Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಸರ್ವೇಶ್ವರಸ್ವಾಮಿ ಮೋಶೆಗೆ, “ನೀನು ಮೊದಲಿನ ಕಲ್ಲಿನ ಹಲಗೆಗಳಂತೆ ಇನ್ನೂ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೋ. ನೀನು ಒಡೆದುಬಿಟ್ಟ ಆ ಮೊದಲನೆಯ ಹಲಗೆಗಳ ಮೇಲಿದ್ದ ವಾಕ್ಯಗಳನ್ನು ನಾನು ಈ ಹಲಗೆಗಳ ಮೇಲೆ ಬರೆಯುವೆನು.
2 : ಬೆಳಿಗ್ಗೆ ನೀನು ಸಿದ್ಧವಾಗಿದ್ದು, ಸೀನಾಯಿ ಬೆಟ್ಟವನ್ನು ಹತ್ತಿ, ಅಲ್ಲಿ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರು.
3 : ಯಾರೂ ನಿನ್ನ ಜೊತೆಯಲ್ಲಿ ಮೇಲಕ್ಕೆ ಬರಕೂಡದು. ಈ ಬೆಟ್ಟದ ಮೇಲೆ ಯಾರೂ ಎಲ್ಲಿಯೂ ಕಾಣಿಸಕೂಡದು. ದನಕುರಿಗಳೂ ಈ ಬೆಟ್ಟದ ಮುಂದೆ ಮೇಯಕೂಡದು,” ಎಂದು ಹೇಳಿದರು
4 : ಅಂತೆಯೇ ಮೋಶೆ ಮೊದಲಿದ್ದ ಹಲಗೆಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೊಂಡು, ಸರ್ವೇಶ್ವರನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟವನ್ನು ಹತ್ತಿದನು.
5 : ಆಗ ಸರ್ವೇಶ್ವರಸ್ವಾಮಿ ಮೇಘಾವ್ರತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು.
6 : ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: “ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳುದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ಥನು.
7 : ಸಾವಿರಾರು ತಲೆಗಳವರೆಗೂ ಅಚಲಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷ ಪರಿಣಾಮಗಳನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು.”
8 : ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ,
9 : “ಸ್ವಾಮಿ ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.
10 : ಸರ್ವೇಶ್ವರ ಮೋಶೆಗೆ, “ಕೇಳು, ನಾನೊಂದು ಒಡಂಬಡಿಕೆಯನ್ನು ಮಾಡುತ್ತೇನೆ. ಜಗದಲ್ಲಿ ಯಾವ ನಾಡಿನಲ್ಲೂ ಯಾವ ಜನಾಂಗದಲ್ಲೂ ನಡೆಯದಂಥ ಮಹತ್ಕಾರ್ಯಗಳನ್ನು ನಿನ್ನ ಜನರೆಲ್ಲರು ನೋಡುವಂತೆ ನಡೆಸುವೆನು. ನಿಮ್ಮ ಸುತ್ತಮುತ್ತಲಿರುವ ಜನರೆಲ್ಲರು ಸರ್ವೇಶ್ವರನಾದ ನಾನು ಮಾಡುವ ಮಹತ್ಕಾರ್ಯವನ್ನು ನೋಡುವರು. ನಾನು ನಿಮ್ಮ ವಿಷಯದಲ್ಲಿ ಮಾಡಬೇಕೆಂದಿರುವುದು ಅದ್ಭುತಕರವಾದುದು.
11 : ನಾನು ಈ ದಿನ ನಿಮಗೆ ಆಜ್ಞಾಪಿಸುವುದನ್ನು ನೀವು ಅನುಸರಿಸಿ ನಡೆಯಬೇಕು. ಇಗೋ, ನಾನು ಅಮೋರಿಯರನ್ನು, ಕಾನಾನ್ಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಹಾಗು ಯೆಬೂಸಿಯರನ್ನು ನಿಮ್ಮ ಮುಂದೆಯೇ ಹೊರಡಿಸಿ ಬಿಡುವೆನು.
12 : ನೀವು ಸೇರುವ ನಾಡಿನ ನಿವಾಸಿಗಳೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳದಂತೆ ಎಚ್ಚರಿಕೆಯಿಂದಿರಿ; ಮಾಡಿಕೊಂಡರೆ ಅದು ಕೊರಳನ್ನು ಸಿಕ್ಕಿಸುವ ಉರುಳಾಗುವುದು.
