1 : ಹದ್ರಾಕ್ ನಾಡಿಗೂ ದಮಸ್ಕ ಪಟ್ಟಣಕ್ಕೂ ವಿರುದ್ಧ ಸರ್ವೇಶ್ವರ ನುಡಿದ ದೈವೋಕ್ತಿ: ಸರ್ವೇಶ್ವರಸ್ವಾಮಿ ನರಮಾನವರ ಮೇಲೆ ಕಣ್ಣಿಟ್ಟಿದ್ದಾರೆ. ಹೌದು, ಇಸ್ರಯೇಲಿನ ಸಕಲ ಕುಲಗಳ ಮೇಲೆ ಕಣ್ಣಿಟ್ಟಿದ್ದಾರೆ.
2 : ಅಂತೆಯೇ ದಮಸ್ಕದ ಪಕ್ಕದಲ್ಲಿರುವ ಹಮಾತಿನ ಮೇಲೆ, ತಾವೇ ಜಾಣರೆಂದು ಕೊಚ್ಚಿಕೊಳ್ಳುತ್ತಿರುವ ಟೈರ್ ಮತ್ತು ಸಿದೋನ್ ಪಟ್ಟಣಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ.
3 : ಟೈರ್ ಪಟ್ಟಣವು ತನ್ನ ಸುತ್ತಲೂ ಗೋಡೆಯನ್ನು ಕಟ್ಟಿಕೊಂಡಿದೆ. ಬೆಳ್ಳಿಯನ್ನು ಮಣ್ಣುಮಸಿಯಂತೆ, ಬಂಗಾರವನ್ನು ಕಡ್ಡಿ ಕಸದಂತೆ ರಾಶಿಮಾಡಿಟ್ಟುಕೊಂಡಿದೆ.
4 : ಆದರೆ ಸರ್ವೇಶ್ವರ ಅದರ ಆಸ್ತಿಪಾಸ್ತಿಯನ್ನು ಕಿತ್ತುಕೊಂಡು ಅದೆಲ್ಲವನ್ನು ಸಮುದ್ರದಲ್ಲಿ ಎಸೆದುಬಿಡುವರು. ಆ ಪಟ್ಟಣವು ಬೆಂಕಿಗೆ ಆಹುತಿಯಾಗುವುದು.
5 : ಇದನ್ನು ಕಂಡು ಅಷ್ಕೆಲೋನ್ ಭಯದಿಂದ ನಡುಗುವುದು. ಗಾಜಾ ಪಟ್ಟಣ ಸಂಕಟದಿಂದ ಗೋಳಾಡುವುದು; ಎಕ್ರೋನ್ ನಿರಾಶೆಯಿಂದ ಪ್ರಲಾಪಿಸುವುದು; ಗಾಜಾಪಟ್ಟಣಕ್ಕೆ ರಾಜನೇ ಇಲ್ಲದಂತಾಗುವುದು. ಅಷ್ಕೆಲೋನ್ ನಿರ್ಜನ ಪ್ರದೇಶವಾಗುವುದು;
6 : ಅಷ್ಡೋದಿನಲ್ಲಿ ಮಿಶ್ರ ಜಾತಿಯವರು ವಾಸಮಾಡುವರು. ಸರ್ವೇಶ್ವರ ಇಂತೆನ್ನುತ್ತಾರೆ: “ಫಿಲಿಷ್ಟಿಯದ ಗರ್ವವನ್ನು ಅಡಗಿಸುವೆನು. ಅವರು ಸವಿಯುವ ರಕ್ತಸಿಕ್ತ ಮಾಂಸವನ್ನು ಅವರ ಬಾಯಿಂದ ಕಕ್ಕಿಸುವೆನು.
7 : ಅವರು ಕಚ್ಚುವ ನಿಷಿದ್ಧ ಪದಾರ್ಥಗಳನ್ನು ಅವರ ಹಲ್ಲುಗಳಿಂದ ಕಿತ್ತು ಹಾಕುವೆನು. ಅವರು ಸಹ ಇಸ್ರಯೇಲಿನ ದೇವರಿಗೆ ಮೀಸಲಾದ ಜನರಾಗುವರು; ಯೆಹೂದ್ಯ ಕುಲಗಳಲ್ಲಿ ಒಂದಾಗುವರು. ಎಕ್ರೋಮಿನವರು ಯೆಬೂಸಿಯರಂತೆ ಆಗುವರು.
8 : ಶತ್ರುಗಳು ಅತ್ತ ಕಾಲಿಡದಂತೆ ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಿರುವೆನು. ಯಾವ ಬಾಧಕನೂ ನನ್ನ ಜನರ ಮೇಲೆ ಧಾಳಿಮಾಡದಂತೆ ನಾನೇ ಕಣ್ಣಿಟ್ಟು ನೋಡಿಕೊಳ್ಳುವೆನು.”
9 : ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ
ನಿವಾಸಿಗಳೇ,
ಹರ್ಷೋದ್ಗಾರ ಮಾಡಿರಿ, ಜೆರುಸಲೇಮಿನ
ಜನಗಳೇ.
