1 : ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
2 : ಚೊಕ್ಕಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಒಳಗಡೆಯೂ ಹೊದಿಸಿದನು; ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಿದನು.
3 : ನಾಲ್ಕು ಬಂಗಾರದ ಬಳೆಗಳನ್ನು ಎರಕ ಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ, ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇರಿಸಿದನು.
4 : ಮತ್ತು ಜಾಲೀಮರದ ಗದ್ದಿಗೆಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ
5 : ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಅದನ್ನು ಹೊರುವುದಕ್ಕಾಗಿ ಸೇರಿಸಿದನು.
6 : ಅದಲ್ಲದೆ ಚೊಕ್ಕ ಬಂಗಾರದ ಕೃಪಾಸನವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿತ್ತು
7 : ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿದನು.
8 : ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿ ಕೃಪಾಸನಕ್ಕೆ ಜೋಡಿಸಿದನು.
9 : ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಇದ್ದವು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು
10 : ಬೆಚಲೇಲನು ಜಾಲೀಮರದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
11 : ಅದಕ್ಕೆ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ಚಿನ್ನದ ತೋರಣ ಕಟ್ಟಿದನು.
12 : ಮೇಜಿನ ಸುತ್ತಲು ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿ ಅದಕ್ಕೂ ಚಿನ್ನದ ತೋರಣಕಟ್ಟಿದನು.
13 : ಮೇಜನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ಅದಕ್ಕೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯ್ಯಿಸಿ ಅದರ ನಾಲ್ಕು ಕಾಲುಗಳಲ್ಲಿ ಹಚ್ಚಿದನು.
14 : ಆ ಬಳೆಗಳು ಅಡ್ಡಪಟ್ಟಿಗೆ ಹತ್ತಿಕೊಂಡಿದ್ದವು.
15 : ಮೇಜನ್ನು ಹೊರುವುದಕ್ಕೆ ಗದ್ದಿಗೆಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
16 : ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು, ಅಂದರೆ ಹರಿವಾಣಗಳು, ಧೂಪಾರತಿಗಳು, ಹೂಜಿಗಳು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳು ಇವುಗಳನ್ನು ಚೊಕ್ಕ ಬಂಗಾರದಿಂದ ಮಾಡಿದನು.
17 : ಚೊಕ್ಕ ಬಂಗಾರದ ದೀಪವೃಕ್ಷವನ್ನು ಮಾಡಿದನು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿದನು. ಆ ದೀಪಸ್ಥಂಭವೆಲ್ಲಾ ಅಖಂಡವಾಗಿ ಮೊಗ್ಗುಗಳಂತೆಯೂ ಪುಷ್ಪಗಳಂತೆಯೂ ಅಲಂಕಾರವಾಗಿ ಕೆತ್ತಿತ್ತು.
18 : ಕಂಬದ ಒಂದೊಂದು ಪಾಶ್ರ್ವದಲ್ಲಿ ಮೂರುಮೂರು ಕೊಂಬೆಗಳು, ಅಂತೂ ಆರು ಕೊಂಬೆಗಳಿದ್ದವು.
19 : ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಲಂಕಾರಗಳಿದ್ದವು; ಒಂದೊಂದು ಅಲಂಕಾರಕ್ಕೆ ಒಂದು ಮೊಗ್ಗೂ ಒಂದು ಪುಷ್ಪವೂ ಇದ್ದವು. ಆರು ಕೊಂಬೆಗಳನ್ನೂ ಹಾಗೆಯೇ ಮಾಡಿದನು.
20 : ದೀಪವೃಕ್ಷ ಕಡ್ಡಿಯಲ್ಲಿ ಮೊಗ್ಗುಗಳೂ ಪುಷ್ಪಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪ ಅಲಂಕಾರಗಳು ಇದ್ದವು.
21 : ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು ಇತ್ತು.
22 : ಮೊಗ್ಗುಗಳೂ ಕೊಂಬೆಗಳೂ ಸಹಿತವಾದ ದೀಪವೃಕ್ಷವನ್ನೆಲ್ಲಾ ಒಟ್ಟಿಗೆ ಚೊಕ್ಕ ಬಂಗಾರದಿಂದ ನಕಾಸಿ ಕೆಲಸದಿಂದ ಮಾಡಿದನು.
23 : ಅದರ ಏಳು ಹಣತೆಗಳನ್ನೂ ಅದರ ಕತ್ತರಿಗಳನ್ನೂ ದೀಪದ ಕುಡಿ ತೆಗೆಯುವ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದ ಮಾಡಿದನು.
24 : ದೀಪವೃಕ್ಷವೂ ಅದರ ಎಲ್ಲಾ ಉಪಕರಣಗಳೂ ಮೂವತ್ತೈದು ಕಿಲೋಗ್ರಾಂ ಚೊಕ್ಕ ಬಂಗಾರದವುಗಳಾಗಿದ್ದವು.
25 : ಅವನು ಜಾಲೀಮರದಿಂದ ಧೂಪ ವೇದಿಕೆಯನ್ನು ಮಾಡಿದನು. ಅದು ಒಂದು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಚಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರ ಅಂಗಗಳಾಗಿದ್ದವು.
26 : ಅದರ ಮೇಲ್ಭಾಗಕ್ಕೂ ನಾಲ್ಕು ಪಕ್ಕಗಳಿಗೂ ಕೊಂಬುಗಳಿಗೂ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಿದನು. ಸುತ್ತಲೂ ಚಿನ್ನದ ತೋರಣ ಕಟ್ಟಿದನು.
27 : ಅದನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ಆ ತೋರಣದ ಕೆಳಗೆ ವೇದಿಕೆಯ ಎರಡು ಪಾಶ್ರ್ವಗಳ ಮೂಲೆಯಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಬಿಗಿಸಿದನು.
28 : ವೇದಿಕೆಯನ್ನು ಹೊರುವುದಕ್ಕೆ ಗದ್ದಿಗೆಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
29 : ಅದಲ್ಲದೆ ಅವನು ದೇವರ ಸೇವೆಗೆ ನೇಮಕವಾದ ಅಭಿಷೇಕ ತೈಲವನ್ನು ಹಾಗು ಪರಿಮಳದ್ರವ್ಯಗಳಿಂದ ಮಾಡಲಾದ ಅಪ್ಪಟವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಕಾರರ ವಿಧಾನದ ಮೇರೆಗೆ ತಯಾರಿಸಿದನು.