Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಸರ್ವೇಶ್ವರಸ್ವಾಮಿ ಮೋಶೆಗೆ ಆಜ್ಞಾಪಿಸಿದಂತೆ ಆ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ದೇವಮಂದಿರದ ಸೇವೆಗೆ ಅಲಂಕಾರವಾದ ವಸ್ತ್ರಗಳನ್ನು ಮತ್ತು ಆರೋನನಿಗೆ ದೀಕ್ಷಾವಸ್ತ್ರಗಳನ್ನು ಮಾಡಿದರು.
2 : ಮಹಾಯಾಜಕನ ‘ಏಫೋದ್’ ಎಂಬ ಕವಚವನ್ನು ಹುರಿನಾರಿನ ಬಟ್ಟೆಯಿಂದಲು, ಚಿನ್ನದ ದಾರದಿಂದಲು ಮತ್ತು ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲು ಮಾಡಿದರು.
3 : ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದೊಡನೆ ಮತ್ತು ನಾರಿನ ಬಟ್ಟೆಯೊಡನೆ ಕಲಾತ್ಮಕ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿಕೆಲಸ ಮಾಡುವುದಕ್ಕಾಗಿ ಬಂಗಾರವನ್ನು ತಟ್ಟಿ ತಗಡುಗಳನ್ನು ಮಾಡಿ, ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು.
4 : ಆ ಕವಚಕ್ಕೆ ಹೆಗಲಿನ ಮೇಲೆ ಎರಡು ಪಟ್ಟಿಗಳನ್ನು ಮಾಡಿದರು. ಅದರ ಎರಡು ಕೊನೆಗಳನ್ನು ಜೋಡಿಸಲಾಯಿತು.
5 : ಕವಚದ ಮೇಲಿದ್ದ ಅಪೂರ್ವವಾದ ಕಸೂತಿ ನಡುಕಟ್ಟು ಕವಚಕ್ಕೆ ಅಂಗವಾಗಿದ್ದು ಅದರಂತೆಯೇ ಹುರಿನಾರಿನ ಬಟ್ಟೆಯಿಂದಲೂ, ಚಿನ್ನದ ದಾರದಿಂದಲೂ ಮತ್ತು ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ತಯಾರಿಸಲಾಗಿತ್ತು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಲಾಗಿತ್ತು.
6 : ಮುದ್ರಾರತ್ನವನ್ನು ಕೆತ್ತುವ ರೀತಿಯಲ್ಲಿ ಎರಡು ಗೋಮೇಧಕ ರತ್ನಗಳಲ್ಲಿ ಇಸ್ರಯೇಲರ ಹನ್ನೆರಡು ಕುಲಗಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಕಟ್ಟಿದರು.
7 : ಆ ಎರಡು ರತ್ನಗಳು ಇಸ್ರಯೇಲರ ಜ್ಞಾಪಕಾರ್ಥವಾದ ರತ್ನಗಳಾಗುವಂತೆ ಅವುಗಳನ್ನು ಕವಚದ ಹೆಗಲಿನ ಮೇಲಿರುವ ಪಟ್ಟಿಗಳಲ್ಲಿ ಬಿಗಿಸಿದರು. ಸರ್ವೇಶ್ವರ ಮೋಶೆಗೆ ಹಾಗೆಯೇ ಆಜ್ಞಾಪಿಸಿದ್ದರು.
8 : ‘ಏಫೋದ್’ ಕವಚದಂತೆಯೇ, ಚಿನ್ನದ ದಾರದಿಂದಲೂ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಹುರಿನಾರಿನ ಬಟ್ಟೆಯಲ್ಲಿ ಕಸೂತಿಕೆಲಸದಿಂದ ಕೂಡಿದ ಒಂದು ಚೀಲದಂಥ ವಕ್ಷಪದಕವನ್ನು ಮಾಡಿದರು.
9 : ಅದು ಚಚೌಕವಾಗಿತ್ತು, ಎರಡು ಪದರುಳ್ಳದಾಗಿತ್ತು. ಅದು ಒಂದು ಗೇಣುದ್ದವೂ ಒಂದು ಗೇಣಗಲವೂ ಇತ್ತು.
