1 : ಲೇವಿಯ ವಂಶಸ್ಥನಾದ ಒಬ್ಬನು ಲೇವಿಯ ಕುಲದ ಕನ್ಯೆಯನ್ನು ಮದುವೆಯಾದನು.
2 : ಆಕೆ ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆತ್ತಳು. ಅದು ಅತಿ ಚೆಲುವಾದ ಕೂಸೆಂದು ತಿಳಿದು ಮೂರು ತಿಂಗಳು ಬಚ್ಚಿಟ್ಟಳು.
3 : ಆದರೆ ಹೆಚ್ಚು ಕಾಲ ಮರೆಮಾಡಲಾಗಲಿಲ್ಲ. ಎಂತಲೆ ಆಕೆ ಆಪಿನ ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು, ಜೇಡಿಮಣ್ಣನ್ನೂ ರಾಳವನ್ನೂ ಅದಕ್ಕೆ ಮೆತ್ತಿ, ಮಗುವನ್ನು ಅದರಲ್ಲಿ ಮಲಗಿಸಿ, ನೈಲ್ ನದಿಯ ಅಂಚಿನಲ್ಲಿದ್ದ ಜಂಬು ಹುಲ್ಲಿನ ನಡುವೆ ಇಟ್ಟಳು.
4 : ಮಗುವಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಮಗುವಿನ ಅಕ್ಕ ಸ್ವಲ್ಪದೂರದಲ್ಲಿ ನಿಂತುಕೊಂಡಳು.
5 : ಅಷ್ಟರಲ್ಲಿ ಫರೋಹನ ಪುತ್ರಿ ಸ್ನಾನಕ್ಕಾಗಿ ಆ ನದಿಯ ಬಳಿಗೆ ಇಳಿದು ಬಂದಳು. ಆಕೆಯ ಗೆಳತಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬುಹುಲ್ಲಿನ ನಡುವೆ ಪೆಟ್ಟಿಗೆಯೊಂದನ್ನು ಕಂಡಳು. ದಾಸಿಯೊಬ್ಬಳನ್ನು ಕಳಿಸಿ ಅದನ್ನು ತರಿಸಿದಳು.
6 : ಪೆಟ್ಟಿಗೆಯನ್ನು ತೆರೆದು ನೋಡುವಾಗ ಏನಾಶ್ಚರ್ಯ! ಅದರಲ್ಲಿ ಅಳುವ ಕೂಸು! ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು. “ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು,” ಎಂದುಕೊಂಡಳು.
7 : ಆ ಮಗುವಿನ ಅಕ್ಕ ಬಂದು, “ನಿಮ್ಮ ಪರವಾಗಿ ಈ ಕೂಸನ್ನು ಮೊಲೆಕೊಟ್ಟು ಸಾಕಲು ಹಿಬ್ರಿಯ ಮಹಿಳೆಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೇ?” ಎಂದು ಫರೋಹನ ಪುತ್ರಿಯನ್ನು ವಿಚಾರಿಸಿದಳು.
8 : “ಹೌದು, ಹಾಗೆಯೆ ಮಾಡು,” ಎಂದಳು ಫರೋಹನ ಪುತ್ರಿ. ಆ ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದು ತಂದಳು.
9 : ಅವಳಿಗೆ ಆ ರಾಜಪುತ್ರಿ, “ನೀನು ಈ ಮಗುವನ್ನು ತೆಗೆದುಕೊಂಡು ಹೋಗಿ ನನ್ನ ಪರವಾಗಿ ಸಾಕು. ನಾನೇ ನಿನಗೆ ಸಂಬಳವನ್ನು ಕೊಡುತ್ತೇನೆ,” ಎಂದಳು. ಅಂತೆಯೇ ಆ ಮಹಿಳೆ ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು.