13 : ಅವರ ಬಲಿಪೀಠಗಳನ್ನು ಕೆಡವಿಬಿಡಿ; ಅವರ ಕಲ್ಲುಕಂಬದ ವಿಗ್ರಹಗಳನ್ನು ಒಡೆದುಬಿಡಿ; ‘ಆಶೇರ’ ಎಂಬ ಸ್ತಂಭಗಳನ್ನು ಕಡಿದುಬಿಡಿ.
14 : ನೀವು ಬೇರೆ ದೇವರ ಮುಂದೆ ಅಡ್ಡಬೀಳಬಾರದು; ಏಕೆಂದರೆ ಸ್ವಾಭಿಮಾನಿಯೆಂಬ ಹೆಸರುಳ್ಳ ಸರ್ವೇಶ್ವರನಾದ ನಾನು ನನಗೆ ಸಲ್ಲಬೇಕಾದ ಅಭಿಮಾನವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ.
15 : ನೀವು ಆ ನಾಡಿನ ನಿವಾಸಿಗಳ ಸಂಗಡ ಒಪ್ಪಂದಮಾಡಿಕೊಳ್ಳದಂತೆ ಜಾಗರೂಕರಾಗಿರಿ. ಮಾಡಿಕೊಂಡರೆ ಅವರು ತಮ್ಮ ದೇವತೆಗಳನ್ನು ಪೂಜಿಸಿ ಬಲಿಯರ್ಪಿಸುವಾಗ ಬಲಿಭೋಜನಕ್ಕೆ ನಿಮ್ಮನ್ನು ಕರೆಯಬಹುದು. ನೀವು ಹೋಗಿ ಅದನ್ನು ಭುಜಿಸುವ ಸಂಭವವುಂಟು.
16 : ಅದೂ ಅಲ್ಲದೆ ನೀವು ನಿಮ್ಮ ಗಂಡುಮಕ್ಕಳಿಗೆ ಅವರಲ್ಲಿ ಹೆಣ್ಣುಗಳನ್ನು ತೆಗೆದುಕೊಳ್ಳುವುದಕ್ಕೆ ಆಸ್ಪದವುಂಟಾಗುವುದು. ಅನಂತರ ಆ ಸೊಸೆಯಂದಿರು ತೌರುಮನೆಯ ದೇವತೆಗಳನ್ನು ಪೂಜಿಸುವವರಾಗಿ ನಿಮ್ಮ ಮಕ್ಕಳನ್ನು ಅನ್ಯದೇವರುಗಳ ಪೂಜೆಯೆಂಬ ವ್ಯಭಿಚಾರಕ್ಕೆ ಎಳೆಯಬಹುದು. ಆದ್ದರಿಂದ ಎಚ್ಚರಿಕೆಯಾಗಿರಿ!
17 : “ನಿಮಗಾಗಿ ದೇವರುಗಳ ಎರಕದ ವಿಗ್ರಹಗಳನ್ನು ಮಾಡಿಸಿಕೊಳ್ಳಬೇಡಿ.
18 : “ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬಗಳನ್ನು ಆಚರಿಸಿರಿ. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದ ನಿಯಮಿತ ಕಾಲದಲ್ಲಿ ಏಳು ದಿವಸ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಕೆಂದರೆ ನೀವು ಚೈತ್ರಮಾಸದಲ್ಲಿ ಈಜಿಪ್ಟಿನಿಂದ ಬಿಡುಗಡೆಯಾಗಿ ಹೊರಬಂದದ್ದು.
19 : “ಪ್ರಥಮ ಗರ್ಭಫಲವೆಲ್ಲಾ, ಅಂದರೆ ನಿಮ್ಮ ದನಕುರಿಗಳಲ್ಲಿ ಹುಟ್ಟುವ ಚೊಚ್ಚಲು ಮರಿಗಳೆಲ್ಲಾ ಗಂಡಾಗಿದ್ದರೆ ಅವು ನನ್ನವೇ.
