1 : ಇತ್ರೋ, ಮೋಶೆಯ ಮಾವ ಹಾಗು ಮಿದ್ಯಾನರ ಪೂಜಾರಿ. ದೇವರು ಮೋಶೆಗೂ ತಮ್ಮ ಜನರಾದ ಇಸ್ರಯೇಲರಿಗೂ ಮಾಡಿದ ಮಹತ್ಕಾರ್ಯಗಳನ್ನು ಕುರಿತು ಇವನು ಕೇಳಿದ್ದನು. ಸರ್ವೇಶ್ವರಸ್ವಾಮಿ ಹೇಗೆ ಇಸ್ರಯೇಲರನ್ನು ಈಜಿಪ್ಟಿನಿಂದ ಕರೆದುತಂದರೆಂಬ ವಿಷಯ ಇವನಿಗೆ ಮುಟ್ಟಿತ್ತು
2 : ಇವನು ತನ್ನ ಬಳಿಗೆ ಕಳಿಸಲಾಗಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನು ಮತ್ತು ಆಕೆಯ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಬಂದನು.
3 : ಮೋಶೆ ತಾನು ಅನ್ಯದೇಶದ ಪ್ರವಾಸಿ ಎಂದು ಹೇಳಿ ತನ್ನ ಹಿರಿಯ ಮಗನಿಗೆ ‘ಗೇರ್ಷೋಮ್’ ಎಂದು ಹೆಸರಿಟ್ಟಿದ್ದನು.
4 : ತನ್ನ ತಂದೆಯ ದೇವರು ನನಗೆ ಸಹಾಯಕರಾಗಿದ್ದು ನನ್ನನ್ನು ಫರೋಹನ ಕತ್ತಿಯಿಂದ ಕಾಪಾಡಿದರು ಎಂದು ಕಿರಿಯ ಮಗನಿಗೆ ‘ಎಲೀಯೆಚೆರ್’ ಎಂದು ಹೆಸರಿಟ್ಟಿದ್ದನು.
5 : ಮೋಶೆಯ ಮಾವ ಇತ್ರೋ, ಮೋಶೆಯ ಮಕ್ಕಳನ್ನೂ ಹೆಂಡತಿಯನ್ನೂ ಕರೆದುಕೊಂಡು ಮರುಭೂಮಿಯಲ್ಲಿ ದೇವರ ಬೆಟ್ಟದ ಹತ್ತಿರ ಇಳಿದುಕೊಂಡಿದ್ದ ಮೋಶೆಯ ಬಳಿಗೆ ಬಂದನು.
6 : “ನಿನ್ನ ಮಾವನಾದ ನಾನು, ನಿನ್ನ ಹೆಂಡತಿ ಹಾಗು ನಿನ್ನ ಇಬ್ಬರು ಮಕ್ಕಳು ಬಂದಿದ್ದೇವೆ” ಎಂದು ಮೋಶೆಗೆ ಹೇಳಿಕಳಿಸಿದನು.
7 : ಮೋಶೆ ಹೊರಗೆ ಬಂದು ತನ್ನ ಮಾವನನ್ನು ಎದುರುಗೊಂಡು, ವಂದಿಸಿ, ಮುದ್ದಿಟ್ಟನು. ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಅವರು ಡೇರೆಯೊಳಕ್ಕೆ ಹೋದರು.
8 : ಸರ್ವೇಶ್ವರಸ್ವಾಮಿ ಇಸ್ರಯೇಲರ ಪರವಾಗಿ ಫರೋಹನಿಗೂ ಈಜಿಪ್ಟಿನವರಿಗೂ ಮಾಡಿದ್ದೆಲ್ಲವನ್ನು ಮತ್ತು ದಾರಿಯಲ್ಲಿ ತಮಗುಂಟಾದ ಎಲ್ಲ ಕಷ್ಟದುಃಖಗಳನ್ನು ಹಾಗು ಸರ್ವೇಶ್ವರ ಹೇಗೆ ಅವುಗಳಿಂದ ಕಾಪಾಡಿದರು ಎಂಬುದನ್ನು ಮೋಶೆ ತನ್ನ ಮಾವನಿಗೆ ವಿವರಿಸಿದನು.
