1 : “ಇಗೋ, ಆ ದಿನ ಬರುತ್ತಿದೆ. ಒಲೆಯಂತೆ ಉರಿಯುತ್ತಿದೆ. ಎಲ್ಲ ಅಹಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ.
2 : “ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ ಸೂರ್ಯನು ಉದಯಿಸಿ, ಸುಕ್ಷೇಮವನ್ನೀಯುವ ಕಿರಣಗಳನ್ನು ಬೀರುವನು. ಕೊಟ್ಟಿಗೆಯಿಂದ ಹೊರಬಂದ ಕರುಗಳಂತೆ ನೀವು ಕುಣಿದು ಕುಪ್ಪಳಿಸುವಿರಿ.
3 : ನಾನು ಕಾರ್ಯತತ್ಪರನಾಗುವ ದಿನದಂದು ನೀವು ದುಷ್ಟರನ್ನು ತುಳಿದು ಬಿಡುವಿರಿ. ಅವರು ನಿಮ್ಮ ಕಾಲಡಿಯ ಧೂಳಿಯಾಗುವರು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
4 : “ನಾನು ನನ್ನ ದಾಸನಾದ ಮೋಶೆಗೆ ಬೋಧಿಸಿದ ಧರ್ಮಶಾಸ್ತ್ರವನ್ನು ಜ್ಞಾಪಕಕ್ಕೆ ತಂದುಕೊಳ್ಳಿ. ಆ ವಿಧಿನಿಯಮಗಳನ್ನು ಆತನಿಗೆ ಹೋರೇಬ್ ಬೆಟ್ಟದಲ್ಲಿ ಕೊಟ್ಟದ್ದು ಇಸ್ರಯೇಲರು ಅವುಗಳನ್ನು ಅನುಸರಿಸಲೆಂದೇ.”
5 : “ಇಗೋ, ಸರ್ವೇಶ್ವರಸ್ವಾಮಿಯ ಆಗ ಮನದ ಭಯಂಕರ ಮಹಾದಿನ ಬರುವುದಕ್ಕೆ ಮುಂಚೆ ಪ್ರವಾದಿ ಎಲೀಯನನ್ನು ನಿಮ್ಮಲ್ಲಿಗೆ ಕಳುಹಿಸುವೆನು.
6 : ನಾನು ಬಂದು ಲೋಕವನ್ನು ಶಪಿಸಿ ನಾಶಗೊಳಿಸದಂತೆ ಆತನು ಹೆತ್ತವರ ಮನಸ್ಸನ್ನು ಮಕ್ಕಳ ಕಡೆಗೂ, ಮಕ್ಕಳ ಮನಸ್ಸನ್ನು ಹೆತ್ತವರ ಕಡೆಗೂ ಒಲಿಸಿ ಅವರನ್ನು ಒಂದಾಗಿಸುವನು.”