1 : ಇಸ್ರಯೇಲರ ಸಮಾಜ ಏಲೀಮಿನಿಂದ ಹೊರಟ ಮೇಲೆ, ಏಲೀಮಿಗೂ ಸಿನಾಯಿ ಬೆಟ್ಟಕ್ಕೂ ನಡುವೆಯಿರುವ ‘ಸೀನ್’ ಎಂಬ ಮರುಭೂಮಿಗೆ ಬಂದರು. ಈಜಿಪ್ಟನ್ನು ಬಿಟ್ಟು ಬಂದ ಎರಡನೆಯ ತಿಂಗಳಿನ ಹದಿನೈದನೆಯ ದಿನ ಅದು.
2 : ಮರುಭೂಮಿಯಲ್ಲಿ ಇಸ್ರಯೇಲರ ಸಮಾಜವೆಲ್ಲ ಮೋಶೆ ಮತ್ತು ಆರೋನರ ವಿರುದ್ಧ ಗೊಣಗುಟ್ಟಿತು.
3 : “ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದುತಂದಿದ್ದೀರಿ; ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೆ ಸತ್ತಿದ್ದರೆ ಎಷ್ಟೋ ಲೇಸಾಗಿತ್ತು. ಆಗ ಮಾಂಸಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇ ತುಂಬ ಊಟ ಮಾಡುತ್ತಿದ್ದೆವು,” ಎಂದು ಗುಣಗಿದರು.
4 : ಆಗ ಸರ್ವೇಶ್ವರ ಮೋಶೆಗೆ, “ಇಗೋ ನೋಡು, ಆಕಾಶದಿಂದ ನಿಮಗೋಸ್ಕರ ಆಹಾರವನ್ನು ಸುರಿಸುವೆನು. ಈ ಜನರು ಪ್ರತಿದಿನವು ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು. ನನ್ನ ಕಟ್ಟಳೆಯ ಪ್ರಕಾರ ನಡೆಯುವರೋ ಇಲ್ಲವೋ ಎಂದು ಇದರಿಂದ ಪರೀಕ್ಷಿಸಿ ತಿಳಿಯುತ್ತೇನೆ.
5 : ಆರನೆಯ ದಿನದಲ್ಲಿ ಮಾತ್ರ ಪ್ರತಿದಿನ ಕೂಡಿಸಿದ್ದಕ್ಕಿಂತಲೂ ಎರಡರಷ್ಟು ಕೂಡಿಸಿ ಸಿದ್ಧಪಡಿಸಿಕೊಳ್ಳಬೇಕು,” ಎಂದು ಹೇಳಿದರು.
6 : ಮೋಶೆ ಮತ್ತು ಆರೋನರು ಇಸ್ರಯೇಲರೆಲ್ಲರನ್ನು ಉದ್ದೇಶಿಸಿ, “ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದವರು ಸರ್ವೇಶ್ವರಸ್ವಾಮಿಯೇ ಎಂಬುದು ಈ ಸಂಜೆ ನಿಮಗೆ ಗೊತ್ತಾಗುವುದು
7 : ಬೆಳಿಗ್ಗೆಯೂ ಸ್ವಾಮಿಯ ತೇಜಸ್ಸು ನಿಮಗೆ ಕಾಣಬರುವುದು. ನೀವು ಸರ್ವೇಶ್ವರನ ವಿರುದ್ಧ ಗೊಣಗುಟ್ಟಿದ ಮಾತುಗಳು ಅವರಿಗೆ ಕೇಳಿಸಿವೆ. ನಾವು ಎಷ್ಟು ಮಾತ್ರದವರು ನೀವು ನಮ್ಮ ವಿರುದ್ಧ ಗೊಣಗುಟ್ಟಲು?” ಎಂದರು.
8 : ಮೋಶೆ, “ಸಂಜೆ ಹೊತ್ತಿನಲ್ಲಿ ನಿಮಗೆ ಮಾಂಸಾಹಾರವನ್ನೂ ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ಕೊಡುವವರು ಸರ್ವೇಶ್ವರ. ನಾವು ಎಷ್ಟು ಮಾತ್ರದವರು? ಗೊಣಗುಟ್ಟುವ ನಿಮ್ಮ ಮಾತುಗಳು ಸರ್ವೇಶ್ವರನಿಗೆ ಕೇಳಿಸಿವೆ. ಆ ಗೊಣಗುಟ್ಟುವಿಕೆ ಸರ್ವೇಶ್ವರನ ವಿರುದ್ಧವೇ ಹೊರತು ನಮ್ಮ ವಿರುದ್ಧವಲ್ಲ,” ಎಂದನು.
