1 : “ಆರೋನನು ಮತ್ತು ಅವನ ಮಕ್ಕಳು ನನಗೆ ಯಾಜಕರಾಗಿ ಸೇವೆ ಸಲ್ಲಿಸುವಂತೆ ನೀನು ಅವರನ್ನು ಹೀಗೆ ಪ್ರತಿಷ್ಠಿಸು: ಕಳಂಕರಹಿತವಾದ ಒಂದು ಹೋರಿಕರುವನ್ನು ಮತ್ತು ಎರಡು ಟಗರುಗಳನ್ನು ತೆಗೆದುಕೊ.
2 : ಹುಳಿಯಿಲ್ಲದ ರೊಟ್ಟಿಗಳನ್ನು, ಎಣ್ಣೆಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನು ಹಾಗು ಎಣ್ಣೆ ಹೊಯ್ದ ಹುಳಿಯಿಲ್ಲದ ಕಡುಬುಗಳನ್ನು ಗೋದಿ ಹಿಟ್ಟಿನಿಂದ ಮಾಡಿಸಿ ಒಂದೇ ಪುಟ್ಟಿಯಲ್ಲಿ ತುಂಬಿಸಿಕೊ.
3 : ಆಮೇಲೆ ಆ ಪುಟ್ಟಿಯನ್ನು, ಆ ಹೋರಿಯನ್ನು ಹಾಗು ಟಗರುಗಳನ್ನು ತಂದಿಡು.
4 : “ಬಳಿಕ ಆರೋನನನ್ನೂ ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿಗೆ ಕರೆದುಕೊಂಡು ಬಂದು ನೀರಿನಲ್ಲಿ ಸ್ನಾನಮಾಡಿಸು
5 : ತರುವಾಯ ಆರೋನನಿಗೆ ಆ ವಸ್ತ್ರಗಳನ್ನು ಅಂದರೆ, ನಿಲುವಂಗಿಯನ್ನು, ಕವಚದೊಳಗೆ ತೊಟ್ಟುಕೊಳ್ಳಬೇಕಾದ ನಿಲುವಂಗಿಯನ್ನು, ಎಫೋದ್ ಕವಚವನ್ನು, ಎದೆಕವಚವನ್ನು ತೊಡಿಸಿ, ಕವಚದ ಕಸೂತಿ ನಡುಕಟ್ಟನ್ನು ಕಟ್ಟು
6 : ಅವನ ತಲೆಗೆ ಪೇಟವನ್ನು ಹಾಕಿಸಿ ಪೇಟದ ಮೇಲೆ ಪವಿತ್ರ ಪಟ್ಟಿಯನ್ನು ಕಟ್ಟಿಸು;
7 : ಅಭಿಷೇಕ ತೈಲವನ್ನು ಅವನ ತಲೆಯಮೇಲೆ ಅಭ್ಯಂಜನ ಮಾಡಿ ಅವನನ್ನು ಅಭಿಷೇಕಿಸು.
8 : “ಅನಂತರ ಅವನ ಮಕ್ಕಳನ್ನು ಹತ್ತಿರಕ್ಕೆ ಕರೆದು ಅವರಿಗೆ ನಿಲುವಂಗಿಗಳನ್ನು ತೊಡಿಸು, ನಡುಕಟ್ಟುಗಳನ್ನು ಕಟ್ಟಿಸಿ ಪೇಟಗಳನ್ನು ಸುತ್ತಿಸು
9 : ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಯಾಜಕ ಸೇವೆಗೆ ಸೇರಿಸು. ಅಂದಿನಿಂದ ಯಾಜಕತ್ವವು ಅವರಿಗೆ ಶಾಶ್ವತ ನಿಯಮವಾಗಿ ಪ್ರಾಪ್ತಿಸುವುದು.
10 : “ತರುವಾಯ ನೀನು ಆ ಹೋರಿಯನ್ನು ದೇವದರ್ಶನದ ಗುಡಾರದ ಎದುರಿಗೆ ತರಿಸಿ ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ಕೈಗಳನ್ನಿಟ್ಟನಂತರ
11 : ಅದನ್ನು ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು
12 : ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಮಿಕ್ಕ ರಕ್ತವನ್ನೆಲ್ಲ ಬಲಿಪೀಠದ ಬುಡಕ್ಕೆ ಸುರಿಯಬೇಕು.
