1 : ಮೋಶೆ ಇಸ್ರಯೇಲರ ಸಮಾಜವನ್ನೆಲ್ಲ ಸೇರಿಸಿ ಅವರಿಗೆ, “ನೀವು ಅನುಸರಿಸಬೇಕೆಂದು ಸರ್ವೇಶ್ವರ ಹೀಗೆ ಆಜ್ಞಾಪಿಸಿದ್ದಾರೆ:
2 : ಆರು ದಿನಗಳು ದುಡಿಯಬೇಕು; ಏಳನೆಯ ದಿನ ಪರಿಶುದ್ಧವಾದ ದಿನ. ಅದು ಸರ್ವೇಶ್ವರನಿಗೆ ವಿೂಸಲಾದ ಸಬ್ಬತ್ ದಿನ. ಆದ್ದರಿಂದ ನೀವು ಸಂಪೂರ್ಣವಾಗಿ ದುಡಿಮೆ ನಿಲ್ಲಿಸಬೇಕು. ಆ ದಿನ ದುಡಿಯುವವನಿಗೆ ಮರಣದಂಡನೆಯಾಗಬೇಕು
3 : ನೀವು ವಾಸಿಸುವ ಯಾವ ಮನೆಯಲ್ಲೇ ಆಗಲಿ, ಸಬ್ಬತ್ ದಿನದಂದು ಬೆಂಕಿಯನ್ನು ಹೊತ್ತಿಸಬಾರದು,” ಎಂದು ಹೇಳಿದನು.
4 : ಮೋಶೆ ಇಸ್ರಯೇಲರ ಇಡೀ ಸಮಾಜವನ್ನು ಉದ್ದೇಶಿಸಿ: “ಸರ್ವೇಶ್ವರನ ಆಜ್ಞೆ ಇದು: ನೀವು ನಿಮ್ಮ ನಿಮ್ಮ ಆಸ್ತಿಪಾಸ್ತಿಯಿಂದ ಸರ್ವೇಶ್ವರನಿಗೆ ಕಾಣಿಕೆಯನ್ನು ಕೊಡಬೇಕು. ಮನಃಪೂರ್ವಕವಾಗಿ ಕೊಡಬೇಕು. ಸರ್ವೇಶ್ವರನಿಗೆ ತರಬೇಕಾದಂಥ ಕಾಣಿಕೆಗಳು ಇವು: ಚಿನ್ನ, ಬೆಳ್ಳಿ, ತಾಮ್ರ,
5 : ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರಗಳು
6 : ನಯವಾದ ನಾರುಬಟ್ಟೆಗಳು, ಆಡುಕೂದಲಿನ ಬಟ್ಟೆಗಳು
7 : ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳು, ಕಡಲು ಹಂದಿಯ ತೊಗಲುಗಳು, ಜಾಲೀಮರ
8 : ದೀಪಕ್ಕೆ ಬೇಕಾದ ಎಣ್ಣೆ, ಅಭಿಷೇಕತೈಲಕ್ಕೆ ಹಾಗು ಪರಿಮಳ ಧೂಪಕ್ಕೆ ಬೇಕಾದ ಸುಗಂಧ ದ್ರವ್ಯಗಳು,
9 : ಮಹಾ ಯಾಜಕನ ಕವಚಕ್ಕೆ ಬೇಕಾದ ರತ್ನಗಳು ಮತ್ತು ವಕ್ಷಪದಕದಲ್ಲಿ ಖಚಿಸಬೇಕಾದ ನಾನಾ ರತ್ನಗಳು
10 : “ನಿಮ್ಮಲ್ಲಿರುವ ಶಿಲ್ಪಕಾರರೆಲ್ಲರು ಬಂದು ಸರ್ವೇಶ್ವರನು ಆಜ್ಞಾಪಿಸಿದವುಗಳನ್ನೆಲ್ಲ ಮಾಡಬೇಕು.