10 : ಅದರ ಮುಂಭಾಗದಲ್ಲಿ ನಾಲ್ಕು ಸಾಲುಗಳಾಗಿ ರತ್ನಗಳನ್ನು ಖಚಿಸಿದರು. ಮೊದಲನೆಯ ಸಾಲಿನಲ್ಲಿ ಮಾಣಿಕ್ಯ, ಪುಷ್ಪರಾಗ ಸ್ಫಟಿಕಗಳು,
11 : ಎರಡನೆಯ ಸಾಲಿನಲ್ಲಿ ಕೆಂಪರಲು, ನೀಲ ಪಚ್ಚೆಗಳು,
12 : ಮೂರನೆಯ ಸಾಲಿನಲ್ಲಿ ಸುವರ್ಣರತ್ನ, ಗೋಮೇಧಕ ಧೂಮ್ರಮಣಿಗಳು,
13 : ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಢೂರ್ಯಗಳೂ ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಲಾಗಿದ್ದವು.
14 : ಇಸ್ರಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು. ಮುದ್ರಾರತ್ನದಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಲಾಗಿತ್ತು.
15 : ವಕ್ಷಪದಕದ ಮೇಲ್ಗಡೆಯಲ್ಲಿ ಹುರಿಗಳಂತಿರುವ ಚೊಕ್ಕ ಬಂಗಾರದ ಸರಪಣಿಗಳನ್ನು ಹೆಣಿಗೆ ಕೆಲಸದಿಂದ ಮಾಡಿದರು.
16 : ಎರಡು ಚಿನ್ನದ ಜವೆಗಳನ್ನೂ ಎರಡು ಚಿನ್ನದ ಉಂಗುರಗಳನ್ನೂ ಮಾಡಿ ಆ ಉಂಗುರಗಳನ್ನು ಫಲಕದ ಎರಡು ಮೂಲೆಗಳಲ್ಲಿ ತಗಲಿಸಿದರು
17 : ಹೆಣಿಗೆ ಕೆಲಸದ ಆ ಎರಡು ಚಿನ್ನದ ಸರಪಣಿಗಳನ್ನು ಫಲಕದ ಮೂಲೆಗಳಲ್ಲಿರುವ ಉಂಗುರಗಳಿಗೆ ಸಿಕ್ಕಿಸಿದರು.
18 : ಹೆಣಿಗೆ ಕೆಲಸದ ಆ ಸರಪಣಿಗಳ ಕೊನೆಗಳನ್ನು ಕವಚದ ಹೆಗಲಿನ ಪಟ್ಟಿಗಳಲ್ಲಿರುವ ಎರಡು ಜವೆಗಳ ಮುಂಭಾಗಕ್ಕೆ ಸಿಕ್ಕಿಸಿದರು.
19 : ಅದಲ್ಲದೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಪದಕದ ಒಳಗಣ ಅಂಚಿನ ಮೂಲೆಗಳಲ್ಲಿ ಕವಚದ ಹತ್ತಿರದಲ್ಲೇ ಇಟ್ಟರು.
20 : ಮತ್ತು ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಚಿತ್ರಕಲೆಯಿಂದ ಕೂಡಿದ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಿದರು.
21 : ಪದಕವು ವಿಚಿತ್ರವಾದ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿ ಆಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿದಾರದಿಂದ ಕಟ್ಟಿದರು. ಸರ್ವೇಶ್ವರ ಮೋಶೆಗೆ ಹಾಗೆಯೇ ಆಜ್ಞಾಪಿಸಿದ್ದರು.
22 : ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ಮೇಲಂಗಿಯನ್ನು ನೀಲಿಬಣ್ಣದ ಬಟ್ಟೆಯಿಂದ ಕಸೂತಿಕೆಲಸದಿಂದ ಮಾಡಿದನು.