20 : ಕತ್ತೆಯ ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೆಮರಿಯನ್ನು ಬಿಡಿಸಬಹುದು. ಹಾಗೆ ಬಿಡಿಸಲಾಗದೆ ಹೋದರೆ ಅದರ ಕುತ್ತಿಗೆ ಮುರಿದು ಕೊಂದುಬಿಡಬೇಕು. ಆದರೆ ನಿಮ್ಮ ಚೊಚ್ಚಲು ಗಂಡುಮಗುವನ್ನು ಕೊಲ್ಲದೆ, ಬದಲು ಕೊಟ್ಟು ಬಿಡಿಸಲೇಬೇಕು. ಯಾರೂ ಬರೀಗೈಯಲ್ಲಿ ನನ್ನ ಮುಂದೆ ಕಾಣಿಸಿಕೊಳ್ಳಬಾರದು.
21 : “ಆರು ದಿವಸಗಳು ನೀವು ದುಡಿಯಬಹುದು. ಆದರೆ ಏಳನೆಯ ದಿನ ಯಾವ ದುಡಿಮೆಯನ್ನೂ ಮಾಡಬಾರದು. ಅದು ಉಳುವ ಕಾಲವಾಗಿರಲಿ, ಕೊಯ್ಯುವ ಕಾಲವಾಗಿರಲಿ ಏಳನೆಯ ದಿನ ದುಡಿಯದೆ ಇರಬೇಕು.
22 : “ಹೊಸ ಗೋದಿಬೆಳೆಯ ಪ್ರಥಮ ಸಮರ್ಪಣೆಯ, ಅಂದರೆ (ಪಾಸ್ಕವಾದ ಏಳು) ವಾರಗಳ ಮೇಲೆ ನೀವು ಸುಗ್ಗಿಹಬ್ಬವನ್ನು ಆಚರಿಸಬೇಕು. ವರ್ಷದ ಕೊನೆಯಲ್ಲಿ ಬೆಳೆ ಒಕ್ಕಣೆಯ ಹಬ್ಬವನ್ನು ಆಚರಿಸಬೇಕು.
23 : ವರ್ಷಕ್ಕೆ ಮೂರುಸಾರಿ ನಿಮ್ಮಲ್ಲಿರುವ ಗಂಡಸರೆಲ್ಲರು ಇಸ್ರಯೇಲರ ದೇವರೂ ಸರ್ವೇಶ್ವರನೂ ಆದ ನನ್ನ ಸನ್ನಿಧಿಯಲ್ಲಿ ಸೇರಬೇಕು.
24 : ನಾನು ನಿಮ್ಮ ಎದುರಿನಿಂದ ಅನ್ಯಜನರನ್ನು ಹೊರಡಿಸಿ ನಿಮ್ಮ ಎಲ್ಲೆಯನ್ನು ವಿಸ್ತರಿಸುವೆನು. ಅದೂ ಅಲ್ಲದೆ ನೀವು ವರ್ಷಕ್ಕೆ ಮೂರು ಸಾರಿ ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಸನ್ನಿಧಿಗೆ ಬರುವಾಗ ಯಾರೂ ನಿಮ್ಮ ನಾಡನ್ನು ಅಪಹರಿಸಲು ಅಪೇಕ್ಷಿಸುವುದಿಲ್ಲ.
25 : “ನನಗೆ ಬಲಿಯರ್ಪಿಸುವಾಗ ಆ ಬಲಿಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಕೂಡದು. ಪಾಸ್ಕದಲ್ಲಿ ನೀವು ಸಮರ್ಪಿಸುವ ಬಲಿ ಮಾಂಸವನ್ನು ಮರುದಿನದವರೆಗೂ ಉಳಿಸಬಾರದು.
26 : “ಭೂಮಿಯ ಮೊದಲನೆಯ ಬೆಳೆಗಳಲ್ಲಿ ಶ್ರೇಷ್ಠವಾದುದನ್ನು ನಿಮ್ಮ ದೇವರೂ ಸರ್ವೇಶ್ವರನೂ ಆದ ನನ್ನ ಮಂದಿರಕ್ಕೆ ತರಬೇಕು.
27 : ಸರ್ವೇಶ್ವರ ಮೋಶೆಗೆ, “ನೀನು ಈ ವಾಕ್ಯಗಳನ್ನು ಬರೆ. ಏಕೆಂದರೆ ಈ ವಾಕ್ಯಗಳ ಆಧಾರದ ಮೇಲೆ ನಾನು ನಿನ್ನೊಂದಿಗೂ ಇಸ್ರಯೇಲರೊಂದಿಗೂ ಒಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ,” ಎಂದು ಹೇಳಿದರು.