13 : ಅದರ ವಪೆಯನ್ನು, ಕಾಳಿಜದ ಮೇಲಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು ಹಾಗು ಅವುಗಳ ಮೇಲಿರುವ ಕೊಬ್ಬನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಹೋಮಮಾಡಬೇಕು
14 : ಹೋರಿಯ ಮಾಂಸವನ್ನು, ಚರ್ಮವನ್ನು ಹಾಗು ಕಲ್ಮಷವನ್ನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟುಬಿಡಬೇಕು. ಏಕೆಂದರೆ ಇದು ಪಾಪಪರಿಹಾರಕ ಬಲಿದಾನ.
15 : “ಇದಾದ ಬಳಿಕ ಆ ಟಗರುಗಳಲ್ಲಿ ಒಂದನ್ನು ತೆಗೆದುಕೊ. ಆರೋನನೂ ಅವನ ಮಕ್ಕಳೂ ಅದರ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ
16 : ಅದನ್ನು ವಧಿಸಿ ಅದರ ರಕ್ತವನ್ನು ಬಲಿಪೀಠದ ನಾಲ್ಕು ಕಡೆಗಳಿಗೆ ಸುರಿ.
17 : ಆಮೇಲೆ ಆ ಟಗರನ್ನು ತುಂಡುತುಂಡಾಗಿ ಕಡಿದು ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆಸಿ ಅವುಗಳನ್ನೂ ಆ ತುಂಡುಗಳನ್ನೂ ಹಾಗು ತಲೆಯನ್ನೂ ಒಟ್ಟಿಗೆ ಇಟ್ಟು
18 : ಅದನ್ನೆಲ್ಲಾ ಬಲಿಪೀಠದ ಮೇಲೆ ಸರ್ವೇಶ್ವರನಾದ ನನಗೆ ದಹನಬಲಿಯಾಗಿ ಸಮರ್ಪಿಸು. ಇದು ನನಗೆ ಪ್ರಿಯವಾದ ಸುಗಂಧ.
19 : “ಅನಂತರ ಎರಡನೆಯ ಟಗರನ್ನು ತೆಗೆದುಕೊಂಡು ಆರೋನನೂ ಅವನ ಮಕ್ಕಳೂ ಅದರ ಮೇಲೆ ತಮ್ಮ ಕೈಗಳನ್ನು ಇಟ್ಟನಂತರ ಅದನ್ನು ವಧಿಸು.
20 : ಅದರ ರಕ್ತದಲ್ಲಿ ಸ್ವಲ್ಪವನ್ನು ಆರೋನನ ಮತ್ತು ಅವನ ಮಕ್ಕಳ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಸೋಂಕಿಸಿ ಮಿಕ್ಕ ರಕ್ತವನ್ನು ಬಲಿಪೀಠದ ನಾಲ್ಕು ಕಡೆಗಳಿಗೂ ಸುರಿ.
21 : ಅದಲ್ಲದೆ ಬಲಿಪೀಠದ ಮೇಲಿರುವ ರಕ್ತದಲ್ಲಿಯೂ ಅಭಿಷೇಕತೈಲದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಆರೋನನ ಮತ್ತು ಅವನ ವಸ್ತ್ರಗಳ ಮೇಲೆಯೂ ಚಿಮುಕಿಸು. ಹೀಗೆ ಅವನೂ ಅವನ ಮಕ್ಕಳೂ ಅವನ ವಸ್ತ್ರಗಳ ಸಹಿತವಾಗಿ ಪ್ರತಿಷ್ಠಾಪಿತರಾಗುವರು.
22 : “ಪಟ್ಟಾಭಿಷೇಕಕ್ಕಾಗಿ ಸಮರ್ಪಿತವಾದ ಆ ಟಗರಿನ ಕೊಬ್ಬನ್ನೆಲ್ಲ, ಅಂದರೆ ಬಾಲದ ಕೊಬ್ಬನ್ನು, ವಪೆಯನ್ನು, ಕಾಳಿಜದ ಮೇಲಿರುವ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು, ಅವುಗಳ ಮೇಲಿರುವ ಕೊಬ್ಬನ್ನು,
23 : ಬಲತೊಡೆಯನ್ನು ಮತ್ತು ಸರ್ವೇಶ್ವರನಾದ ನನಗೆದುರಾಗಿ ಪುಟ್ಟಿಯಲ್ಲಿ ಇಟ್ಟಿರುವ ಹುಳಿಯಿಲ್ಲದ ಪದಾರ್ಥಗಳಲ್ಲಿ ಒಂದು ರೊಟ್ಟಿಯನ್ನು, ಎಣ್ಣೆ ಮಿಶ್ರವಾದ ಒಂದು ಹೋಳಿಗೆಯನ್ನು ಹಾಗು ಒಂದು ಕಡುಬನ್ನು ತೆಗೆದುಕೊ.
