Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿಮೋಚನಕಾಂಡ


1 : ಯಕೋಬನೊಡನೆ ಹಾಗು ತಮ್ಮ ತಮ್ಮ ಕುಟುಂಬಗಳೊಡನೆ ಈಜಿಪ್ಟ್ ದೇಶಕ್ಕೆ ಬಂದ ಇಸ್ರಯೇಲನ ಮಕ್ಕಳ ಹೆಸರುಗಳು ಇವು:
2 : ರೂಬೇನ್, ಸಿಮೆಯೋನ್, ಲೇವಿ, ಯೆಹೂದ
3 : ಇಸ್ಸಾಕಾರ್, ಜೆಬುಲೂನ್, ಬೆನ್ಯಾವಿೂನ್
4 : ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್..
5 : ಯಕೋಬನ ಸಂತತಿಯವರೆಲ್ಲರು ಎಪ್ಪತ್ತು ಮಂದಿ. ಜೋಸೆಫನು ಈಗಾಗಲೇ ಈಜಿಪ್ಟಿನಲ್ಲಿ ಇದ್ದನು.
6 : ಕಾಲಕ್ರಮೇಣ ಜೋಸೆಫನು, ಅವನ ಅಣ್ಣತಮ್ಮಂದಿರು ಹಾಗು ಆ ತಲೆಮಾರಿನ ಎಲ್ಲರು ತೀರಿಹೋದರು.
7 : ಆದರೂ ಇಸ್ರಯೇಲನ ವಂಶವು ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಿತು. ಅವರು ಶಕ್ತಿಶಾಲಿಗಳಾದರು. ಆ ದೇಶದಲ್ಲೆಲ್ಲಾ ತುಂಬಿಕೊಂಡರು.
8 : ಅನಂತರ ಹೊಸ ರಾಜನೊಬ್ಬನು ಈಜಿಪ್ಟ್ ದೇಶದ ಆಳ್ವಿಕೆಗೆ ಬಂದನು. ಅವನಿಗೆ ಜೋಸೆಫನ ವಿಷಯ ತಿಳಿದಿರಲಿಲ್ಲ.
9 : ಅವನು ತನ್ನ ಜನರಿಗೆ, “ಇಸ್ರಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಬಲಾಢ್ಯರಾಗಿದ್ದಾರೆ, ಅಧೀನದಲ್ಲಿರಿಸಲು ಕಷ್ಟಸಾಧ್ಯ.
10 : ಯುದ್ಧವೇನಾದರು ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಕೂಡಿಕೊಂಡು ನಮಗೆ ವಿರೋಧವಾಗಿ ಕಾದಾಡಿ ನಾಡನ್ನು ಬಿಟ್ಟು ಪಲಾಯನ ಗೈಯಬಹುದು. ಆದ್ದರಿಂದ ಅವರು ವೃದ್ಧಿಯಾಗದಂತೆ ನಾವು ಉಪಾಯ ಹೂಡಬೇಕು,” ಎಂದು ಎಚ್ಚರಿಸಿದನು.
11 : ಅದರಂತೆಯೇ ಅವನ ಜನರು ಇಸ್ರಯೇಲರಿಗೆ ಕಿರುಕುಳ ಕೊಡಲು ತೊಡಗಿದರು. ಪುಕ್ಕಟೆಯಾಗಿ ಕೆಲಸಮಾಡಿಸಿಕೊಂಡರು. ಬಿಟ್ಟೀ ಕೆಲಸ ಮಾಡಿಸುವ ಅಧಿಕಾರಿಗಳನ್ನು ನೇಮಿಸಿ ಫರೋಹನಿಗೆ ‘ಪಿತೋಮ್’ ಮತ್ತು ‘ರಾಮ್ಸೇಸ್’ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
12 : ಈಜಿಪ್ಟರು ಅವರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ ಅಷ್ಟೂ ಹೆಚ್ಚಿ ಹರಡಿಕೊಳ್ಳುತ್ತಿದ್ದರು.
13 : ಆದ್ದರಿಂದ ಇಸ್ರಯೇಲರ ಬಗ್ಗೆ ಈಜಿಪ್ಟರು ಸಹಿಸಲಾರದಷ್ಟು ಹೆದರಿಕೆ ಉಳ್ಳವರಾದರು. ಇಸ್ರಯೇಲರಿಂದ ಕ್ರೂರತನದಿಂದ ಸೇವೆ ಮಾಡಿಸಿಕೊಂಡರು.
