Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೆಕರ್ಯ


1 : ತೆರೆ, ಲೆಬನೋನೇ ನಿನ್ನ ಪುರದ್ವಾರಗಳನು ದಹಿಸಿಬಿಡಲಿ ಅಗ್ನಿ ನಿನ್ನ ದೇವದಾರುಗಳನು !
2 : ತುರಾಯಿಮರವೇ, ಗೋಳಾಡು ಬಿದ್ದುಹೋಗಿದೆ ದೇವದಾರು ನಾಶವಾಗಿವೆ ಭಾರೀ ಮರಗಳು. ರೋಧಿಸಲಿ ಬಾಷಾನಿನ ಅಲ್ಲೋನ್ ವೃಕ್ಷಗಳು ಉರುಳಿವೆ ನುಗ್ಗಲಾಗದಾ ದಟ್ಟವನಗಳು.
3 : ಆಹಾ! ಕೇಳಿಬರುತ್ತಿದೆ ಕುರುಬರ ಗೋಳಾಟ ಬರಡಾಗಿದೆ ಅವರ ಹುಲ್ಲುಗಾವಲ ನೋಟ ಕೇಳಿರಿ, ಇಗೋ, ಯುವಸಿಂಹಗಳ ಆಕ್ರಂದನ ಏಕೆನೆ ಪಾಳುಬಿದ್ದಿದೆ ಜೋರ್ಡನಿನ ದಟ್ಟವನ !
4 : ದೇವದಾರು ಸರ್ವೇಶ್ವರ ನನಗೆ ಇಂತೆಂದರು: “ಕೊಯ್ಗುರಿಗಳ ಮಂದೆಯನು ಕಾಯಿ.
5 : ಕೊಂಡು ಕೊಳ್ಳುವವರು, ಅವುಗಳನ್ನು ಕೊಯ್ದರೂ ನಿರಪರಾಧಿಗಳೆನಿಸಿಕೊಳ್ಳುವರು. ಅವುಗಳನ್ನು ಮಾರುವವರು ‘ಸರ್ವೇಶ್ವರಸ್ವಾಮಿಗೆ ಸ್ತೋತ್ರ, ನಾವು ಧನವಂತರಾದೆವು’ ಎಂದುಕೊಳ್ಳುವರು. ಆ ಮಂದೆಯ ಕುರುಬರು ಸಹ ಅವುಗಳಿಗೆ ಕರುಣೆ ತೋರಿಸರು.”
6 : ರ್ವೇಶ್ವರಸ್ವಾಮಿಯ ನುಡಿಯಿದು: “ಈ ಲೋಕನಿವಾಸಿಗಳಿಗೆ ನಾನು ಕರುಣೆತೋರಿಸೆನು. ಪ್ರತಿಯೊಬ್ಬನನ್ನು ತನ್ನ ತನ್ನ ನೆರೆಯವನ ಕೈಗೋ ಅರಸನ ಕೈಗೂ ಒಪ್ಪಿಸಿಬಿಡುವೆನು. ಆ ಬಲಿಷ್ಠರು ಲೋಕವನ್ನು ಧ್ವಂಸಮಾಡುವರು. ಅವರ ಕೈಗೆ ಸಿಕ್ಕದವರನ್ನು ನಾನು ರಕ್ಷಿಸೆನು.”
7 : ಆಗ ನಾನು ಕೊಯ್ಗುರಿಗಳನ್ನು ವ್ಯಾಪಾರ ಮಾಡುವವರಿಗೋಸ್ಕರ ಆ ಮಂದೆಗೆ ಕುರಿಗಾಹಿ ಆದೆ. ಎರಡು ಕುರಿಗೋಲುಗಳನ್ನು ಕೈಗೆ ತೆಗೆದುಕೊಂಡು ಒಂದಕ್ಕೆ ‘ಕೃಪೆ’ ಎಂದೂ ಮತ್ತೊಂದಕ್ಕೆ “ಐಕ್ಯ’ ಎಂದೂ ಹೆಸರಿಟ್ಟು ಆ ಮಂದೆಯನ್ನು ಮೇಯಿಸಿದೆ.
8 : ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಕೆಲಸದಿಂದ ತೆಗೆದುಹಾಕಿದೆ. ಅನಂತರ ನನಗೆ ಕುರಿಗಳ ಬಗ್ಗೆ ಅಸಹ್ಯವಾಯಿತು. ಕುರಿಗಳು ಸಹ ನನ್ನ ಬಗ್ಗೆ ಬೇಸರಗೊಂಡವು.
9 : ಆಗ ನಾನು: “ಇನ್ನು ಮೇಲೆ ನಾನು ನಿಮ್ಮನ್ನು ಮೇಯಿಸೆನು. ಸಾಯಬೇಕಾದವು ಸಾಯಲಿ, ಹಾಳಾಗಬೇಕಾದವು ಹಾಳಾಗಿಹೋಗಲಿ, ಉಳಿದವುಗಳು ಒಂದನ್ನೊಂದು ಕಚ್ಚಿ ಕಬಳಿಸಿಬಿಡಲಿ,” ಎಂದೆ.