11 : ಅವರು ಮಾಡಬೇಕಾದವುಗಳು ಇವು: ದೇವದರ್ಶನದ ಗುಡಾರ,
12 : ಅದರ ಮೇಲ್ಹೊದಿಕೆಗಳು, ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೆ ಕಲ್ಲುಗಳು, ಕೃಪಾಸನ, ಅದನ್ನು ಮರೆಮಾಡುವ ತೆರೆ,
13 : ಮೇಜು, ಅದರ ಗದ್ದಿಗೆಗಳು, ಅದರ ಉಪಕರಣಗಳು, ಅದರ ಮೇಲೆ ಇಡತಕ್ಕ ಕಾಣಿಕೆಯ ರೊಟ್ಟಿಗಳು,
14 : ದೀಪವೃಕ್ಷ, ಅದರ ಉಪಕರಣಗಳು, ಹಣತೆಗಳು, ದೀಪಕ್ಕೆ ಬೇಕಾದ ಎಣ್ಣೆ, ಧೂಪವೇದಿಕೆ, ಅದರ ಗದ್ದಿಗೆಗಳು,
15 : ಅಭಿಷೇಕ ತೈಲ, ಪರಿಮಳ ದ್ರವ್ಯ, ಗುಡಾರದ ಬಾಗಿಲಿನ ಪರದೆ,
16 : ಬಲಿಪೀಠ, ಅದರ ತಾಮ್ರದ ಜಾಳಿಗೆ, ಗದ್ದಿಗೆಗಳು, ಉಪಕರಣಗಳು, ನೀರಿನ ತೊಟ್ಟಿ, ಅದರ ಪೀಠ,
17 : ಅಂಗಳದ ತೆರೆಗಳು, ಕಂಬಗಳು,
18 : ಅಂಗಳದ ಬಾಗಿಲಿನ ಪರದೆ, ಗುಡಾರದ ಗೂಟಗಳು, ಅಂಗಳದ ಗೂಟಗಳು, ಅವುಗಳ ಹಗ್ಗಗಳು,
19 : ಪವಿತ್ರಸ್ಥಾನದ ಸೇವೆಗೆ ಸುಂದರವಾದ ದೀಕ್ಷಾವಸ್ತ್ರಗಳು, ಅಂದರೆ ಮಹಾಯಾಜಕ ಆರೋನನಿಗೆ ಹಾಗು ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳು.”
20 : ಇದಾದ ಮೇಲೆ ಇಸ್ರಯೇಲ್ ಸಮಾಜದವರೆಲ್ಲರು ಮೋಶೆಯ ಹತ್ತಿರದಿಂದ ಹೊರಟು ಹೋದರು.
21 : ಅವರಲ್ಲಿ ಉದಾರ ಹೃದಯಿಗಳು ಸ್ವಂತ ಇಷ್ಟದಿಂದ ಮುಂದೆಬಂದು ದೇವದರ್ಶನದ ಗುಡಾರದ ಕೆಲಸಕ್ಕೂ ಅದರ ಸಮಸ್ತಸೇವೆಗೂ ಹಾಗು ದೀಕ್ಷಾವಸ್ತ್ರಗಳಿಗೂ ಬೇಕಾದವುಗಳನ್ನು ಸರ್ವೇಶ್ವರನಿಗೆ ಕಾಣಿಕೆಯಾಗಿ ತಂದರು.
22 : ಹೆಂಗಸರು ಹಾಗು ಗಂಡಸರು ಧಾರಾಳ ಮನಸ್ಸಿನಿಂದ ಸರ್ವೇಶ್ವರನಿಗೆ ಚಿನ್ನದ ಕಾಣಿಕೆಗಳನ್ನು ಅಂದರೆ ಕಡಗ, ಮೂಗುತಿ, ಮುದ್ರೆಯುಂಗುರ, ಕಂಠಮಾಲೆ ಮೊದಲಾದ ಚಿನ್ನದ ಒಡವೆಗಳನ್ನು ಸಮರ್ಪಿಸಿದರು.
23 : ಯಾರಲ್ಲಿ ನೀಲಿ, ಧೂಮ, ಹಾಗು ರಕ್ತವರ್ಣಗಳುಳ್ಳದಾರಗಳು, ನಯವಾದ ನಾರುಬಟ್ಟೆ, ಆಡುಕೂದಲಿನ ಬಟ್ಟೆ, ಹದಮಾಡಿದ ಕೆಂಪುಬಣ್ಣದ ಕುರಿದೊಗಲು ಹಾಗು ಕಡಲು ಹಂದಿಯ ತೊಗಲು ಇದ್ದವೋ ಅವರು ಅವುಗಳನ್ನು ತಂದುಕೊಟ್ಟರು.
24 : ಯಾರಲ್ಲಿ ಬೆಳ್ಳಿ ಇಲ್ಲವೆ ತಾಮ್ರ ಇತ್ತೋ ಅವರು ಅವುಗಳನ್ನೇ ತಂದು ಸರ್ವೇಶ್ವರನಿಗೆ ಸಮರ್ಪಿಸಿದರು. ಯಾರ ಬಳಿಯಲ್ಲಿ ಗುಡಾರದ ಕೆಲಸಕ್ಕೆ ಬೇಕಾದ ಜಾಲಿಮರವಿತ್ತೋ ಅವರು ಅದನ್ನು ತಂದುಕೊಟ್ಟರು.
25 : ನಿಪುಣೆಯರಾದ ಮಹಿಳೆಯರು ತಮ್ಮ ಕೈಗಳಿಂದ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ನೂಲನ್ನು ಹಾಗು ನಯವಾದ ನಾರಿನ ನೂಲನ್ನು, ನೇಯ್ದ ಆ ನೂಲುಗಳನ್ನು ತಂದುಕೊಟ್ಟರು.