9 : ಈಜಿಪ್ಟಿನವರ ಕೈಯಿಂದ ಇಸ್ರಯೇಲರನ್ನು ಬಿಡಿಸಿ, ಸರ್ವೇಶ್ವರ ಅವರಿಗೆ ಇಷ್ಟೆಲ್ಲಾ ಉಪಕಾರ ಮಾಡಿದ್ದಕ್ಕಾಗಿ ಇತ್ರೋ ಸಂತೋಷಪಟ್ಟನು.
10 : “ಈಜಿಪ್ಟಿನವರ ಕೈಯಿಂದಲೂ ಫರೋಹನ ಕೈಯಿಂದಲೂ ನಿಮ್ಮನ್ನು ಬಿಡುಗಡೆ ಮಾಡಿದ ಸರ್ವೇಶ್ವರ ಸ್ವಾಮಿಗೆ ಸ್ತೋತ್ರವಾಗಲಿ!
11 : ಆತ ತನ್ನ ಜನರನ್ನು ಅವರ ಕೈಯಿಂದ ಬಿಡಿಸಿ, ಆ ಈಜಿಪ್ಟಿನವರು ಯಾವ ವಿಷಯದಲ್ಲಿ ಗರ್ವಪಡುತ್ತಿದ್ದರೋ ಆ ವಿಷಯದಲ್ಲೇ ಅವರನ್ನು ತಗ್ಗಿಸಿದ್ದಾನೆ. ಆದ್ದರಿಂದ ಸರ್ವೇಶ್ವರಸ್ವಾಮಿಯೇ ಎಲ್ಲ ದೇವರುಗಳಿಗಿಂತ ದೊಡ್ಡವರೆಂದು ಈಗ ತಿಳಿದುಕೊಂಡಿದ್ದೇನೆ,” ಎಂದು ಹೇಳಿದನು.
12 : ಅದೂ ಅಲ್ಲದೆ ಮೋಶೆಯ ಮಾವ ಇತ್ರೋ ದೇವರಿಗೆ ದಹನಬಲಿಯನ್ನು ಹಾಗು ಇತರ ಬಲಿಗಳನ್ನು ಸಮರ್ಪಿಸಿದನು. ಆರೋನನು ಹಾಗು ಇಸ್ರಯೇಲರ ಹಿರಿಯರೆಲ್ಲರು ಬಂದು ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನ ಮಾಡಿದರು.
13 : ಮಾರನೆಯ ದಿನ ಮೋಶೆ ಜನರಿಗೆ ನ್ಯಾಯತೀರಿಸಲು ಕುಳಿತಿದ್ದನು. ಬೆಳಿಗ್ಗೆಯಿಂದ ಸಂಜೆಯವರೆಗೂ ಜನರು ಅವನ ಸುತ್ತಲು ನಿಂತಿದ್ದರು.
14 : ಮೋಶೆ ಜನರಿಗಾಗಿ ಮಾಡುತ್ತಾ ಇದ್ದುದ್ದೆಲ್ಲವನ್ನು ಅವನ ಮಾವ ನೋಡಿ, “ಜನರಿಗೋಸ್ಕರ ಇಷ್ಟು ಪ್ರಯಾಸಪಡುತ್ತಿರುವೆ ಏಕೆ? ಬೆಳಿಗ್ಗೆಯಿಂದ ಸಂಜೆಯವರೆಗೂ ಜನರು ನಿನ್ನ ಸುತ್ತಲೂ ನಿಂತುಕೊಂಡಿದ್ದಾರೆ; ನೀನು ಒಬ್ಬನೇ ನ್ಯಾಯತೀರಿಸಲು ಕುಳಿತುಕೊಳ್ಳಬೇಕೆ?” ಎಂದು ಕೇಳಿದನು.
15 : ಅದಕ್ಕೆ ಮೋಶೆ, “ದೇವರ ತೀರ್ಪನ್ನು ತಿಳಿದುಕೊಳ್ಳುವುದಕ್ಕಾಗಿ ಜನರು ನನ್ನ ಹತ್ತಿರ ಬರುತ್ತಾರೆ;
16 : ಅವರಲ್ಲಿ ವ್ಯಾಜ್ಯವೇನಾದರು ಉಂಟಾದರೆ ನನ್ನ ಬಳಿಗೆ ಬರುತ್ತಾರೆ. ನಾನು ವಿಚಾರಣೆಮಾಡಿ, ಅವರಿಗೆ ನ್ಯಾಯತೀರಿಸಿ, ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ,” ಎಂದು ಉತ್ತರಿಸಿದನು.
