1 : ಧಿಕ್ಕಾರ ರಕ್ತಮಯವಾದ ನಗರಕೆ!
ತುಂಬಿದೆ ಅದರಲಿ ಸುಳ್ಳು ಮತ್ತು ಸುಲಿಗೆ
ನಿಲ್ಲದೆ ನಡೆಯುತ್ತಿದೆ ಅದರಲಿ ಕೊಳ್ಳೆ.
2 : ಕೇಳಿ, ಚಕ್ರಗಳ ಚೀತ್ಕಾರ, ಚಾಟಿಗಳ ಚಟಪಟ;
ಕುದುರೆಗಳ ಭರದೌಡು, ರಥಗಳ ಹಾರಾಟ.
3 : ರಾಹುತರ ರಭಸ, ಕತ್ತಿಯ ಥಳಥಳಿಪು,
ಈಟಿಯ ಝಳಿಪು;
ಹತರಾದವರು ಅಗಣಿತ; ಸತ್ತವರು
ಅಸಂಖ್ಯಾತ,
ಶವಗಳ ರಾಶಿ ವಿಪರೀತ;
ನುಗ್ಗುವವರು ಎಡವುತಿಹರು ಹೆಣಗಳನು
ದಾಟಿಹೋಗುತ.
4 : ಇದೆಲ್ಲ ಆಗುವುದು ಅಮಿತ ಹಾದರದ ನಿಮಿತ್ತ
ರಾಷ್ಟ್ರಗಳನು ತನ್ನ ಬೆಡಗು ಬಿನ್ನಾಣಗಳಿಂದ
ಜಾರತನಕ್ಕೂ ಗುಲಾಮತನಕ್ಕೂ ಆಕೆ
ತಂದುದರಿಂದ.
5 : ಇಂತೆನ್ನುತ್ತಾರೆ ಸರ್ವಶಕ್ತ ಸರ್ವೇಶ್ವರ:
“ನಿನೆವೆ, ನಿನಗೆ ನಾ ವಿರೋಧಿಯಾಗಿರುವೆನು
ಬಿಚ್ಚಿ ಮುಖದ ಮೇಲೆತ್ತುವೆನು ನಿನ್ನ
ನರಿಗೆಗಳನು
ಜನಾಂಗಗಳಿಗೆ ತೋರಿಸುವೆನು ನಿನ್ನ
ಬೆತ್ತಲೆತನವನು
ರಾಜ್ಯಗಳಿಗೆ ಕಾಣಿಸುವೆನು ನಿನ್ನ
ಅವಮಾನವನು.
6 : ಎಸೆಯುವೆನು ನಿನ್ನ ಮೇಲೆ ಹೊಲಸನು
ಕಳೆಯುವೆನು ನಿನ್ನ ಮಾನವನು
ಪರಿಹಾಸ್ಯಕ್ಕೀಡುಮಾಡುವೆನು ನಿನ್ನನು.
7 : ನಿನ್ನ ನೋಡುವವರು ನಿನ್ನಿಂದ ದೂರ ಓಡುವರು
“ನಿನೆವೆ ಹಾಳುಬಿದ್ದಿದೆ, ಅದಕ್ಕೆ
ಗೋಳಿಡುವರಾರು?
ಅದನ್ನು ಸಂತೈಸುವವರು ನಮಗೆಲ್ಲಿ
ಸಿಕ್ಕಿಯಾರು?,
ಎಂದುಕೊಳ್ಳುವರು.”
8 : “ನೀನು ತೇಬೆಸ್ಸಿಗಿಂತ ಸುಭದ್ರಳೋ? ಅದು ನೈಲಿನ ಪ್ರವಾಹಗಳಲ್ಲಿ ನೆಲೆಯಾಗಿತ್ತು. ನೀರು ಅದನ್ನು ಸುತ್ತಿಕೊಂಡಿತ್ತು. ಮಹಾನದಿ ಅದಕ್ಕೆ ಕೋಟೆಯಾಗಿತ್ತು. ಜಲಾಶಯವು ಅದರ ದುರ್ಗವಾಗಿತ್ತು.
9 : ಸುಡಾನ್ ಮತ್ತು ಈಜಿಪ್ಟ್ ಅದಕ್ಕೆ ಬೆಂಬಲವಾಗಿದ್ದವು. ಪೂಟ್ ಮತ್ತು ಲಿಬ್ಯ ಅದಕ್ಕೆ ಮಿತ್ರನಾಡುಗಳಾಗಿದ್ದವು.
