1 : ಇಗೋ, ಸರ್ವೇಶ್ವರ ನೇಮಿಸಿದ ದಿನ ಬರುತ್ತಿದೆ. ಆಗ ಜೆರುಸಲೇಮಿನ ಆಸ್ತಿ ಪಾಸ್ತಿ ಸೂರೆಯಾಗುವುದು. ಮತ್ತು ಸೂರೆಯಾದದ್ದೆಲ್ಲ ಅವರ ಕಣ್ಮುಂದೆ ಪಾಲುಪಾಲಾಗುವುದು.
2 : ಜೆರುಸಲೇಮಿಗೆ ಎದುರಾಗಿ ಹೋರಾಡಲು ಅನ್ಯರಾಷ್ಟ್ರಗಳನ್ನು ಒಂದುಗೂಡಿಸುವೆನು. ಅವು ಆ ನಗರವನ್ನು ಆಕ್ರಮಿಸಿ, ಮನೆಗಳನ್ನು ಸೂರೆಮಾಡಿ, ಹೆಂಗಸರ ಮೇಲೆ ಅತ್ಯಾಚಾರವೆಸಗುವರು. ಅರ್ಧಕ್ಕೆ ಅರ್ಧ ಜನ ಸೆರೆಹೋಗುವರು. ಮಿಕ್ಕವರು ಅಲ್ಲೇ ಸುರಕ್ಷಿತವಾಗಿರುವರು.
3 : ಅನಂತರ ಪೂರ್ವಕಾಲದಲ್ಲಿ ನಡೆದಂತೆ, ಸರ್ವೇಶ್ವರ ಹೊರಟುಬಂದು ಆ ರಾಷ್ಟ್ರಗಳಿಗೆ ವಿರುದ್ಧವಾಗಿ ಪ್ರತಿಭಟಿಸುವರು.
4 : ಅವರ ಪಾದಗಳು ಜೆರುಸಲೇಮಿಗೆ ಪೂರ್ವಕ್ಕಿರುವ ಓಲಿವ್ ಗುಡ್ಡದ ಮೇಲೆ ನಿಲ್ಲುವುದು. ಆ ಗುಡ್ಡವು ಇಬ್ಭಾಗವಾಗಿ ಪೂರ್ವಪಶ್ಚಿಮದ ಉದ್ದಕ್ಕೂ ಇನ್ನರ್ಧ ಭಾಗವು ದಕ್ಷಿಣಕ್ಕೂ ಸರಿದುಕೊಳ್ಳುವುದು.
5 : ನೀವು ಆ ಗುಡ್ಡಗಳ ನಡುವೆ ಉಂಟಾಗುವ ಕಣಿವೆಯ ಮೂಲಕ ಪಲಾಯನಗೈಯುವಿರಿ. ಆ ಕಣಿವೆ ಆಚೆಲಿನವರೆಗೆ ಹಬ್ಬಿರುವುದು. ಜುದೇಯದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪವಾದಾಗ ನೀವು ಮಾಡಿದಂತೆ ಪಲಾಯನ ಗೈಯುವಿರಿ. ಆಗ ನನ್ನ ದೇವರಾದ ಸರ್ವೇಶ್ವರ ತಮ್ಮ ದೂತರ ಸಮೇತ ಬರುವರು.
6 : ಆ ದಿನ ಬಂದಾಗ ಚಳಿಯಾಗಲೀ ಮಂಜಾಗಲೀ ಇರದು. ಕತ್ತಲು ಕವಿಯದು.
7 : ಹಗಲಿರುಳು ಎನ್ನದೆ ನಿರಂತರವೂ ಬೆಳಕಾಗುವುದು. ಸಂಜೆಯು ಸಹ ಪ್ರಕಾಶಮಯವಾಗಿರುವುದು. ಆದರೆ ಇದು ಯಾವಾಗ ಸಂಭವಿಸುವುದೆಂಬುದು ಸರ್ವೇಶ್ವರ ಸ್ವಾಮಿಗೆ ಮಾತ್ರ ತಿಳಿದಿರುವುದು.
