1 : ಸರ್ವೇಶ್ವರಾ, ಕೇಳಿರುವೆ ನಿನ್ನ ಕೀರ್ತಿಯನು ಬೆರಗಾದೆ ಕೇಳಿ ನಿನ್ನ ಮಹತ್ಕಾರ್ಯವನು.
2 : ಮರಳಿ ಮಾಡು ನಮ್ಮೀ ಕಾಲದಲ್ಲಿ ಅವುಗಳನು
ಪ್ರಚುರಪಡಿಸು ಪ್ರಸ್ತುತಕಾಲದಲಿ ಅವುಗಳನು.
ರೋಷಗೊಂಡರೂ ಮರೆಯದಿರು
ಕರುಣೆಯನು.
3 : ಬರುತಿಹನು ದೇವನು ಎದೋಮಿನಿಂದ
ಆ ಪರಮಪಾವನಸ್ವಾಮಿ ಪಾರಾನ್
ಪರ್ವತದಿಂದ.
ಆವರಿಸುವುದು ಆತನ ಪ್ರಭಾವ
ಆಕಾಶಮಂಡಲವನು
ತುಂಬಿಹುದು ಆತನ ಮಹಿಮೆ
ಭೂಮಂಡಲವನು.
4 : ರವಿಯಂತಿದೆ ಆತನ ತೇಜಸ್ಸಿನ ಮೆರೆತ
ಕಿರಣಗಳು ಹೊರಹೊಮ್ಮುತಿವೆ ಆತನ
ಕರಗಳಿಂದ
ಮರೆಯಾಗಿದೆ ಅಲ್ಲೇ ಆತನ ಶಕ್ತಿಸಾಮಥ್ರ್ಯ.
5 : ಸಾಗುತಿದೆ ವ್ಯಾಧಿ ಆತನ ಮುಂದೆ
ಬರುತಿದೆ ಮೃತ್ಯು ಆತನ ಹಿಂದೆ.
6 : ಕಂಪಿಸುತ್ತದೆ ಭೂಮಿ ಆತ ನಿಂತಾಗ
ಅದರುತ್ತದೆ ಲೋಕ ಆತ ದಿಟ್ಟಿಸಿದಾಗ
ಸೀಳಿಹೋಗುತ್ತವೆ ಪುರಾತನಪರ್ವತಗಳು
ಕುಸಿದುಬೀಳುತ್ತವೆ ಸನಾತನ ಗಿರಿಗಳು
ಅನಾದಿಯಿಂದ ಹಾಗೆಯೆ ಆತನ
ಆಗಮನಗಳು.
7 : ಇಗೋ, ತಳಮಳಗೊಂಡಿವೆ ಕೂಷಾನಿನ
ಗುಡಾರಗಳು
ನಡುಗುತ್ತಿವೆ ಮಿದ್ಯಾನ್ ನಾಡಿನ ಡೇರೆಗಳು.
8 : ಮೋಡಗಳ ಮೇಲೆ ನೀ ಆಗಮಿಸಿದೆ ಏಕೆ?
ಜಯರಥಗಳಲ್ಲಿ ಅಸೀನನಾಗಿ ಬಂದೆ ಏಕೆ?
ಸರ್ವೇಶ, ನಿನಗೆ ರೌದ್ರವೇ ನದಿಗಳ ಮೇಲೆ?
ಸಿಟ್ಟುಸಿಡುಕವೇ ಹೊಳೆಗಳ ಮೇಲೆ?
ರೋಷಾವೇಷವೇ ಸಮುದ್ರದ ಮೇಲೆ?
9 : ತೆಗೆದಿಟ್ಟೆ ಬಿಲ್ಲನು ತೋಳಿನಿಂದ
ಹೊರಡಿಸಿದೆ ಬಾಣಗಳನು ಅದರಿಂದ
ಸೀಳಿರುವೆ ಭೂಮಿಯನು ನದಿಗಳಿಂದ.
10 : ನಿನ್ನ ನೋಡಿ ತಳಮಳಗೊಳ್ಳುತ್ತವೆ ಬೆಟ್ಟಗಳು
ಹರಿಯುತ್ತವೆ ಆಗಸದಿಂದ ಪ್ರವಾಹಗಳು
ಕೈಯೆತ್ತಿ ಭೋರ್ಗರೆಯುತ್ತವೆ ಸಾಗರಗಳು.
