Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : “ನನ್ನ ನಿವಾಸಕ್ಕಾಗಿ ಒಂದು ಗುಡಾರವನ್ನು ಹತ್ತು ತಾನು ಬಟ್ಟೆಗಳಿಂದ ಮಾಡಿಸಬೇಕು. ಅವು ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ, ಊದ ಹಾಗು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮತ್ಕಾರವಾಗಿ ಕಸೂತಿ ಹಾಕಿಸಬೇಕು.
2 : ಒದೊಂದು ತಾನು ಬಟ್ಟೆ ಇಪ್ಪತ್ತೆಂಟು ಮೊಳ ಉದ್ದ ಹಾಗು ನಾಲ್ಕು ಮೊಳ ಅಗಲವಾಗಿರಬೇಕು.
3 : ಇಂತಹ ಐದೈದು ಬಟ್ಟೆಗಳನ್ನು ಒಂದೊಂದಾಗಿ ಜೋಡಿಸಬೇಕು.
4 : ಆ ಎರಡು ಜೋಡಣೆಗಳಲ್ಲಿ ಒಂದೊಂದರ ಕೊನೇ ಬಟ್ಟೆಯ ಅಂಚಿನಲ್ಲಿ ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿಸಬೇಕು.
5 : ಆ ಕುಣಿಕೆಗಳು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರುಬದರಾಗಿರಬೇಕು
6 : ಇದೂ ಅಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿಸಿ ಆ ಬಟ್ಟೆಗಳನ್ನು ಒಂದಕ್ಕೊಂದು ಕೂಡಿಸಬೇಕು. ಹೀಗೆ ಒಂದೇ ಗುಡಾರವಾಗುವುದು.
7 : “ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಆಡು ಕೂದಲಿನ ಹನ್ನೊಂದು ತಾನು ಬಟ್ಟೆಗಳನ್ನು ಮಾಡಿಸಬೇಕು.
8 : ಇಂತಹ ಒಂದೊಂದು ಬಟ್ಟೆ ಮೂವತ್ತು ಮೊಳ ಉದ್ದ ಹಾಗೂ ನಾಲ್ಕು ಮೊಳ ಅಗಲವಾಗಿರಬೇಕು. ಎಲ್ಲ ಬಟ್ಟೆಗಳು ಒಂದೇ ಅಳತೆಯಾಗಿರಬೇಕು.
9 : ಐದು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಬಟ್ಟೆಗಳನ್ನು ಒಂದಾಗಿ ಜೋಡಿಸಿ ಆರನೆಯ ಬಟ್ಟೆಯನ್ನು ಡೇರೆಯ ಮುಂಭಾಗದಲ್ಲಿ ಮಡಿಸಿ ತೂಗಾಡುವಂತೆ ಬಿಡಬೇಕು.
10 : ಒಂದೊಂದು ಕೊನೇ ಬಟ್ಟೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿಸಬೇಕು.
11 : ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿಸಿ ಒಂದೇ ಡೇರೆಯಾಗುವಂತೆ ಆ ಕೊಂಡಿಗಳನ್ನು ಕುಣಿಕೆಗಳಲ್ಲಿ ಸಿಕ್ಕಿಸಿ ಎಲ್ಲವನ್ನು ಕೂಡಿಸಬೇಕು
12 : ಹೊದಿಕೆಯ ಬಟ್ಟೆಗಳಲ್ಲಿ ಅರ್ಧಬಟ್ಟೆ ಹೆಚ್ಚಾಗಿರುತ್ತದೆ. ಆ ಹೆಚ್ಚಿನ ಭಾಗವು ಗುಡಾರದ ಹಿಂಭಾಗದಲ್ಲಿ ಮಡಿಸಿ ತೂಗಾಡುವಂತೆ ಬಿಡಬೇಕು.
