Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಮಲಾಕಿಯ


1 : ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.”
2 : “ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು?
3 : ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು.
4 : ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.”
5 : “ಮಾಟಗಾರರಿಗೆ, ಸೂಳೆಗಾರರಿಗೆ, ಸುಳ್ಳು ಹೇಳುವವರಿಗೆ, ಕೂಲಿಹಿಡಿದು ಕಾರ್ಮಿಕರನ್ನು ಮೋಸಗೊಳಿಸುವವರಿಗೆ, ವಿಧವೆಯರನ್ನು ಮತ್ತು ಅನಾಥರನ್ನು ಬಾಧಿಸುವವರಿಗೆ, ಪ್ರವಾಸಿಗಳಿಗೆ ಅನ್ಯಾಯ ಮಾಡುವವರಿಗೆ – ಅಂತೂ ನನಗಂಜದ ಎಲ್ಲರಿಗೆ, ಬೇಗನೆ ನ್ಯಾಯತೀರಿಸಿ, ದಂಡನೆ ವಿಧಿಸಲು ನಾನು ಬರುವೆನು,” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
6 : “ಯಕೋಬನ ಕುಲಪುತ್ರರೇ, ನಾನು ಅದಲುಬದಲಾಗದ ಸರ್ವೇಶ್ವರ, ಈ ಕಾರಣದಿಂದ ನೀವು ಅಳಿಯದೆ ಉಳಿದಿದ್ದೀರಿ.
7 : ನಿಮ್ಮ ಪೂರ್ವಜರ ಕಾಲದಿಂದಲೂ ನನ್ನ ವಿಧಿಗಳನ್ನು ಅನುಸರಿಸದೆ, ಅಡ್ಡದಾರಿ ಹಿಡಿದಿದ್ದೀರಿ. ಈಗ ಮರಳಿ ನನಗೆ ಅಭಿಮುಖರಾಗಿರಿ. ನಾನು ನಿಮಗೆ ಅಭಿಮುಖನಾಗುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ‘ನಾವು ನಿಮಗೆ ಅಭಿಮುಖರಾಗಲು ಏನು ಮಾಡಬೇಕು?’ ಎಂದು ಕೇಳುತ್ತೀರೋ?
8 : ನರಮಾನವನು ದೇವರಿಗೆ ಮೋಸಮಾಡಬಹುದೋ? ಆದರೂ ನೀವು ನನಗೆ ಮೋಸಮಾಡುತ್ತಿದ್ದೀರಿ. ‘ನಿಮಗೆ ಹೇಗೆ ಮೋಸಮಾಡುತ್ತಿದ್ದೇವೆ?’ ಎಂದು ಕೇಳುತ್ತೀರೋ? ನೀವು ತೆರಬೇಕಾದ ದಶಮಾಂಶದಲ್ಲೂ, ಕೊಡಬೇಕಾದ ಕಾಣಿಕೆಯಲ್ಲೂ ಮೋಸಮಾಡುತ್ತಿದ್ದೀರಿ.
9 : ನೀವೂ ನಿಮ್ಮ ಜನಾಂಗವೆಲ್ಲವೂ ನನಗೆ ಮೋಸಮಾಡುವುದರಿಂದ ನೀವೆಲ್ಲರೂ ಶಾಪಗ್ರಸ್ತರು.
10 : ನನ್ನ ಆಲಯದಲ್ಲಿ ಆಹಾರಕ್ಕೆ ಕೊರತೆಯಿಲ್ಲದಿರುವಂತೆ ದಶಮಾಂಶವನ್ನು ಪೂರ್ತಿಯಾಗಿ ನನ್ನ ಭಂಡಾರಕ್ಕೆ ತೆಗೆದುಕೊಂಡು ಬನ್ನಿ. ಆ ಬಳಿಕ ಪರಲೋಕದ ದ್ವಾರಗಳನ್ನು ತೆರೆದು, ತುಂಬಿತುಳುಕುವಷ್ಟು ವರದಾನಗಳನ್ನು ನಿಮ್ಮ ಮೇಲೆ ಸುರಿಸುವೆನೋ ಇಲ್ಲವೋ ಎಂಬುದನ್ನು ಪರೀಕ್ಷಿಸಿನೋಡಿ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
11 : “ನಿಮ್ಮ ಭೂಮಿಯ ಬೆಳೆ ಹುಳುಹುಪ್ಪಟೆಗಳಿಂದ ನಾಶವಾಗದಂತೆ ನೋಡಿಕೊಳ್ಳುವೆನು. ನಿಮ್ಮ ತೋಟದಲ್ಲಿ ದ್ರಾಕ್ಷಿಹಣ್ಣು ಉದುರಿಹೋಗದಂತೆ ಮಾಡುವೆನು.
