1 : ವಸಂತಕಾಲದಲ್ಲಿ ಮಳೆಗಾಗಿ ಸರ್ವೇಶ್ವರಸ್ವಾಮಿಗೆ ಪ್ರಾರ್ಥನೆ ಮಾಡಿರಿ. ಮೋಡ ಮಿಂಚುಗಳನ್ನು ಗಾಳಿಮಳೆಯನ್ನು ಉಂಟುಮಾಡುವವರು ಅವರೇ. ಸರ್ವರಿಗೂ ಹೊಲಗದ್ದೆಗಳಲ್ಲಿ ಪೈರುಪಚ್ಚೆಗಳನ್ನು ನೀಡುವವರು ಅವರೇ.
2 : ಗೃಹದೇವತೆಗಳು ನುಡಿಯುವುದು ಜೊಳ್ಳು; ಶಕುನ ಹೇಳುವವರ ಮಾತು ಸುಳ್ಳು. ಸ್ವಪ್ನಕಾರರ ಕನಸುಗಳು ಕಲ್ಪಿತ, ಅವರು ಹೇಳುವ ಸಮಾಧಾನ ವ್ಯರ್ಥ, ಈ ಕಾರಣ ಜನರು ಕುರಿಗಳಂತೆ ಚದರಿದ್ದಾರೆ; ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.
3 : ಸರ್ವೇಶ್ವರ ಹೀಗೆನ್ನುತ್ತಾರೆ: “ಎಂತಲೇ ಕುರಿಗಾಹಿಗಳ ಮೇಲೆ ನನ್ನ ಕೋಪ ಭುಗಿಲೆದ್ದಿದೆ. ಆ ಮುಂದಾಳುಗಳ ಮೇಲೆ ನನ್ನ ದಂಡನೆ ಎರಗಲಿದೆ. ಸೇನಾಧೀಶ್ವರ ಸರ್ವೇಶ್ವರನಾದ ನಾನು ಜುದೇಯ ಕುಲವನ್ನು ನನ್ನ ಮಂದೆಯಂತೆ ಪರಿಪಾಲಿಸುವೆನು. ಅದನ್ನು ವೀರ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವೆನು
4 : ಆ ಕುಲದಿಂದಲೇ ಮೂಲೆಗಲ್ಲು, ಗುಡಾರದ ಗೂಟ, ಯುದ್ಧದ ಬಿಲ್ಲುಗಳು ಬರುವುವು. ಆ ಕುಲದಿಂದಲೇ ಸಕಲ ಅಧಿಕಾರಿಗಳು ಹೊರಬರುವರು.
5 : ಇವರೆಲ್ಲರು ರಣವೀರರಂತೆ ಶತ್ರುಗಳನ್ನು ಬೀದಿಕೆಸರಿನಲ್ಲಿ ತುಳಿದು ಬಿಡುವರು. ಸರ್ವೇಶ್ವರ ತಮ್ಮ ಸಂಗಡ ಇದ್ದಾರೆಂದು ಧೈರ್ಯದಿಂದ ಯುದ್ಧಮಾಡುವರು, ಎದುರಿಸುವ ಕುದುರೆ ಸವಾರರನ್ನು ಭ್ರಾಂತಿಗೊಳಿಸುವರು.”
6 : “ಬಲಗೊಳಿಸುವೆನು ಯೆಹೂದ್ಯ ಕುಲವನು
ಉದ್ಧರಿಸುವೆನು ಜೊಸೇಫನ ವಂಶವನು.
ಕನಿಕರಿಸುವೆನು, ಮರಳಿಬರಮಾಡುವೆನು
ಅವರನು
ನಾನು ಕೈಬಿಟ್ಟವರಂತೆ ಇರಲಾರರವರು ಇನ್ನು.
ಏಕೆನೆ ನಾನೇ ದೇವ ಸರ್ವೇಶ್ವರ ಅವರಿಗೆ
ಕಿವಿಗೊಡುವೆನು ನಾನು ಅವರ ಕರೆಗೆ.
ಸದುತ್ತರವೀಯುವೆನು ಅವರ ಮೊರೆಗೆ.
7 : ಬಲಾಢ್ಯ ವೀರರಾಗುವರು ಎಫ್ರಯಿಮ್
ಕುಲದವರು
ದ್ರಾಕ್ಷಾರಸ ಕುಡಿದವರಂತೆ ಮನದಲ್ಲಿ
ಸುಖಿಸುವರು.
ಇದಕಂಡು ಸಂತೋಷಿಸುವರು ಅವರ
ಕುವರಕುವರಿಯರು
ಸರ್ವೇಶ್ವರಸ್ವಾಮಿಯಲಿ ಹೃತ್ಪೂರ್ವಕವಾಗಿ
ಆನಂದಗೊಳ್ಳುವರು.
8 : “ಸಭೆಸೇರಿಸುವೆನವರನು ಕರೆದು ಸನ್ನೆಮಾಡಿ
ವಿಮುಕ್ತಗೊಳಿಸುವೆನವರನು ನಿಸ್ಸಂದೇಹವಾಗಿ
ಹಿಂದಿನಂತೆ ಮುಂದೆಯೂ ಬೆಳೆವರವರು
ಸಮೃದ್ಧಿಯಾಗಿ.
9 : ಚದರಿದೆನಾದರೂ ಅವರನು ಅನ್ಯ
ರಾಷ್ಟ್ರಗಳಲಿ
ಸ್ಮರಿಸಿಕೊಳ್ಳುವರವರು ನನ್ನನು
ದೂರದೇಶಗಳಲಿ
ಹಿಂದಿರುಗುವರು ಸಂತಾನ ಸಮೇತ ಬದುಕಿ
ಬಾಳಿ.
10 : ಕರೆತರುವೆನವರನು ಈಜಿಪ್ಟ್, ಅಸ್ಸೀರಿಯ
ನಾಡುಗಳಿಂದ
ಗಿಲ್ಯಾದ್, ಲೆಬೊನೇನ್‍ಗಳಲ್ಲವರು ಬಂದು
ಸೇರುವುದರಿಂದ
ತುಂಬಿತುಳುಕುವುವು ಆ ನಾಡುಗಳು
ಜನಸ್ತೋಮದಿಂದ.
11 : ದಾಟಿಬರುವರವರು ಕಷ್ಟವೆಂಬ ಕಡಲನು
ಛೇದಿಸಿ ಬಿಡುವೆನು ಅಲ್ಲಕಲ್ಲೋಲ
ಸಮುದ್ರವನು.
ತಳದ ತನಕ ಒಣಗಿಹೋಗುವುದು ನೈಲ್
ನದಿಯು
ಕುಗ್ಗಿಹೋಗುವುದು ಅಸ್ಸೀರಿಯಾದ ಗರ್ವವು
ತಪ್ಪಿಹೋಗುವುದು ಈಜಿಪ್ಟಿನ ರಾಜದರ್ಪವು.
12 : ಬಲಿಷ್ಠರಾಗುವರಾ ಜನರು ಸರ್ವೇಶ್ವರನಲಿ
ಹೆಚ್ಚಳಪಡುವರು ಆತನ ನಾಮದಲಿ,”
ನುಡಿದಿಹನು ಸರ್ವೇಶ್ವರ ಈ ರೀತಿಯಲಿ.