8 : ಆ ದಿನ ಬಂದಾಗ ಜೀವಜಲವು ಜೆರುಸಲೇಮಿನಿಂದ ಹರಿಯುವುದು. ಅದರ ಅರ್ಧಭಾಗ ಪೂರ್ವದ ಸಮುದ್ರಕ್ಕೂ ಇನ್ನರ್ಧಭಾಗ ಪಶ್ಚಿಮದ ಸಮುದ್ರಕ್ಕೂ ಹರಿಯುವುದು. ಮಳೆ, ಬೇಸಿಗೆ ಎನ್ನದೆ ಪ್ರವಾಹ ಹರಿಯುತ್ತಲೇ ಇರುವುದು.
9 : ಆಗ ಸರ್ವೇಶ್ವರ ಜಗಕ್ಕೆಲ್ಲಾ ಅರಸರಾಗಿರುವರು. ಅವರೊಬ್ಬರೇ ದೇವರೆಂದು, ಅವರ ಹೆಸರೊಂದೇ ಸ್ತುತ್ಯಾರ್ಹವೆಂದು ಎಲ್ಲರಿಗೂ ತಿಳಿದಿರುವುದು.
10 : ಉತ್ತರದಲ್ಲಿರುವ ಗೆಬದಿಂದ ದಕ್ಷಿಣದಲ್ಲಿರುವ ರಿಮ್ಮೋನಿನವರೆಗೆ ನಾಡೆಲ್ಲ ಸಮತಟ್ಟಾಗಿರುವುದು. ಜೆರುಸಲೇಮ್ ನಗರ ಮಾತ್ರ ಸುತ್ತಮುತ್ತಲಿನ ಪ್ರದೇಶಗಳಿಗಿಂತ ಎತ್ತರವಾಗಿ ನಿಲ್ಲುವುದು. ಒಂದು ಕಡೆ ಬೆನ್ಯಾಮಿನ್ ಬಾಗಿಲಿನಿಂದ ಪೂರ್ವಕಾಲದ ಮೂಲೆಯ ಬಾಗಿಲ ತನಕವೂ ಹನನೇಲಿನ ಗೋಪುರದಿಂದ ಅರಸನ ದ್ರಾಕ್ಷೆಯ ಆಲೆಗಳ ಪರಿಯಂತವೂ ಹರಡಿರುವುದು.
11 : ಅದರಲ್ಲಿ ಜನರು ಸುರಕ್ಷಿತವಾಗಿ ವಾಸಿಸುವರು. ಇನ್ನು ಶಾಪಕ್ಕೆ ತುತ್ತಾಗದೆ ಜನರು ನೆಮ್ಮದಿಯಾಗಿ ನೆಲೆಗೊಂಡಿರುವರು.
12 : ಜೆರುಸಲೇಮಿನ ಮೇಲೆ ಮುತ್ತಿಗೆ ಹಾಕುವ ಸಕಲ ರಾಷ್ಟ್ರಗಳಿಗೂ ಸರ್ವೇಶ್ವರ ಭಯಂಕರ ವ್ಯಾಧಿಯೊಂದು ತಗಲುವಂತೆ ಮಾಡುವರು. ಜೀವದಿಂದಿರುವಾಗಲೇ ಜನರ ದೇಹ ಕೊಳೆತುಹೋಗುವುದು. ಕಣ್ಣು ಗುಣಿಯಲ್ಲೇ ಇಂಗಿಹೋಗುವುದು. ನಾಲಗೆ ಬಾಯಲ್ಲೇ ಬತ್ತಿಹೋಗುವುದು.
13 : ಸರ್ವೇಶ್ವರ ಆ ದಿನದಂದು ನಾಡಿನಲ್ಲಿ ಕೋಲಾಹಲವನ್ನೆಬ್ಬಿಸಲು, ಜನರು ಭಯಭೀತಿಗೆ ಒಳಗಾಗುವರು. ಒಬ್ಬರನ್ನೊಬ್ಬರು ತಡೆಹಿಡಿದು ಹೊಡೆದಾಡುವರು.
14 : ಜುದೇಯವು ಜೆರುಸಲೇಮಿನ ಪರವಾಗಿ ಯುದ್ಧಮಾಡುವುದು. ಸುತ್ತಮುತ್ತಲಿನ ರಾಷ್ಟ್ರಗಳ ಆಸ್ತಿಯನ್ನೆಲ್ಲಾ - ಬೆಳ್ಳಿ ಬಂಗಾರ, ಬಟ್ಟೆಬರೆಗಳನ್ನೆಲ್ಲಾ ರಾಶಿರಾಶಿಯಾಗಿ ದೋಚಿಕೊಳ್ಳಲಾಗುವುದು.
