Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೆಕರ್ಯ


1 : ಸೇನಾಧೀಶ್ವರ ಸರ್ವೇಶ್ವರ ಹೀಗೆ ಹೇಳುತ್ತಾರೆ: “ಆ ದಿನದಂದು ದಾವೀದ ವಂಶದವರಿಗೆ ಮತ್ತು ಜೆರುಸಲೇಮಿನವರಿಗೆ ಪಾಪದ ಅಶುದ್ಧತೆಯನ್ನು ಪರಿಹರಿಸಬಲ್ಲ ಒಂದು ಬುಗ್ಗೆ ಕಾಣಿಸಿಕೊಳ್ಳುವುದು.
2 : ಅಂದು ನಾಡಿನಲ್ಲಿ ವಿಗ್ರಹಗಳು ಹೆಸರಿಲ್ಲದಂತೆ ಮಾಡುವೆನು; ಅಷ್ಟೇ ಅಲ್ಲ, ಅವುಗಳನ್ನು ಯಾರೂ ನೆನಸಿಕೊಳ್ಳದಂತೆ ಮಾಡುವೆನು; ಅಲ್ಲದೆ ಪ್ರವಾದಿಯೆನಿಸಿಕೊಳ್ಳುವವರನ್ನೂ ಅಶುದ್ಧ ಆತ್ಮವನ್ನೂ ನಾಡಿನಿಂದ ತೊಲಗಿಸಿಬಿಡುವೆನು.
3 : ಯಾವನಾದರೂ ಪ್ರವಾದನೆ ಮಾಡಲು ಯತ್ನಿಸಿದರೆ, ಅವನ ತಾಯಿತಂದೆಗಳೇ, “ಇವನು ಸರ್ವೇಶ್ವರ ಸ್ವಾಮಿಯ ಹೆಸರೆತ್ತಿ ಸುಳ್ಳಾಡುವುದರಿಂದ ಅವನು ಬದುಕಬಾರದು,” ಎಂದು ಹೇಳುವರು. ಅಷ್ಟೇ ಅಲ್ಲ, ಅವನು ಮಾಡಿದ ಪ್ರವಾದನೆಯ ನಿಮಿತ್ತ ಅವರೇ ಅವನನ್ನು ತಿವಿದು ಕೊಂದುಹಾಕುವರು.
4 : “ಆ ದಿನದಲ್ಲಿ ಯಾವ ಪ್ರವಾದಿಯೂ ತನಗಾಗಿರಬಹುದಾದ ದರ್ಶನಗಳನ್ನು ಪ್ರಕಟಿಸಲು ಹೆಮ್ಮೆಪಡುವುದಿಲ್ಲ. ಪ್ರವಾದಿಯಂತೆ ನಟಿಸುವುದಿಲ್ಲ. ಪ್ರವಾದಿಯ ವೇಷವನ್ನು ಧರಿಸುವುದಿಲ್ಲ
5 : ಬದಲಿಗೆ, ತಾನು ಪ್ರವಾದಿಯಲ್ಲ, ಹೊಲದಲ್ಲಿ ಕೆಲಸಮಾಡುವವನು, ಚಿಕ್ಕಂದಿನಿಂದ ನಾನು ಕೂಲಿಯಾಳು, ಎಂದುಕೊಳ್ಳುವನು.
6 : ‘ನಿನ್ನ ಮೈಮೇಲಿನ ಗಾಯಗಳು ಹೇಗಾದವು?’ ಎಂದು ಯಾರಾದರೂ ಕೇಳಿದರೆ, ‘ಇವು ಗೆಳೆಯನ ಮನೆಯಲ್ಲಾದ ಗಾಯಗಳು’ ಎಂದು ಉತ್ತರಕೊಡುವನು.”
7 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಕುರಿಗಾಹಿಗೆ ವಿರುದ್ಧವಾಗಿ, ನನ್ನಾ ಸಂಗಡಿಗನಿಗೆದುರಾಗಿ, ಓ ಖಡ್ಗವೇ, ಎಚ್ಚರಗೊಳ್ಳು; ಕೊಲ್ಲು ಕುರಿಗಾಹಿಯನು. ಆಗ ಚದರುವುವು ಕುರಿಗಳು, ಕೈ ಮಾಡಲಿರುವೆ ಮರಿಗಳ ಮೇಲೂ.
8 : ಹತರಾಗುವರು ನಾಡಿನ ಮೂರರಲ್ಲೆರಡು ಭಾಗದವರು, ಮೂರನೆಯ ಭಾಗದವರು ಉಳಿಯುವರಲ್ಲಿ. ಸರ್ವೇಶ್ವರಸ್ವಾಮಿಯ ನುಡಿಯಿದು.
9 : ಹಾಕುವೆನಾ ಮೂರನೇ ಭಾಗದವರನ್ನು ಬೆಂಕಿಗೆ, ಶೋಧಿಸುವೆನು ಅವರನ್ನು ಬೆಳ್ಳಿಯ ಹಾಗೆ. ಶುದ್ಧೀಕರಿಸುವೆನು ಬಂಗಾರದ ಹಾಗೆ. ಕಿವಿಗೊಡುವೆ ನನ್ನ ಹೆಸರೆತ್ತಿ ಪ್ರಾರ್ಥಿಸುವವರಿಗೆ. ಹೇಳುವೆನು, ‘ಇವರೇ ನನ್ನ ಪ್ರಜೆ’ಯೆಂದು. ಹೇಳುವರವರು ‘ಸರ್ವೇಶ್ವರನೇ ನಮ್ಮ ದೇವ’ ಎಂದು.

· © 2017 kannadacatholicbible.org Privacy Policy