Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆಂದರು:
2 : “ಇಸ್ರಯೇಲರು ಹಿಂದಿರುಗಿ ಹೋಗಿ ಪೀಹಹೀರೋತಿನ ಪೂರ್ವಕಡೆಯಲ್ಲಿ ಮಿಗ್ದೋಲಿಗೂ ಕೆಂಪು ಸಮುದ್ರಕ್ಕೂ ನಡುವೆ ಬಾಳ್ಚೆಫೋನಿಗೆ ಎದುರಾಗಿ ಇಳಿದುಕೊಳ್ಳಬೇಕೆಂದು ಹೇಳು. ಅದರ ಎದುರಿಗೆ ಸಮುದ್ರದ ಬಳಿಯಲ್ಲೇ ಅವರು ಇಳಿದುಕೊಳ್ಳಬೇಕು.
3 : ಫರೋಹನು ಅದನ್ನು ಕಂಡು, ‘ಇಸ್ರಯೇಲರಿಗೆ ದಾರಿತಪ್ಪಿತು, ಸುತ್ತಲೂ ಮರುಭೂಮಿ ಅವರನ್ನು ಆವರಿಸಿದೆ’ ಎಂದುಕೊಳ್ಳುವನು.
4 : ನಾನು ಫರೋಹನ ಹೃದಯವನ್ನು ಕಠಿಣವಾಗಿಸುವೆನು. ಆದುದರಿಂದ ಅವನು ಅವರನ್ನು ಬೆನ್ನಟ್ಟಿ ಬರುವನು. ಆಗ ಆ ಫರೋಹನನ್ನೂ ಅವನ ಸೈನ್ಯವನ್ನೂ ಗೆದ್ದು ನಾನು ಪ್ರಖ್ಯಾತಿ ಹೊಂದುವೆನು. ನಾನೇ ಸರ್ವೇಶ್ವರ ಎಂಬುದು ಈಜಿಪ್ಟಿನವರಿಗೆ ಗೊತ್ತಾಗುವುದು.” ಸರ್ವೇಶ್ವರನ ಆಜ್ಞೆಯಂತೆಯೇ ಇಸ್ರಯೇಲರು ನಡೆದುಕೊಂಡರು.
5 : ಇತ್ತ ಫರೋಹನಿಗೆ ಇಸ್ರಯೇಲರು ಓಡಿಹೋದರೆಂಬ ಸುದ್ದಿ ಮುಟ್ಟಿತು. ಅವರ ಬಗ್ಗೆ ಅವನ ಹಾಗು ಅವನ ಪರಿವಾರದವರ ಮನಸ್ಸು ಮಾರ್ಪಟ್ಟಿತು. “ನಮಗೆ ಗುಲಾಮರಾಗಿದ್ದ ಇಸ್ರಯೇಲರನ್ನು ನಾವೇಕೆ ಹೋಗಗೊಟ್ಟೆವು?” ಎಂದು ನೊಂದುಕೊಂಡರು.
6 : ಕೂಡಲೆ ಫರೋಹನು ತನ್ನ ರಥಬಲವನ್ನು ಸಜ್ಜುಗೊಳಿಸಿಕೊಂಡು ಸೈನ್ಯ ಸಮೇತನಾಗಿ ಹೊರಟನು.
7 : ಈಜಿಪ್ಟಿನ ಎಲ್ಲ ರಥಗಳನ್ನೂ ಆರುನೂರು ಶ್ರೇಷ್ಠರಥಗಳನ್ನೂ ತೆಗೆದುಕೊಂಡು ಹೋದನು. ಈ ಎಲ್ಲ ರಥಗಳಲ್ಲಿ ಸೇನಾನಿಗಳಿದ್ದರು
8 : ಈಜಿಪ್ಟ್ ರಾಜ ಫರೋಹನ ಹೃದಯವನ್ನು ಸರ್ವೇಶ್ವರ ಕಠಿಣಪಡಿಸಿದ್ದರಿಂದ ಅವನು ಇಸ್ರಯೇಲರನ್ನು ಬೆನ್ನಟ್ಟಿ ಹೋದನು. ಇತ್ತ ಅಟ್ಟಹಾಸದಿಂದ ಹೊರಟಿದ್ದರು ಇಸ್ರಯೇಲರು.
