Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಮೋಶೆಗೆ ಸರ್ವೇಶ್ವರಸ್ವಾಮಿ ಹೇಳಿದ ಮಾತುಗಳಿವು: “ನೀನು ಈಜಿಪ್ಟಿನಿಂದ ಕರೆದುತಂದ ಜನರನ್ನು ನಿನ್ನ ಸಂಗಡ ಕರೆದುಕೊಂಡು ಈ ಸ್ಥಳಬಿಟ್ಟು ತೆರಳು. ನಾನು ಅಬ್ರಹಾಮ್, ಇಸಾಕ್, ಯಕೋಬ್ ಎಂಬುವರೊಡನೆ ಅವರ ಸಂತತಿಯವರಿಗೆ ಕೊಡುವುದಾಗಿ ಪ್ರಮಾಣ ಮಾಡಿದ ನಾಡಿಗೆ ಹೊರಟುಹೋಗು.
2 : ನಾನು ಒಬ್ಬ ದೂತನನ್ನು ನಿನಗೆ ಮುಂದಾಗಿ ಕಳಿಸಿ ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಹಾಗು ಯೆಬೂಸಿಯರನ್ನು ಅಲ್ಲಿಂದ ಹೊರದೂಡುವೆನು.
3 : ಅದು ಹಾಲೂ ಜೇನೂ ಹರಿಯುವ ಶ್ರೀಮಂತ ನಾಡು. ನಾನು ಸ್ವಂತಃ ನಿಮ್ಮ ಸಂಗಡ ಬರುವುದಿಲ್ಲ. ಏಕೆಂದರೆ ನೀವು ನನ್ನ ಆಜ್ಞೆಗೆ ತಲೆಬಾಗದ ಹಟಮಾರಿ ಜನ; ದಾರಿಯಲ್ಲೇ ನಾನು ನಿಮ್ಮನ್ನು ಸಂಹರಿಸಬೇಕಾಗಬಹುದು.”
4 : ಈ ದುಃಖಕರವಾದ ಮಾತುಗಳನ್ನು ಕೇಳಿ, ಇಸ್ರಯೇಲರು ಶೋಕತಪ್ತರಾದರು; ಒಬ್ಬರೂ ಒಡವೆವಸ್ತುಗಳನ್ನು ಧರಿಸಿಕೊಳ್ಳಲಿಲ್ಲ.
5 : ಏಕೆಂದರೆ ಮೋಶೆಯ ಮುಖಾಂತರ ಸರ್ವೇಶ್ವರ, “ನೀವು ನನ್ನ ಆಜ್ಞೆಗಳಿಗೆ ಬಗ್ಗದ ಹಟಮಾರಿಗಳು. ನಾನು ಕ್ಷಣಮಾತ್ರ ನಿಮ್ಮೊಡನೆ ಬರುವುದಾದರೆ ನಿರ್ಮೂಲವಾಗಿಬಿಡುವಿರಿ, ಎಚ್ಚರಿಕೆ! ಆದ್ದರಿಂದ ನಿಮ್ಮ ಒಡವೆವಸ್ತುಗಳನ್ನು ತೆಗೆದುಬಿಡಿ. ನಿಮಗೇನು ಮಾಡಬೇಕೆಂದು ಆಲೋಚಿಸುವೆನು,” ಎಂದಿದ್ದರು.
6 : ಅಂತೆಯೇ ಇಸ್ರಯೇಲರು ಹೋರೆಬ್ ಬೆಟ್ಟದಿಂದೀಚೆಗೆ ಒಡವೆವಸ್ತುಗಳನ್ನು ತೊಟ್ಟುಕೊಳ್ಳದೆ ಇದ್ದರು.
7 : ಮೋಶೆ ಗುಡಾರವನ್ನು ಪಾಳೆಯದ ಹೊರಗೆ ದೂರದಲ್ಲಿ ಹಾಕಿಸುತ್ತಿದ್ದನು. ಅದಕ್ಕೆ ‘ದೇವದರ್ಶನದ ಗುಡಾರ’ ಎಂದು ಹೆಸರಿಟ್ಟನು. ಸರ್ವೇಶ್ವರನಿಂದ ಉತ್ತರವನ್ನು ಬಯಸುತ್ತಿದ್ದವರೆಲ್ಲರು ಪಾಳೆಯದ ಹೊರಗಿದ್ದ ಆ ದೇವದರ್ಶನದ ಗುಡಾರಕ್ಕೆ ಹೋಗುತ್ತಿದ್ದರು.