15 : ನಾಡಿನ ಜನರಿಗೆ ತಗಲುವಂಥ ವ್ಯಾಧಿಯೇ ಕುದುರೆ, ಹೇಸರಗತ್ತೆ, ಒಂಟೆ, ಕತ್ತೆ ಮುಂತಾದ ಪಾಳೆಯದಲ್ಲಿನ ಎಲ್ಲ ಪಶುಪ್ರಾಣಿಗಳಿಗೂ ತಗಲುವುದು.
16 : ಅನಂತರ ಜೆರುಸಲೇಮಿಗೆ ಮುತ್ತಿಗೆ ಹಾಕಿದ ರಾಷ್ಟ್ರಗಳಲ್ಲಿ ಅಳಿದುಳಿದವರೆಲ್ಲರು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ರಾಜಾಧಿರಾಜನೆಂದು ಆರಾಧಿಸುವುದಕ್ಕೂ ಪರ್ಣಕುಟೀರಗಳ ಹಬ್ಬವನ್ನು ಆಚರಿಸುವುದಕ್ಕೂ ಪ್ರತಿವರ್ಷ ಅಲ್ಲಿಗೆ ಬರುವರು.
17 : ಜನಾಂಗಗಳಲ್ಲಿ ಯಾರಾದರೂ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯನ್ನು ರಾಜಾಧಿರಾಜನೆಂದು ಆರಾಧಿಸಲು ಬಾರದೆ ಹೋದರೆ, ಅವರಿಗೆ ಮಳೆಯೇ ಬರದು.
18 : ಈಜಿಪ್ಟಿನ ಮನೆತನದವರು ಬಾರದೆಹೋದರೆ, ಪರ್ಣಕುಟೀರಗಳ ಹಬ್ಬವನ್ನು ಆಚರಿಸಲು ಬಾರದ ರಾಷ್ಟ್ರಗಳಿಗೆ ಸರ್ವೇಶ್ವರ ವಿಧಿಸುವ ದಂಡನೆ ಅವರಿಗೂ ತಗಲುವುದು.
19 : ಈಜಿಪ್ಟಿಗೂ ಪರ್ಣಕುಟೀರಗಳ ಹಬ್ಬವನ್ನು ಆಚರಿಸಲು ಬಾರದ ಸಕಲ ರಾಷ್ಟ್ರಗಳಿಗೂ ಸಂಭವಿಸುವ ದಂಡನೆ ಇದೇ.
20 : ಆ ದಿನ ಬಂದಾಗ ‘ಸರ್ವೇಶ್ವರಸ್ವಾಮಿಗೆ ಸಮರ್ಪಿತ’ ಎಂಬ ಲಿಪಿಯು ಕುದುರೆಗಳ ಕತ್ತಿಗೆ ಕಟ್ಟಿರುವ ಗಂಟೆಗಳ ಮೇಲೆ ಕೆತ್ತನೆ ಮಾಡಲಾಗಿರುವುದು. ದೇವಾಲಯದ ಪಾತ್ರೆಗಳೆಲ್ಲವು ಬಲಿಪೀಠದ ಪಾತ್ರೆಗಳಷ್ಟೆ ಪವಿತ್ರವಾಗಿರುವುವು.
21 : ಜೆರುಸಲೇಮಿನಲ್ಲಿಯೂ ಜುದೇಯದಲ್ಲಿಯೂ ಇರುವ ಸಕಲ ಅಡಿಗೆಪಾತ್ರೆಗಳು ಸರ್ವೇಶ್ವರಸ್ವಾಮಿಗೆ ಸಮರ್ಪಿತವಾಗಿರುವುವು. ಬಲಿಯನ್ನರ್ಪಿಸಲು ಬರುವವರೆಲ್ಲರೂ ಬಲಿಪಶುವಿನ ಮಾಂಸವನ್ನು ಬೇಯಿಸಲು ಆ ಪಾತ್ರೆಗಳನ್ನು ಬಳಸುವರು. ಆ ದಿನ ಬಂದಾಗ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಆಲಯದಲ್ಲಿ ಯಾವ ವರ್ತಕನೂ ಇರನು.