26 : ನಿಪುಣೆಯರಾದ ಬೇರೆ ಮಹಿಳೆಯರು ಆಡಿನ ತಪ್ಪಟವನ್ನು ನೇಯ್ದು ತಂದುಕೊಟ್ಟರು.
27 : ಜನ ನಾಯಕರು ಮಹಾಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳನ್ನು, ವಕ್ಷ ಕವಚದಲ್ಲಿ ಖಚಿಸಬೇಕಾದ ರತ್ನಗಳನ್ನು,
28 : ದೀಪಕ್ಕೆ ಬೇಕಾದ ಎಣ್ಣೆಯನ್ನು, ಅಭಿಷೇಕ ತೈಲಕ್ಕೆ ಮತ್ತು ಪರಿಮಳ ಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳನ್ನು ತಂದುಕೊಟ್ಟರು.
29 : ಮೋಶೆಯ ಮುಖಾಂತರ ಸರ್ವೇಶ್ವರ ಆಜ್ಞಾಪಿಸಿದ ಎಲ್ಲ ಕೆಲಸಕಾರ್ಯಗಳಿಗೆ ಬೇಕಾದವುಗಳನ್ನು ಇಸ್ರಯೇಲಿನ ಸ್ತ್ರೀಪುರುಷರೆಲ್ಲರು ಹೃದಯ ಪೂರ್ವಕವಾಗಿಯೇ ತಂದೊಪ್ಪಿಸಿದರು.
30 : ಮೋಶೆ ಇಸ್ರಯೇಲರಿಗೆ ಹೀಗೆಂದನು: “ಸರ್ವೇಶ್ವರಸ್ವಾಮಿ ಯೆಹೂದಕುಲದವನಾದ ಹೂರನ ಮೊಮ್ಮಗನೂ ಉರಿಯ ಮಗನೂ ಆದ ಬಿಚಲೇಲನೆಂಬವನನ್ನು ಹೆಸರಿಸಿ ಆಯ್ಕೆ ಮಾಡಿದ್ದಾರೆ. ನಯನವಿರಾದ ಕೆಲಸಗಳನ್ನು ನಿಯೋಜಿಸುವುದಕ್ಕೂ,
31 : ಚಿನ್ನ, ಬೆಳ್ಳಿ, ತಾಮ್ರಗಳಿಂದ ಕೆಲಸ ನಡೆಸುವುದಕ್ಕೂ, ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ವಿಚಿತ್ರ ಕೆತ್ತನೆ ಕೆಲಸ ನಡೆಸುವುದಕ್ಕೂ
32 : ಬೇರೆ ವಿವಿಧ ಶೃಂಗಾರದ ಕೆಲಸ ಮಾಡುವುದಕ್ಕೂ ಅವನನ್ನು ಆರಿಸಿಕೊಂಡಿದ್ದಾರೆ.
33 : ಅವನಿಗೆ ದೈವಾತ್ಮಶಕ್ತಿಯನ್ನು ಕೊಟ್ಟು ಬೇಕಾದ ಜ್ಞಾನ, ವಿದ್ಯೆ, ವಿವೇಕ ಇವುಗಳನ್ನೂ ಸಕಲ ಶಿಲ್ಪಶಾಸ್ತ್ರ ಜ್ಞಾನವನ್ನೂ ಅನುಗ್ರಹಿಸಿದ್ದಾರೆ.
34 : ಅದೂ ಅಲ್ಲದೆ, ಮತ್ತೊಬ್ಬರಿಗೆ ಕಲಿಸಿಕೊಡುವುದಕ್ಕೆ ಸಹ ಅವನಿಗೆ ಮತ್ತು ದಾನ್ ಕುಲದ ಅಹೀಸಾ ಮಾಕನ ಮಗ ಒಹೋಲೀಯಾಬನಿಗೆ ವಿಶೇಷ ವರವನ್ನು ಕೊಟ್ಟಿದ್ದಾರೆ.
35 : ಶಿಲ್ಪಿಗಳು, ಚಮತ್ಕಾರವಾದ ಕೆಲಸ ನಿಯೋಜಿಸುವವರು ಹಾಗು ನೀಲಿ, ಊದ ಹಾಗು ಕಡುಗೆಂಪು ವರ್ಣದ ದಾರದಿಂದಲೂ ನಯವಾದ ನಾರುಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲ ಕಸುಬುದಾರರು ನಡೆಸುವ ಕೆಲಸಗಳನ್ನು ನಿಯೋಜಿಸುವುದಕ್ಕೂ ಹಾಗು ಕಾರ್ಯಗತ ಮಾಡುವುದಕ್ಕೂ ಸರ್ವೇಶ್ವರ ಅವರಿಗೆ ಜ್ಞಾನವನ್ನು ಪೂರ್ತಿಯಾಗಿ ಅನುಗ್ರಹಿಸಿದ್ದಾರೆ.