17 : ಅದನ್ನು ಕೇಳಿದ ಇತ್ರೋನನು ಮೋಶೆಗೆ: “ನೀನು ಮಾಡುತ್ತಿರುವುದು ಸರಿಯಲ್ಲ.
18 : ಈ ಕೆಲಸ ಬಹು ಕಷ್ಟಕರವಾದುದು; ನಿನ್ನೊಬ್ಬನಿಂದಲೇ ಅದನ್ನು ನಡೆಸಲಾಗದು. ನೀನೂ ನಿನ್ನ ಈ ಜನರೂ ಖಂಡಿತವಾಗಿ ಬಳಲಿಹೋಗುವಿರಿ.
19 : ಆದ್ದರಿಂದ ನನ್ನ ಮಾತನ್ನು ಕೇಳು; ನಾನು ಕೊಡುವ ಸಲಹೆಯನ್ನು ಗಮನಿಸು; ದೇವರು ನಿನ್ನೊಡನೆ ಇರುವರು. ನೀನು ಜನರಿಗೂ ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಮುಂದೆ ತರುವುದೇನೋ ಸರಿ.
20 : ಅಂತೆಯೇ ದೇವರ ಆಜ್ಞಾವಿಧಿಗಳನ್ನು ಜನರಿಗೆ ಬೋಧಿಸಿ ಅವರು ನಡೆಯಬೇಕಾದ ಮಾರ್ಗವನ್ನು ಹಾಗು ಕೈಗೊಳ್ಳಬೇಕಾದ ಕಾರ್ಯಗಳನ್ನು ತಿಳಿಯಪಡಿಸಲೇಬೇಕು.
21 : ಆದರೆ ನೀನು ಈ ಜನರಲ್ಲೆಲ್ಲಾ ಸಮರ್ಥರು, ದೇವಭಕ್ತರು, ನಂಬಿಗಸ್ಥರು ಹಾಗು ಲಂಚಮುಟ್ಟದವರು ಆಗಿರುವ ವ್ಯಕ್ತಿಗಳನ್ನು ಆರಿಸಿಕೊ. ಅಂಥವರನ್ನು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಅಧಿಪತಿಗಳನ್ನಾಗಿ ನೇಮಿಸು.
22 : ಅವರೇ ಸದಾ ಜನರಿಗೆ ನ್ಯಾಯ ತೀರಿಸಲಿ; ದೊಡ್ಡ ವ್ಯಾಜ್ಯಗಳನ್ನು ನಿನ್ನ ಮುಂದೆ ತರಲಿ. ಆಗ ಅವರೂ ಈ ಹೊಣೆಯನ್ನು ಹೊರುವುದರಿಂದ ನಿನ್ನ ಹೊರೆ ಹಗುರವಾಗುವುದು.
23 : ಹೀಗೆ ಮಾಡಲು ದೇವರು ನಿನಗೆ ಅಪ್ಪಣೆ ಕೊಡಲಿ; ಮಾಡಿದರೆ ಈ ಹೊಣೆಯನ್ನು ನಿರ್ವಹಿಸಲು ಶಕ್ತನಾಗುವೆ; ಈ ಜನರೂ ಕೂಡ ಸಂತುಷ್ಟರಾಗಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವರು,” ಎಂದನು.
24 : ಮೋಶೆ ತನ್ನ ಮಾವನ ಸಲಹೆಯನ್ನು ಒಪ್ಪಿಕೊಂಡನು. ಅವನು ಹೇಳಿದಂತೆಯೇ ಮಾಡಿದನು
25 : ಇಸ್ರಯೇಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಮೇಲೆ ಅಧಿಪತಿಗಳನ್ನು ನೇಮಿಸಿದನು.
26 : ಇವರು ಸದಾ ಜನರಿಗೆ ನ್ಯಾಯ ತೀರಿಸುವವರಾದರು. ಜಟಿಲವಾದ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸುಲಭವಾದುವುಗಳನ್ನು ಅವರೇ ತೀರಿಸುತ್ತಾ ಬಂದರು.
27 : ಬಳಿಕ ಮೋಶೆ ತನ್ನ ಮಾವನನ್ನು ಬೀಳ್ಕೊಟ್ಟನು. ಅವನು ತನ್ನ ನಾಡಿಗೆ ಹಿಂದಿರುಗಿ ಹೋದನು.