1 : ಪರ್ಷಿಯಾದ ಚಕ್ರವರ್ತಿಯಾದ ಡೇರಿಯಸ್ ಅವನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳ ಮೊದಲನೆಯ ದಿನದಂದು ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರಸ್ವಾಮಿ ನೀಡಿದ ದೈವೋಕ್ತಿ: ಅದು ಶೆಯಲ್ತಿಯೇಲನ ಮಗನೂ ಜುದೇಯ ನಾಡಿನ ದೇಶಾಧಿಪತಿಯೂ ಆದ ಜೆರುಬ್ಬಾಬೆಲನನ್ನು ಮತ್ತು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನನ್ನು ಉದ್ದೇಶಿಸಿ ಕೊಡಲಾದ ಸಂದೇಶವಾಗಿತ್ತು.
2 : ಸೇನಾಧೀಶ್ವರರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಮಹಾದೇವಾಲಯವನ್ನು ಪುನಃ ಕಟ್ಟುವುದಕ್ಕೆ ಸಮಯ ಇನ್ನೂ ಬಂದಿಲ್ಲ ಎಂದುಕೊಳ್ಳುತ್ತಾರೆ ಈ ಜನರು.”
3 : ಆಗ ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರ ಕೊಟ್ಟ ಸಂದೇಶವೇನೆಂದರೆ:
4 : “ನನ್ನ ಆಲಯ ಹಾಳುಬಿದ್ದಿರುವಾಗ ನೀವು ಸೊಗಸಾದ ಹಲಗೆ ಹೊದಿಸಿದ ಮನೆಗಳಲ್ಲಿ ವಾಸಿಸುವುದು ಸರಿಯೋ?
5 : ನಮಗೆ ಒದಗಿರುವ ಪರಿಸ್ಥಿತಿಯನ್ನು ಆಲೋಚಿಸಿ ನೋಡಿ.
6 : ನೀವು ಬಿತ್ತಿದ ಬೀಜ ಬಹಳ, ಪಡೆದ ಫಲ ವಿರಳ; ತಿನ್ನುತ್ತೀರಿ, ಆದರೆ ತೃಪ್ತಿಯಿಲ್ಲ; ಕುಡಿಯುತ್ತೀರಿ, ಆದರೆ ದಾಹ ನೀಗುವುದಿಲ್ಲ. ಹೊದೆಯುತ್ತೀರಿ, ಆದರೆ ಚಳಿ ಹೋಗುವುದಿಲ್ಲ. ದುಡಿಮೆಗಾರನ ದುಡ್ಡಿನ ಚೀಲ ತೂತಿನ ಚೀಲ.”
7 : ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಿಮಗೆ ಒದಗಿರುವ ಪರಿಸ್ಥಿತಿಯನ್ನು ಕುರಿತು ಆಲೋಚಿಸಿ ನೋಡಿ.
8 : ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ. ಆಗ ನಾನು ಪ್ರಸನ್ನನಾಗುವೆನು. ನನ್ನ ಮಹಿಮೆಯನ್ನು ಪ್ರಕಟಿಸುವೆನು,” ಎಂದು ನುಡಿಯುತ್ತಾರೆ ಸ್ವಾಮಿ.
10 : ಈ ಪರಿಣಾಮವಾಗಿ ಆಕಾಶ ಮಳೆಯನ್ನು ಸುರಿಸಿಲ್ಲ. ಭೂಮಿ ಬೆಳೆಯನ್ನು ಫಲಿಸಿಲ್ಲ.
11 : ಭೂಮಿ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ತೈಲಗಿಡಗಳತೋಟ, ಹೊಲಗದ್ದೆಗಳ ಉತ್ಪನ್ನ ಇವುಗಳ ಮೇಲೂ ಹಾಗೂ ಜನ, ದನಕರುಗಳು ಮತ್ತು ನಿಮ್ಮ ಕೈಕಸುಬುಗಳ ಮೇಲೂ ಅನಾವೃಷ್ಟಿಯನ್ನು ತಂದಿದ್ದೇನೆ.”
12 : ಆಗ ಶೆಯಲ್ತೀಯೇಲನ ಮಗ ಜೆರುಬ್ಬಾಬೆಲ್, ಯೆಹೋಚಾದಕನ ಮಗನೂ ಮಹಾಯಾಜಕನೂ ಆದ ಯೆಹೋಶುವ ಮತತು ಅಳಿದುಳಿದ ಜನರೆಲ್ಲರು ದೇವರಾದ ಸರ್ವೇಶ್ವರಸ್ವಾಮಿಯ ನುಡಿಗೆ ಕಿವಿಗೊಟ್ಟರು. ಆ ಸ್ವಾಮಿಯ ಅಪ್ಪಣೆಯ ಪ್ರಕಾರ ಪ್ರವಾದಿ ಹಗ್ಗಾಯನು ಹೇಳಿದ ಮಾತನ್ನು ಕೇಳಿದರು. ಆ ಸ್ವಾಮಿಯಲ್ಲಿ ಭಯಭಕ್ತಿಯುಳ್ಳವರಾದರು.
13 : ಇದನ್ನು ನೋಡಿ ಸ್ವಾಮಿಯ ದೂತನಾದ ಹಗ್ಗಾಯನು ಜನರಿಗೆ, “ನಾನು ನಿಮ್ಮೊಡನೆ ಇದ್ದೇನೆ ಎಂದು ಸರ್ವೇಶ್ವರ ನುಡಿದಿದ್ದಾರೆ. ಇದು ಸರ್ವೇಶ್ವರಸ್ವಾಮಿಯ ಸಂದೇಶ,” ಎಂದನು.
14 : ಕೂಡಲೆ ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ದೇಶಾಧಿಪತಿಯೂ ಆದ ಜೆರುಬ್ಬಾಬೆಲ್, ಯೆಹೋಚಾದಕನ ಮಗನೂ ಮಹಾಯಾಜಕನೂ ಆದ ಯೆಹೋಶುವ, ಮತ್ತು ಅಳಿದುಳಿದ ಜನರೆಲ್ಲರು ಸ್ವಾಮಿಯ ಪ್ರೇರಣೆಯನ್ನು ಪಡೆದರು.
15 : ಡೇರಿಯಸ್ ಚಕ್ರವರ್ತಿಯ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ತಮ್ಮ ದೇವರಾದ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಆಲಯದ ನಿರ್ಮಾಣಕ್ಕೆ ಕೈ ಹಾಕಿದರು.