Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : “ಇಸ್ರಯೇಲರಿಗೆ ಈ ಕಟ್ಟಳೆಗಳನ್ನು ಕೊಡು:
2 : ನಿಮ್ಮಲ್ಲಿ ಯಾವನಾದರು ಒಬ್ಬ ಹಿಬ್ರಿಯನನ್ನು ಗುಲಾಮನನ್ನಾಗಿ ಕೊಂಡುಕೊಂಡರೆ ಆ ಹಿಬ್ರಿಯನು ಆರು ವರ್ಷ ಗುಲಾಮನಾಗಿ ದುಡಿದು ಏಳನೆಯ ವರ್ಷ ಏನೂ ಕೊಡದೆ ಬಿಡುಗಡೆಯಾಗಿ ಹೋಗಬೇಕು.
3 : ಅವನು ಮದುವೆಯಿಲ್ಲದವನಾಗಿ ಬಂದಿದ್ದರೆ ಒಂಟಿಗನಾಗಿಯೇ ಹೋಗಲಿ. ಹೆಂಡತಿಯುಳ್ಳವನಾಗಿ ಬಂದಿದ್ದರೆ ಹೆಂಡತಿಯೂ ಅವನ ಜೊತೆಯಲ್ಲಿ ಹೋಗಲಿ.
4 : ಅವನ ಯಜಮಾನ ಅವನಿಗೆ ಮದುವೆ ಮಾಡಿಸಿ ಆ ಹೆಂಡತಿಗೆ ಗಂಡು ಇಲ್ಲವೆ ಹೆಣ್ಣು ಮಕ್ಕಳಾಗಿದ್ದರೆ ಆ ಹೆಂಡತಿ ಹಾಗು ಅವಳ ಮಕ್ಕಳು ಯಜಮಾನನ ಸೊತ್ತಾಗುವರು. ಆ ಗುಲಾಮನು ಒಂಟಿಯಾಗಿಯೇ ಹೊರಟು ಹೋಗಲಿ.
5 : ಆದರೆ ಆ ಗುಲಾಮನು ತಾನು ತನ್ನ ಯಜಮಾನನನ್ನೂ ತನ್ನ ಮಡದಿ ಮಕ್ಕಳನ್ನೂ ಪ್ರೀತಿಸುತ್ತೇನೆ, ಈ ಕಾರಣ ಬಿಡುಗಡೆ ಹೊಂದಿ ಹೋಗಲು ಇಷ್ಟವಿಲ್ಲವೆಂದು ದೃಢವಾಗಿ ಹೇಳಬಹುದು.
6 : ಆಗ ಅವನ ಯಜಮಾನ ಅವನನ್ನು ದೇವರ ಸನ್ನಿಧಿಗೆ ಕರೆದುಕೊಂಡು ಬಂದು ಕದದ ಹತ್ತಿರ ಅಥವಾ ಬಾಗಿಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ದಬ್ಬಳದಿಂದ ಅವನ ಕಿವಿ ಚುಚ್ಚಬೇಕು. ಅಂದಿನಿಂದ ಯಜಮಾನನಿಗೆ ಶಾಶ್ವತ ಗುಲಾಮನಾಗಿರುವನು.
7 : “ಯಾರಾದರು ತನ್ನ ಮಗಳನ್ನು ದಾಸಿ ಆಗುವುದಕ್ಕೆ ಮಾರಿದರೆ, ಗಂಡು ಗುಲಾಮರು ಬಿಡುಗಡೆಯಾಗಿ ಹೋಗುವಂತೆ ಅವಳು ಬಿಡುಗಡೆಯಾಗಿ ಹೋಗಕೂಡದು.
8 : ಅವಳನ್ನು ತನಗಾಗಿ ಗೊತ್ತುಮಾಡಿಕೊಂಡ ಯಜಮಾನನಿಗೆ ಅವಳಲ್ಲಿ ಇಷ್ಟವಿಲ್ಲದೆ ಹೋದರೆ ಅವನಿಂದ ಬಿಡಿಸಿಕೊಳ್ಳಲು ಅವಳಿಗೆ ಅವಕಾಶಕೊಡಬೇಕು. ಅವನು ಕೊಟ್ಟ ಮಾತನ್ನು ತಪ್ಪಿದವನಾದುದರಿಂದ ಅನ್ಯಜನರಿಗೆ ಅವಳನ್ನು ಮಾರುವುದಕ್ಕೆ ಅವನಿಗೆ ಅಧಿಕಾರವಿಲ್ಲ.
9 : ಅವನು ಅವಳನ್ನು ತನ್ನ ಮಗನಿಗೆ ಗೊತ್ತುಮಾಡಿಕೊಂಡರೆ ಅವಳನ್ನು ಸೊಸೆಯಂತೆ ಭಾವಿಸಬೇಕು.
10 : ಯಜಮಾನ ಇನ್ನೊಬ್ಬಳನ್ನು ಸೇರಿಕೊಂಡರೂ ಮೊದಲನೆಯವಳಿಗೆ ಅನ್ನ, ಬಟ್ಟೆ, ದಾಂಪತ್ಯದ ಹಕ್ಕುಗಳನ್ನು ಕಡಿಮೆ ಮಾಡಕೂಡದು.
11 : ಈ ಮೂರರಲ್ಲಿ ಯಾವುದನ್ನೂ ನಡೆಸದೆಹೋದರೆ ಅವಳು ಏನೂ ಕೊಡದೆ ಬಿಡುಗಡೆಯಾಗಿ ಹೋಗಬಹುದು.
12 : “ಮನುಷ್ಯನನ್ನು ಹೊಡೆದು ಕೊಂದವನಿಗೆ ಮರಣದಂಡನೆಯಾಗಬೇಕು.
13 : ಆದರೆ ಕೊಲ್ಲಬೇಕೆಂಬ ಯೋಚನೆಯಿಲ್ಲದೆ ಆಕಸ್ಮಿಕವಾಗಿ ಒಬ್ಬನ ಹತ್ಯ ಆಗಿದ್ದರೆ ಆ ಹತ್ಯೆಗೆ ಕಾರಣವಾದವನು ನಾನು ನೇಮಿಸುವ ಆಶ್ರಯ ಸ್ಥಳಕ್ಕೆ ಓಡಿಹೋಗಿ ಬದುಕಬಹುದು.
14 : ಕೊಲ್ಲಬೇಕೆಂಬ ಉದ್ದೇಶದಿಂದಲೆ ಮತ್ತೊಬ್ಬನನ್ನು ಮೋಸದಿಂದ ಕೊಂದವನನ್ನು ನನ್ನ ಬಲಿಪೀಠದ ಬಳಿಯಿದ್ದರೂ ಎಳೆದು ಅವನಿಗೆ ಮರಣದಂಡನೆ ಕೊಡಬೇಕು.
15 : “ತಂದೆಯನ್ನಾಗಲಿ, ತಾಯಿಯನ್ನಾಗಲಿ ಹೊಡೆದವನಿಗೆ ಮರಣದಂಡನೆ ಆಗಬೇಕು.
16 : “ಒಬ್ಬನು ಮತ್ತೊಬ್ಬನನ್ನು ಕದ್ದೊಯ್ದು ಅವನನ್ನು ಮಾರಿದ್ದರೂ ಅಥವಾ ತನ್ನಲ್ಲೇ ಖೈದಿ ಆಗಿಟ್ಟುಕೊಂಡಿದ್ದರೂ ಅಂಥವನಿಗೆ ಮರಣ ದಂಡನೆಯಾಗಬೇಕು.
17 : “ತಂದೆಯನ್ನಾಗಲಿ, ತಾಯಿಯನ್ನಾಗಲಿ ಶಪಿಸುವವನಿಗೆ ಮರಣದಂಡನೆ ಆಗಬೇಕು.
18 : “ಇಬ್ಬರು ಜಗಳವಾಡುತ್ತಿರಲು ಒಬ್ಬನು ಮತ್ತೊಬ್ಬನನ್ನು ಕಲ್ಲಿನಿಂದಲೋ ಮುಷ್ಟಿಯಿಂದಲೋ ಹೊಡೆದುದರಿಂದ ಅವನು ಸಾಯದೆ ಗಾಯಗೊಂಡು, ಕೆಲವು ಕಾಲ ಹಾಸಿಗೆ ಹಿಡಿದಿರಬಹುದು. ಅನಂತರ ಎದ್ದು ಕೋಲೂರಿ ತಿರುಗಾಡುತ್ತಿರಬಹುದು.
19 : ಇಂಥ ಸಂದರ್ಭಗಳಲ್ಲಿ ಹೊಡೆದವನಿಗೆ ಶಿಕ್ಷೆಯಾಗಬಾರದು. ಆದರೆ ಗಾಯಗೊಂಡವನು ಕೆಲಸ ಮಾಡಲಾರದೆ ಹೋದ ಕಾಲಕ್ಕೆ ತಕ್ಕಷ್ಟು ಹಣ ಕೊಡಬೇಕು ಹಾಗು ಅವನು ಪೂರ್ಣಸ್ವಸ್ಥನಾಗುವವರೆಗೂ ನೋಡಿಕೊಳ್ಳಬೇಕು.
20 : “ಒಬ್ಬನು ತನ್ನ ದಾಸನನ್ನಾಗಲಿ, ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಅಲ್ಲೇ ಸಾಯುವಂತೆ ಮಾಡಿದ್ದರೆ ಅವನಿಗೆ ತಕ್ಕ ಶಿಕ್ಷೆ ಆಗಬೇಕು.
21 : ಆ ಆಳು ಒಂದೆರಡು ದಿನ ಜೀವದಿಂದ ಉಳಿದಿದ್ದರೆ ಯಜಮಾನನಿಗೆ ಶಿಕ್ಷೆವಿಧಿಸಬಾರದು. ಆ ದಾಸದಾಸಿಯರು ಅವನ ಸೊತ್ತು.
22 : “ಜನರು ಜಗಳವಾಡುವಾಗ ಗರ್ಭಿಣಿಯಾದ ಒಬ್ಬ ಹೆಂಗಸಿಗೆ ಏಟು ತಗಲಿ ಅವಳಿಗೆ ಗರ್ಭಸ್ರಾವ ಆಗಿ, ಬೇರೆ ಯಾವ ಹಾನಿಯೂ ಆಕೆಗೆ ಆಗದೆ ಇದ್ದಲ್ಲಿ, ಆ ಹೆಂಗಸಿನ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತುಮಾಡುತ್ತಾನೋ ಅಷ್ಟನ್ನು ಹೊಡೆದವನು ಕೊಡಬೇಕು.
23 : ಬೇರೆ ಹಾನಿಯಾದ ಪಕ್ಷಕ್ಕೆ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ,
24 : ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು,
25 : ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.
26 : “ಒಬ್ಬನು ತನ್ನ ದಾಸನ ಅಥವಾ ದಾಸಿಯ ಕಣ್ಣಿಗೆ ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೆ ಈಡಾಗಿ ಆ ದಾಸನನ್ನು ಬಿಡುಗಡೆಮಾಡಬೇಕು.
27 : ದಾಸನ ಅಥವಾ ದಾಸಿಯ ಹಲ್ಲನ್ನು ಹೊಡೆದು ಉದುರಿಸಿದರೆ ಅದಕ್ಕೆ ಈಡಾಗಿ ಆ ದಾಸನನ್ನು ಅಥವಾ ದಾಸಿಯನ್ನು ಬಿಡುಗಡೆ ಮಾಡಬೇಕು.
28 : “ಎತ್ತೊಂದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ತಿವಿದು ಕೊಂದರೆ ಆ ಎತ್ತನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕು. ಅದರ ಮಾಂಸವನ್ನು ತಿನ್ನಕೂಡದು. ಆ ಎತ್ತಿನ ಒಡೆಯನಾದರೋ ದೋಷಿಯಾಗಲಾರನು.
