1 : ಮಲಾಕಿಯನ ಮುಖಾಂತರ ಇಸ್ರಯೇಲ್ ಜನರಿಗೆ ಸರ್ವೇಶ್ವರ ನೀಡಿದ ದೈವೋಕ್ತಿ:
2 : “ನಿಮ್ಮ ಮೇಲೆ ನನಗೆ ಪ್ರೀತಿ ಇದೆ” ಎನ್ನುತ್ತಾರೆ ಸರ್ವೇಶ್ವರ. ನೀವಾದರೋ, “ಯಾವ ವಿಷಯದಲ್ಲಿ ನಮಗೆ ಪ್ರೀತಿ ತೋರಿಸಿದ್ದೀರಿ?” ಎಂದು ಕೇಳುತ್ತೀರಿ. ಅದಕ್ಕೆ ಅವರು, “ಏಸಾವನು ಯಕೋಬನ ಅಣ್ಣನಲ್ಲವೇ? ಆದರೂ ನಾನು ಯಕೋಬನನ್ನು ಪ್ರೀತಿಸಿದೆ;
3 : ಏಸಾವನನ್ನು ದ್ವೇಷಿಸಿದೆ; ಅಲ್ಲದೆ ಏಸಾವನಿಗೆ ಸೇರಿದ ಮಲೆನಾಡುಗಳನ್ನು ಹಾಳುಮಾಡಿ, ಅವನ ಪಿತ್ರಾರ್ಜಿತ ರಾಜ್ಯವನ್ನು ನಾಯಿನರಿಗಳ ಬೀಡಾಗಿಸಿದೆ,” ಎಂದು ಉತ್ತರಿಸುತ್ತಾರೆ.
4 : ಏಸಾವನ ವಂಶದವರಾದ ಎದೋಮ್ಯರು, “ನಮ್ಮ ನಾಡು ಹಾಳಾಯಿತು; ಆದರೆ ಹಾಳುಬಿದ್ದದ್ದನ್ನು ಮರಳಿ ಕಟ್ಟುವೆವು,” ಎನ್ನಬಹುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರ ಕೊಡುವ ಉತ್ತರ ಇದು: “ಅವರು ಕಟ್ಟಲಿ; ನಾನು ಅವುಗಳನ್ನು ಕೆಡವಿಹಾಕುವೆ. ‘ಅವರು ಕೇಡಿಗರು, ಸರ್ವೇಶ್ವರಸ್ವಾಮಿಯ ಕೋಪಕ್ಕೆ ಗುರಿಯಾದವರು’ ಎಂದು ಜನರೇ ಆಡಿಕೊಳ್ಳುವರು.
5 : ಇಸ್ರಯೇಲಿನ ಜನರಾದ ನೀವು ಇದನ್ನು ಕಣ್ಣಾರೆ ಕಂಡು, “ಸರ್ವೇಶ್ವರ ಇಸ್ರಯೇಲಿನ ಹೊರಗೂ ಮಹಾ ಮಹಿಮೆಯುಳ್ಳವರು!” ಎಂದು ಹೇಳಿಕೊಳ್ಳುವಿರಿ.
ಅಯೋಗ್ಯ ಯಾಜಕರಿಗೆ ಶಾಪ
6 : “ನನ್ನ ನಾಮವನ್ನು ಅವಮಾನಗೊಳಿಸುವ ಯಾಜಕರೇ, ಮಗನು ತಂದೆಯನ್ನು, ದಾಸನು ದಣಿಯನ್ನು ಸನ್ಮಾನಿಸುವುದು ಸಹಜ. ನಾನು ತಂದೆಯಾಗಿದ್ದರೂ ನೀವು ನನಗೆ ಸಲ್ಲಿಸುವ ಸನ್ಮಾನವೆಲ್ಲಿ? ನಾನು ದಣಿಯಾಗಿದ್ದರೂ ನೀವು ನನಗೆ ತೋರಿಸುವ ಭಯಭಕ್ತಿ ಎಲ್ಲಿ?” ಎಂದು ಸೇನಾಧೀಶ್ವರ ಸರ್ವೇಶ್ವರ ನಿಮ್ಮನ್ನೇ ಕೇಳುತ್ತಾರೆ. ಆದರೆ, ನೀವು: “ಯಾವ ವಿಷಯದಲ್ಲಿ ನಿಮ್ಮ ನಾಮವನ್ನು ಅವಮಾನಗೊಳಿಸಿದ್ದೇವೆ?” ಎಂದು ಕೇಳುತ್ತೀರಿ
7 : “ನನ್ನ ಬಲಿಪೀಠದ ಮೇಲೆ ಅಶುದ್ಧ ಪದಾರ್ಥಗಳನ್ನು ಅರ್ಪಿಸಿ ನನ್ನನ್ನು ಅವಮಾನ ಗೊಳಿಸಿದ್ದೀರಿ;” “ಯಾವ ವಿಷಯದಲ್ಲಿ ನಿಮಗೆ ಅಗೌರವ ತಂದಿದ್ದೇವೆ ಎನ್ನುತ್ತೀರೋ? ‘ಸರ್ವೇಶ್ವರಸ್ವಾಮಿಯ ವೇದಿಕೆಗೆ ಘನತೆ ಏನಿದೆ?’ ಎಂದು ಹೇಳಿಕೊಳ್ಳುವುದರಲ್ಲಿದೆ ಆ ಅಗೌರವ.
