Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಜೆಫನ್ಯ


1 : ನಾಚಿಕೆ ಇಲ್ಲದ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ,
2 : ಕಾಲವು ಹೊಟ್ಟಿನಂತೆ ಹಾರಿಹೋಗುವ ಮೊದಲು, ಸರ್ವೇಶ್ವರ ಸ್ವಾಮಿಯ ಉಗ್ರಕೋಪವು ನಿಮ್ಮ ಮೇಲೆ ಎರಗುವ ಮುಂಚೆ, ಅವರ ಸಿಟ್ಟಿನ ದಿನ ನಿಮ್ಮನ್ನು ಮುಟ್ಟುವುದಕ್ಕೆ ಮುನ್ನ ಸೇರ ಬನ್ನಿ, ಕೂಡಿ ಬನ್ನಿ.
3 : ನಾಡಿನ ದೀನ ಜನರೇ, ಸರ್ವೇಶ್ವರನ ಆಜ್ಞೆಯನ್ನು ಕೈಗೊಂಡು ನಡೆಯುವವರೇ, ನೀವೆಲ್ಲರೂ ಸ್ವಾಮಿಯ ಕಡೆಗೆ ತಿರುಗಿಕೊಳ್ಳಿ. ಒಳ್ಳೆಯದನ್ನು ಮಾಡಿರಿ, ಸ್ವಾಮಿಯ ಮುಂದೆ ನಿಮ್ಮನ್ನೇ ತಗ್ಗಿಸಿಕೊಳ್ಳಿ; ಸರ್ವೇಶ್ವರಸ್ವಾಮಿಯ ಆ ಸಿಟ್ಟಿನ ದಿನದಂದು ಬಹುಶಃ ನೀವು ಸುರಕ್ಷಿತರಾಗುವಿರಿ.
4 : ಗಾಜಾಪಟ್ಟಣ ನಿರ್ಜನವಾಗುವುದು, ಅಷ್ಕೆಲೋನ್ ಹಾಳಾಗುವುದು; ಅಷ್ಡೋದಿನ ನಿವಾಸಿಗಳನ್ನು ನಡುಮಧ್ಯಾಹ್ನದಲ್ಲೆ ಅಟ್ಟಿಸಿಬಿಡಲಾಗುವುದು; ಎಕ್ರೊನಿನ ಜನರನ್ನು ನಿರ್ಮೂಲ ಮಾಡಲಾಗುವುದು.
5 : ಕರಾವಳಿಯಲ್ಲಿ ವಾಸಿಸುವ ಕೆರೇತ್ಯ ಜನರೇ, ನಿಮಗೆ ಧಿಕ್ಕಾರ! ಫಿಲಿಷ್ಟಿಯರ ನಾಡಾದ ಕಾನಾನೇ, ನಿನಗೆ ಧಿಕ್ಕಾರ! ಸರ್ವೇಶ್ವರನ ನ್ಯಾಯತೀರ್ಪು ನಿನಗೆ ವಿರುದ್ಧವಾಗಿದೆ; ನಿನ್ನಲ್ಲಿ ಯಾರೂ ಉಳಿಯದಂತೆ ಅಳಿಸಿಬಿಡುವರು.
6 : ಸಮುದ್ರತೀರದಲ್ಲಿರುವ ಆ ಪ್ರಾಂತ್ಯವು ಹುಲ್ಲುಗಾವಲಾಗುವುದು; ಕುರುಬರ ಗುಡಿಸಲಾಗುವುದು, ಕುರಿಗಳ ದೊಡ್ಡಿಯಾಗುವುದು.
7 : ಆ ಕರಾವಳಿಯು ಅಳಿದುಳಿದ ಯೆಹೂದ್ಯರ ಪಾಲಾಗುವುದು; ಅವರ ದನಕುರಿಗಳಿಗೆ ಹುಲ್ಲುಗಾವಲಾಗುವುದು; ಅಷ್ಕೆಲೋನಿನ ಮನೆಗಳು ಅವರಿಗೆ ವಿಶ್ರಾಂತಿ ನಿಲಯಗಳಾಗುವುವು. ದೇವರಾದ ಸರ್ವೇಶ್ವರ ಅವರನ್ನು ಪರಿಪಾಲಿಸುವರು ಮತ್ತು ಅವರನ್ನು ಮರಳಿ ಏಳಿಗೆಗೆ ತರುವರು.
8 : “ಮೋವಾಬ್ಯರು ಮತ್ತು ಅಮ್ಮೋನ್ಯರು ಅಹಂಕಾರದಿಂದ ನನ್ನ ಜನರ ವಿರುದ್ಧ ಆಡುವ ಚುಚ್ಚುಮಾತುಗಳು ನನ್ನ ಕಿವಿಗೆ ಬಿದ್ದಿವೆ. ನನ್ನ ಜನರ ನಾಡನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಅವರು ಕೊಚ್ಚಿಕೊಳ್ಳುತ್ತಿದ್ದಾರೆ.