14 : ಮಣ್ಣು ಅಗೆಯುವ ಕೆಲಸದಲ್ಲೂ ಇಟ್ಟಿಗೆ ಸುಡುವ ಕೆಲಸದಲ್ಲೂ ವ್ಯವಸಾಯದ ಮತ್ತಿತರ ಕೆಲಸಕಾರ್ಯಗಳಲ್ಲೂ ಕಠಿಣವಾಗಿ ಅವರಿಂದ ದುಡಿಸಿಕೊಂಡರು. ಅವರು ಮಾಡಿಸಿಕೊಳ್ಳುತ್ತಿದ್ದ ಪ್ರತಿಯೊಂದು ಕೆಲಸವು ಜೀವನವೇ ಬೇಡವೆನ್ನುವಷ್ಟು ಕಠೋರವಾಗಿ ಇರುತ್ತಿತ್ತು.
15 : ಇದೂ ಸಾಲದೆಂದು ಈಜಿಪ್ಟಿನ ಅರಸನು ಶಿಪ್ರಾ ಮತ್ತು ಪೂಗಾ ಎಂಬ ಹಿಬ್ರಿಯ ಸೂಲಗಿತ್ತಿಯರಿಗೆ,
16 : “ನೀವು ಹಿಬ್ರಿಯ ಮಹಿಳೆಯರಿಗೆ ಹೆರಿಗೆಮಾಡಿಸುವಾಗ ಅವರು ಹೆರುವ ಮಗು ಗಂಡಾಗಿದ್ದರೆ ಕೊಲ್ಲಬೇಕು, ಹೆಣ್ಣಾಗಿದ್ದರೆ ಉಳಿಸಬೇಕು,” ಎಂದು ಹೇಳಿದ್ದನು.
17 : ಆದರೆ ಆ ಸೂಲಗಿತ್ತಿಯರು ದೈವಭಕ್ತರು. ಈಜಿಪ್ಟಿನ ಅರಸ ಹೇಳಿದಂತೆ ಮಾಡದೆ ಗಂಡುಮಕ್ಕಳನ್ನು ಉಳಿಸಿದರು.
18 : ಆಗ ಆ ಅರಸನು ಅವರನ್ನು ಕರೆಯಿಸಿ, “ನೀವು ಗಂಡುಮಕ್ಕಳನ್ನು ಉಳಿಸಿದ್ದು ಏಕೆ?” ಎಂದು ವಿಚಾರಿಸಿದನು.
19 : ಆ ಫರೋಹನಿಗೆ ಸೂಲಗಿತ್ತಿಯರು, “ಹಿಬ್ರಿಯ ಮಹಿಳೆಯರು ಈಜಿಪ್ಟಿನ ಮಹಿಳೆಯರಂತಲ್ಲ; ಏಕೆಂದರೆ ಅವರು ಗಟ್ಟಿಮುಟ್ಟಾದವರು, ಸೂಲಗಿತ್ತಿಯರು ಹತ್ತಿರ ಬರುವುದಕ್ಕೆ ಮುಂಚೆಯೇ ಹೆರುತ್ತಾರೆ,” ಎಂದು ಹೇಳಿದರು.
20 : ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನೆ ಮಾಡಿದರು. ಅವರಲ್ಲಿ ದೈವಭಕ್ತಿ ಇದ್ದುದರಿಂದ ಅವರಿಗೆ ವಂಶಾಭಿವೃದ್ಧಿಯನ್ನು ಉಂಟುಮಾಡಿದರು.
21 : ಇತ್ತ ಇಸ್ರಯೇಲರು ಸಂಖ್ಯೆಯಲ್ಲೂ ಶಕ್ತಿಯಲ್ಲೂ ಪ್ರವರ್ಧಿಸಿದರು.
22 : ಕಟ್ಟಕಡೆಗೆ ಫರೋಹನು ತನ್ನ ಜನರಿಗೆಲ್ಲಾ, “ಹಿಬ್ರಿಯರ ಗಂಡುಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು; ಹೆಣ್ಣು ಕೂಸುಗಳನ್ನೆಲ್ಲಾ ಉಳಿಸಬೇಕು,” ಎಂದು ಆಜ್ಞೆಮಾಡಿದನು.

· © 2017 kannadacatholicbible.org Privacy Policy