9 : ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು, ಸೈನ್ಯದವರೆಲ್ಲರು ಅವನ ಹಿಂದೆ ಹೊರಟು ಇಸ್ರಯೇಲರ ಸವಿೂಪಕ್ಕೆ ಬಂದರು. ಪೀಹಹೀರೋತಿನ ಬಳಿ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುವಾಗಲೇ ಅವರ ಹತ್ತಿರಕ್ಕೆ ಬಂದರು.
10 : ಫರೋಹನು ಸವಿೂಪಿಸುತ್ತಿರುವುದನ್ನು ಇಸ್ರಯೇಲರು ಕಣ್ಣೆತ್ತಿ ನೋಡಿದರು. ತಮ್ಮನ್ನು ಬೆನ್ನಟ್ಟಿ ಬಂದಿದ್ದ ಈಜಿಪ್ಟಿನವರನ್ನು ಕಂಡು ಬಹಳವಾಗಿ ಭಯಪಟ್ಟು ಸರ್ವೇಶ್ವರನಿಗೆ ಮೊರೆಯಿಟ್ಟರು.
11 : ಮೋಶೆಗೆ ಅವರು, “ಈಜಿಪ್ಟಿನಲ್ಲಿ ಸಮಾಧಿಗಳಿಲ್ಲವೆಂದು ಮರುಭೂಮಿಯಲ್ಲಿ ಸಾಯಲಿಯೆಂದು ನಮ್ಮನ್ನು ಇಲ್ಲಿಗೆ ಕರೆದು ತಂದಿರೋ? ಈಜಿಪ್ಟಿನಿಂದ ಕರೆದುಕೊಂಡು ಬಂದು ನಮಗೆ ಹೀಗೆ ಮಾಡಿಬಿಟ್ಟಿದ್ದೇಕೆ?
12 : ನಾವು ಈಜಿಪ್ಟಿನಲ್ಲಿರುವಾಗಲೇ, ‘ನಮ್ಮ ಗೊಡವೆಗೆ ಬರಬೇಡಿ, ನಾವು ಈಜಿಪ್ಟಿನವರಿಗೆ ಗುಲಾಮರಾಗಿಯೇ ಇರುತ್ತೇವೆ,’ ಎಂದು ನಿಮಗೆ ನಾವು ಹೇಳಲಿಲ್ಲವೆ? ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಈಜಿಪ್ಟಿನವರಿಗೆ ಗುಲಾಮರಾಗಿರುವುದೇ ಮೇಲಲ್ಲವೆ?” ಎಂದು ದೂರಿದರು.
13 : ಅದಕ್ಕೆ ಮೋಶೆ ಆ ಜನರಿಗೆ, “ಅಂಜಬೇಡಿ, ಸುಮ್ಮನಿರಿ. ಈ ದಿನ ಸರ್ವೇಶ್ವರ ನಿಮ್ಮನ್ನು ಹೇಗೆ ರಕ್ಷಿಸುತ್ತಾರೆಂದು ನೋಡಿ! ಈ ದಿನ ನೀವು ನೋಡುವ ಈಜಿಪ್ಟಿನವರನ್ನು ಇನ್ನೆಂದಿಗೂ ನೋಡುವುದಿಲ್ಲ.
14 : ಸರ್ವೇಶ್ವರಸ್ವಾಮಿಯೇ ನಿಮ್ಮ ಪರವಾಗಿ ಯುದ್ಧಮಾಡುವರು. ನೀವು ನೆಮ್ಮದಿಯಿಂದಿರಿ,” ಎಂದು ಹೇಳಿದನು.