10 : ಬಳಿಕ ಎಲ್ಲ ರಾಷ್ಟ್ರಗಳೊಂದಿಗೆ ನಾನು ಮಾಡಿಕೊಂಡಿದ್ದ ಒಡಂಬಡಿಕೆಯನ್ನು ರದ್ದುಗೊಳಿಸಬೇಕೆಂದು ‘ಕೃಪೆ’ ಎಂಬ ಕೋಲನ್ನು ಮುರಿದು ಬಿಟ್ಟೆ.
11 : ಅಂದೇ ಆ ಒಡಂಬಡಿಕೆ ರದ್ದಾಯಿತು. ಇದನ್ನು ವೀಕ್ಷಿಸುತ್ತಿದ್ದ ಕೊಯ್ಗುರಿಗಳ ವ್ಯಾಪಾರಿಗಳು, ನಾನು ಈಡೇರಿಸಿದ್ದು ದೇವರ ನುಡಿಯನ್ನೇ ಎಂಬುದಾಗಿ ಗ್ರಹಿಸಿಕೊಂಡರು.
12 : ಅನಂತರ ನಾನು ಅವರಿಗೆ, “ನಿಮಗೆ ಸರಿದೋರಿದರೆ ನನಗೆ ಸಂಬಳವನ್ನು ಕೊಡಿ; ಇಲ್ಲವಾದರೆ ಬಿಡಿ,” ಎಂದೆ. ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ಮೂವತ್ತು ಬೆಳ್ಳಿನಾಣ್ಯಗಳನ್ನು ನನ್ನ ಸಂಬಳಕ್ಕಾಗಿ ಕೊಟ್ಟರು.
13 : ಇದನ್ನು ನೋಡಿದ ಸರ್ವೇಶ್ವರ ನನಗೆ: “ಇದನ್ನು ಕಾಣಿಕೆ ಕೋಶದಲ್ಲಿ ಬಿಸಾಡು. ಇದು ತಾನೋ ಅವರು ನನಗೆ ಕೊಡುವಂಥ ಘನವಾದ ಸಂಬಳ!” ಎಂದರು. ಅಂತೆಯೇ ನಾನು ಆ ಮೂವತ್ತು ಬೆಳ್ಳಿನಾಣ್ಯಗಳನ್ನು ತೆಗೆದುಕೊಂಡು ಸರ್ವೇಶ್ವರನ ಆಲಯದ ಕಾಣಿಕೆ ಕೋಶದಲ್ಲಿ ಬಿಸಾಡಿಬಿಟ್ಟೆ.
14 : ಕೂಡಲೆ ಜುದೇಯ ಮತ್ತು ಇಸ್ರಯೇಲ್ ನಡುವೆ ಇದ್ದ ಸೋದರ ಸಂಬಂಧವನ್ನು ಮುರಿಬೇಕೆಂದು ‘ಐಕ್ಯ’ವೆಂಬ ನನ್ನ ಎರಡನೇ ಕೋಲನ್ನು ಮುರಿದುಬಿಟ್ಟೆ.
15 : ಅನಂತರ ಸರ್ವೇಶ್ವರ ನನಗೆ ಹೀಗೆಂದು ಅಪ್ಪಣೆ ಮಾಡಿದರು: “ಮತ್ತೊಮ್ಮೆ ನೀನು ವೇಷ ಧರಿಸಿಕೊಂಡು ಮಂಕು ಕುರುಬನಂತೆ ನಟಿಸು.
16 : ಏಕೆಂದರೆ ನಾಡಿನಲ್ಲಿ ಒಬ್ಬ ಕುರುಬನು ಏಳುವಂತೆ ನಾನು ಮಾಡುವೆನು. ಅವನು ಅಳಿದು ಹೋದ ಕುರಿಗಳನ್ನು ಗುಣಪಡಿಸನು; ಚದರಿಹೋದ ಕುರಿಗಳನ್ನು ಹುಡುಕಿತರನು; ಉಳಿದವುಗಳನ್ನು ಸಾಕಲಾರನು. ಕೊಬ್ಬಿದ ಕುರಿಗಳನ್ನು ಕಡಿದು, ಅವುಗಳ ಗೊರಸುಗಳನ್ನೂ ಸುಲಿದು ಕಬಳಿಸುವನು.
17 : ಮಂದೆಕಾಯದ ಕುರುಬನಿಗೆ ಧಿಕ್ಕಾರ! ತಾಕುವುದು ಅವನ ತೋಳಿಗೂ ಬಲಗಣ್ಣಿಗೂ ಖಡ್ಗ ತೀರಾ ಬತ್ತಿಹೋಗಲಿ ಅವನ ತೋಳು ಪೂರಾ ಮಬ್ಬಾಗಲಿ ಅವನ ಬಲಗಣ್ಣು

· © 2017 kannadacatholicbible.org Privacy Policy