10 : ಆ ಹುಡುಗನು ಬೆಳೆದಾಗ ಅವನನ್ನು ಫರೋಹನ ಪುತ್ರಿಯ ಬಳಿಗೆ ಕರೆದುಕೊಂಡು ಬಂದಳು. ಅವನು ಆಕೆಗೆ ಮಗನಾದನು. “ನೀರಿನಿಂದ ನಾನು ಇವನನ್ನು ಎತ್ತಿದೆ” ಎಂದು ಹೇಳಿ ಆಕೆ ಅವನಿಗೆ “ಮೋಶೆ” ಎಂದು ಹೆಸರಿಟ್ಟಳು.
11 : ಮೋಶೆ ದೊಡ್ಡವನಾದ ಮೇಲೆ ಸ್ವಜನರಾದ ಹಿಬ್ರಿಯರ ಬಳಿಗೆ ಹೋಗಿ ಅವರು ಮಾಡುತ್ತಿದ್ದ ಬಿಟ್ಟೀ ಕೆಲಸಗಳನ್ನು ನೋಡುತ್ತಿದ್ದನು.
12 : ಒಮ್ಮೆ ಒಬ್ಬ ಈಜಿಪ್ಟಿನವನು ತನ್ನ ದೇಶೀಯನಾದ ಹಿಬ್ರಿಯನನ್ನು ಹೊಡೆಯುವುದನ್ನು ಕಂಡನು. ಅತ್ತಿತ್ತ ನೋಡಿ, ಯಾರೂ ಇಲ್ಲ ಎಂದು ತಿಳಿದು, ಆ ಈಜಿಪ್ಟನನ್ನು ಹೊಡೆದು ಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿ ಬಿಟ್ಟನು.
13 : ಮಾರನೆಯ ದಿನ ಕೂಡ ಮೋಶೆ ಹೊರಗೆ ಹೋಗಿ ನೋಡಿದನು. ಈ ಸಾರಿ ಇಬ್ಬರು ಹಿಬ್ರಿಯರೇ ಜಗಳವಾಡುತ್ತಿದ್ದರು. ತಪ್ಪಿತಸ್ಥನಿಗೆ, “ಏನಯ್ಯಾ, ಸ್ವಕುಲದವನನ್ನೇ ಹೊಡೆಯುತ್ತಿರುವೆ ಏಕೆ?” ಎಂದು ಕೇಳಿದನು.
14 : ಅದಕ್ಕೆ ಅವನು, “ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿ ಹಾಗೂ ನ್ಯಾಯಾಧಿಪತಿಯನ್ನಾಗಿ ನೇಮಿಸಿದವರು ಯಾರು? ಆ ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನು ಕೊಂದು ಹಾಕಬೇಕೆಂದಿರುವೆಯಾ?” ಎಂದನು. ಈ ಮಾತನ್ನು ಕೇಳಿದ್ದೇ ಮೋಶೆ, “ನಾನು ಮಾಡಿದ ಕಾರ್ಯ ಬಯಲಾಗಿಬಿಟ್ಟಿತಲ್ಲಾ!” ಎಂದು ಅಂಜಿದನು.
15 : ನಡೆದ ಸಂಗತಿ ಫರೋಹನಿಗೆ ಮುಟ್ಟಿತು. ಅವನು ಮೋಶೆಯನ್ನು ಕೊಲ್ಲಿಸಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆ ಫರೋಹನ ಬಳಿಯಿಂದ ಪಲಾಯನ ಗೈದು ಮಿದ್ಯಾನ್ ನಾಡನ್ನು ಸೇರಿದನು.
16 : ಒಂದು ದಿನ ಮೋಶೆ ಆ ನಾಡಿನ ಬಾವಿಯೊಂದರ ಬಳಿ ಕುಳಿತಿದ್ದನು. ಮಿದ್ಯಾನರ ಪೂಜಾರಿಯ ಏಳು ಮಂದಿ ಹೆಣ್ಣು ಮಕ್ಕಳು ಅಲ್ಲಿಗೆ ಬಂದರು. ತಮ್ಮ ತಂದೆಯ ಕುರಿಗಳಿಗೆ ನೀರು ಕುಡಿಸುವುದಕ್ಕಾಗಿ ನೀರುಸೇದಿ ತೊಟ್ಟಿಗಳಲ್ಲಿ ತುಂಬುತ್ತಿದ್ದರು.