12 : ಆಗ ಎಲ್ಲ ರಾಷ್ಟ್ರಗಳು ನಿಮ್ಮನ್ನು ಧನ್ಯರೆಂದು ಹೊಗಳುವರು. ನಿಮ್ಮ ನಾಡು ಚೆಲುವಿನ ನಾಡಾಗಿರುವುದು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
13 : “ನೀವು ನನಗೆ ಕಠಿಣವಾದ ಮಾತುಗಳನ್ನಾಡಿದ್ದೀರಿ,” ಎನ್ನುತ್ತಾರೆ ಸರ್ವೇಶ್ವರ. “ನೀವು, ‘ನಿನಗೆ ವಿರುದ್ಧವಾಗಿ ನಾವು ಮಾತನಾಡಿದ್ದೇನು?’ ಎಂದು ಕೇಳುತ್ತೀರೋ?
14 : ದೇವರಿಗೆ ಸೇವೆ ಮಾಡುವುದು ವ್ಯರ್ಥ. ಅವರು ಹೇಳಿದಂತೆ ನಾವು ನಡೆದುಕೊಳ್ಳುವುದರಿಂದ ಪ್ರಯೋಜನವೇನು? ನಮ್ಮ ಕೃತ್ಯಗಳಿಗಾಗಿ ಸೇನಾಧೀಶ್ವರ ಸರ್ವೇಶ್ವರನ ಮುಂದೆ ದುಃಖಪಡುವುದರಿಂದ ಲಾಭವೇನು?
15 : ಅಹಂಕಾರಿಗಳೇ ಭಾಗ್ಯವಂತರು; ದುಷ್ಕರ್ಮಿಗಳು ಚೆನ್ನಾಗಿ ಅಭಿವೃದ್ಧಿಯಾಗುತ್ತಿದ್ದಾರೆ, ಅಷ್ಟೇ ಅಲ್ಲ, ದೇವರನ್ನೇ ಪರೀಕ್ಷೆಗೆ ಗುರಿಪಡಿಸಿ ಸುರಕ್ಷಿತವಾಗಿದ್ದಾರೆ,” ಎಂದು ನೀವು ಹೇಳಿದ್ದೀರಿ.
16 : ಇಂಥ ಮಾತುಗಳನ್ನು ಕೇಳಿ, ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಸರ್ವೇಶ್ವರ ಅವರಿಗೆ ಕಿವಿಗೊಟ್ಟು ಆಲಿಸಿದರು. ಭಯಭಕ್ತಿಯಿಂದ ತಮ್ಮ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತಮ್ಮ ಮುಂದಿದ್ದ ದಾಖಲೆ ಪುಸ್ತಕದಲ್ಲಿ ಬರೆಸಿದರು.
17 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇವರು ನನ್ನ ಜನರು; ನಾನು ಕಾರ್ಯತತ್ಪರನಾಗುವ ದಿನದಂದು ಅವರು ನನಗೆ ಸ್ವಕೀಯ ಜನರಾಗಿರುವರು. ತಂದೆಯೊಬ್ಬನು ತನಗೆ ಸೇವೆ ಮಾಡುವ ಮಗನನ್ನು ಕಾಪಾಡುವಂತೆ ನಾನು ಅವರನ್ನು ಕಾಪಾಡುವೆನು.
18 : ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ.

· © 2017 kannadacatholicbible.org Privacy Policy