8 : ಕುರುಡಾದ ಪಶುಗಳನ್ನು ಬಲಿಯರ್ಪಿಸುವುದು ತಪ್ಪಲ್ಲವೆ? ಊನವಾದ ರೋಗದ ಪಶುಗಳನ್ನು ಅರ್ಪಿಸುವುದು ದೋಷವಲ್ಲವೇ? ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ಇಂಥದ್ದನ್ನು ನಿಮ್ಮ ರಾಜಪಾಲನಿಗೆ ಕಾಣಿಕೆಯಾಗಿ ಕೊಟ್ಟರೆ ಅವನು ನಿಮ್ಮನ್ನು ಮೆಚ್ಚುವನೋ ಅಥವಾ ನಿಮ್ಮ ಕೋರಿಕೆಯನ್ನು ನೆರವೇರಿಸುವನೋ?”
9 : ಆದುದರಿಂದ ಯಾಜಕರೇ, ದೇವರ ದಯೆ ನಿಮಗೆ ದೊರಕುವಂತೆ ಅವರನ್ನು ಒಲಿಸಿಕೊಳ್ಳಿರಿ. ಇಂಥ ಕಾಣಿಕೆ ನಿಮ್ಮ ಕೈಯಲ್ಲಿದ್ದರೆ ಯಾರಿಗಾದರು ದೇವರು ನಿಮ್ಮ ಕೋರಿಕೆಯನ್ನು ಈಡೇರಿಸುವುದುಂಟೋ? ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ:
10 : “ನನ್ನ ಬಲಿಪೀಠದ ಮೇಲೆ ಯಾರೂ ಜ್ಯೋತಿಯನ್ನು ವ್ಯರ್ಥವಾಗಿ ಬೆಳಗಿಸದಂತೆ ಮಹಾದೇವಾಲಯದ ಬಾಗಿಲನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೆಯದು. ನಾನು ನಿಮ್ಮನ್ನು ಮೆಚ್ಚಿಕೊಂಡಿಲ್ಲ. ನಿಮ್ಮ ಕೈಯಿಂದ ಕಾಣಿಕೆಗಳನ್ನು ನಾನು ಸ್ವೀಕರಿಸುವುದಿಲ್ಲ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
11 : “ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಸರ್ವರಾಷ್ಟ್ರಗಳಲ್ಲಿ ನನ್ನ ನಾಮಕ್ಕೆ ಮಹಿಮೆ ಸಲ್ಲುವುದು. ಎಲ್ಲೆಲ್ಲಿಯೂ ನನಗೆ ಧೂಪಾರತಿಯನ್ನೂ ಕಾಣಿಕೆಗಳನ್ನೂ ಜನರು ಅರ್ಪಿಸುವರು. ಹೌದು, ಸರ್ವರಾಷ್ಟ್ರಗಳಲ್ಲಿಯೂ ನನ್ನ ನಾಮಕ್ಕೆ ಮಹಿಮೆ ಸಲ್ಲುವುದು,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ.
12 : ನೀವಾದರೋ, ‘ಸರ್ವೇಶ್ವರಸ್ವಾಮಿಯ ಪೀಠ ಅಶುದ್ಧ; ಅದರ ಮೇಲಿನ ಆಹಾರಪದಾರ್ಥಗಳು ಅಸಹ್ಯ’ ಎಂದು ಹೇಳಿ ನನ್ನ ನಾಮಕ್ಕೆ ಅಪಕೀರ್ತಿ ತರುತ್ತೀರಿ.
13 : ಅಯ್ಯೋ, ಎಷ್ಟು ಬೇಸರವಾದುದು ಈ ಸೇವೆ’ ಎಂದುಕೊಂಡು ನೀವು ಅದನ್ನು ತಾತ್ಸಾರ ಮಾಡುತ್ತೀರಿ. “ಕಳವಿನ ಪಶುವನ್ನು, ರೋಗ ಹಿಡಿದ, ಊನವಾದ ಪ್ರಾಣಿಯನ್ನು ಅರ್ಪಿಸುತ್ತೀರಿ. ಇಂಥ ಕಾಣಿಕೆಯನ್ನು ನಿಮ್ಮ ಕೈಗಳಿಂದ ನಾನು ಸ್ವೀಕರಿಸಲೋ?” ಎಂದು ಕೇಳುತ್ತಾರೆ ಸೇನಾಧೀಶ್ವರ ಸರ್ವೇಶ್ವರ.
14 : “ತನ್ನ ಹಿಂಡಿನಲ್ಲಿರುವ ಗಂಡು ಪಶುವನ್ನು ಕೊಡುವುದಾಗಿ ಹರಕೆ ಹೊತ್ತು, ಬದಲಿಗೆ ಕಳಂಕವಾದ ಪಶುವನ್ನು ಸರ್ವೇಶ್ವರಸ್ವಾಮಿಗೆ ಬಲಿದಾನ ಮಾಡುವವನು ಮೋಸಗಾರ, ಅವನು ಶಾಪಗ್ರಸ್ತ. ನಾನೋ ರಾಜಾಧಿರಾಜ. ನನ್ನ ನಾಮಕ್ಕೆ ಅನ್ಯರಾಷ್ಟ್ರಗಳೂ ಭಯಪಡುತ್ತವೆ,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ.