1 : ದೇವರು ಕೊಟ್ಟ ಆಜ್ಞೆಗಳು ಇವು:
2 : “ನಾನೇ ನಿನ್ನ ದೇವರಾದ ಸರ್ವೇಶ್ವರ; ಗುಲಾಮತನದಲ್ಲಿದ್ದ ನಿನ್ನನ್ನು ಈಜಿಪ್ಟಿನಿಂದ ಬಿಡುಗಡೆ ಮಾಡಿದವನು.
3 : “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಕೂಡದು.
4 : “ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನು ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ.
5 : ಅವುಗಳಿಗೆ ಅಡ್ಡಬೀಳಬೇಡ, ಅವುಗಳನ್ನು ಆರಾಧಿಸಬೇಡ. ಏಕೆಂದರೆ ನಾನೇ ನಿನ್ನ ದೇವರಾದ ಸರ್ವೇಶ್ವರ. ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸುವುದಿಲ್ಲ. ನನ್ನನ್ನು ದ್ವೇಷಿಸುವವರನ್ನು ದಂಡಿಸುತ್ತೇನೆ; ಅವರ ದೋಷಫಲವನ್ನು ಅವರ ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುತ್ತೇನೆ.
6 : ನನ್ನನ್ನು ಪ್ರೀತಿಸಿ, ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುತ್ತೇನೆ.
7 : “ನಿನ್ನ ದೇವರಾದ ಸರ್ವೇಶ್ವರನ ಹೆಸರನ್ನು ದುರುಪಯೋಗಪಡಿಸಿಕೊಳ್ಳಬೇಡ. ಏಕೆಂದರೆ ಸರ್ವೇಶ್ವರನಾದ ನಾನು ನನ್ನ ಹೆಸರನ್ನು ದುರುಪಯೋಗಪಡಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
8 : “ಸಬ್ಬತ್ ದಿನವನ್ನು ದೇವರ ದಿನವೆಂದು ತಿಳಿದು ಪವಿತ್ರವಾಗಿ ಆಚರಿಸು.
9 : ಆರು ದಿನಗಳು ದುಡಿದು ನಿನ್ನ ಕೆಲಸವನ್ನೆಲ್ಲ ಮಾಡು.
10 : ಏಳನೆಯ ದಿನ ನಿನ್ನ ದೇವರಾದ ಸರ್ವೇಶ್ವರನಿಗೆ ವಿೂಸಲಾದ ವಿಶ್ರಾಂತಿ ದಿನ. ಅಂದು ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡುಹೆಣ್ಣು ಮಕ್ಕಳು, ನಿನ್ನ ಗಂಡುಹೆಣ್ಣು ಆಳುಗಳು, ಪಶುಪ್ರಾಣಿಗಳು ಹಾಗು ನಿನ್ನ ಊರಲ್ಲಿರುವ ಅನ್ಯ ದೇಶದವರು ಯಾವ ಕೆಲಸವನ್ನೂ ಮಾಡಬಾರದು.
11 : ಸರ್ವೇಶ್ವರನಾದ ನಾನು ಆರು ದಿನಗಳಲ್ಲಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡೆನು. ಆದುದರಿಂದ ಅದನ್ನು ಸರ್ವೇಶ್ವರನ ವಿಶ್ರಾಂತಿ ದಿನವನ್ನಾಗಿ ಆಶೀರ್ವದಿಸಿ ಪವಿತ್ರಗೊಳಿಸಿದೆನು.
12 : “ನಿನ್ನ ತಂದೆತಾಯಿಗಳನ್ನು ಗೌರವಿಸು; ಗೌರವಿಸಿದರೆ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನಗೆ ಅನುಗ್ರಹಿಸುವ ನಾಡಿನಲ್ಲಿ ಬಹುಕಾಲ ಬಾಳುವೆ.
13 : “ಕೊಲೆಮಾಡಬೇಡ.
14 : “ವ್ಯಭಿಚಾರಮಾಡಬೇಡ.
15 : “ಕದಿಯಬೇಡ.
16 : “ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳಬೇಡ.
17 : “ನೆರೆಯವನ ಮನೆಯನ್ನು ಬಯಸಬೇಡ; ಅವನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬೇಡ.”