17 : ಕುರುಬರು ಬಂದು ಅವರನ್ನು ಬಾವಿಯ ಬಳಿಯಿಂದ ಓಡಿಸಲೆತ್ನಿಸಿದರು. ಮೋಶೆ ಆ ಹುಡುಗಿಯರಿಗೆ ಸಹಾಯವಾಗಿ ಬಂದು ಅವರ ಕುರಿಗಳಿಗೆ ನೀರನ್ನು ಕುಡಿಸಿದನು.
18 : ಹುಡುಗಿಯರು ತಮ್ಮ ತಂದೆ ರೆಗೂವೇಲನ ಬಳಿಗೆ ಹಿಂದಿರುಗಿದಾಗ ಅವನು, “ಈ ಹೊತ್ತು ಬಲುಬೇಗ ಬಂದು ಇದ್ದೀರಿ, ಏನು ಕಾರಣ?” ಎಂದು ವಿಚಾರಿಸಿದನು.
19 : ಅವರು, “ಈಜಿಪ್ಟಿನವನಾದ ಒಬ್ಬ ಮನುಷ್ಯ ನಮ್ಮನ್ನು ಕುರುಬರ ಕಾಟದಿಂದ ತಪ್ಪಿಸಿದ; ಅದು ಮಾತ್ರವಲ್ಲ ಅವನು ನಮಗಾಗಿ ನೀರುಸೇದಿ ಕುರಿಗಳಿಗೆ ಕುಡಿಸಿದ,” ಎಂದು ವಿವರಿಸಿದರು.
20 : ಅವರ ತಂದೆ, “ಆ ಮನುಷ್ಯನೆಲ್ಲಿ? ಅವನನ್ನು ಏಕೆ ಬಿಟ್ಟು ಬಂದಿರಿ? ಹೋಗಿ ಅವನನ್ನು ಊಟಕ್ಕೆ ಕರೆದುಕೊಂಡು ತನ್ನಿ,” ಎಂದು ಹೇಳಿದನು.
21 : ಮೋಶೆ ಆ ಮನುಷ್ಯನ ಸಂಗಡ ವಾಸಮಾಡಲು ಒಪ್ಪಿಕೊಂಡನು. ಅವನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆ ಮಾಡಿಕೊಟ್ಟನು.
22 : ಆಕೆ ಒಂದು ಗಂಡು ಮಗುವನ್ನು ಹೆತ್ತಳು. ಮೋಶೆ, “ನಾನು ಅನ್ಯದೇಶದಲ್ಲಿ ಒಬ್ಬ ಪ್ರವಾಸಿ,” ಎಂದು ಹೇಳಿ ಆ ಮಗುವಿಗೆ ‘ಗೇರ್ಷೋಮ್’ ಎಂದು ಹೆಸರಿಟ್ಟನು.
23 : ಹೀಗೆ ಬಹಳ ದಿನಗಳು ಕಳೆದ ಮೇಲೆ ಈಜಿಪ್ಟ್ ದೇಶದ ಅರಸನು ಕಾಲವಾದನು. ಇಸ್ರಯೇಲರು ತಾವು ಮಾಡಬೇಕಾಗಿದ್ದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸಿರುಬಿಟ್ಟು ಗೋಳಾಡುತ್ತಿದ್ದರು. ಆ ಗೋಳು ದೇವರಿಗೆ ಮುಟ್ಟಿತು.
24 : ದೇವರು ಆ ಜನರ ನರಳಾಟವನ್ನು ಕೇಳಿ ತಾವು ಅಬ್ರಹಾಮ, ಇಸಾಕ, ಯಕೋಬರಿಗೆ ಮಾಡಿದ್ದ ವಾಗ್ದಾನವನ್ನು ನೆನಪಿಗೆ ತಂದುಕೊಂಡರು.
25 : ಇಸ್ರಯೇಲರನ್ನು ನೋಡಿ ಅವರಲ್ಲಿ ಕನಿಕರಗೊಂಡರು.