13 : ಹೊದಿಕೆಯ ಬಟ್ಟೆಗಳ ಉದ್ದದಲ್ಲಿ ಈ ಕಡೆ ಒಂದು ಮೊಳ ಆ ಕಡೆ ಒಂದು ಮೊಳ ಹೆಚ್ಚಾಗಿರುತ್ತದೆ. ಅವು ಒಳಗಿನ ಗುಡಾರವನ್ನು ಮುಚ್ಚುವಂತೆ ಈ ಕಡೆಯೂ ಆ ಕಡೆಯೂ ಇರಬೇಕು.
14 : ಆ ಹೊದಿಕೆಗೆ ಹೊದಿಸುವುದಕ್ಕಾಗಿ ಹದಮಾಡಿರುವ ಕೆಂಪುಬಣ್ಣದ ಕುರಿದೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನು ಹಾಗು ಕಡಲುಹಂದಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿಸಬೇಕು
15 : “ಗುಡಾರಕ್ಕೆ ಬೇಕಾದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿಸಬೇಕು
16 : ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದ ಒಂದುವರೆ ಮೊಳ ಅಗಲವಿರಬೇಕು ಮತ್ತು
17 : ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟು ಎರಡು ನಿಲವು ಪಟ್ಟಿಗಳುಳ್ಳದ್ದಾಗಿರಬೇಕು. ಗುಡಾರದ ಎಲ್ಲ ಚೌಕಟ್ಟುಗಳನ್ನು ಹಾಗೇ ಮಾಡಿಸಬೇಕು
18 : ಅದರ ದಕ್ಷಿಣ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ನಿಲ್ಲಿಸಬೇಕು.
19 : ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿಸಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಡಬೇಕು. ಒಂದೊಂದು ಚೌಕಟ್ಟಿನಲ್ಲಿರುವ ಎರಡು ಪಟ್ಟಿಗಳಿಗೆ ಒಂದೊಂದು ಗದ್ದಿಗೇಕಲ್ಲು ಇರಬೇಕು.
20 : ಹಾಗೆಯೇ ಗುಡಾರದ ಉತ್ತರ ದಿಕ್ಕಿನಲ್ಲಿಯೂ ಇಪ್ಪತ್ತು ಚೌಕಟ್ಟುಗಳೂ ಮತ್ತು
21 : ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೇಕಲ್ಲುಗಳು ಇರಬೇಕು
22 : ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿಸಬೇಕು.
23 : ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿಸಬೇಕು.
24 : ಅವು ಬುಡದಿಂದ ತುದಿಯವರೆಗೂ, ಅಂದರೆ ಮೊದಲನೆಯ ಬಳೆಯ ತನಕ ಜೋಡಿಸಬೇಕು. ಹಾಗೆ ಎರಡು ಮೂಲೆಗಳಿಗೂ ಮಾಡಿಸಬೇಕು.
25 : ಹೀಗೆ ಹಿಂಭಾಗದಲ್ಲಿ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೇ ಕಲ್ಲುಗಳೂ, ಅಂತೂ ಹದಿನಾರು ಗದ್ದಿಗೇ ಕಲ್ಲುಗಳು ಇರುವುವು
26 : ಜಾಲೀಮರದಿಂದ ಅಗುಳಿಗಳನ್ನು ಮಾಡಿಸಬೇಕು. ಗುಡಾರದ ಎರಡು ಕಡೆಗಳ ಚೌಕಟ್ಟುಗಳಿಗೂ
27 : ಅದರ ಹಿಂದುಗಡೆಯ ಅಂದರೆ, ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿಸಬೇಕು.
28 : ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟಬೇಕು.
29 : ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿಸಬೇಕು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಬೇಕು.
30 : ನಾನು ಬೆಟ್ಟದಲ್ಲಿ ನಿನಗೆ ತೋರಿಸಿಕೊಟ್ಟ ರೀತಿಯಲ್ಲೇ ಗುಡಾರವನ್ನು ನಿಲ್ಲಿಸಬೇಕು.