18 : ಆ ಗುಡುಗುಮಿಂಚನ್ನು, ತುತೂರಿ ಧ್ವನಿಯನ್ನು ಹಾಗು ಬೆಟ್ಟದಿಂದ ಹೊರಡುತ್ತಿದ್ದ ಹೊಗೆಯನ್ನು ಜನರೆಲ್ಲರು ನೋಡಿದರು. ನೋಡಿ ನಡುಗುತ್ತಾ ದೂರದಲ್ಲೇ ನಿಂತುಕೊಂಡರು.
19 : ಅವರು ಮೋಶೆಗೆ, “ನೀನೇ ನಮ್ಮೊಡನೆ ಮಾತಾಡು, ನಾವು ಕೇಳುತ್ತೇವೆ. ದೇವರು ನಮ್ಮೊಡನೆ ಮಾತಾಡಿದರೆ ನಾವು ಸತ್ತು ಹೋಗುತ್ತೇವೆ,” ಎಂದು ಹೇಳಿದರು.
20 : ಅದಕ್ಕೆ ಮೋಶೆ, “ಭಯಪಡಬೇಡಿ; ದೇವರು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಬಂದಿದ್ದಾರೆ; ಹೀಗೆ ದೈವಭೀತಿ ನಿಮ್ಮ ಕಣ್ಮುಂದಿದ್ದು ನೀವು ಪಾಪಮಾಡದೆ ಇರುವಿರಿ,” ಎಂದನು.
21 : ಮೋಶೆಯೊಬ್ಬನೇ ದೇವರಿದ್ದ ಕಾರ್ಮುಗಿಲನ್ನು ಸವಿೂಪಿಸಿದ್ದನು. ಜನರು ದೂರದಲ್ಲೇ ನಿಂತಿದ್ದರು.
22 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆ ಹೇಳಿದರು: “ಇಸ್ರಯೇಲರಿಗೆ ನೀನು ಹೀಗೆಂದು ತಿಳಿಸು - ‘ನಾನು ಆಕಾಶದಿಂದ ನಿಮ್ಮೊಡನೆ ಮಾತಾಡಿದ್ದೇನೆಂದು ನಿಮಗೆ ಗೊತ್ತಿದೆ.
23 : ಆದ್ದರಿಂದ ನೀವು ನನಗೆ ಪ್ರತಿಯಾಗಿ ಬೆಳ್ಳಿಬಂಗಾರಗಳಿಂದ ದೇವರುಗಳನ್ನು ಮಾಡಿಕೊಳ್ಳಬಾರದು.
24 : ನನಗಾಗಿ ನೀವು ಮಣ್ಣಿನಿಂದ ಒಂದು ಬಲಿಪೀಠವನ್ನು ಮಾಡಬೇಕು. ಅದರ ಮೇಲೆ ನಿಮ್ಮ ದನಕುರಿಗಳನ್ನು ದಹನಬಲಿಯನ್ನಾಗಿಯೂ ಸಮಾಧಾನಬಲಿಯನ್ನಾಗಿಯೂ ಸಮರ್ಪಿಸಬೇಕು.
25 : ನನ್ನ ಹೆಸರನ್ನು ನಿಮ್ಮ ನೆನಪಿಗೆ ಬರಮಾಡುವ ಎಲ್ಲ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
26 : ನೀವು ನನಗಾಗಿ ಕಲ್ಲಿನಿಂದ ಬಲಿಪೀಠವನ್ನು ಕಟ್ಟಬೇಕಾದರೆ ಕೆತ್ತಿರುವ ಕಲ್ಲುಗಳಿಂದ ಕಟ್ಟಕೂಡದು. ಏಕೆಂದರೆ ಉಳಿ ಮುಂತಾದುದನ್ನು ಉಪಯೋಗಿಸಿದರೆ ಅದು ಅಪವಿತ್ರವಾಗುವುದು.
27 : ಅದೂ ಅಲ್ಲದೆ ನಿಮ್ಮ ನಗ್ನತೆ ನನ್ನ ಪೀಠದ ಮೇಲೆ ಕಾಣಿಸಿಕೊಳ್ಳದಂತೆ ಮೆಟ್ಟಲುಗಳ ಮೂಲಕ ಅದರ ಮೇಲೆ ಹತ್ತಬೇಡಿ.’