Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಬಳಿಕ ಮೋಶೆ ಮತ್ತು ಆರೋನರು ಫರೋಹನ ಸನ್ನಿಧಿಗೆ ಬಂದರು. “ಇಸ್ರಯೇಲರ ದೇವರಾದ ಸರ್ವೇಶ್ವರನ ಮಾತುಗಳಿವು: ‘ನನ್ನ ಜನರು ಮರುಭೂಮಿಯಲ್ಲಿ ನನ್ನ ಗೌರವಾರ್ಥ ಒಂದು ಹಬ್ಬವನ್ನು ಆಚರಿಸಬೇಕಾಗಿದೆ. ಅದಕ್ಕೆ ಅವರಿಗೆ ಅಪ್ಪಣೆಕೊಡಬೇಕು’” ಎಂದರು.
2 : ಅದಕ್ಕೆ ಫರೋಹನು, “ ‘ಸರ್ವೇಶ್ವರ’ ಎಂಬುವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಯೇಲರನ್ನು ಹೋಗಬಿಡಬೇಕೊ? ಆ ಸರ್ವೇಶ್ವರನು ಯಾರೋ ನನಗೆ ಗೊತ್ತಿಲ್ಲ. ಇಸ್ರಯೇಲರನ್ನು ನಾನು ಹೋಗಬಿಡುವುದಿಲ್ಲ,” ಎಂದು ಬಿಟ್ಟನು.
3 : ಮೋಶೆ ಮತ್ತು ಆರೋನರು, “ಹಿಬ್ರಿಯರ ದೇವರು ನಮಗೆ ದರ್ಶನವಿತ್ತರು. ಅಪ್ಪಣೆ ಆದರೆ ನಾವು ಮರುಭೂಮಿಯಲ್ಲಿ ಮೂರು ದಿವಸದಷ್ಟು ದೂರ ಹೋಗಿ ನಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯರ್ಪಿಸಿ ಬರುತ್ತೇವೆ. ಹಾಗೆ ಮಾಡದೆ ಹೋದರೆ ಅವರು ನಮ್ಮನ್ನು ವ್ಯಾಧಿಯಿಂದಲೋ ಕತ್ತಿಯಿಂದಲೋ ಸಂಹಾರ ಮಾಡುವರು,” ಎಂದರು.
4 : ಅವರಿಗೆ ಆ ಈಜಿಪ್ಟರ ಅರಸನು, “ಎಲೈ ಮೋಶೆ - ಆರೋನರೇ, ನೀವು ಮಾಡುತ್ತಾ ಇರುವುದೇನು? ಈ ಜನರು ತಮ್ಮ ಕೆಲಸವನ್ನು ಬಿಡುವಂತೆ ಮಾಡುತ್ತಿದ್ದೀರಿ. ನಡೆಯಿರಿ ಗುಲಾಮಗಿರಿಗೆ” ಎಂದು ಬಿಟ್ಟನು.
5 : ಇದೂ ಅಲ್ಲದೆ ಆ ಫರೋಹನು, “ನೋಡಿ, ನಾಡಿನಲ್ಲಿ ಈ ಜನರ ಸಂಖ್ಯೆ ಹೆಚ್ಚಾಗಿ ಬಿಟ್ಟಿದೆ! ಇವರು ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳುವುದಕ್ಕೆ ನೀವೇ ಕಾರಣ ಆಗುತ್ತಿದ್ದೀರಿ,” ಎಂದನು.
6 : ಅದೇ ದಿನ, ಕೆಲಸ ಮಾಡಿಸುವವರನ್ನೂ ಮೇಸ್ತ್ರಿಗಳನ್ನೂ ಕರೆಯಿಸಿ,
7 : “ಇನ್ನು ಮೇಲೆ ನೀವು ಈ ಜನರಿಗೆ ಇಟ್ಟಿಗೆ ಮಾಡುವುದಕ್ಕೆ ಹುಲ್ಲನ್ನು ಕೊಡಕೂಡದು; ಅವರೇ ಹೋಗಿ ಹುಲ್ಲನ್ನು ಹುಡುಕಿಕೊಳ್ಳಲಿ.