9 : ಇಸ್ರಯೇಲಿನ ಜೀವಂತ ದೇವರೂ ಸೇನಾಧೀಶ್ವರ ಸರ್ವೇಶ್ವರನೂ ಆದ ನಾನು ನಿಶ್ಚಯವಾಗಿ ಹೇಳುತ್ತೇನೆ - ಸೊದೋಮಿನ ಗತಿಯೇ ಮೋವಾಬಿನ ಗತಿ ಆಗುವುದು. ಗೊಮೋರಾದ ದುರ್ಗತಿಯೇ ಅಮ್ಮೋನ್ಯರಿಗೆ ಸಂಭವಿಸುವುದು. ಈ ಪ್ರಾಂತ್ಯಗಳು ಮುಳ್ಳು ಗಿಡಗಳಿಂದಲೂ ಸೌಳುಗುಂಡಿಗಳಿಂದಲೂ ತುಂಬಿಕೊಂಡು ನಿತ್ಯನಾಶನಕ್ಕೆ ಈಡಾಗುವುವು. ನನ್ನ ಜನರಲ್ಲಿ ಉಳಿದವರು ಅವುಗಳನ್ನು ಸೂರೆ ಮಾಡುವರು; ಅಳಿದುಳಿದ ನನ್ನ ಜನರಿಗೆ ಅವು ಸೊತ್ತಾಗುವುವು.”
10 : ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಜನರನ್ನು ದೂಷಿಸಿ ದರ್ಪದ ಮಾತುಗಳನ್ನು ಆಡಿದ್ದರಿಂದಲೆ ಈ ಪ್ರಾಂತ್ಯಗಳ ಗರ್ವಿಷ್ಠ ಜನರಿಗೆ ಈ ಶಿಕ್ಷೆಯಾಗುವುದು.
11 : ಸರ್ವೇಶ್ವರ ಅವರಿಗೆ ಭಯಭೀತಿ ಉಂಟುಮಾಡುವರು; ಅವರ ಭೂಮಿಯಲ್ಲಿನ ದೇವತೆಗಳನ್ನೆಲ್ಲಾ ಕ್ಷಯಿಸಿಬಿಡುವರು; ಅದಾದ ನಂತರ ಪ್ರತಿಯೊಂದು ರಾಷ್ಟ್ರದವರು ತಮ್ಮ ತಮ್ಮ ನಾಡಿನಲ್ಲೇ ಸರ್ವೇಶ್ವರಸ್ವಾಮಿಯನ್ನು ಆರಾಧಿಸುವರು.
12 : ಸುಡಾನಿನ ಜನರೇ, ನೀವೂ ಸಹ ಕತ್ತಿಗೆ ತುತ್ತಾಗುವಿರಿ.
13 : ಅಸ್ಸೀರಿಯವನ್ನು ಸರ್ವೇಶ್ವರ ತಮ್ಮ ಭುಜ ಬಲದಿಂದ ಧ್ವಂಸಮಾಡುವರು; ನಿನೆವೆ ಪಟ್ಟಣವನ್ನು ಹಾಳುಬಿದ್ದ ಅವಶೇಷವಾಗಿ, ನೀರಿಲ್ಲದ ಮರುಭೂಮಿಯಾಗಿ ಮಾಡುವರು.
14 : ಅದು ದನಗಳ ಹಿಂಡುಗಳಿಗೂ ಕುರಿಗಳ ಮಂದೆಗಳಿಗೂ ಎಲ್ಲಾತರದ ಪ್ರಾಣಿಗಳಿಗೂ ಮಲಗುವ ಹಟ್ಟಿ ಆಗುವುದು; ಅದರ ಹಾಳುಬಿದ್ದ ಮನೆಗಂಬಗಳ ಮೇಲೆ ಗೂಬೆಗಳೂ, ಗುಬ್ಬಚ್ಚಿಗಳೂ ತಂಗುವುವು. ಗೂಬೆಯ ಘೂಂಕಾರವು ಕಿಟಕಿಗಳಿಂದ ಕೇಳಿ ಬರುವುದು; ಕಾಗೆಗಳ ಕೂಗು ಬಾಗಿಲಿನ ಹೊಸ್ತಿಲಲ್ಲೇ ಕೇಳುವುದು; ದೇವದಾರು ಮರದ ತೊಲೆಗಳು ಕಳಚಿಬೀಳುವುವು.
15 : “ಇರುವ ನಗರ ನಾನೇ, ನನ್ನ ಹೊರತು ಇನ್ನಾರೂ ಇಲ್ಲ” ಎಂದು ಕೊಚ್ಚಿಕೊಂಡು ಯಾವ ಚಿಂತೆಯೂ ಇಲ್ಲದೆ, ನೆಮ್ಮದಿಯಿಂದ ಇದ್ದ ನಿನೆವೆಯ ಗತಿ ನೋಡಿ, ಎಂಥ ಹಾಳುಬಿದ್ದ ಊರಾಗಿದೆ! ಕಾಡುಮೃಗಗಳ ಬೀಡಾಗಿದೆ! ಹಾದು ಹೋಗುವವರೆಲ್ಲ ಸಿಳ್ಳುಹಾಕಿ ಕೈತೋರಿಸಿ ಪರಿಹಾಸ್ಯ ಮಾಡುವಷ್ಟು ಕೀಳಾಗಿದೆ!

· © 2017 kannadacatholicbible.org Privacy Policy