11 : ಹಾರಿ ಓಡುವ ನಿನ್ನ ಬಾಣಗಳ ಬೆಳಕಿಗೆ
ಥಳಥಳಿಸುವ ನಿನ್ನ ಈಟಿಯ ಹೊಳಪಿಗೆ
ಸೂರ್ಯಚಂದ್ರ ಅಡಗುತ್ತವೆ ಗೂಡಿನೊಳಗೆ.
12 : ಧರೆಯನು ನೀ ಹಾದುಹೋಗುವೆ ರೌದ್ರದಿಂದ
ರಾಷ್ಟ್ರಗಳನು ತುಳಿದುಹಾಕುವೆ
ರೋಷದಿಂದ.
13 : ಹೊರಟಿರುವೆ ನಿನ್ನ ಪ್ರಜೆಗಳ ರಕ್ಷಣೆಗೆ
ನಿನ್ನ ಅಭಿಷಿಕ್ತನ ಜೀವೋದ್ಧಾರಕೆ.
ಬಡಿದುಹಾಕಿರುವೆ ದುರುಳನ ಬುರುಡೆಯನು
ನೆಲಸಮಮಾಡಿರುವೆ ಅವನ ಮನೆಯನು.
14 : ದೀನರನು ಗುಟ್ಟಾಗಿ ದಮನಮಾಡಿ
ಹಿಗ್ಗುವವರಂತೆ
ನನ್ನ ಚದರಿಸಲು ಬಂದರು ಅವನ ಭಟರು
ಬಿರುಗಾಳಿಯಂತೆ
ಅವನ ಆಯುಧಗಳಿಂದಲೆ ಅವರ ತಲೆಯನು
ನೀ ಬಡಿದೆ.
15 : ಅಶ್ವಗಳನ್ನೇರಿ ನೀ ಸಮುದ್ರವನು ದಾಟಿದೆ
ನೊರೆಗರೆಯುವ ಜಲರಾಶಿಯನು
ಹಾದುಹೋದೆ.
16 : ಇದಕೇಳಿ ನಡುನಡುಗಿತು ನನ್ನ ಒಡಲು
ಅದುರಿದವು ಆ ಶಬ್ದಕ್ಕೆ ನನ್ನ ತುಟಿಗಳು
ಕೊಳೆತಂತಾದವು ನನ್ನೆಲುಬುಗಳು
ನಿಂತಲ್ಲೇ ತತ್ತರಿಸಿದವು ನನ್ನ ಕಾಲುಗಳು
ಆಪತ್ತು ಬಂದೊದಗುವುದು
ನಮ್ಮನ್ನು ಆಕ್ರಮಿಸುವವರಿಗೆ
ಕಾದಿರುವೆ ನಾನು ಸಹನಶೀಲನಾಗಿ
ಅಂದಿನವರೆಗೆ.
17 : ಅಂಜೂರದ ಮರ ಚಿಗುರದೆಹೋದರೂ
ದ್ರಾಕ್ಷಾಲತೆಗಳಲ್ಲಿ ಹಣ್ಣು ಕಾಣದೆಹೋದರೂ
ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ
ಹೊಲಗದ್ದೆಗಳು ಆಹಾರ ಕೊಡದೆಹೋದರೂ
ಕುರಿಹಟ್ಟಿಗಳು ಬರಿದಾಗಿಹೋದರೂ
ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
18 : ಸಂತೋಷಿಸುವೆ ನಾನು ಸರ್ವೇಶ್ವರನಲಿ
ಆನಂದಿಸುವೆ ನನ್ನ ಉದ್ಧಾರಕ ದೇವನಲಿ.
19 : ಸ್ವಾಮಿ ಸರ್ವೇಶ್ವರ ನೀಡುವನೆನಗೆ ಧೀರತೆ
ಚುರುಕುಗೊಳಿಸುವನಾತ ನನ್ನ ಕಾಲುಗಳನು
ಜಿಂಕೆಯಂತೆ
ಮಾಡುವನು ಬೆಟ್ಟಗುಡ್ಡಗಳಲಿ ನಾನು
ಓಡಾಡುವಂತೆ.