1 : ಪುನಃ ನಾನು ಕಣ್ಣೆತ್ತಿ ನೋಡಲು, ಇಗೋ, ಹಾರುತ್ತಿರುವ ಒಂದು ಸುರುಳಿ ಕಾಣಿಸಿತು.
2 : ದೂತನು ನನ್ನನ್ನು, “ನಿನಗೆ ಏನು ಕಾಣಿಸುತ್ತಿದೆ?” ಎಂದು ಕೇಳಿದನು. ಅದಕ್ಕೆ ನಾನು “ಹಾರುತ್ತಿರುವ ಪತ್ರದ ಸುರುಳಿ ಕಾಣಿಸುತ್ತಿದೆ. ಅದರ ಉದ್ದ ಒಂಬತ್ತು ಮೀಟರ್, ಅಗಲ ನಾಲ್ಕುವರೆ ಮೀಟರ್,” ಎಂದು ಉತ್ತರಕೊಟ್ಟೆ.
3 : ಆಗ ಅವನು ನನಗೆ “ನಾಡಿನ ಮೇಲೆ ಬಂದೆರಗಲಿರುವ ಶಾಪ ಅದರಲ್ಲಿ ಲಿಖಿತ ಆಗಿದೆ. ಒಂದು ಕಡೆ ಬರೆದಿರುವಂತೆ, ಪ್ರತಿಯೊಬ್ಬ ಕಳ್ಳನನ್ನು ನಾಡಿನಿಂದ ಹೊರದೂಡಲಾಗುವುದು. ಮತ್ತೊಂದು ಕಡೆ ಬರೆದಿರುವಂತೆ, ಸುಳ್ಳಾಣೆ ಇಡುವ ಪ್ರತಿಯೊಬ್ಬನನ್ನೂ ನಾಡಿನಿಂದ ಹೊರದೂಡಲಾಗುವುದು.
4 : ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ನಾನು ಶಾಪವನ್ನು ಕಳುಹಿಸುತ್ತೇನೆ. ಅದು ಕಳ್ಳನ ಮನೆಯನ್ನೂ ನನ್ನ ಹೆಸರೆತ್ತಿ ಸುಳ್ಳಾಣೆಯಿಡುವವನ ಮನೆಯನ್ನೂ ಹೊಕ್ಕು, ಅಲ್ಲಿ ತಂಗಿದ್ದು ಅದನ್ನು ಕಲ್ಲುಮರ ಸಹಿತ ಸಂಪೂರ್ಣವಾಗಿ ಭಸ್ಮಮಾಡುವುದು,” ಎಂದನು.
5 : ಅನಂತರ ಸೂತ್ರಧಾರಿಯಾದ ದೂತನು ನನ್ನ ಬಳಿ ಬಂದು: “ಮತ್ತೊಂದು ಏನೋ ಬರುತ್ತಿದೆ, ನೋಡು,” ಎಂದನು.
6 : “ಏನದು?” ಎಂದು ನಾನು ವಿಚಾರಿಸಲು, ಅವನು, “ನಿನಗೆ ಕಾಣಿಸುತ್ತಿರುವ ಆ ವಸ್ತು ಒಂದು ಕೊಳಗದ ಪಾತ್ರೆ,” ಎಂದನು. ಅಲ್ಲದೆ, “ಅದು ಇಡೀ ನಾಡಿನ ಅಧರ್ಮದ ಪ್ರತೀಕ,” ಎಂದನು.
7 : ಆಗ ಕೊಳಗದ ತಟ್ಟೆಯಾಕಾರದ ಮುಚ್ಚಳವು ತೆಗೆಯಲಾಯಿತು. ಇಗೋ, ಅದರಲ್ಲಿ ಮಹಿಳೆಯೊಬ್ಬಳು ಕುಳಿತಿದ್ದಳು.
8 : ಸೂತ್ರಧಾರಿಯಾದ ದೂತನು: “ಇವಳೇ ಪಾಪದ ಪ್ರತೀಕ,” ಎಂದು ಹೇಳಿ, ಅವಳನ್ನು ಕೊಳಗದೊಳಗೆ ಅದುಮಿ, ಭಾರವಾದ ಆ ಸೀಸದ ಮುಚ್ಚಳವನ್ನು ತಟ್ಟನೆ ಕೊಳಗದ ಬಾಯಿಗಿಟ್ಟು ಮುಚ್ಚಿಬಿಟ್ಟನು.
9 : ಪುನಃ ನಾನು ಕಣ್ಣೆತ್ತಿ ನೋಡಲು, ಇಗೋ, ಕೊಕ್ಕರೆಯ ರೆಕ್ಕೆಗಳಂತಿರುವ ರಭಸವಾದ ರೆಕ್ಕೆಗಳುಳ್ಳ ಇಬ್ಬರು ಮಹಿಳೆಯರು ಬರುತ್ತಿರುವುದನ್ನು ಕಂಡೆನು. ಅವರು ಕೊಳಗದ ಪಾತ್ರೆಯನ್ನು ಎತ್ತಿಕೊಂಡು ಹಾರಿಹೋದರು.
10 : “ಅವರು ಕೊಳಗವನ್ನು ಎಲ್ಲಿಗೆ ಎತ್ತಿಕೊಂಡು ಹೋಗುತ್ತಿದ್ದಾರೆ?” ಎಂದು ನಾನು ಕೇಳಿದೆ.
11 : ಅದಕ್ಕೆ ಸೂತ್ರಧಾರಿಯಾದ ದೂತನು, “ಬಾಬಿಲೋನಿಯಾ ದೇಶಕ್ಕೆ: ಅಲ್ಲಿ ಅವಳಿಗೆ ಗುಡಿಕಟ್ಟುವುದಕ್ಕಾಗಿ ಹೋಗುತ್ತಿದ್ದಾರೆ. ಅದು ಸಿದ್ಧವಾದಾಗ ಅಲ್ಲಿನ ಪೀಠದ ಮೇಲೆ ಆ ಕೊಳಗವನ್ನು ಪ್ರತಿಷ್ಠಾಪಿಸಲಾಗುವುದು,” ಎಂದನು.