8 : ಮೋಶೆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲಿ ನಿಂತು ಮೋಶೆ ಆ ಗುಡಾರದೊಳಕ್ಕೆ ಹೋಗುವ ತನಕ ಅವನ ಹಿಂದೆ ನೋಡುತ್ತಿದ್ದರು.
9 : ಮೋಶೆ ಗುಡಾರದೊಳಕ್ಕೆ ಹೋದಕೂಡಲೆ ಮೇಘಸ್ತಂಭವೊಂದು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು. ಆಗ ಮೋಶೆಯ ಸಂಗಡ ಸರ್ವೇಶ್ವರ ಮಾತಾಡುತ್ತಿದ್ದರು.
10 : ಆ ಮೇಘಸ್ತಂಭ ಗುಡಾರದ ಬಾಗಿಲಲ್ಲಿ ನಿಲ್ಲುವುದನ್ನು ಜನರೆಲ್ಲರು ನೋಡಿ, ಎದ್ದುನಿಂತು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡಬೀಳುತ್ತಿದ್ದರು
11 : ಒಬ್ಬ ಮನುಷ್ಯ ತನ್ನ ಗೆಳೆಯನೊಡನೆ ಹೇಗೆ ಮಾತಾಡುತ್ತಾನೋ ಹಾಗೆಯೇ ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದರು. ತರುವಾಯ ಮೋಶೆ ಪಾಳೆಯಕ್ಕೆ ಮರಳಿ ಬರುತ್ತಿದ್ದನು. ಆದರೆ ನೂನನ ಮಗನಾದ ಯೆಹೋಶುವ ಎಂಬ ಹೆಸರುಳ್ಳ ಯುವಕನೊಬ್ಬನು ಮೋಶೆಯ ಶಿಷ್ಯನಾಗಿ ಆ ಗುಡಾರದಲ್ಲೇ ಇರುತ್ತಿದ್ದನು. ಅದನ್ನು ಬಿಟ್ಟು ಹೋಗುತ್ತಿರಲಿಲ್ಲ.
12 : ಮೋಶೆ ಸರ್ವೇಶ್ವರಸ್ವಾಮಿಗೆ, “ಈ ಜನರನ್ನು ಇಂಥ ಈ ನಾಡಿಗೆ ನಡೆಸಿಕೊಂಡು ಹೋಗಬೇಕೆಂದು ನನಗೆ ನೀವು ವಿಧಿಸಿದಿರಿ. ನನ್ನ ಸಂಗಡ ಬೇರೆ ಯಾರನ್ನು ಕಳುಹಿಸುವಿರೆಂದು ನನಗೆ ತಿಳಿಸಲಿಲ್ಲ. ‘ನಿನ್ನನ್ನು ಹೆಸರಿಡಿದು ಗುರುತಿಸಿದ್ದೇನೆ, ನಿನಗೆ ನನ್ನ ದಯೆ ದೊರಕಿದೆ’, ಎಂದು ಹೇಳಿದ್ದೀರಿ.
13 : ನನಗೆ ನಿಮ್ಮ ದಯೆ ದೊರಕಿದೆ ಆದರೆ ನಾನು ನಿಮ್ಮನ್ನು ಬಲ್ಲವನಾಗಿರುವಂತೆ ನಿಮ್ಮ ಮಾರ್ಗವನ್ನು ನನಗೆ ತೋರಿಸಿರಿ. ಆಗ ನಿಮ್ಮ ದಯೆ ನನಗೆ ದೊರಕಿದೆಯೆಂದು ತಿಳಿದುಕೊಳ್ಳುತ್ತೇನೆ. ಈ ಜನ ನಿಮ್ಮ ಪ್ರಜೆಯೆಂಬುದನ್ನು ನೆನಪಿನಲ್ಲಿಡಿ,” ಎಂದು ಅರಿಕೆಮಾಡಿದನು.
14 : ಅದಕ್ಕೆ ಸರ್ವೇಶ್ವರ, “ನನ್ನ ಪ್ರಸನ್ನತೆ ನಿನ್ನ ಜೊತೆಯಲ್ಲಿ ಬರುವುದು. ನಾನು ನಿನಗೆ ವಿಶ್ರಾಂತಿ ನೀಡುವೆನು,” ಎಂದರು.