9 : ಆರೋನನಿಗೆ ಮೋಶೆ, “ನೀನು ಇಸ್ರಯೇಲ್ ಸಮಾಜದ ಬಳಿಗೆ ಹೋಗಿ, ಅವರಿಗೆ, ‘ಸರ್ವೇಶ್ವರ ನಿಮ್ಮ ಗೊಣಗಾಟವನ್ನು ಕೇಳಿದ್ದಾರೆ. ಆದ್ದರಿಂದ ನೀವೆಲ್ಲರು ಅವರ ಸನ್ನಿಧಿಗೆ ಕೂಡಿಬರಬೇಕು, ಎಂದು ಆಜ್ಞಾಪಿಸು,” ಎಂದು ಹೇಳಿದನು.
10 : ಅಂತೆಯೇ ಆರೋನನು ಇಸ್ರಯೇಲರ ಸಮಾಜಕ್ಕೆಲ್ಲ ಈ ಮಾತುಗಳನ್ನು ತಿಳಿಸುತ್ತಿರುವಾಗ ಆ ಜನರು ಮರುಭೂಮಿಯ ಕಡೆಗೆ ನೋಡಿದರು. ಆಗ ಇಗೋ, ಮೇಘದಲ್ಲಿ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು:
11 : ಸರ್ವೇಶ್ವರ ಮೋಶೆಯ ಸಂಗಡ ಮಾತಾಡಿ ಹೀಗೆಂದರು:
12 : “ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ, ‘ಸಂಜೆ ಮಾಂಸವನ್ನೂ ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು’ ಎಂದು ಹೇಳು,” ಎಂದರು.
13 : ಸಂಜೆಯಾಗುತ್ತಲೆ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಿಗ್ಗೆ ಪಾಳೆಯದ ಸುತ್ತಲೂ ಮಂಜುಬಿದ್ದಿತು.
14 : ಆ ಮಂಜು ಆರಿಹೋದನಂತರ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು.
15 : ಇಸ್ರಯೇಲರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು ‘ಮನ್ನ’ ಎಂದರು. ಇದೇನಿರಬಹುದೆಂದು ವಿಚಾರಿಸಿದರು.
ಮೋಶೆ ಅವರಿಗೆ, “ಇದು ಸರ್ವೇಶ್ವರಸ್ವಾಮಿ ನಿಮಗೋಸ್ಕರ ಕೊಟ್ಟ ಆಹಾರ.
16 : ಇದರ ವಿಷಯದಲ್ಲಿ ಅವರು ನಿಮಗೆ ಆಜ್ಞಾಪಿಸುವುದನ್ನು ಕೇಳಿ: ಪ್ರತಿಯೊಬ್ಬನು ತನ್ನ ಕುಟುಂಬದ ಸಂಖ್ಯಾನುಸಾರ ತಲೆಗೆ ಮೂರು ಸೇರಂತೆ, ಅಂದರೆ ಒಬ್ಬೊಬ್ಬನು ಸರಾಸರಿ ತಿನ್ನುವಷ್ಟನ್ನು ತನ್ನ ಡೇರೆಯಲ್ಲಿರುವವರಿಗಾಗಿ ಕೂಡಿಸಿಕೊಳ್ಳಲಿ,” ಎಂದು ಹೇಳಿದನು.
17 : ಇಸ್ರಯೇಲರು ಹಾಗೆಯೇ ಮಾಡಿ ಕೆಲವರು ಹೆಚ್ಚಾಗಿ, ಕೆಲವರು ಕಡಿಮೆಯಾಗಿ ಕೂಡಿಸಿಕೊಂಡು ಸೇರಿನಿಂದ ಅಳತೆಮಾಡಿದರು.
18 : ಬಹಳ ಕೂಡಿಸಿದವನಿಗೆ ಏನೂ ಹೆಚ್ಚಾಗಲಿಲ್ಲ, ಸ್ವಲ್ಪವಾಗಿ ಕೂಡಿಸಿದವನಿಗೆ ಏನೂ ಕಡಿಮೆಯಾಗಲಿಲ್ಲ. ಪ್ರತಿಯೊಬ್ಬನು ತನ್ನ ಭೋಜನಕ್ಕೆ ಸರಿಯಾಗಿಯೇ ಕೂಡಿಸಿಕೊಂಡಿದ್ದನು.
19 : ಇದಲ್ಲದೆ ಮೋಶೆ ಅವರಿಗೆ, “ಯಾರೂ ಇದನ್ನು ಮಾರನೆ ದಿನದ ತನಕ ಇಟ್ಟುಕೊಳ್ಳಕೂಡದು,” ಎಂದು ಹೇಳಿದನು.
