Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಸರ್ವೇಶ್ವರಸ್ವಾಮಿ ಮೋಶೆಗೆ ಹೀಗೆ ಎಂದರು: “ಫರೋಹನಿಗೂ ಈಜಿಪ್ಟಿನವರಿಗೂ ಇನ್ನೊಂದು ಪಿಡುಗನ್ನು ಬರಮಾಡುತ್ತೇನೆ. ಅದು ಬಂದನಂತರ ಅವನು ನಿಮಗೆ ಇಲ್ಲಿಂದ ಹೋಗುವುದಕ್ಕೆ ಅಪ್ಪಣೆ ಕೊಡುವನು. ಅದು ಮಾತ್ರವಲ್ಲ, ನಿಮ್ಮೆಲ್ಲರನ್ನು ಅಲ್ಲಿಂದ ಅಟ್ಟಿಬಿಡುವನು.
2 : ಆದುದರಿಂದ ಸ್ತ್ರೀಪುರುಷರೆಲ್ಲರು ತಮ್ಮ ತಮ್ಮ ನೆರೆಹೊರೆಯವರಿಂದ ಬೆಳ್ಳಿ ಬಂಗಾರದ ಒಡವೆಗಳನ್ನು ಕೇಳಿಕೊಳ್ಳಬೇಕೆಂದು ನಿಮ್ಮ ಜನರಿಗೆ ಸ್ಪಷ್ಟವಾಗಿ ಹೇಳು,” ಎಂದರು.
3 : ಈಜಿಪ್ಟಿನವರಿಗೆ ಇಸ್ರಯೇಲರ ಮೇಲೆ ಕನಿಕರ ಉಂಟಾಗುವಂತೆ ಮಾಡಿದರು ಸರ್ವೇಶ್ವರ. ಇದಲ್ಲದೆ ಈಜಿಪ್ಟ್ ದೇಶದ ಫರೋಹನ ಪರಿವಾರದವರು ಮೋಶೆಯನ್ನು ಮಹಾಪುರುಷನೆಂದು ಭಾವಿಸಿದರು.
4 : ಮೋಶೆ ಫರೋಹನಿಗೆ ಇಂತೆಂದನು: “ಸರ್ವೇಶ್ವರ ಮಾಡಿರುವ ಅಪ್ಪಣೆ ಇದು: ‘ನಡುರಾತ್ರಿ ವೇಳೆಯಲ್ಲಿ ನಾನೇ ಈಜಿಪ್ಟಿನವರ ನಡುವೆ ಹಾದುಹೋಗುವೆನು.
5 : ಆಗ, ಸಿಂಹಾಸನಾರೂಢನಾದ ಫರೋಹನ ಚೊಚ್ಚಲ ಮಗನು ಮೊದಲುಗೊಂಡು ಬೀಸುಕಲ್ಲನ್ನು ಹಿಡಿದು ಕೂತಿರುವ ದಾಸಿಯ ಚೊಚ್ಚಲು ಮಗನವರೆಗೂ ಈಜಿಪ್ಟ್ ದೇಶದಲ್ಲಿ ಚೊಚ್ಚಲು ಮಕ್ಕಳೆಲ್ಲರು ಸಾಯುವರು. ಪಶುಪ್ರಾಣಿಗಳಲ್ಲೂ ಚೊಚ್ಚಲಾದವುಗಳೆಲ್ಲಾ ಸಾಯುವುವು.
6 : ಆಗ ಈಜಿಪ್ಟ್ ದೇಶದಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು. ಅಂಥ ಗೋಳಾಟ ಈವರೆಗೂ ಇರಲಿಲ್ಲ, ಇನ್ನು ಮುಂದೆಯೂ ಇರುವುದಿಲ್ಲ.
7 : ಆದರೆ ಇಸ್ರಯೇಲರಲ್ಲಿರುವ ಮನುಷ್ಯನ ವಿರುದ್ಧವಾಗಲಿ, ಪ್ರಾಣಿ ವಿರುದ್ಧವಾಗಲಿ, ಒಂದು ನಾಯಿ ಕೂಡ ಬೊಗಳುವುದಿಲ್ಲ. ಇದರಿಂದ ಸರ್ವೇಶ್ವರ ಇಸ್ರಯೇಲರಿಗೂ ಈಜಿಪ್ಟಿನವರಿಗೂ ತಾರತಮ್ಯ ಮಾಡಿದ್ದಾರೆಂದು ನಿಮಗೆ ಗೊತ್ತಾಗುವುದು
8 : ಆಗ ನಿನ್ನ ಪರಿವಾರದವರಾದ ಇವರೆಲ್ಲರು ನನ್ನ ಬಳಿಗೆ ಬಂದು ಅಡ್ಡಬಿದ್ದು - ನೀವೂ ನಿಮ್ಮ ಅಧೀನದಲ್ಲಿರುವ ಜನರೆಲ್ಲರು ನಮ್ಮನ್ನು ಬಿಟ್ಟು ಹೋಗಿಬಿಡಿ - ಎಂದು ಬೇಡುವರು. ಇದಾದ ಮೇಲೆ ನಾನು ಹೊರಟುಹೋಗುವೆನು.’ ಈ ಮಾತುಗಳನ್ನು ಹೇಳಿ ಮೋಶೆ ಕೋಪದಿಂದ ಕಿಡಿಕಿಡಿಯಾಗಿ ಫರೋಹನನ್ನು ಬಿಟ್ಟು ಹೊರಟು ಹೋದನು.
9 : ಸರ್ವೇಶ್ವರ ಮೋಶೆಗೆ, “ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ; ಆದ್ದರಿಂದ ಈಜಿಪ್ಟ್ ದೇಶದಲ್ಲಿ ಸೂಚಕಕಾರ್ಯಗಳನ್ನು ಹೆಚ್ಚಾಗಿ ನಡೆಸಲು ಆಸ್ಪದ ದೊರಕುವುದು,” ಎಂದು ಹೇಳಿದರು.
10 : ಮೋಶೆ ಮತ್ತು ಆರೋನರು ಫರೋಹನ ಮುಂದೆ ಈ ಸೂಚಕಕಾರ್ಯಗಳನ್ನೆಲ್ಲಾ ಮಾಡಿದ್ದರೂ ಸರ್ವೇಶ್ವರ ಫರೋಹನ ಹೃದಯವನ್ನು ಕಲ್ಲಾಗಿಸಿದ್ದರು. ಅವನು ತನ್ನ ದೇಶವನ್ನು ಬಿಟ್ಟು ಹೊರಡುವುದಕ್ಕೆ ಇಸ್ರಯೇಲರಿಗೆ ಅಪ್ಪಣೆ ಕೊಡದೆ ಹೋದನು.

· © 2017 kannadacatholicbible.org Privacy Policy