31 : “ಹುರಿನಾರಿನ ಬಟ್ಟೆಯಲ್ಲಿ ನೀಲು, ಧೂಮ್ರ, ರಕ್ತವರ್ಣಗಳುಳ್ಳ ದಾರದಿಂದ ಕೆರೂಬಿಗಳನ್ನು ಕಲಾತ್ಮಕವಾಗಿ ಕಸೂತಿಹಾಕಿ ಒಂದು ತೆರೆಯ ಚಿತ್ರವನ್ನು ಮಾಡಿಸಬೇಕು.
32 : ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿಸಿ, ಚಿನ್ನದ ತಗಡುಗಳನ್ನು ಹೊದಿಸಿ, ನಾಲ್ಕು ಬೆಳ್ಳಿಯ ಗದ್ದಿಗೇ ಕಲ್ಲುಗಳ ಮೇಲೆ ನಿಲ್ಲಿಸಿ ಚಿನ್ನದ ಕೊಂಡಿಗಳಿಂದ ಆ ತೆರೆಯನ್ನು ಆ ನಾಲ್ಕು ಕಂಬಗಳಿಗೆ ಸಿಕ್ಕಿಸಬೇಕು.
33 : “ಆ ತೆರೆಯನ್ನು ಕೊಂಡಿಗಳಿಗೆ ಸಿಕ್ಕಿಸಿದಾಗ ಅದರೊಳಗೆ ಆಜ್ಞಾಶಾಸನಗಳ ಮಂಜೂಷವನ್ನು ತರಿಸಿಡಬೇಕು. ಆ ತೆರೆಯು ಪವಿತ್ರಸ್ಥಾನ ಎಂಬುದನ್ನೂ ಮಹಾಪವಿತ್ರ ಸ್ಥಾನವೆಂಬುದನ್ನೂ ಬೇರೆ ಬೇರೆ ಮಾಡುವುದು.
34 : ಮಹಾಪವಿತ್ರ ಸ್ಥಾನದಲ್ಲಿ ಆಜ್ಞಾಶಾಸನಗಳ ಮಂಜೂಷದ ಮೇಲೆ ಕೃಪಾಸನವನ್ನು ತಂದಿಡಬೇಕು
35 : ತೆರೆಯ ಹೊರಗಡೆಯಲ್ಲಿ ಮೇಜನ್ನೂ ಮೇಜಿನ ಎದುರಾಗಿ ಗುಡಾರದ ದಕ್ಷಿಣ ದಿಕ್ಕಿನಲ್ಲಿ ದೀಪವೃಕ್ಷವನ್ನೂ ಇಡಬೇಕು; ಮೇಜು ಉತ್ತರ ಕಡೆಯಲ್ಲಿರಬೇಕು.
36 : “ಡೇರೆಯ ಬಾಗಲಿಗೆ ಹರಿನಾರಿನ ಬಟ್ಟೆಯಲ್ಲಿ ನೀಲಿ, ಊದ, ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ವಿಚಿತ್ರವಾಗಿ ಕಸೂತಿ ಹಾಕಿ ತೆರೆಯನ್ನು ಮಾಡಿಸಬೇಕು.
37 : ತೆರೆ ತೂಗಿಸುವುದಕ್ಕಾಗಿ ಜಾಲೀಮರದಿಂದ ಐದು ಕಂಬಗಳನ್ನು ಮಾಡಿಸಿ ಚಿನ್ನದ ತಗಡುಗಳನ್ನು ಹೊದಿಸಬೇಕು. ಅವುಗಳ ಕೊಂಡಿಗಳನ್ನು ಚಿನ್ನದಿಂದ ಮಾಡಿಸಿ ಅವುಗಳಿಗೋಸ್ಕರ ಐದು ತಾಮ್ರದ ಗದ್ದಿಗೇ ಕಲ್ಲುಗಳನ್ನು ಎರಕಹೊಯ್ಯಿಸಬೇಕು.

· © 2017 kannadacatholicbible.org Privacy Policy