20 : ಆದರೂ ಅವರಲ್ಲಿ ಕೆಲವರು ಮೋಶೆಯ ಮಾತನ್ನು ಕೇಳದೆ ಅದರಲ್ಲಿ ಸ್ವಲ್ಪವನ್ನು ಮರುದಿವಸದ ತನಕ ಇಟ್ಟುಕೊಂಡರು. ಆಗ ಅದು ಹುಳು ಬಿದ್ದು, ನಾತಹಿಡಿದು, ಕೆಟ್ಟುಹೋಯಿತು. ಅದಕ್ಕೆ ಮೋಶೆ ಅವರ ಮೇಲೆ ಸಿಟ್ಟುಗೊಂಡನು.
21 : ಜನರು ತಮ್ಮ ತಮ್ಮ ಊಟಕ್ಕೆ ತಕ್ಕಷ್ಟನ್ನು ದಿನದಿನವೂ ಬೆಳಿಗ್ಗೆ ಹೊತ್ತು ಕೂಡಿಸಿಕೊಂಡರು. ಬಿಸಿಲು ಏರಿದಾಗ ಮಿಕ್ಕದ್ದು ಕರಗಿ ಹೋಗುತ್ತಿತ್ತು.
22 : ಆರನೆಯ ದಿನ ಎರಡರಷ್ಟು ಆಹಾರವನ್ನು, ಅಂದರೆ ಒಬ್ಬೊಬ್ಬನಿಗೆ ಎರಡೆರಡು ಹೋಮೆರಿನ ಮೇರೆಗೆ ಕೂಡಿಸಿಕೊಂಡರು. ಆದ್ದರಿಂದ ಸಮಾಜದ ಅಧಿಕಾರಿಗಳೆಲ್ಲರು ಮೋಶೆಯ ಬಳಿಗೆ ಬಂದು ಈ ಸಂಗತಿಯನ್ನು ವರದಿಮಾಡಿದರು
23 : ಅದಕ್ಕೆ ಮೋಶೆ, “ಇದು ಸರ್ವೇಶ್ವರ ಹೇಳಿದ ಮಾತು: ನಾಳೆ ವಿಶ್ರಾಂತಿಯ ದಿನ, ಸರ್ವೇಶ್ವರನ ಪರಿಶುದ್ಧ ‘ಸಬ್ಬತ್’ ದಿನ. ಆಹಾರಕ್ಕೆ ಸುಡಬೇಕಾದುದನ್ನು ಸುಟ್ಟು, ಬೇಯಿಸಬೇಕಾದುದನ್ನು ಬೇಯಿಸಿದ ನಂತರ ಮಿಕ್ಕಿದ್ದನ್ನು ನಾಳೆಯ ತನಕ ಇಟ್ಟುಕೊಳ್ಳಿ,” ಎಂದನು.
24 : ಮೋಶೆ ಆಜ್ಞಾಪಿಸಿದಂತೆ ಅವರು ಮರುದಿನದ ತನಕ ಅದನ್ನು ಇಟ್ಟುಕೊಂಡರು. ಅದು ನಾರಲಿಲ್ಲ, ಹುಳುವೂ ಬೀಳಲಿಲ್ಲ.
25 : ಮೋಶೆ ಅವರಿಗೆ, “ಈ ದಿನ ಅದನ್ನು ಊಟಮಾಡಿ. ಇದು ಸರ್ವೇಶ್ವರನ ಸಬ್ಬತ್ ದಿನವಾದ್ದರಿಂದ ಈ ದಿನ ಅದು ಅಡವಿಯಲ್ಲಿ ದೊರೆಯುವುದಿಲ್ಲ.
26 : ಆರು ದಿವಸ ಅದನ್ನು ಕೂಡಿಸಬಹುದು. ಏಳನೆಯ ದಿನ ಸಬ್ಬತ್. ಆದುದರಿಂದ ಅದು ದೊರೆಯುವುದೇ ಇಲ್ಲ,” ಎಂದು ಹೇಳಿದನು.
27 : ಹಾಗೆಯೇ ಆಯಿತು. ಜನರಲ್ಲಿ ಕೆಲವರು ಏಳನೆಯ ದಿನದಲ್ಲಿ ಅದನ್ನು ಕೂಡಿಸಿಕೊಳ್ಳುವುದಕ್ಕೆ ಹೋದಾಗ ಅವರಿಗೆ ಏನೂ ಸಿಕ್ಕಲಿಲ್ಲ.
28 : ಆಗ ಸರ್ವೇಶ್ವರ, “ಎಲ್ಲಿಯವರೆಗೆ ನೀವು ನನ್ನ ಆಜ್ಞೆಯನ್ನೂ ನಾನು ಮಾಡಿರುವ ನಿಯಮವನ್ನೂ ಅನುಸರಿಸದೆ ಅಲಕ್ಷ್ಯ ಮಾಡುವಿರಿ?
