Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಮೋಶೆಗೆ ಸರ್ವೇಶ್ವರಸ್ವಾಮಿ ಹೀಗೆಂದು ಹೇಳಿದರು:
2 : “ಇಸ್ರಯೇಲರು ನನಗಾಗಿ ಕಾಣಿಕೆಯನ್ನು ವಿೂಸಲಿಡಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆ ಕಾಣಿಕೆಯನ್ನು ಸ್ವೀಕರಿಸಬೇಕು.
3 : ನೀನು ಅವರಿಂದ ಸ್ವೀಕರಿಸತಕ್ಕ ಕಾಣಿಕೆಗಳು ಇವು: ಚಿನ್ನ, ಬೆಳ್ಳಿ, ತಾಮ್ರ
4 : ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರು ಮಡಿಗಳು, ತುಪ್ಪಟದ ಬಟ್ಟೆಗಳು,
5 : ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳು, ಕಡಲುಹಂದಿಯ ತೊಗಲುಗಳು,
6 : ಜಾಲೀಮರ, ದೀಪಕ್ಕೆ ಬೇಕಾದ ಎಣ್ಣೆ, ಅಭಿಷೇಕ ತೈಲಕ್ಕೆ ಹಾಗು ಪರಿಮಳ ಧೂಪಕ್ಕೆ ಬೇಕಾದ ಸುಗಂಧ ದ್ರವ್ಯಗಳು,
7 : ಪ್ರಧಾನ ಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳು, ಮತ್ತು ಪದಕದ ಚೀಲದಲ್ಲಿ ಕೆತ್ತಬೇಕಾದ ನಾನಾ ರತ್ನಗಳು.
8 : ನಾನು ಜನರ ಮಧ್ಯೆ ವಾಸಿಸುವುದಕ್ಕೆ ನನಗೊಂದು ಗುಡಾರವನ್ನು ಕಟ್ಟಿಸಬೇಕು.
9 : ನಾನು ನಿಮಗೆ ತೋರಿಸುವ ಮಾದರಿಯ ಪ್ರಕಾರವೇ ಆ ಗುಡಾರವನ್ನೂ ಅದರಲ್ಲಿನ ಎಲ್ಲ ಸಾಮಾಗ್ರಿಗಳನ್ನೂ ಮಾಡಿಸಬೇಕು.
10 : “ನೀನು ಜಾಲೀಮರದಿಂದ ಒಂದು ಮಂಜೂಷವನ್ನು ಮಾಡಬೇಕು. ಅದು ಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಹಾಗು ಒಂದುವರೆ ಮೊಳ ಎತ್ತರವಾಗಿರಲಿ.
11 : ಅಪ್ಪಟ ಬಂಗಾರದ ತಗಡುಗಳನ್ನು ಅದರ ಹೊರಗಡೆ ಮತ್ತು ಒಳಗಡೆ ಹೊದಿಸಿರಬೇಕು. ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು.
12 : ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ, ಅಂದರೆ ಒಂದೊಂದು ಕಡೆಗಳಲ್ಲಿ ಎರಡೆರಡು ಬಳೆಗಳನ್ನು ಇಡಬೇಕು.
13 : ಆ ಮಂಜೂಷವನ್ನು ಹೊರುವುದಕ್ಕಾಗಿ ಜಾಲೀಮರದ ದೊಣ್ಣೆಗಳನ್ನು ಮಾಡಿಸಿ, ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ,
14 : ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
15 : ಆ ದೊಣ್ಣೆಗಳನ್ನು ಮಂಜೂಷದ ಬಳೆಗಳಿಂದ ತೆಗೆಯದೆ ಅವುಗಳಲ್ಲಿಯೇ ಇಟ್ಟಿರಬೇಕು.
16 : ಆ ಮಂಜೂಷದೊಳಗೆ ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಇಡಬೇಕು.
17 : “ಇದೂ ಅಲ್ಲದೆ, ಅಪ್ಪಟ ಬಂಗಾರದ ಒಂದು ಕೃಪಾಸನವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದ ಹಾಗು ಒಂದುವರೆ ಮೊಳ ಅಗಲದ್ದಾಗಿರಬೇಕು.
18 : ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು
19 : ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿಸಿ ಕೃಪಾಸನಕ್ಕೆ ಜೋಡಿಸಬೇಕು.
20 : ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಕೃಪಾಸನವನ್ನು ರೆಕ್ಕೆಗಳಿಂದ ಮುಚ್ಚುವಂತೆಯೂ ಇರಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿರಬೇಕು.
21 : ಆ ಕೃಪಾಸನವನ್ನು ಮಂಜೂಷದ ಮೇಲಿಡಬೇಕು. ನಾನು ನಿನಗೆ ಕೊಡುವ ಆಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇಡಬೇಕು.
22 : ಅಲ್ಲಿಯೇ ನಾನು ನಿಮಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನಿಟ್ಟಿರುವ ಮಂಜೂಷದ ಮೇಲಿನ ಎರಡು ಕೆರೂಬಿಗಳ ನಡುವೆಯೇ ನಾನಿದ್ದು ನಿನ್ನ ಸಂಗಡ ಮಾತಾಡುವೆನು. ನೀನು ಇಸ್ರಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲ ವಿಷಯಗಳನ್ನು ತಿಳಿಸುವೆನು.
23 : “ಜಾಲೀ ಮರದಿಂದ ಒಂದು ಮೇಜನ್ನು ಮಾಡಿಸು. ಅದು ಎರಡು ಮೊಳ ಉದ್ದ ಒಂದು ಮೊಳ ಅಗಲ ಹಾಗು ಒಂದುವರೆ ಮೊಳ ಎತ್ತರ ಆಗಿರಲಿ.