28 : ಮೋಶೆ ಆ ಬೆಟ್ಟದಲ್ಲಿ ನಾಲ್ವತ್ತು ದಿನ ಹಗಲಿರುಳೂ ಅನ್ನಪಾನವಿಲ್ಲದೆ ಸರ್ವೇಶ್ವರನ ಸನ್ನಿಧಿಯಲ್ಲಿ ಇದ್ದನು. ಒಡಂಬಡಿಕೆಯ ವಾಕ್ಯಗಳನ್ನು, ಅಂದರೆ ಹತ್ತು ಆಜ್ಞೆಗಳನ್ನು, ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.
29 : ಮೋಶೆ ಆಜ್ಞಾಶಾಸನಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಸೀನಾಯಿ ಬೆಟ್ಟದಿಂದ ಇಳಿದು ಬಂದಾಗ ಅವನ ಮುಖ ಪ್ರಕಾಶಮಾನವಾಗಿತ್ತು. ಏಕೆಂದರೆ ಅವನು ಸರ್ವೇಶ್ವರನ ಸಂಗಡ ಸಂಭಾಷಿಸಿದ್ದನು. ಆದರೆ ಅದು ಅವನಿಗೆ ತಿಳಿದಿರಲಿಲ್ಲ.
30 : ಮೋಶೆಯ ಮುಖ ಹೀಗೆ ಪ್ರಕಾಶವಾಗಿರುವುದನ್ನು ಆರೋನನು ಮತ್ತು ಇಸ್ರಯೇಲರೆಲ್ಲರು ನೋಡಿ ಅವನ ಹತ್ತಿರಕ್ಕೆ ಬರಲು ಭಯಪಟ್ಟರು.
31 : ಆದರೆ ಮೋಶೆ ಅವರನ್ನು ಕರೆದನು. ಆಗ ಆರೋನನು ಹಾಗು ಜನನಾಯಕರೆಲ್ಲರು ಅವನ ಬಳಿಗೆ ಬಂದರು. ಆಗ ಮೋಶೆ ಅವರ ಸಂಗಡ ಮಾತಾಡಿದನು.
32 : ಅನಂತರ ಇಸ್ರಯೇಲರೆಲ್ಲರು ಕೂಡ ಹತ್ತಿರಕ್ಕೆ ಬಂದರು. ಮೋಶೆ ತಾನು ಸೀನಾಯಿ ಬೆಟ್ಟದಲ್ಲಿ ಸರ್ವೇಶ್ವರನಿಂದ ಹೊಂದಿದ ಆಜ್ಞೆಗಳನ್ನೆಲ್ಲ ಅವರಿಗೆ ತಿಳಿಸಿದನು.
33 : ಅವರೊಡನೆ ಮಾತಾಡಿ ಮುಗಿಸಿದ ಮೇಲೆ ಮೋಶೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡನು.
34 : ಸರ್ವೇಶ್ವರನ ಸಂಗಡ ಮಾತಾಡಬೇಕೆಂದು ಅವರ ಸನ್ನಿಧಿಗೆ ಹೋಗುವಾಗಲೆಲ್ಲ ಅಲ್ಲಿಂದ ಹೊರಗೆ ಬರುವ ತನಕ ಅವನು ಆ ಮುಸುಕನ್ನು ತೆಗೆದಿಡುತ್ತಿದ್ದನು. ಹೊರಗೆ ಬಂದಾಗ ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಇಸ್ರಯೇಲರಿಗೆ ತಿಳಿಸುತ್ತಿದ್ದನು.
35 : ಮೋಶೆಯ ಮುಖ ಪ್ರಕಾಶಮಾನವಾಗಿರುವುದನ್ನು ಇಸ್ರಯೇಲರು ಗಮನಿಸುತ್ತಿದ್ದರು. ಆದಕಾರಣ ಅವನು ಸರ್ವೇಶ್ವರನ ಸಂಗಡ ಮಾತಾಡಲು ಹೋಗುವವರೆಗೆ ತನ್ನ ಮುಖದ ಮೇಲೆ ಮುಸುಕು ಹಾಕಿಕೊಂಡಿರುತ್ತಿದ್ದನು.

· © 2017 kannadacatholicbible.org Privacy Policy