29 : ನೋಡಿ, ಸಬ್ಬತ್ ದಿನವನ್ನು ನೀವು ಆಚರಿಸಬೇಕೆಂದು ಸರ್ವೇಶ್ವರನಾದ ನಾನು ಅಪ್ಪಣೆ ಮಾಡಿರುವುದರಿಂದಲೇ ಆರನೆಯ ದಿನ ಎರಡು ದಿನದ ಆಹಾರ ನಿಮಗೆ ದೊರಕುವಂತೆ ಅನುಗ್ರಹಿಸಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬನು ತಾನಿರುವಲ್ಲಿಯೇ ಇರಬೇಕು. ಏಳನೆಯ ದಿನದಲ್ಲಿ ಒಬ್ಬನೂ ತನ್ನ ಸ್ಥಳವನ್ನು ಬಿಟ್ಟು ಹೊರಗೆ ಹೋಗಕೂಡದು,” ಎಂದು ಮೋಶೆಗೆ ಹೇಳಿದರು.
30 : ಆದುದರಿಂದ ಏಳನೆಯ ದಿನದಲ್ಲಿ ಜನರು ಕೆಲಸಮಾಡದೆ ವಿಶ್ರಮಿಸಿದರು.
31 : ಇಸ್ರಯೇಲ್ ಮನೆತನದವರು ಆ ಆಹಾರಕ್ಕೆ ‘ಮನ್ನ’ ಎಂದು ಹೆಸರಿಟ್ಟರು. ಅದು ಬಿಳೀ ಕೊತ್ತಂಬರಿ ಕಾಳಿನಂತಿದ್ದು, ರುಚಿಯಲ್ಲಿ ಜೇನುತುಪ್ಪ ಹಾಕಿ ಕಲಸಿದ ದೋಸೆಗಳ ಹಾಗಿತ್ತು.
32 : ಮೋಶೆ ಜನರಿಗೆ, “ಸರ್ವೇಶ್ವರಸ್ವಾಮಿ ಇದರ ವಿಷಯದಲ್ಲಿ ಕೊಟ್ಟ ಆಜ್ಞೆ ಇದು: ‘ನೀವು ಒಂದು ಹೋಮೆರ್ ತುಂಬ ಮನ್ನವನ್ನು ಇಟ್ಟುಕೊಳ್ಳಬೇಕು. ಏಕೆಂದರೆ ನಾನು ಈಜಿಪ್ಟಿನಿಂದ ನಿಮ್ಮನ್ನು ಹೊರಗೆ ಬರಮಾಡಿದಾಗ ಮರುಭೂಮಿಯಲ್ಲಿ ತಿನ್ನುವುದಕ್ಕೆ ಕೊಟ್ಟ ಈ ಆಹಾರವನ್ನು ನಿಮ್ಮ ಸಂತಾನದವರು ನೋಡುವ ಹಾಗೆ ಅವರಿಗೋಸ್ಕರ ಇದನ್ನು ನೀವು ಇಟ್ಟುಕೊಳ್ಳಬೇಕು’,” ಎಂದು ಹೇಳಿದನು.
33 : ಆದಕಾರಣ ಮೋಶೆ ಆರೋನನಿಗೆ, “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಮೂರು ಸೇರಿನಷ್ಟು ಮನ್ನವನ್ನು ಹಾಕಿ ನಿಮ್ಮ ಸಂತತಿಯವರು ನೋಡುವುದಕ್ಕೋಸ್ಕರ ಅದನ್ನು ಸರ್ವೇಶ್ವರನ ಸನ್ನಿಧಿಯಲ್ಲಿಡು,” ಎಂದು ಹೇಳಿದನು.
34 : ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿ ಆಜ್ಞಾಶಾಸನ ಮಂಜೂಷದ ಮುಂದೆ ಅದನ್ನು ಇಟ್ಟನು
35 : ಇಸ್ರಯೇಲರು ಜನವಾಸವಿರುವ ಪ್ರದೇಶಕ್ಕೆ ಬರುವ ತನಕ ಅಂದರೆ, ಕಾನಾನ್ ನಾಡಿನ ಮೇರೆಯನ್ನು ಸೇರುವ ತನಕ ನಾಲ್ವತ್ತು ವರ್ಷ ಮನ್ನವನ್ನೇ ಊಟಮಾಡುತ್ತಿದ್ದರು
36 : ಹೋಮೆರ್ ಎಂಬುದು ‘ಏಫಾ’ದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವಂಥದ್ದು.