಇದರಿಂದ ಇಡೀ ಲೋಕದಲ್ಲಿ ನನಗೆ ಸಮಾನರು ಬೇರೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವೆ.
15 : ನಾನು ಕೈಯೆತ್ತಿ ನಿನ್ನನ್ನೂ ನಿನ್ನ ಪ್ರಜೆಗಳನ್ನೂ ಅಂಟುರೋಗದಿಂದ ಸಾಯಿಸಬಹುದಾಗಿತ್ತು. ಆಗ ನೀನು ಈವರೆಗೆ ಭೂಮಿಯಲ್ಲಿ ಇರದಂತೆ ನಿರ್ಮೂಲವಾಗುತ್ತಿದ್ದೆ.
16 : ಆದರೆ ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೆ ನಿನ್ನನ್ನು ಸಾಯಿಸದೆ ಉಳಿಸಿದ್ದೇನೆ.
17 : ನೀನು ನನ್ನ ಜನರನ್ನು ಇನ್ನೂ ಹೋಗಗೊಡಿಸದೆ ಅವರ ಮುಂದೆ ಅಡ್ಡಿ ಆತಂಕಗಳನ್ನು ಒಡ್ಡುತ್ತಿರುವೆಯೋ?
18 : ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆಬೀಳುವಂತೆ ಮಾಡುವೆನು. ಈಜಿಪ್ಟಿನ ರಾಜ್ಯ ಸ್ಥಾಪಿತವಾಗಿ ಇಂದಿನವರೆಗೂ ಬೀಳದಂಥ ಕಲ್ಲಿನ ಮಳೆ ಬೀಳುವುದು.
19 : ಆದಕಾರಣ ಆಳುಗಳನ್ನು ಕಳಿಸಿ ನಿನ್ನ ಪಶುಪ್ರಾಣಿಗಳನ್ನೂ ನಿನ್ನ ಹೊಲ ಗದ್ದೆಯಲ್ಲಿ ಇರುವುದೆಲ್ಲವನ್ನು ಭದ್ರಪಡಿಸು. ಮನೆಗೆ ಸೇರದೆ ಹೊರಗೆ ಇರುವ ಎಲ್ಲ ನರಮಾನವರೂ, ಪಶುಪ್ರಾಣಿಗಳೂ ಆ ಕಲ್ಲಿನ ಮಳೆಯ ಹೊಡೆತದಿಂದ ಸಾಯುವರು’.”
20 : ಫರೋಹನ ಸೇವಕರಲ್ಲಿ ಕೆಲವರು ಸರ್ವೇಶ್ವರನ ಈ ಮಾತಿಗೆ ಹೆದರಿ ತಮ್ಮ ಆಳುಗಳನ್ನೂ ಪಶುಪ್ರಾಣಿಗಳನ್ನೂ ಬೇಗನೆ ಮನೆಗೆ ಬರಮಾಡಿಕೊಂಡರು.
21 : ಮಿಕ್ಕವರು ಆ ಮಾತನ್ನು ಗಮನಕ್ಕೆ ತಂದುಕೊಳ್ಳದೆ ತಮ್ಮ ಆಳುಗಳನ್ನೂ ಪಶುಪ್ರಾಣಿಗಳನ್ನೂ ಹೊಲಗದ್ದೆಗಳಲ್ಲೇ ಬಿಟ್ಟರು.
22 : ಸರ್ವೇಶ್ವರ ಮೋಶೆಗೆ : “ಆಕಾಶದತ್ತ ನಿನ್ನ ಕೈಚಾಚು; ಆಗ ಈಜಿಪ್ಟ್ ದೇಶದಲ್ಲೆಲ್ಲಾ ಆನೆಕಲ್ಲಿನ ಮಳೆ ಬೀಳುವುದು - ಮನುಷ್ಯರ ಮೇಲೂ ಮೃಗಗಳ ಮೇಲೂ ಹೊಲದಲ್ಲಿನ ಪೈರುಪಚ್ಚೆಗಳ ಮೇಲೂ ಬೀಳುವುದು,” ಎಂದು ಹೇಳಿದರು.
23 : ಅಂತೆಯೇ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಸರ್ವೇಶ್ವರ ಗುಡುಗನ್ನೂ ಆನೆಕಲ್ಲಿನ ಮಳೆಯನ್ನೂ ಕಳುಹಿಸಿದರು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಈಜಿಪ್ಟ್ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದರು ಸರ್ವೇಶ್ವರ.
24 : ಆ ಮಳೆ ಬಲು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳ ಫಳನೆ ಹೊಳೆಯುತ್ತಿತ್ತು. ಈಜಿಪ್ಟಿನವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ.
25 : ಆ ಮಳೆಯಿಂದ ಈಜಿಪ್ಟ್ ದೇಶದ ಎಲ್ಲಾ ಕಡೆಯಲ್ಲಿ ಮನುಷ್ಯರು-ಮೃಗಗಳು ಮಾತ್ರವಲ್ಲ ಬಯಲಿನಲ್ಲಿ ಇದ್ದ ಎಲ್ಲವೂ ನಾಶವಾದುವು; ಹೊಲಗದ್ದೆಗಳಲ್ಲಿದ್ದ ಪೈರುಪಚ್ಚೆಗಳೆಲ್ಲವು ಬಿದ್ದು ಹೋದವು.
