1 : ಅದೇ ವರ್ಷದ ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಸರ್ವೇಶ್ವರ ಈ ಸಂದೇಶವನ್ನು ದಯಪಾಲಿಸಿದರು:
2 : ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ಅಧಿಪತಿಯೂ ಆದ ಜೆರುಬ್ಬಾಬೆಲನಿಗೆ ಮತ್ತು ಮಹಾಯಾಜಕ ಯೆಹೋಶುವನಿಗೆ ಮತ್ತು ಅಳಿದುಳಿದ ಜನರೆಲ್ಲರಿಗೆ ಹೀಗೆ ತಿಳಿದು –
3 : “ಈ ದೇವಾಲಯದ ಪೂರ್ವ ವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿ ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲದಂತೆ ಕಾಣಿಸುತ್ತದಲ್ಲವೇ? ಸರ್ವೇಶ್ವರ ಆದ ನಾನು ಹೇಳುವುದನ್ನು ಕೇಳಿ:
4 : ಜೆರುಬ್ಬಾಬೆಲನೇ, ಈಗ ಧೈರ್ಯದಿಂದಿರು. ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನೇ, ಎದೆಗುಂದಬೇಡ. ನಾಡಿನ ಜನರೇ, ನೀವೆಲ್ಲರು ಧೈರ್ಯದಿಂದ ಕೆಲಸಮಾಡಿ. ಇದು ಸೇನಾಧೀಶ್ವರ ಸರ್ವೇಶ್ವರ ಆದ ನನ್ನ ನುಡಿ. ನಾನು ನಿಮ್ಮೊಡನೆ ಇದ್ದೇನೆ.
5 : ನೀವು ಈಜಿಪ್ಟ್ ದೇಶದಿಂದ ಹೊರಟುಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು. ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿದೆ; ಭಯಪಡದಿರಿ.
6 : “ಸ್ವಲ್ಪಕಾಲದಲ್ಲೇ ಮತ್ತೊಮ್ಮೆ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಮರುಭೂಮಿಯನ್ನೂ ಅದರಿಸುವೆನು.
7 : ಸಕಲ ಜನಾಂಗಗಳನ್ನು ನಡುಗಿಸುವೆನು. ಆಗ ಎಲ್ಲ ರಾಷ್ಟ್ರಗಳ ಸಿರಿಸಂಪತ್ತು ಇಲ್ಲಿಗೆ ಬರುವುದು. ಈ ಆಲಯವನ್ನು ವೈಭವದಿಂದ ತುಂಬಿಸುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.
8 : ಳ್ಳಿ ನನ್ನದು, ಬಂಗಾರವೆಲ್ಲ ನನ್ನದು.
9 : ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ಶ್ರೇಷ್ಠವಾಗಿರುವುದು. ಈ ಸ್ಥಳದಲ್ಲಿ ಶಾಂತಿ ಸಮೃದ್ಧಿಯನ್ನು ಅನುಗ್ರಹಿಸುವೆನು” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
10 : ಡೇರಿಯಸ್ ಚಕ್ರವರ್ತಿಯ ಆಳ್ವಿಕೆಯ ಎರಡನೇ ವರ್ಷದ ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಈ ಸಂದೇಶವನ್ನು ಸರ್ವೇಶ್ವರ ದಯಪಾಲಿಸಿದರು.
11 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ – “ನೀನು ಯಾಜಕರ ಬಳಿಗೆ ಹೋಗು.
12 : ಒಬ್ಬನು ತನ್ನ ಬಟ್ಟೆಯ ಸೆರಗಿನಲ್ಲಿ ಪ್ರತಿಷ್ಠಿತ ಮಾಂಸವನ್ನು ಕಟ್ಟಿಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ, ಅನ್ನವನ್ನಾಗಲಿ, ದ್ರಾಕ್ಷಾರಸವನ್ನಾಗಲೀ, ಎಣ್ಣೆಯನ್ನಾಗಲೀ ಅಥವಾ ಯಾವ ಆಹಾರ ಪದಾರ್ಥವನ್ನೇ ಆಗಲಿ ಸೋಕಿದರೆ ಅದು ಪವಿತ್ರವಾಗುತ್ತದೋ? ಎಂದು ಧರ್ಮವಿಧಿಯನ್ನು ವಿಚಾರಿಸು.”
ಪ್ರವಾದಿ ಹಾಗೆ ವಿಚಾರಿಸಲು ಯಾಜಕರು ‘ಇಲ್ಲ’ ಎಂದು ಉತ್ತರಕೊಟ್ಟರು.
13 : ಆಗ ಹಗ್ಗಾಯನು, “ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರೂ ಸೋಕಿದರೆ ಅದು ಅಶುದ್ಧವಾಗುತ್ತದೋ” ಎಂದು ಕೇಳಿದನು. ಅದಕ್ಕೆ ಯಾಜಕರು: “ಖಂಡಿತವಾಗಿ ಅಶುದ್ಧವಾಗುತ್ತದೆ” ಎಂದು ಉತ್ತರಕೊಟ್ಟರು.