8 : ಆದರೆ ಇಟ್ಟಿಗೆಗಳ ಲೆಕ್ಕವನ್ನು ಎಂದಿನಂತೆ ಒಪ್ಪಿಸಲಿ. ಅದನ್ನು ಕಡಿಮೆಮಾಡಕೂಡದು. ಇವರು ಮೈಗಳ್ಳರು. ಆದ್ದರಿಂದಲೇ, ‘ನಾವು ಹೋಗಿ ನಮ್ಮ ದೇವರಿಗೆ ಬಲಿಯರ್ಪಿಸಿ ಬರುವುದಕ್ಕೆ ಅಪ್ಪಣೆಯಾಗಬೇಕು’, ಎಂದು ಬೊಬ್ಬೆಹಾಕುತ್ತಾ ಇದ್ದಾರೆ.
9 : ನೀವು ಅವರಿಂದ ಇನ್ನೂ ಕಷ್ಟಕರವಾದ ಕೆಲಸ ಮಾಡಿಸಬೇಕು. ಕೆಲಸ ಹೆಚ್ಚಾದರೆ ಸುಳ್ಳುಪೊಳ್ಳು ಮಾತುಗಳಿಗೆ ಕಿವಿಗೊಡಲು ಆಸ್ಪದಯಿರುವುದಿಲ್ಲ,” ಎಂದು ಆಜ್ಞಾಪಿಸಿದನು.
10 : ಆದುದರಿಂದ ಕೆಲಸದ ಮೇಲ್ವಿಚಾರಕರೂ ಮೇಸ್ತ್ರಿಗಳೂ ಆ ಜನರಿಗೆ, “ನಿಮಗೆ ಹುಲ್ಲು ಕೊಡಕೂಡದೆಂದು ಫರೋಹನ ಅಪ್ಪಣೆಯಾಗಿದೆ.
11 : ನೀವೇ ಹೋಗಿ ಎಲ್ಲಿಂದಾದರೂ ತಂದುಕೊಳ್ಳಿ. ಆದರೂ ನೀವು ಮಾಡಬೇಕಾದ ಕೆಲಸ ಮಾತ್ರ ಕಿಂಚಿತ್ತೂ ಕಡಿಮೆಯಾಗಕೂಡದು,” ಎಂದು ವಿಧಿಸಿದರು.
12 : ಆ ಜನರು ಈಜಿಪ್ಟ್ ದೇಶದಲ್ಲೆಲ್ಲಾ ಸುತ್ತಿ, ಹುಲ್ಲು ಸಿಕ್ಕದೆ ಕೂಳೆಕಿತ್ತು ಕೂಡಿಸಿದರು.
13 : ಮೇಲ್ವಿಚಾರಕರು, “ನಿಮಗೆ ಹುಲ್ಲಿದ್ದ ಕಾಲದಲ್ಲಿ ಹೇಗೋ ಹಾಗೆ ಪ್ರತಿದಿನದ ಕೆಲಸವನ್ನು ಆಯಾದಿನದಲ್ಲಿ ಮುಗಿಸಬೇಕು” ಎಂದು ಹೇಳಿ ಅವಸರ ಪಡಿಸುತ್ತಿದ್ದರು.
14 : “ನೀವು ಇಟ್ಟಿಗೆಗಳ ಲೆಕ್ಕವನ್ನು ಹಿಂದೆ ಒಪ್ಪಿಸುತ್ತಿದ್ದಂತೆ ನಿನ್ನೆ ಮತ್ತು ಇಂದು ಏಕೆ ಒಪ್ಪಿಸಲಿಲ್ಲ,” ಎಂದು ಹೇಳಿ ಫರೋಹನ ಅಧಿಕಾರಿಗಳು ತಾವೇ ನೇಮಿಸಿದ್ದ ಇಸ್ರಯೇಲ್ ಮೇಸ್ತ್ರಿಗಳನ್ನು ಹೊಡೆಸುತ್ತಿದ್ದರು.
15 : ಈ ಇಸ್ರಯೇಲ್ ಮೇಸ್ತ್ರಿಗಳು ಫರೋಹನ ಬಳಿಗೆ ಬಂದು, “ಒಡೆಯಾ, ತಮ್ಮ ದಾಸರಾದ ನಮಗೆ ಹೀಗೆ ಮಾಡುವುದು ಸರಿಯೇ?
16 : ಅಧಿಕಾರಿಗಳು ಹುಲ್ಲು ಒದಗಿಸದೆ ಇಟ್ಟಿಗೆಗಳನ್ನು ಮಾಡಬೇಕೆನ್ನುತ್ತಾರೆ. ಇದರಿಂದ ದಾಸರಾದ ನಾವು ಏಟು ತಿನ್ನಬೇಕಾಯಿತು. ತಪ್ಪು ತಮ್ಮ ಜನರದೇ,” ಎಂದು ದೂರಿತ್ತರು.