ಇಗೋ, ಬರುತಿಹನು ನಿಮ್ಮ ಅರಸನು
ನ್ಯಾಯವಂತನು, ಜಯಶೀಲನು ಆತನು
ವಿನಮ್ರನು, ಹೇಸರಗತ್ತೆಯನ್ನೇರಿ
ಸಾಗಿಬರುತಿಹನು.
10 : ಕಿತ್ತುಹಾಕುವೆನು ಎಫ್ರಯಿಮಿನ
ರಥಬಲವನು
ನಿಶ್ಯೇಷಮಾಡುವೆನು ಜೆರುಸಲೇಮಿನ
ಅಶ್ವಬಲವನು
ಮುರಿಯಲಾಗುವುದು ಯುದ್ಧದ
ಬಿಲ್ಲುಗಳನು.
ಘೋಷಿಸುವೆನು ಶಾಂತಿಯನು
ರಾಷ್ಟ್ರಗಳಿಗೆ
ಆತನ ರಾಜ್ಯಭಾರ ಸಮುದ್ರದಿಂದ
ಸಮುದ್ರದವರೆಗೆ
ಯೂಫ್ರೆಟಿಸ್ ನದಿಯಿಂದ ಭುವಿಯ
ಕಟ್ಟಕಡೆಯವರೆಗೆ.
11 : ರಕ್ತಸುರಿಸಿ ನೀವು ನನ್ನೊಡನೆ
ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ
ಕರೆತರುವೆನು ನಿಮ್ಮವರನು
ಸೆರೆಯಾಳತ್ವದಿಂದ
ಮೇಲೆತ್ತುವೆನು ನಿಮ್ಮವರನು ಆ
ಸೆರೆಬಾವಿಯಿಂದ.
12 : ನಂಬಿಕೆಯಿಂದ ಕಾದಿರುವ
ಸೆರೆಯಾಳುಗಳೇ,
ಹಿಂದಿರುಗಿರಿ ನಿಮ್ಮ ಸುಭದ್ರ
ದುರ್ಗಸ್ಥಾನಕೆ
ಇಗೋ, ಈಗಲೂ ಘೋಷಿಸುತ್ತಿರುವೆ:
ನಿಮಗಿಮ್ಮಡಿ ಸೌಭಾಗ್ಯ ನೀಡುವೆ.
13 : ಬಗ್ಗಿಸಿಕೊಂಡಿರುವೆ ಜುದೇಯ ಎಂಬ
ಬಿಲ್ಲನು
ಹೂಡಿರುವೆ ಅದರಲಿ ಎಫ್ರಯಿಮೆಂಬ
ಬಾಣವನು.
ಸಿಯೋನ್, ಎತ್ತಿಕಟ್ಟಿರುವೆ ನಿನ್ನವರನು
ಗ್ರೀಕರಿಗಿದಿರಾಗಿ
ಮಾಡುವೆ ನಿನ್ನನು ಶೂರನ ಕತ್ತಿಯನ್ನಾಗಿ.
14 : ಸ್ವಜನರಿಗೆ ಸರ್ವೇಶ್ವರ ಪ್ರತ್ಯಕ್ಷನಾಗುವನು
ಮಿಂಚಿನಂತೆ ಬಿಡುವನು ತನ್ನ ಬಾಣಗಳನು
ಮೊಳಗಿಸುವನು ಕಾಳಗದ ತುತೂರಿಯನು
ದಕ್ಷಿಣದ ಬಿರುಗಾಳಿಯೊಂದಿಗೆ
ಮುನ್ನುಗ್ಗುವನು.
15 : ರಕ್ಷಿಸುವನು ಸೇನಾಧೀಶ್ವರ ಸರ್ವೇಶ್ವರ
ತನ್ನ ಜನರನು
ನಸುಕಿ ನಾಶಮಾಡುವರವರು ಕವಣೆಗಾರ
ಶತ್ರುಗಳನು.
ಭೋರ್ಗರೆಯುವರು ಕುಡಿದು
ಅಮಲೇರಿದವರಂತೆ
ಇರುವರು ತುಂಬಿ ತುಳುಕುವ
ಬೋಗುಣಿಗಳಂತೆ
ರಕ್ತತೋಯ್ದ ವೇದಿಯ
ಮೂಲೆಮೂಲೆಗಳಂತೆ.
16 : ಸ್ವಜನರನು ದೇವ ಸರ್ವೇಶ್ವರ
ಕಾಪಾಡುವನು ಮೇಷಪಾಲನಂತೆ
ನಾಡಿನೊಳು ಥಳಥಳಿಸುವರವರು ಕಿರೀಟದ
ರತ್ನಗಳಂತೆ.
17 : ಆಹಾ! ಎಷ್ಟು ಸುಂದರ, ಎಷ್ಟು
ಮನೋಹರ ಆ ನಾಡಿನ ದೃಶ್ಯ !
ಪುಷ್ಟಿಗೊಳಿಸುವುವು
ಯುವಕಯುವತಿಯರನು
ದ್ರಾಕ್ಷೆ, ದವಸಧಾನ್ಯ !