14 : ಆಗ ಹಗ್ಗಾಯನು ಮುಂದುವರಿಸುತ್ತಾ, “ಸರ್ವೇಶ್ವರ ಇಂತೆನ್ನುತ್ತಾರೆ: ಇದರಂತೆಯೇ ಈ ಪ್ರಜೆ,ಈ ಜನಾಂಗ ಕೈಹಾಕುವ ಪ್ರತಿಯೊಂದು ಕೆಲಸ, ಇಲ್ಲಿಗೆ ತರುವ ಕಾಣಿಕೆ, ನೈವೇದ್ಯ, ಎಲ್ಲವೂ ನನಗೆ ಹೊಲೆಯಾಗಿಯೇ ಇದೆ,” ಎಂದನು.
ಸಮೃದ್ಧಿಯ ದಿನಗಳು ಬರಲಿವೆ
15 : ಸರ್ವೇಶ್ವರ ಇಂತೆನ್ನುತ್ತಾರೆ: “ಸರ್ವೇಶ್ವರನ ಆಲಯನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿ;
16 : ಆ ಕಾಲದಲ್ಲಿ ಒಬ್ಬನು ಇಪ್ಪತ್ತು ಸೇರಿನ ಮೆದೆಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೆ? ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯ ಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಸೇರು ಮಾತ್ರ ದೊರೆಯುತ್ತಿತ್ತಷ್ಟೆ.
17 : ನಾನು ನಿಮ್ಮ ದುಡಿಮೆಯ ಫಲವನ್ನು ಆನೆಕಲ್ಲು, ಬೂಷ್ಟು, ಬಿಸಿಗಾಳಿ - ಇವುಗಳಿಂದ ಹಾಳುಮಾಡಿ ನಿಮ್ಮನ್ನು ಬಾಧಿಸಿದೆನು. ಆದರೂ ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ. ಇದನ್ನು ನೆನಪಿನಲ್ಲಿಡಿ. ಇದು ಸರ್ವೇಶ್ವರನ ನುಡಿ.
18 : ಮಹಾದೇವಾಲಯಕ್ಕೆ ಅಸ್ತಿಭಾರಹಾಕಿದ ಅಂದರೆ, ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೇ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿ.
19 : ಇನ್ನು ಮುಂದಕ್ಕೂ ಕಣಜದಲ್ಲಿ ಕಾಳಿಲ್ಲದೆ ಇರುವುದೋ? ದ್ರಾಕ್ಷೆ, ಅಂಜೂರ, ದಾಳಿಂಬೆ, ಓಲಿವ್ ಗಿಡಗಳು ಫಲಿಸದೆ ಹೋಗುವವೋ? ಇಲ್ಲ. ಈ ದಿನ ಮೊದಲ್ಗೊಂಡು ನಾನು ನಿಮ್ಮನ್ನು ಆಶೀರ್ವದಿಸುವೆನು.”
20 : ಅದೇ ಒಂಬತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೇ ದಿನದಲ್ಲಿ ಸರ್ವೇಶ್ವರ ಹಗ್ಗಾಯನಿಗೆ ಈ ಎರಡನೆಯ ಸಂದೇಶವನ್ನು ದಯಪಾಲಿಸಿದರು:
21 : “ಜುದೇಯ ನಾಡಿನ ಅಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆಂದು ನುಡಿ: ನಾನು ಭೂಮ್ಯಾಕಾಶಗಳನ್ನು ಅದರಿಸುವೆನು.
22 : ರಾಜ್ಯಗಳ ಸಿಂಹಾಸನವನ್ನು ಕೆಡವಿಬಿಡುವೆನು. ರಾಷ್ಟ್ರಗಳ ಸಂಸ್ಥಾನಬಲವನ್ನು ಧ್ವಂಸಮಾಡುವೆನು. ರಥಗಳನ್ನೂ ರಥಾರೂಢರನ್ನೂ ದಬ್ಬಿಬಿಡುವೆನು. ಕುದುರೆಗಳೂ ರಾಹುತರೂ ಬಿದ್ದುಹೋಗುವರು; ಒಬ್ಬನು ಮತ್ತೊಬ್ಬನ ಕತ್ತಿಗೆ ತುತ್ತಾಗುವನು.”
23 : ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಶೆಯಲ್ತೀಯೇಲನ ಮಗನೂ ನನ್ನ ದಾಸನೂ ಆದ ಜೆರುಬ್ಬಾಬೆಲನೇ, ಆ ದಿನಗಳಲ್ಲಿ ನಾನು ನಿನ್ನನ್ನು ಆರಿಸಿ ತೆಗೆದುಕೊಳ್ಳುವೆನು. ನನ್ನ ಮುದ್ರೆ ಉಂಗುರವನ್ನು ತೊಟ್ಟ ರಾಜನನ್ನಾಗಿ ನಿನ್ನನ್ನು ನೇಮಿಸುವೆನು,” ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ನುಡಿಯಿದು.