17 : ಅದಕ್ಕೆ ಅವನು, “ನೀವು ಒಳ್ಳೆಯ ಮೈಗಳ್ಳರು! ‘ನಾವು ಹೋಗಿ ಸರ್ವೇಶ್ವರನಿಗೆ ಬಲಿಯರ್ಪಿಸಿ ಬರಬೇಕು,’ ಎನ್ನುವುದಕ್ಕೆ ಇದೇ ಕಾರಣ.
18 : ನಡೆಯಿರಿ ಕೆಲಸಕ್ಕೆ; ನಿಮಗೆ ಹುಲ್ಲು ಕೊಡುವುದಿಲ್ಲ; ಆದರೂ ಇಟ್ಟಿಗೆಗಳ ಲೆಕ್ಕವನ್ನು ತಪ್ಪದೆ ಒಪ್ಪಿಸಲೇಬೇಕು,” ಎಂದನು.
19 : ದಿನದಿನವೂ ಒಪ್ಪಿಸಬೇಕಾದ ಇಟ್ಟಿಗೆಗಳ ಲೆಕ್ಕ ಕಡಿಮೆಯಾಗಬಾರದೆಂದು ಕಟ್ಟಪ್ಪಣೆ ಆದುದರಿಂದ ಇಸ್ರಯೇಲ್ ಮೇಸ್ತ್ರಿಗಳು ತಾವು ಎಂಥ ಬಿಕ್ಕಟ್ಟಿಗೆ ಸಿಕ್ಕಿಕೊಂಡೆವೆಂದು ಗ್ರಹಿಸಿಕೊಂಡರು.
20 : ಫರೋಹನ ಬಳಿಯಿಂದ ಹಿಂದಿರುಗಿದಾಗ ಅವರನ್ನು ಎದುರುಗೊಳ್ಳಲು ಮೋಶೆ ಮತ್ತು ಆರೋನರು ಕಾದಿದ್ದರು.
21 : ಅವರಿಗೆ ಆ ಮೇಸ್ತ್ರಿಗಳು, “ನೀವು ಮಾಡಿದ ದುಷ್ಕøತ್ಯವನ್ನು ವಿಚಾರಿಸಿ ಸರ್ವೇಶ್ವರ ನಿಮಗೆ ತಕ್ಕ ಶಿಕ್ಷೆಯನ್ನು ವಿಧಿಸಲಿ. ಏಕೆಂದರೆ ಫರೋಹನಿಗೂ ಅವನ ಸೇವಕರಿಗೂ ನಾವು ಅಸಹ್ಯರಾಗುವಂತೆ ಮಾಡಿ ಬಿಟ್ಟಿರಿ. ನಮ್ಮನ್ನು ಕೊಲ್ಲಲು ಅವರ ಕೈಗೆ ಕತ್ತಿಯನ್ನೇ ಕೊಟ್ಟಂತಾಗಿದೆ,” ಎಂದು ನಿಂದಿಸಿದರು.
22 : ಆಗ ಮೋಶೆ ಸರ್ವೇಶ್ವರ ಸನ್ನಿಧಿಗೆ ಮತ್ತೆ ಬಂದು, “ಸ್ವಾವಿೂ, ಈ ಜನರಿಗೆ ಹೀಗೇಕೆ ಮಾಡಿದಿರಿ? ನನ್ನನ್ನೇಕೆ ಇಲ್ಲಿಗೆ ಕಳಿಸಿದಿರಿ?
23 : ನಾನು ಫರೋಹನ ಬಳಿಗೆ ಹೋಗಿ ನಿಮ್ಮ ಹೆಸರಿನಲ್ಲಿ ಮಾತಾಡಿದಂದಿನಿಂದ ಅವನು ಈ ಜನರಿಗೆ ಕೇಡನ್ನೇ ಮಾಡುತ್ತಿದ್ದಾನೆ. ನೀವಾದರೋ ಅವರನ್ನು ಬಿಡುಗಡೆ ಮಾಡಲು ಏನನ್ನೂ ಮಾಡಿಲ್ಲ,” ಎಂದು ಮೊರೆಯಿಟ್ಟನು.

· © 2017 kannadacatholicbible.org Privacy Policy