26 : ಇಸ್ರಯೇಲರು ವಾಸವಾಗಿದ್ದ ಗೋಷೆನ್ ಪ್ರಾಂತ್ಯದಲ್ಲಿ ಮಾತ್ರ ಆ ಮಳೆ ಬೀಳಲಿಲ್ಲ.
27 : ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, ಅವರಿಗೆ, “ನಾನು ಅಪರಾಧಿಯೆಂದು ಈಗ ಒಪ್ಪಿಕೊಳ್ಳುತ್ತೇನೆ. ಸರ್ವೇಶ್ವರನು ಸತ್ಯವಂತನು; ನಾನೂ ನನ್ನ ಜನರೂ ತಪ್ಪಿತಸ್ಥರು.
28 : ಈ ಭಯಂಕರವಾದ ಗುಡುಗು ಮತ್ತು ಆನೆಕಲ್ಲು ಮಳೆ ಇನ್ನು ಸಾಕೇ ಸಾಕು. ಇವುಗಳನ್ನು ನಿಲ್ಲಿಸುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿರಿ. ಈ ದೇಶವನ್ನು ಬಿಟ್ಟು ಹೋಗುವುದಕ್ಕೆ ನಿಮಗೆ ಅಪ್ಪಣೆಕೊಡುತ್ತೇನೆ. ಇನ್ನು ನಿಮ್ಮನ್ನು ತಡೆಯುವುದಿಲ್ಲ,” ಎಂದು ಹೇಳಿದನು.
29 : ಅದಕ್ಕೆ ಮೋಶೆ, “ನಾನು ಈ ಪಟ್ಟಣದಿಂದಾಚೆಗೆ ಹೋದ ಕೂಡಲೆ ಸರ್ವೇಶ್ವರಸ್ವಾಮಿಯ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು. ಆಗ ಗುಡುಗು ಮತ್ತು ಕಲ್ಲಿನ ಮಳೆಯು ನಿಂತುಹೋಗುವುವು. ಇದರಿಂದ ಇಡೀ ಲೋಕವು ಸರ್ವೇಶ್ವರನ ಅಧೀನದಲ್ಲಿದೆ ಎಂದು ತಾವು ತಿಳಿದುಕೊಳ್ಳುವಿರಿ.
30 : ಆದರೂ ತಾವಾಗಲಿ ತಮ್ಮ ಪರಿವಾರದವರಾಗಲಿ ದೇವರಾದ ಸರ್ವೇಶ್ವರನಿಗೆ ಭಯಪಡುವುದಿಲ್ಲವೆಂದು ಬಲ್ಲೆನು,” ಎಂದನು.
31 : ಜವೆಗೋದಿ ಮತ್ತು ಅಗಸೆ ಬೆಳೆಗಳು ನಾಶವಾದವು; ಏಕೆಂದರೆ ಜವೆಗೋದಿ ತೆನೆಬಿಟ್ಟಿತ್ತು. ಅಗಸೆ ಮೊಗ್ಗು ಕಚ್ಚಿತ್ತು.
32 : ಆದರೆ ಗೋದಿ ಮತ್ತು ಕಡಲೆ ಹಿಂದಿನ ಬೆಳೆಗಳಾಗಿದ್ದುದರಿಂದ ಅವುಗಳಿಗೆ ನಷ್ಟವಾಗಲಿಲ್ಲ.
33 : ಮೋಶೆ ಫರೋಹನನ್ನು ಬಿಟ್ಟು ಪಟ್ಟಣದಿಂದ ಹೊರಗೆ ಬಂದು ಸರ್ವೇಶ್ವರಸ್ವಾಮಿಯ ಕಡೆಗೆ ಕೈಯೆತ್ತಿ ಪ್ರಾರ್ಥಿಸಿದನು. ಗುಡುಗು ಆನೆಕಲ್ಲು ಹಾಗು ಮಳೆ ನಿಂತುಹೋದವು.
34 : ಆದರೆ ಆ ಮಳೆ, ಆ ಕಲ್ಲುಮಳೆ, ಗುಡುಗು ನಿಂತುಹೋದದ್ದನ್ನು ಫರೋಹನು ಕಂಡಾಗ ಅವನು ಹಾಗು ಅವನ ಪರಿವಾರದವರು ತಮ್ಮ ಹೃದಯಗಳನ್ನು ಪುನಃಕಠಿಣವಾಗಿಸಿಕೊಂಡು, ಪಾಪಕಟ್ಟಿಕೊಂಡರು.
35 : ಮೋಶೆಯ ಮುಖಾಂತರ ಸರ್ವೇಶ್ವರ ಹೇಳಿಸಿದಂತೆಯೇ ಆಯಿತು. ಫರೋಹನ ಹೃದಯ ಕಲ್ಲಾಯಿತು, ಇಸ್ರಯೇಲರನ್ನು ಅವನು ಹೋಗಲು ಬಿಡಲಿಲ್ಲ.

· © 2017 kannadacatholicbible.org Privacy Policy