24 : ಅವುಗಳನ್ನೆಲ್ಲ ಆರೋನನ ಮತ್ತು ಅವನ ಮಕ್ಕಳ ಕೈಗೆಕೊಟ್ಟು ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಕಾಣಿಕೆಯಾಗಿ ಆರತಿ ಮಾಡಿಸು.
25 : ಆಮೇಲೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಬಲಿಪೀಠದ ಮೇಲೆ ದಹನಬಲಿಯ ಸಂಗಡ ಸರ್ವೇಶ್ವರನಾದ ನನಗೆ ಆಹುತಿಕೊಡು. ಇದು ನನಗೆ ಪ್ರಿಯವಾದ ಸುಗಂಧ ಆಹಾರ ದಹನಬಲಿ.
26 : “ಆರೋನನ ಪಟ್ಟಾಭಿಷೇಕಕ್ಕಾಗಿ ಸಮರ್ಪಿಸಿದ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು ಅದನ್ನು ಕೂಡ ಕಾಣಿಕೆಯಾಗಿ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಆರತಿ ಮಾಡಿಸು. ಅದು ನಿನಗೇ ಸಲ್ಲತಕ್ಕ ಪಾಲು.
27 : ಆರೋನನಿಗೂ ಅವನ ಮಕ್ಕಳಿಗೂ ಯಾಜಕ ದೀಕ್ಷೆಯನ್ನು ಕೊಡುವಾಗ ಸಮರ್ಪಿಸಿದ ಟಗರಿನ ಮಾಂಸದಲ್ಲಿ ಕಾಣಿಕೆಯಾಗಿ ಆರತಿಮಾಡಿಸಿದ ಎದೆಯ ಭಾಗವನ್ನು ಮತ್ತು ಯಾಜಕರ ಭಾಗಕ್ಕೆ ಪ್ರತ್ಯೇಕಿಸಿದ ಅದರ ತೊಡೆಯನ್ನು ದೇವರದೆಂದು ಭಾವಿಸಬೇಕು
28 : ಶಾಶ್ವತ ನಿಯಮವಾಗಿ ಇಸ್ರಯೇಲರು ಅವುಗಳನ್ನು ಆರೋನನಿಗೂ ಅವನ ವಂಶಸ್ಥರಿಗೂ ಕೊಡತಕ್ಕದ್ದು. ಅವು ಯಾಜಕರ ಭಾಗಕ್ಕಾಗಿ ಪ್ರತ್ಯೇಕಿಸಲ್ಪಟ್ಟವು. ಇಸ್ರಯೇಲರು ಸಮಾಧಾನದ ಬಲಿದಾನಕ್ಕಾಗಿ ಪ್ರಾಣಿಗಳನ್ನು ವಧಿಸಿ ಸರ್ವೇಶ್ವರನಾದ ನನಗೆ ಕಾಣಿಕೆಯನ್ನು ಅರ್ಪಿಸುವಾಗಲೆಲ್ಲಾ ಆ ಭಾಗಗಳನ್ನು ಯಾಜಕರಿಗಾಗಿ ಪ್ರತ್ಯೇಕಿಸಬೇಕು.
29 : “ಆರೋನನ ಯಾಜಕ ದೀಕ್ಷಾವಸ್ತ್ರಗಳನ್ನು ಅವನ ತರುವಾಯ ಅವನ ವಂಶಸ್ಥರಿಗೂ ಉಪಯೋಗವಾಗುವಂತೆ ಇಡಬೇಕು. ಅವರೂ ಯಾಜಕಾಭಿಷಿಕ್ತರಾಗಿ ಮಹಾಯಾಜಕ ಸೇವೆಯನ್ನು ಕೈಗೊಂಡಾಗ ಅವುಗಳನ್ನು ಧರಿಸಿಕೊಳ್ಳಬೇಕು.