15 : ಆಗ ಮೋಶೆ: “ನೀವೇ ನಮ್ಮ ಸಂಗಡ ಬಾರದೆಹೋದರೆ ನಮ್ಮನ್ನು ಇಲ್ಲಿಂದ ಕಳುಹಿಸಬೇಡಿ
16 : ನನಗೂ ನಿಮ್ಮ ಪ್ರಜೆಗಳಾದ ಇವರಿಗೂ ನಿಮ್ಮ ಅನುಗ್ರಹ ದೊರಕಿದೆ ಎಂಬುದು ನೀವೇ ನಮ್ಮ ಸಂಗಡ ಬರುವುದರಿಂದಲೇ ಹೊರತು ಬೇರೆ ಯಾವುದರಿಂದ ತಿಳಿದೀತು? ನೀವು ಬರುವುದರಿಂದ ನಾನೂ ನಿಮ್ಮ ಪ್ರಜೆಗಳಾದ ಇವರೂ ಜಗದಲ್ಲಿರುವ ಬೇರೆ ಎಲ್ಲಾ ಜನಗಳಿಗಿಂತಲೂ ವಿಶಿಷ್ಟರಾದವರೆಂಬುದು ಖಚಿತವಾಗುವುದು,” ಎಂದನು.
17 : ಅದಕ್ಕೆ ಸರ್ವೇಶ್ವರ, “ನಿನ್ನ ಕೋರಿಕೆಯಂತೆ ಮಾಡುವೆನು. ಏಕೆಂದರೆ ನೀನು ನನ್ನ ಅನುಗ್ರಹಕ್ಕೆ ಪಾತ್ರನು; ನಿನ್ನನ್ನು ಹೆಸರಿಡಿದು ಗುರುತಿಸಿದ್ದೇನೆ,” ಎಂದು ಮೋಶೆಗೆ ಹೇಳಿದರು.
18 : ಆಗ ಮೋಶೆ, “ನಿಮ್ಮ ಮಹಿಮೆಯನ್ನು ದಯಮಾಡಿ ನನಗೆ ತೋರಿಸಿ,” ಎಂದು ವಿನಂತಿಸಿದನು.
19 : ಸರ್ವೇಶ್ವರ, “ನನ್ನ ಒಳ್ಳೆಯತನವೆಲ್ಲ ನಿನ್ನೆದುರಿಗೆ ಹಾದುಹೋಗುವಂತೆ ಮಾಡುವೆನು. ಸರ್ವೇಶ್ವರನಾದ ನನ್ನ ನಾಮದ ಮಹತ್ವವನ್ನು ನಿನ್ನೆದುರಿಗೆ ಪ್ರಕಟಿಸುವೆನು. ಯಾರ್ಯಾರ ಮೇಲೆ ದಯೆಯಿಡಲು ಆಶಿಸುತ್ತೇನೋ ಅವರ ಮೇಲೆ ದಯೆಯಿಡುತ್ತೇನೆ. ಯಾರ್ಯಾರನ್ನು ಕರುಣಿಸಲು ಆಶಿಸುತ್ತೇನೋ ಅವರನ್ನು ಕರುಣಿಸುತ್ತೇನೆ,” ಎಂದರು.
20 : ಮತ್ತೆ ಅವರು, “ಆದರೆ ನೀನು ನನ್ನ ಮುಖವನ್ನು ನೋಡಲಾಗದು. ಏಕೆಂದರೆ ನನ್ನನ್ನು ನೋಡಿದ ಮಾನವ ಜೀವಂತನಾಗಿ ಉಳಿಯಲಾರ” ಎಂದು ಹೇಳಿದರು.
21 : ಇನ್ನೂ ಮೋಶೆಗೆ, “ಇಗೋ ಇಲ್ಲಿ ಸವಿೂಪದಲ್ಲೇ ಒಂದು ಸ್ಥಳವಿದೆ. ನೀನು ಆ ಬಂಡೆಯ ಮೇಲೆ ನಿಂತಿರು,
22 : ನನ್ನ ಮಹಿಮೆ ನಿನ್ನೆದುರಿಗೆ ದಾಟಿಹೋಗುವಾಗ ನಾನು ಆ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ, ನಿನ್ನ ಮುಂದೆ ನಾನು ಹಾದುಹೋಗುವ ತನಕ ನಿನ್ನನ್ನು ನನ್ನ ಕೈಯಿಂದ ಮುಚ್ಚುವೆನು.
23 : ಬಳಿಕ ನಾನು ಕೈ ತೆಗೆವೆನು. ಆಗ ನೀನು ನನ್ನ ಹಿಂಭಾಗವನ್ನು ನೋಡುವೆ. ಆದರೆ ನನ್ನ ಮುಖ ಕಾಣಿಸದು,” ಎಂದು ಸರ್ವೇಶ್ವರ ಹೇಳಿದರು.

· © 2017 kannadacatholicbible.org Privacy Policy