23 : ತಲೆದೂರಿಸುವುದಕ್ಕೆ ಅದರಲ್ಲಿ ಸಂದುಮಾಡಿ ಅದು ಹರಿಯದಂತೆ ಯುದ್ಧದ ಕವಚದೋಪಾದಿಯಲ್ಲಿ ಆ ಸಂದಿನ ಸುತ್ತಲು ನೇಯ್ಗೆಪಟ್ಟಿಯನ್ನು ಹಾಕಿದನು.
24 : ಮೇಲಂಗಿಯ ಅಂಚಿನ ಸುತ್ತಲೂ ನೀಲ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದ ದಾಳಿಂಬೆ ಹಣ್ಣಿನಂತೆ ಚೆಂಡುಗಳನ್ನು ಮಾಡಿದರು.
25 : ಮತ್ತು ಚೊಕ್ಕಬಂಗಾರದಿಂದ ಗೆಜ್ಜೆಗಳನ್ನು ಮಾಡಿ ಮೇಲಂಗಿಯ ಅಂಚಿನಲ್ಲಿ ದಾಳಿಂಬೆ ಚೆಂಡುಗಳ ಸಂಗಡ ಇಟ್ಟರು.
26 : ಚಿನ್ನದ ಗೆಜ್ಜೆಯೂ ದಾಳಿಂಬೆಯಂತಿರುವ ಚೆಂಡೂ ಒಂದಾದ ಮೇಲೆ ಒಂದು ದೇವರ ಸೇವೆಗೋಸ್ಕರವಾದ ಆ ಮೇಲಂಗಿಯ ಅಂಚಿನ ಸುತ್ತಲೂ ಇದ್ದವು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
27 : ಆರೋನನಿಗೂ ಅವನ ಮಕ್ಕಳಿಗೂ ಸಣ್ಣ ನಾರಿನಿಂದ ಹೆಣಿಗೆಕೆಲಸದ ರೀತಿಯಲ್ಲಿ ಅಂಗಿಗಳನ್ನೂ
28 : ನಾರಿನಿಂದ ಮಹಾಯಾಜಕನ ಪೇಟವನ್ನೂ ನಾರಿನಿಂದ ಯಾಜಕರ ಅಲಂಕಾರವಾದ ಪೇಟಗಳನ್ನೂ
29 : ಹುರಿನಾರಿನಿಂದ ಚಡ್ಡಿಗಳನ್ನೂ ಹುರಿನಾರಿನಿಂದಲೂ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದ ರೀತಿಯಲ್ಲಿ ನಡುಕಟ್ಟನ್ನೂ ಮಾಡಿದರು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
30 : ಮತ್ತು ಚೊಕ್ಕಬಂಗಾರದಿಂದ ಪರಿಶುದ್ಧ ಕಿರೀಟದಂಥ ಪಟ್ಟಿಯನ್ನು ಸರ್ವೇಶ್ವರನಿಗೆ ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ - “ಸರ್ವೇಶ್ವರನಿಗೆ ವಿೂಸಲು” ಎಂಬ ಲಿಪಿಯನ್ನು ಬರೆದರು.
31 : ಅದನ್ನು ಪೇಟಕ್ಕೆ ಬಿಗಿಸುವುದಕ್ಕಾಗಿ ನೀಲಿದಾರವನ್ನು ಅದಕ್ಕೆ ಕಟ್ಟಿದರು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅದನ್ನು ಮಾಡಿದರು.
32 : ಈ ರೀತಿಯಲ್ಲಿ ದೇವದರ್ಶನದ ಗುಡಾರದ ಕೆಲಸವೆಲ್ಲಾ ಸಂಪೂರ್ತಿಯಾಯಿತು. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಅದನ್ನು ಮಾಡಿದ್ದರು.
