1 : ಮತ್ತೊಂದು ದರ್ಶನದಲ್ಲಿ ಪ್ರಧಾನ ಯಾಜಕನಾದ ಯೆಹೋಶುವನು ದೂತನ ಮುಂದೆ ನಿಂತಿರುವುದನ್ನು ಸರ್ವೇಶ್ವರ ನನಗೆ ತೋರಿಸಿದರು. ಯೆಹೋಶುವನಿಗೆ ಪ್ರತಿವಾದಿಯಾಗಿ ಸೈತಾನನು ಅವನ ಪಕ್ಕದಲ್ಲಿ ನಿಂತಿದ್ದ.
2 : ಆಗ ಸರ್ವೇಶ್ವರಸ್ವಾಮಿಯ ದೂತನು ಸೈತಾನನಿಗೆ: “ಸೈತಾನನೇ, ಸರ್ವೇಶ್ವರ ನಿನ್ನನ್ನು ಖಂಡಿಸಲಿ, ಜೆರುಸಲೇಮನ್ನು ಆರಿಸಿಕೊಂಡ ಸರ್ವೇಶ್ವರ ನಿನ್ನನ್ನು ಖಂಡಿಸಲಿ, ಈತ ಒಲೆಯಿಂದ ಹಿರಿದ ಬೆಂಕಿಕೊಳ್ಳಿ” ಎಂದನು.
3 : ದೇವದೂತನ ಮುಂದೆ ನಿಂತಿದ್ದ ಯೆಹೋಶುವನು ಮಲಿನವಾದ ಬಟ್ಟೆಯನ್ನು ಧರಿಸಿದ್ದನು.
4 : ತನ್ನ ಮುಂದೆ ನಿಂತಿದ್ದ ಸೇವಕರಿಗೆ ಆ ದೂತನು, “ಈತನ ಮಲಿನವಾದ ಬಟ್ಟೆಗಳನ್ನು ತೆಗೆದು ಬಿಡಿ,” ಎಂದನು. ಅನಂತರ ಯೆಹೋಶುವನಿಗೆ, “ನಿನ್ನ ದೋಷವನ್ನು ತೊಲಗಿಸಿದ್ದೇನೆ. ಶ್ರೇಷ್ಠವಾದ ಬಟ್ಟೆಗಳನ್ನು ನಿನಗೆ ತೊಡಿಸುವೆನು,” ಎಂದನು.
5 : “ಇವನ ತಲೆಗೆ ಶುಭ್ರವಾದ ಪೇಟವನ್ನು ಸುತ್ತಿರಿ,” ಎಂದು ಆ ದೂತನು ಅಪ್ಪಣೆ ಮಾಡಲು, ಸೇವಕರು ಯೆಹೋಶುವನ ತಲೆಗೆ ಪೇಟವನ್ನು ಸುತ್ತಿ ಶುಭ್ರ ವಸ್ತ್ರಗಳನ್ನು ತೊಡಿಸಿದರು. ದೇವದೂತನು ಅಲ್ಲಿಯೇ ನಿಂತಿದ್ದನು.
6 : ಬಳಿಕ ದೇವದೂತನು ಯೆಹೋಶುವನಿಗೆ ಈ ಆಶ್ವಾಸನೆಯನ್ನು ಕೊಟ್ಟನು:
7 : “ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ನೀನು ನನ್ನ ಮಾರ್ಗದಲ್ಲಿ ನಡೆದು, ನಾನು ನಿನಗೆ ವಹಿಸಿದ ಕಾರ್ಯವನ್ನು ನೆರವೇರಿಸಿದರೆ, ನನ್ನ ಆಲಯದ ಮುಖ್ಯಾಧಿಕಾರಿಯಾಗುವೆ. ಅದರ ವ್ಯಾಪ್ತಿಯಲ್ಲಿ ಉಳ್ಳ ಎಲ್ಲದಕ್ಕೂ ವ್ಯವಸ್ಥಾಪಕನಾಗುವೆ. ಈ ಸನ್ನಿಧಾನದ ದೂತರ ಮಧ್ಯೆ ಬಂದು ಹೋಗುವ ಹಕ್ಕನ್ನು ನಿನಗೆ ಕೊಡುವೆನು.
8 : ಪ್ರಧಾನ ಯಾಜಕನಾದ ಯೆಹೋಶುವನೇ, ನೀನೂ ಮತ್ತು ನಿನ್ನ ಜೊತೆಯಲ್ಲಿ ಉಪಸ್ಥಿತರಾದ ಸಹಯಾಜಕರೂ, ಕೇಳಲಿ: ನೀವು ಶುಭದಿನಗಳ ಮುಂಗುರುತು. ‘ಮೊಳಕೆ’ ಎಂಬ ಸೇವಕನೊಬ್ಬನು ಕಾಣಿಸಿಕೊಳ್ಳುವಂತೆ ಮಾಡುವೆನು.
9 : ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡಿ. ಆ ಒಂದೇ ಕಲ್ಲಿನಲ್ಲಿ ಏಳು ಮುಖಗಳು ಇರುವ ಒಂದು ಕೆತ್ತನೆಯನ್ನು ಕೆತ್ತುವೆನು. ಒಂದೇ ದಿನದಲ್ಲಿ ಈ ನಾಡಿನ ಪಾಪವನ್ನು ತೊಡೆದು ಹಾಕುವೆನು.
10 : ಆ ದಿನದಂದು ನೀವೆಲ್ಲರೂ ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆಗಳ ಹಾಗೂ ಅಂಜೂರದ ಗಿಡಗಳ ನೆರಳಿನಲ್ಲಿ ಸಮಾಧಾನದಿಂದ ವಿಶ್ರಮಿಸಲು ಕರೆಯುವಿರಿ. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.”