1 : ಅನಂತರ ಸೂತ್ರಧಾರಿಯಾದ ದೂತನು ಮತ್ತೆ ಬಂದು ನಿದ್ರೆ ಹತ್ತಿದವನಂತಿದ್ದ ನನ್ನನ್ನು ಎಚ್ಚರಗೊಳಿಸಿದನು.
2 : “ಏನನ್ನು ನೋಡುತ್ತಿರುವೆ?” ಎಂದು ಅವನು ನನ್ನನ್ನು ಕೇಳಿದಾಗ ನಾನು, “ಇಗೋ, ಏಳು ದೀಪಗಳುಳ್ಳ ಸುವರ್ಣಮಯ ದೀಪಸ್ತಂಭವೊಂದನ್ನು ನೋಡುತ್ತಿದ್ದೇನೆ. ಅದರ ಮೇಲ್ಗಡೆ ಎಣ್ಣೆಯ ಪಾತ್ರೆ ಇದೆ. ಅದರ ಮೇಲೆ ದೀಪಗಳಿಗೆ ಏಳು ನಾಳಗಳಿವೆ.
3 : ದೀಪಸ್ತಂಭದ ಪಕ್ಕದಲ್ಲಿ ಬಲಗಡೆ ಒಂದು, ಎಡಗಡೆ ಇನ್ನೊಂದು - ಹೀಗೆ ಎರಡು ಎಣ್ಣೆಯ ಮರಗಳಿವೆ,” ಎಂದನು.
4 : ಸೂತ್ರಧಾರಿ ಆದ ಆ ದೂತನನ್ನು “ಸ್ವಾವಿೂ, ಇದು ಏನನ್ನು ಸೂಚಿಸುತ್ತದೆ?” ಎಂದು ಕೇಳಿದೆ.
5 : ಅದಕ್ಕೆ ಆ ದೂತನು, “ಇದು ಏನೆಂದು ನಿನಗೆ ತಿಳಿಯುವುದಿಲ್ಲವೋ?” ಎಂದು ಪ್ರಶ್ನಿಸಿದನು. ಅದಕ್ಕೆ ನಾನು “ಇಲ್ಲ ಸ್ವಾವಿೂ” ಎಂದು ಉತ್ತರಕೊಟ್ಟೆ.
6 : ಆಗ ದೂತನು “ಈ ಸ್ತಂಭದಲ್ಲಿರುವ ಏಳು ದೀಪಗಳು ಭೂಲೋಕದ ಎಲ್ಲಾ ಭಾಗಗಳನ್ನು ವೀಕ್ಷಿಸುವ ಸರ್ವೇಶ್ವರಸ್ವಾಮಿಯ ಏಳು ಕಣ್ಣುಗಳನ್ನು ಸೂಚಿಸುತ್ತವೆ,” ಎಂದನು.
7 : ಪುನಃ ನಾನು ದೇವದೂತನನ್ನು, “ದೀಪಸ್ತಂಭದ ಎಡಬಲಗಳಲ್ಲಿರುವ ಎಣ್ಣೆಮರಗಳು ಏನನ್ನು ಸೂಚಿಸುತ್ತವೆ?” ಎಂದು ಕೇಳಿದೆ.
8 : (ಮತ್ತೆ ಅವನನ್ನು – “ತಮ್ಮೊಳಗಿಂದ ಚಿನ್ನದಂಥ ಎಣ್ಣೆಯನ್ನು ಪಾತ್ರೆಯಲ್ಲಿ ತುಂಬಿಸುವ ಎರಡು ಬಂಗಾರದ ನಾಳಗಳಿವೆಯಲ್ಲಾ; ಆ ನಾಳಗಳ ಬಾಯಿಗೆ ಸೇರಿರುವ ಎರಡು ಎಣ್ಣೆ ಕಾಯಿಗುತ್ತಿಗಳು ಏನು?” ಎಂದು ಕೇಳಿದೆ.)
9 : ಅದಕ್ಕೆ ಆ ದೂತನು: “ಅವು ಏನೆಂದು ನಿನಗೆ ತಿಳಿಯುವುದಿಲ್ಲವೋ” ಎಂದು ಕೇಳಿದಾಗ ನಾನು: “ಇಲ್ಲ ಸ್ವಾವಿೂ,” ಎಂದೆ.
10 : ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷಿಕ್ತರಾದ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ” ಎಂದನು.
11 : ದೂತನು ನನಗೆ ಹೀಗೆಂದು ಹೇಳಿದನು: “ಜೆರುಬ್ಬಾಬೆಲನಿಗೆ ಈ ಸಂದೇಶವನ್ನು ಕೊಡು - ನಿನಗೆ ಜಯದೊರಕುವುದು. ನಿನ್ನ ಶಕ್ತಿ ಸಾಮಥ್ರ್ಯದಿಂದಲ್ಲ, ಸೇನಾಬಲದಿಂದಲೂ ಅಲ್ಲ; ನನ್ನ ಆತ್ಮ ಶಕ್ತಿಯಿಂದ. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
12 : ಅಡ್ಡಿ ಅಡಚಣೆಗಳು ಬೆಟ್ಟದಂತಿದ್ದರೂ ನೀನು ದೇವಾಲಯವನ್ನು ಕಟ್ಟುವೆ. ಅಂತ್ಯದಲ್ಲಿ ಕಲಶವನ್ನು ಸ್ಥಾಪಿಸುವಾಗ ಜನರು ‘ಎಷ್ಟು ರಮ್ಯ! ಎಷ್ಟು ಸುಂದರ!’ ಎಂದು ಉದ್ಗರಿಸುವರು.”
13 : ಸರ್ವೇಶ್ವರ ನನಗೆ ಇನ್ನೊಂದು ಸಂದೇಶವಿತ್ತರು: “ಜೆರುಬ್ಬಾಬೆಲನು ಮಹಾದೇವಾಲಯದ ಕಟ್ಟಡಕ್ಕೆ ಅಸ್ತಿಭಾರವನ್ನು ಹಾಕಿದ್ದಾನೆ. ಆ ಕಟ್ಟಡವನ್ನು ಅವನೇ ಪೂರೈಸುವನು. ನಿನ್ನನ್ನು ಜನರ ಬಳಿಗೆ ಕಳುಹಿಸಿದಾತ ಸೇನಾಧೀಶ್ವರ ಸರ್ವೇಶ್ವರ ಎಂದು ಆಗ ಸರ್ವರಿಗೆ ಗೊತ್ತಾಗುವುದು.
14 : ಪ್ರಾರಂಭದಲ್ಲಿ ಚಿಕ್ಕ ಕಾರ್ಯಗಳನ್ನು ನೋಡಿ ಪರಿಹಾಸ್ಯ ಮಾಡಿದವರು ಆಗ ಜೆರುಬ್ಬಾಬೆಲನ ಕೈಯಲ್ಲಿ ಅಳತೆನೂಲಿನ ಗುಂಡನ್ನು ಕಂಡು ಸಂತೋಷಪಡುವರು.”