33 : ಆಗ ಅವರು ಆ ಗುಡಾರವನ್ನು ಮೋಶೆಯ ಬಳಿಗೆ ತೆಗೆದುಕೊಂಡು ಬಂದರು: ಡೇರೆಯನ್ನೂ ಅದಕ್ಕೆ ಸಂಬಂಧಪಟ್ಟದ್ದೆಲ್ಲವನ್ನೂ, ಅಂದರೆ ಅದರ ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳು ಇವುಗಳನ್ನೂ
34 : ಹದಮಾಡಿರುವ ಕೆಂಪುಬಣ್ಣದ ಕುರಿದೊಗಲುಗಳಿಂದುಂಟಾದ ಮೇಲ್ಹೊದಿಕೆ, (ಮಹಾಪವಿತ್ರ ಸ್ಥಾನವನ್ನು ಮರೆಮಾಡುವ ತೆರೆ) ಇವುಗಳನ್ನೂ;
35 : ಆಜ್ಞಾಶಾಸನಗಳ ಮಂಜೂಷ, ಅದರ ಗದ್ದಿಗೆಗಳು, ಕೃಪಾಸನ ಇವುಗಳನ್ನೂ;
36 : ಮೇಜು, ಅದರ ಎಲ್ಲ ಉಪಕರಣಗಳು, ಕಾಣಿಕೆಯ ರೊಟ್ಟಿ ಇವುಗಳನ್ನೂ;
37 : ಚೊಕ್ಕಬಂಗಾರದ ದೀಪವೃಕ್ಷ, ಅದರ ಮೇಲಿಡಬೇಕಾದ ಹಣತೆಗಳು, ಅದರ ಉಪಕರಣಗಳು, ದೀಪಕ್ಕೆ ಬೇಕಾದ ಎಣ್ಣೆ ಇವುಗಳನ್ನೂ;
38 : ಚಿನ್ನದ ಧೂಪವೇದಿಕೆ, ಅಭಿಷೇಕ ತೈಲ, ಸುವಾಸನೆಯುಳ್ಳ ಧೂಪ ಇವುಗಳನ್ನೂ; ಡೇರೆಯ ಬಾಗಿಲಿನ ಪರದೆಯನ್ನೂ;
39 : ತಾಮ್ರದ ಬಲಿಪೀಠ, ಅದರ ತಾಮ್ರದ ಜಾಳಿಗೆ, ಅದರ ನೀರಿನ ತೊಟ್ಟಿ, ಅದರ ಪೀಠ ಇವುಗಳನ್ನೂ
40 : ಅಂಗಳದ ತೆರೆಗಳು, ಕಂಬಗಳು, ಗದ್ದಿಗೇ ಕಲ್ಲುಗಳು ಇವುಗಳನ್ನೂ; ಅಂಗಳದ ಬಾಗಿಲಿನ ಪರದೆ, ಅದರ ಹಗ್ಗಗಳು, ಗೂಟಗಳು ಇವುಗಳನ್ನೂ; ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನೂ;
41 : ದೇವಮಂದಿರದೊಳಗೆ ನಡೆಯುವ ಸೇವೆಗೋಸ್ಕರ ಬೇಕಾದ ಅಲಂಕಾರವಸ್ತ್ರ, ಅಂದರೆ ಆರೋನನಿಗೆ ಬೇಕಾದ ದೀಕ್ಷಾವಸ್ತ್ರ, ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರ ಇವುಗಳನ್ನೂ ತಂದರು.
42 : ಸರ್ವೇಶ್ವರ ಆಜ್ಞಾಪಿಸಿದಂತೆಯೇ ಇಸ್ರಯೇಲರು ಆ ಕೆಲಸವನ್ನೆಲ್ಲಾ ಮಾಡಿದ್ದರು.
43 : ಅವರು ಮಾಡಿದ್ದ ಕೆಲಸವನ್ನು ಮೋಶೆ ಪರೀಕ್ಷಿಸಲಾಗಿ ಕರ್ತನÀ ಅಪ್ಪಣೆಯಂತೆಯೇ ಅವರು ಎಲ್ಲವನ್ನು ಮಾಡಿ ಮುಗಿಸಿದರೆಂದು ತಿಳಿದುಕೊಂಡು ಅವರನ್ನು ಆಶೀರ್ವದಿಸಿದನು.

· © 2017 kannadacatholicbible.org Privacy Policy