24 : ಅದಕ್ಕೆ ಅಪ್ಪಟ ಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ತೋರಣ ಕಟ್ಟಿಸಬೇಕು.
25 : ಮೇಜಿನ ಸುತ್ತಲು ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ ಅದಕ್ಕೂ ಚಿನ್ನದ ತೋರಣ ಕಟ್ಟಿಸಬೇಕು.
26 : ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಹಾಕಿಸಬೇಕು.
27 : ಆ ಬಳೆಗಳು ಅಡ್ಡಪಟ್ಟಿಗೆ ಹತ್ತಿಕೊಂಡಿರಬೇಕು. ಮೇಜನ್ನು ಎತ್ತುವುದಕ್ಕಾಗಿ ದೊಣ್ಣೆಗಳನ್ನು ಅವುಗಳಲ್ಲಿ ಸೇರಿಸಬೇಕು.
29 : ಆ ದೊಣ್ಣೆಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. ಇವುಗಳಿಂದಲೇ ಆ ಮೇಜನ್ನು ಎತ್ತಬೇಕು.
29 : ಮೇಜಿನ ಮೇಲಿಡಬೇಕಾದ ತಟ್ಟೆಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು, ಪಾನಾರ್ಪಣೆಗೆ ಬೇಕಾದ ಬಟ್ಟಲುಗಳನ್ನು ಅಪ್ಪಟ ಬಂಗಾರದಿಂದಲೇ ಮಾಡಿಸಬೇಕು.
30 : ಸಮ್ಮುಖದಲ್ಲಿ ರೊಟ್ಟಿಗಳನ್ನು ಯಾವಾಗಲೂ ಆ ಮೇಜಿನ ಮೇಲೆ ನನ್ನ ಮುಂದೆ ಇಟ್ಟಿರಬೇಕು.
31 : “ಅಪ್ಪಟ ಬಂಗಾರದಿಂದ ಒಂದು ದೀಪ ವೃಕ್ಷವನ್ನು ಮಾಡಿಸಬೇಕು. ಅದರ ಬುಡವನ್ನು ಹಾಗು ಕಾಂಡವನ್ನು ನಕಾಸಿ ಕೆಲಸದಿಂದ ಮಾಡಿಸಬೇಕು. ಆ ದೀಪವೃಕ್ಷವೆಲ್ಲಾ ಅಖಂಡವಾಗಿರಬೇಕು. ಹೂಗಳಿಂದ, ಹೂಮೊಗ್ಗುಗಳಿಂದ ಕೂಡಿ ಅಲಂಕಾರವಾಗಿ ಕೆತ್ತಿರಬೇಕು.
32 : ಆ ವೃಕ್ಷದ ಒಂದೊಂದು ಕಡೆಯಲ್ಲಿ ಮೂರು ಮೂರು ಕೊಂಬೆಗಳಂತೆ ಆರು ಕೊಂಬೆಗಳಿರಬೇಕು
33 : ಪ್ರತಿಯೊಂದು ಕೊಂಬೆಯಲ್ಲೂ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಲಂಕಾರಗಳಿರಬೇಕು. ಒಂದೊಂದು ಅಲಂಕಾರಕ್ಕೆ ಒಂದು ಮೊಗ್ಗು ಹಾಗು ಒಂದು ಹೂ ಇರಬೇಕು. ಆರು ಕೊಂಬೆಗಳನ್ನೂ ಹಾಗೆ ಮಾಡಿಸಬೇಕು
34 : ದೀಪವೃಕ್ಷದ ಕಾಂಡದಲ್ಲಿ ಮೊಗ್ಗುಗಳೂ ಹೂಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇರಬೇಕು.
35 : ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗಿರಬೇಕು.
36 : ಮೊಗ್ಗುಗಳನ್ನೂ ಕೊಂಬೆಗಳನ್ನೂ ಒಳಗೊಂಡ ದೀಪವೃಕ್ಷವನ್ನೆಲ್ಲಾ ಅಪ್ಪಟ ಬಂಗಾರವನ್ನು ಉಪಯೋಗಿಸಿ ನಕಾಸಿ ಕೆಲಸದಿಂದ ಮಾಡಿಸಬೇಕು
37 : ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಆ ಹಣತೆಗಳಲ್ಲಿ ದೀಪಹಚ್ಚಿದಾಗ ಅವುಗಳ ಬೆಳಕು ಮುಂಭಾಗದಲ್ಲಿ ಪ್ರಕಾಶಿಸುವುದು.
38 : ದೀಪದಕುಡಿ ತೆಗೆಯುವ ಕತ್ತರಿಗಳನ್ನೂ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದ ಮಾಡಿಸಬೇಕು.
39 : ಆ ದೀಪವೃಕ್ಷವನ್ನು, ಅದರ ಎಲ್ಲ ಉಪಕರಣಗಳನ್ನು ಮಾಡಿಸಲು ಮೂವತ್ತೈದು ಕಿಲೋಗ್ರಾಮ್ ಅಪ್ಪಟ ಬಂಗಾರವನ್ನು ಉಪಯೋಗಿಸಬೇಕು
40 : ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯಂತೆಯೇ ಎಲ್ಲವನ್ನು ಎಚ್ಚರಿಕೆಯಿಂದ ಮಾಡಿಸಬೇಕು

· © 2017 kannadacatholicbible.org Privacy Policy