Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೆಕರ್ಯ


1 : ನನಗೆ ಇನ್ನೊಂದು ದರ್ಶನವಾಯಿತು: ಇಗೋ, ಎರಡು ಬೆಟ್ಟಗಳ ನಡುವೆ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು. ಅವು ಕಂಚಿನ ಬೆಟ್ಟಗಳಾಗಿದ್ದವು.
2 : ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು, ಎರಡನೆಯ ರಥಕ್ಕೆ ಕಪ್ಪು ಕುದುರೆಗಳು,
3 : ಮೂರನೆಯ ರಥಕ್ಕೆ ಬಿಳೀ ಕುದುರೆಗಳು, ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು.
4 : ಆಗ, “ಸ್ವಾವಿೂ, ಇದೆಲ್ಲ ಏನು?” ಎಂದು ಸೂತ್ರಧಾರಿಯಾದ ದೂತನನ್ನು ಪ್ರಶ್ನಿಸಿದೆ.
5 : ಅದಕ್ಕೆ ದೂತನು, “ಇವು ಆಕಾಶದ ನಾಲ್ಕು ಮಾರುತಗಳು; ಭೂಲೋಕದೊಡೆಯನ ಸಾನ್ನಿಧ್ಯದಿಂದ ಇದೀಗಲೆ ಹೊರಟುಬಂದಿವೆ,” ಎಂದನು.
6 : ಕಪ್ಪು ಕುದುರೆಗಳ ರಥ ಉತ್ತರ ದೇಶಕ್ಕೆ ಹೊರಟಿತು. ಬಿಳಿ ಕುದುರೆಗಳ ರಥ ಅದನ್ನು ಹಿಂಬಾಲಿಸಿ ಪಶ್ಚಿಮಕ್ಕೆ ಹೋಯಿತು. ಮಚ್ಚೆ ಕುದುರೆಗಳ ರಥ ದಕ್ಷಿಣ ದೇಶಕ್ಕೆ ತೆರಳಿತು.
7 : “ಕೆಂಪು ಕುದುರೆಗಳು ಲೋಕದಲ್ಲೆಲ್ಲ ಗಸ್ತು ತಿರುಗಿ,” ಎಂದು ಅಪ್ಪಣೆ ಮಾಡಲು, ಅವು ಅಂತೆಯೇ ಮಾಡಿದವು.
8 : ಆಮೇಲೆ ದೂತನು ನನಗೆ, “ಉತ್ತರ ದೇಶಕ್ಕೆ ಹೊರಟ ಕುದುರೆಗಳ ರಥ ಸರ್ವೇಶ್ವರಸ್ವಾಮಿಯ ಕೋಪವನ್ನು ಶಮನಗೊಳಿಸಿದೆ,” ಎಂದು ಕೂಗಿ ಹೇಳಿದನು.
9 : ಸರ್ವೇಶ್ವರ ನನಗಿತ್ತ ಆದೇಶವಿದು:
10 : “ಈ ದಿನವೇ ಜೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗು. ಬಾಬಿಲೋನಿಗೆ ಸೆರೆಹೋಗಿ ಮರಳಿ ಬಂದಿಳಿದಿರುವ ಹೆಲ್ದಾಯ, ತೊಬೀಯ, ಯೆದಾಯ ಎಂಬವರಿಂದ ಕಾಣಿಕೆಯನ್ನು ಸ್ವೀಕರಿಸು.
11 : ಅವರಿಂದ ಪಡೆದ ಬೆಳ್ಳಿ ಬಂಗಾರಗಳನ್ನು ತೆಗೆದುಕೊಂಡು ಒಂದು ಕಿರೀಟವನ್ನು ಮಾಡಿಸು. ಅದನ್ನು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನ ತಲೆಗೆ ತೊಡಿಸು.
12 : ಮತ್ತು ಅವನಿಗೆ ಹೀಗೆಂದು ಹೇಳು: ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ಮೊಳಕೆಯೆಂಬ ಪುರುಷನು ಮೂಡುವನು! ಆತನು ಇದ್ದ ಸ್ಥಳದಲ್ಲಿಯೇ ಅರಳಿ ಸರ್ವೇಶ್ವರನ ಆಲಯವನ್ನು ಕಟ್ಟಿಸುವನು.
13 : ಹೌದು, ಅವನೇ ಸರ್ವೇಶ್ವರನ ಆಲಯವನ್ನು ಕಟ್ಟಿಸಿದ ಮೇಲೆ, ರಾಜವೈಭವವನ್ನು ತಾಳಿ ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು. ಯಾಜಕನೊಬ್ಬನು ಅವನ ಆಸ್ಥಾನದಲ್ಲಿರುವನು. ಅವರಿಬ್ಬರೂ ಶಾಂತಿಸಮಾಧಾನದಿಂದಿರುವರು.
14 : ಅವರ ಕಿರೀಟವು ಹೇಲಮ್, ತೊಬೀಯ, ಯೆದಾಯ ಮತ್ತು ಜೆಫನ್ಯನ ಮಗ ಹೇನ್ – ಇವರ ಜ್ಞಾಪಕಾರ್ಥವಾಗಿ ಆಲಯದಲ್ಲೇ ಇರುವುದು.”
15 : ದೂರದಲ್ಲಿ ವಾಸಿಸುವ ಜನರು ಅಲ್ಲಿಗೆ ಬಂದು ಸರ್ವೇಶ್ವರಸ್ವಾಮಿಯ ಆಲಯವನ್ನು ಕಟ್ಟುವುದಕ್ಕೆ ನೆರವಾಗುವರು. ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯೇ ಎಂಬುದು ನಿಮಗೆ ಮನದಟ್ಟಾಗುವುದು. ನಿಮ್ಮ ದೇವರಾದ ಆ ಸ್ವಾಮಿಯ ಮಾತನ್ನು ನೀವು ಮನಃಪೂರ್ವಕವಾಗಿ ಅನುಸರಿಸಿದರೆ ಇದೆಲ್ಲವೂ ಸರಿಯಾಗಿ ನೆರವೇರುವುದು.

· © 2017 kannadacatholicbible.org Privacy Policy