30 : ಅವನ ಮಕ್ಕಳಲ್ಲಿ ಅವನಿಗೆ ಪ್ರತಿಯಾಗಿ ಮಹಾಯಾಜಕನಾಗುವವನು ಪವಿತ್ರ ಸ್ಥಾನದಲ್ಲಿ ದೇವರ ಸೇವೆಯನ್ನು ನಡೆಸುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದ ದಿನದಿಂದ ಏಳು ದಿವಸಗಳವರೆಗೆ ಆ ವಸ್ತ್ರಗಳನ್ನು ತೊಟ್ಟುಕೊಂಡಿರಬೇಕು.
31 : “ಆರೋನನ ಯಾಜಕಾಭಿಷೇಕಕ್ಕಾಗಿ ಸಮರ್ಪಿಸಿದ ಟಗರಿನ ಮಾಂಸವನ್ನು ದೇವದರ್ಶನದ ಗುಡಾರದ ಪ್ರಾಕಾರದಲ್ಲಿ ಬೇಯಿಸಬೇಕು.
32 : ಆರೋನನು ಮತ್ತು ಅವನ ಮಕ್ಕಳು ಆ ಟಗರಿನ ಮಾಂಸವನ್ನು ಹಾಗು ಪುಟ್ಟಿಯಲ್ಲಿರುವ ರೊಟ್ಟಿಯನ್ನು ದೇವದರ್ಶನದ ಗುಡಾರದ ಬಾಗಿಲೊಳಗೆ ಊಟಮಾಡಬೇಕು.
33 : ಅವರನ್ನು ಯಾಜಕ ಪದವಿಗೆ ಸೇರಿಸುವುದಕ್ಕೂ ದೇವರ ಸೇವೆಗೆ ಪ್ರತಿಷ್ಠಿಸುವುದಕ್ಕೂ ಯಾವ ಪದಾರ್ಥಗಳನ್ನು ಪಾಪಪರಿಹಾರಕ್ಕಾಗಿ ಸಮರ್ಪಿಸಲಾದುವೋ ಅವುಗಳನ್ನು ಅವರೇ ಭೋಜನ ಮಾಡಬೇಕು. ಇತರರು ಅವುಗಳನ್ನು ತಿನ್ನಕೂಡದು. ಏಕೆಂದರೆ ಅವು ವಿೂಸಲಾದುವು.
34 : ಯಾಜಕಾಭಿಷೇಕಕ್ಕೆ ಸಂಬಂಧಪಟ್ಟ ಮಾಂಸದಲ್ಲಾಗಲಿ, ರೊಟ್ಟಿಯಲ್ಲಾಗಲಿ ಏನಾದರು ಮರುದಿನದ ಉದಯದವರೆಗೆ ಉಳಿದರೆ ಅದನ್ನು ಸುಟ್ಟು ಬಿಡಬೇಕು. ಅದು ದೇವರ ವಸ್ತುವಾದುದರಿಂದ ಯಾರೂ ತಿನ್ನಕೂಡದು.
35 : “ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿವಸದ ಆಚರಣೆಯನ್ನು ನಡೆಸಿ ಆರೋನನನ್ನು ಮತ್ತು ಅವನ ಮಕ್ಕಳನ್ನು ಯಾಜಕಸೇವೆಗೆ ಅಭಿಷೇಕಿಸು.
36 : ಪ್ರತಿದಿನದಲ್ಲೂ ಪಾಪಪರಿಹಾರಕ್ಕಾಗಿ ಒಂದು ಹೋರಿಯನ್ನು ಬಲಿದಾನಮಾಡು. ಅದೂ ಅಲ್ಲದೆ ಬಲಿಪೀಠವನ್ನು ಶುದ್ಧ ಮಾಡುವುದಕ್ಕಾಗಿ ಅದರ ಮೇಲೆ ಪಾಪಪರಿಹಾರಕ ಬಲಿಯನ್ನು ಸಮರ್ಪಿಸಿ, ಆ ಪೀಠವನ್ನು ದೇವರ ಸೇವೆಗೋಸ್ಕರ ಅಭಿಷೇಕಿಸು.
37 : ಹೀಗೆ ಏಳು ದಿನಗಳವರಗೆ ಬಲಿಪೀಠದ ನಿಮಿತ್ತ ಪಾಪ ಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪ್ರತಿಷ್ಠಾಪಿಸು. ಬಲಿಪೀಠವು ಅತಿ ಶುದ್ಧ ಆಗಿರಬೇಕು. ಅದನ್ನು ಸೋಂಕಿದೆಲ್ಲವು ಪರಿಶುದ್ಧವಾಗುವುದು.