15 : ಆಗ ಸರ್ವೇಶ್ವರ: “ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮುಂದಕ್ಕೆ ಹೊರಡಬೇಕೆಂದು ಇಸ್ರಯೇಲರಿಗೆ ಹೇಳು.
16 : ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು; ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದುಹೋಗುವರು.
17 : ನಾನು ಈಜಿಪ್ಟಿನವರ ಹೃದಯಗಳನ್ನು ಕಠಿಣಪಡಿಸುವೆನು; ಎಂದೇ ಅವರು ಇವರ ಹಿಂದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು
18 : ರಾಹುತರನ್ನು ಸೋಲಿಸಿ ಪ್ರಖ್ಯಾತಿ ಹೊಂದಿದ ನಂತರ ನಾನೇ ಸರ್ವೇಶ್ವರ ಎಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು ಮೋಶೆಗೆ.
19 : ಇಸ್ರಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿಂದಕ್ಕೆ ಬಂದನು. ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.
20 : ಆ ಮೇಘಸ್ತಂಭವು ಈಜಿಪ್ಟಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬಂದು ಈಜಿಪ್ಟಿನವರಿಗೆ ಕತ್ತಲೆಯನ್ನು ಉಂಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. ಈ ಕಾರಣ ಆ ರಾತ್ರಿಯೆಲ್ಲಾ ಒಂದು ಪಡೆಯವರು ಇನ್ನೊಂದು ಪಡೆಯವರ ಬಳಿಗೆ ಬರಲಾಗಲಿಲ್ಲ.
21 : ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಸರ್ವೇಶ್ವರಸ್ವಾಮಿ ಆ ರಾತ್ರಿಯೆಲ್ಲಾ ಪೂರ್ವದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದುಕಡೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದರು. ನೀರು ಇಬ್ಭಾಗವಾಯಿತು.
22 : ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು.
23 : ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು ಇಸ್ರಯೇಲರನ್ನು ಬೆನ್ನಟ್ಟಿ ಬಂದು ಅವರ ಹಿಂದೆಯೇ ಸಮುದ್ರದೊಳಗೆ ಹೋದರು.
24 : ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ತಂಭದಿಂದ ಈಜಿಪ್ಟಿನವರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿ ಮಾಡಿದರು.
25 : ಸರ್ವೇಶ್ವರ ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದರಿಂದ ಈಜಿಪ್ಟಿನವರು ಬಹುಕಷ್ಟದಿಂದ ಅವುಗಳನ್ನು ಸಾಗಿಸಿಕೊಂಡು ಹೋದರು. ಆಗ ಈಜಿಪ್ಟಿನವರು, “ನಾವು ಇಸ್ರಯೇಲರ ಮುಂದೆ ಗೆಲ್ಲಲಾರೆವು, ಓಡಿಹೋಗೋಣ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನೆ,” ಎಂದುಕೊಂಡರು.
26 : ಅಷ್ಟರಲ್ಲಿ ಸರ್ವೇಶ್ವರ, “ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಈಜಿಪ್ಟಿನವರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು,” ಎಂದು ಮೋಶೆಗೆ ಹೇಳಿದರು.
27 : ಅಂತೆಯೇ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಈಜಿಪ್ಟಿನವರು ಓಡಿ ಹೋಗತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಸರ್ವೇಶ್ವರ ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು.
28 : ನೀರು ಮೊದಲಿನಂತೆ ಬಂದು ಆ ರಥಗಳನ್ನು, ರಾಹುತರನ್ನು ಹಾಗು ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.
29 : ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತ್ತು.
30 : ಆ ದಿನ ಸರ್ವೇಶ್ವರಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು.
31 : ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನಂಬಿಕೆಯಿಟ್ಟರು.

· © 2017 kannadacatholicbible.org Privacy Policy