29 : ಆದರೆ ಆ ಎತ್ತು ಹಿಂದಿನಿಂದಲೂ ತಿವಿಯುವ ಸ್ವಭಾವದೆಂದು ಒಡೆಯನಿಗೆ ಎಚ್ಚರಿಕೆ ನೀಡಿದ್ದರೂ ಅವನು ಅದನ್ನು ಕಟ್ಟಿಹಾಕದೆ ಹೋದಕಾರಣ ಅದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಸಾಯಿಸಿದರೆ ಆ ಎತ್ತನ್ನು ಕಲ್ಲೆಸೆದುಕೊಲ್ಲಬೇಕು, ಮಾತ್ರವಲ್ಲ ಆ ಒಡೆಯನು ಕೂಡ ಮರಣದಂಡನೆಗೆ ಗುರಿ ಆಗುವನು.
30 : ಆದರೆ ಆ ಒಡೆಯ ತನ್ನ ಪ್ರಾಣವನ್ನು ಬಿಡಿಸಿಕೊಳ್ಳುವುದಕ್ಕೆ ಹಣವನ್ನು ಈಡಾಗಿ ಕೊಡಬಹುದೆಂದು ತೀರ್ಮಾನವಾದರೆ ನೇಮಕವಾದ ಹಣವನ್ನು ಕೊಟ್ಟು ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದು.
31 : ಆ ಎತ್ತಿನಿಂದ ತಿವಿಸಿಕೊಂಡು ಸತ್ತವನು ಹುಡುಗನಾಗಿದ್ದರೂ ಹುಡುಗಿಯಾಗಿದ್ದರೂ ಇದೇ ನಿಯಮಕ್ಕನುಸಾರ ತೀರ್ಮಾನಿಸಬೇಕು.
32 : ತಿವಿಸಿಕೊಂಡು ಸತ್ತವರು ದಾಸದಾಸಿಯರಾಗಿದ್ದರೆ ಅವರ ಯಜಮಾನನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಈಡುಕೊಡಿಸಬೇಕು ಮತ್ತು ಆ ಎತ್ತನ್ನು ಕಲ್ಲೆಸೆದು ಕೊಲ್ಲಿಸಬೇಕು.
33 : “ಒಬ್ಬನು ಗುಣಿ ತೆಗೆದುದರಿಂದ, ಇಲ್ಲವೆ ಗುಣಿ ಅಗೆದು ಮುಚ್ಚದೆ ಹೋದುದರಿಂದ, ಮತ್ತೊಬ್ಬನ ಎತ್ತಾಗಲಿ ಕತ್ತೆಯಾಗಲಿ ಅದರಲ್ಲಿ ಬಿದ್ದು ಸತ್ತರೆ
34 : ಆ ಗುಣಿ ಅಗೆಸಿದವನು ಉಂಟಾದ ನಷ್ಟಕ್ಕೆ ಪ್ರತಿಯಾಗಿ ಈಡುಕೊಡಬೇಕು. ಆ ಪ್ರಾಣಿಯ ಒಡೆಯನಿಗೆ ಅದರ ಕ್ರಯವನ್ನು ಕೊಡಬೇಕು. ಸತ್ತ ಪ್ರಾಣಿಯನ್ನು ತಾನೇ ತೆಗೆದುಕೊಳ್ಳಬಹುದು.
35 : “ಒಬ್ಬನು ಎತ್ತು ಮತ್ತೊಬ್ಬನ ಎತ್ತನ್ನು ತಿವಿದು ಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಸಮವಾಗಿ ಹಂಚಬೇಕು.
36 : ಆದರೆ ಅದಕ್ಕೆ ಮುಂಚಿತವಾಗಿಯೇ ಆ ಎತ್ತು ತಿವಿಯುವಂಥದ್ದೇ ಎಂದು ತಿಳಿದಿದ್ದರೂ ಅದರ ಒಡೆಯ ಅದನ್ನು ಕಟ್ಟಿಹಾಕದೆ ಹೋದದ್ದಾದರೆ ಅವನು ಎತ್ತಿಗೆ ಪ್ರತಿಯಾಗಿ ಎತ್ತನ್ನು ಕೊಡಬೇಕು; ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬಹುದು.

· © 2017 kannadacatholicbible.org Privacy Policy