38 : “ಬಲಿಪೀಠದ ಮೇಲೆ ಅನುದಿನವೂ ಸಮರ್ಪಿಸಬೇಕಾದುವುಗಳು ಇವು: ಒಂದು ವರ್ಷದ ಎರಡು ಕುರಿಗಳನ್ನು ದಿನಂಪ್ರತಿ ಬಲಿದಾನ ಮಾಡಬೇಕು.
39 : ಅವುಗಳಲ್ಲಿ ಒಂದನ್ನು ಬೆಳಿಗ್ಗೆ ಮತ್ತೊಂದನ್ನು ಸಂಜೆ ಸಮರ್ಪಿಸಬೇಕು.
40 : ಒಂದು ಲೀಟರು ಶ್ರೇಷ್ಠವಾದ ಓಲಿವ್ ಎಣ್ಣೆಯನ್ನು ಒಂದು ಕಿಲೋಗ್ರಾಂ ಗೋದಿಹಿಟ್ಟಿಗೆ ಬೆರೆಸಿ ಧಾನ್ಯಾ ಅರ್ಪಣೆಗಾಗಿ ಆ ಮೊದಲನೆಯ ಕುರಿಯ ಸಮೇತ ಹೋಮಮಾಡಬೇಕು.
41 : ಸಂಜೆ ಎರಡನೆಯ ಕುರಿಯನ್ನು ಬಲಿದಾನ ಮಾಡುವಾಗ ಬೆಳಿಗ್ಗೆ ಮಾಡಿದಂತೆಯೇ ಅದರೊಂದಿಗೆ ಧಾನ್ಯವನ್ನೂ ಪಾನವನ್ನೂ ಸಮರ್ಪಿಸಬೇಕು. ಅದು ಸರ್ವೇಶ್ವರನಾದ ನನಗೆ ಪ್ರಿಯವಾದ ಸುಗಂಧ ದಹನಬಲಿಯಾಗಿ ಇರುವುದು.
42 : ನೀವು ಮತ್ತು ನಿಮ್ಮ ಸಂತತಿಯವರು ಪ್ರತಿನಿತ್ಯವೂ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ದೇವದರ್ಶನದ ಗುಡಾರದ ಬಾಗಿಲಿನ ಎದುರಿನಲ್ಲಿ ಈ ದಹನಬಲಿಯನ್ನು ಅರ್ಪಿಸಬೇಕು
43 : ಅಲ್ಲಿಯೇ ನಾನು ಇಸ್ರಯೇಲರಿಗೆ ದರ್ಶನವನ್ನು ಕೊಡುವೆನು. ಅಲ್ಲಿ ಕಾಣಿಸುವ ನನ್ನ ಪ್ರಭಾವದಿಂದ ಆ ಸ್ಥಳವು ಪರಿಶುದ್ಧವಾಗಿರುವುದು.
44 : ನಾನು ದೇವದರ್ಶನದ ಗುಡಾರವನ್ನು ಮತ್ತು ಬಲಿಪೀಠವನ್ನು ಪರಿಶುದ್ಧ ಸ್ಥಳಗಳಾಗುವಂತೆ ಮಾಡುವೆನು. ಆರೋನನು ಮತ್ತು ಅವನ ಮಕ್ಕಳು ನನಗೆ ಯಾಜಕರಾಗುವಂತೆ ಪ್ರತಿಷ್ಠಿಸಿಕೊಳ್ಳುವೆನು
45 : 45ತಮ್ಮ ಮಧ್ಯೆ ವಾಸವಾಗುವುದಕ್ಕಾಗಿಯೇ ತಮ್ಮನ್ನು ಈಜಿಪ್ಟಿನಿಂದ ಹೊರಗೆ ಬರಮಾಡಿದ ತಮ್ಮ ದೇವರಾದ ಸರ್ವೇಶ್ವರನು ನಾನೇ ಎಂದು ಅವರು ಅರಿತುಕೊಳ್ಳುವರು. ಹೌದು, ನಾನೇ ಅವರ ದೇವರಾದ ಸರ್ವೇಶ್ವರಸ್ವಾಮಿ.