10 : ಆದರೂ ತೇಬೆಸ್ ನಗರವು ಗಡೀಪಾರಾಗಿ ಸೆರೆಹೋಯಿತು. ಅದರ ಮಕ್ಕಳನ್ನು ಬೀದಿಬೀದಿಯ ಮೂಲೆಗಳಲ್ಲಿ ಬಂಡೆಗಳಿಗೆ ಅಪ್ಪಳಿಸಲಾಯಿತು. ಅದರ ಪ್ರಮುಖರನ್ನು ಬಂಧಿಸಿ ಕೊಂಡೊಯ್ದು, ಚೀಟುಹಾಕಿ ಹಂಚಿಕೊಳ್ಳಲಾಯಿತು.
11 : “ನಿನೆವೆಯೇ, ನೀನು ಸಹ ಮತ್ತಳಾಗಿ ತತ್ತರಿಸುವೆ. ಶತ್ರುಗಳಿಂದ ಆಶ್ರಯ ಕೋರುವೆ.
12 : ನಿನ್ನ ಕೋಟೆಗಳೆಲ್ಲ ಮೊತ್ತಮೊದಲು ಮಾಗಿದ ಹಣ್ಣುಗಳುಳ್ಳ ಅಂಜೂರದ ಮರಗಳಂತಿವೆ. ಆ ಮರಗಳನ್ನು ಅಲ್ಲಾಡಿಸಿದ್ದೇ ಆದರೆ ಹಣ್ಣುಗಳು ಬೀಳುವುವು ತಿನ್ನುವವರ ಬಾಯಿಗೆ.
13 : ನಿನ್ನ ಯೋಧರನ್ನು ನೋಡು; ಅವರೆಲ್ಲ ಹೆಣ್ಣಿಗರು. ನಿನ್ನ ದೇಶದ ದ್ವಾರಗಳು ಶತ್ರುಗಳಿಗೆ ತೆರೆದ ಬಾಗಿಲುಗಳು. ಅದರ ಕಬ್ಬಿಣದ ಅಗುಳಿಗಳು ಬೆಂಕಿಯಿಂದ ಭಸ್ಮವಾದವು.
14 : ಮುತ್ತಿಗೆಯ ಕಾಲಕ್ಕೆ ನೀರನ್ನು ಸೇದಿ ಶೇಖರಿಸಿಡು. ನಿನ್ನ ಕೋಟೆಯನ್ನು ಭದ್ರಪಡಿಸು. ಮಣ್ಣಿಗೆ ಇಳಿ; ಜೇಡಿಯನ್ನು ತುಳಿ; ಇಟ್ಟಿಗೆಯ ಅಚ್ಚನ್ನು ಹಿಡಿ.
15 : ನೀನು ಇದ್ದಲ್ಲಿಯೇ ಬೆಂಕಿ ನಿನ್ನನ್ನು ಕಬಳಿಸುವುದು. ಕತ್ತಿಯು ನಿನ್ನನ್ನು ಕಡಿದು ಬಿಡುವುದು. ಮಿಡತೆಗಳು ಬೆಳೆಯನ್ನು ನುಂಗುವಂತೆ ಶತ್ರುಗಳು ನಿನ್ನನ್ನು ನುಂಗಿ ಬಿಡುವರು.
“ನಿನ್ನ ಜನರು ಮಿಡತೆಗಳಂತೆ ಅಸಂಖ್ಯಾತರಾಗಲಿ! ಗುಂಪುಮಿಡತೆಗಳಂತೆ ಅಪರಿಮಿತರಾಗಲಿ!
16 : ನಿನ್ನ ವರ್ತಕರು ಆಕಾಶದ ನಕ್ಷತ್ರಗಳಿಗಿಂತ ಅಧಿಕವಾಗಲಿ! ಆದರೆ ಈಗ ಮಿಡತೆ ತನ್ನ ಪರೆಯನ್ನು ಬಿಟ್ಟು ಹಾರಿಹೋಗುವಂತೆ ಎಲ್ಲರು ಪಲಾಯನವಾಗಲಿ!
17 : ನಿನ್ನ ಪಹರೆಯವರು ಮಿಡತೆಗಳಂತೆ, ನಿನ್ನ ಸೇನಾಧಿಪತಿಗಳು ಗುಂಪು ಮಿಡತೆಗಳಂತೆ ಇದ್ದಾರೆ. ಚಳಿಗಾಲದಲ್ಲಿ ಅವು ಬೇಲಿಯ ಮರೆಯಲ್ಲಿರುತ್ತವೆ. ಹೊತ್ತು ಹುಟ್ಟಿದಾಗ ಯಾರಿಗೂ ತಿಳಿಯದ ಸ್ಥಳಕ್ಕೆ ಹಾರಿ ಹೋಗುತ್ತವೆ.
18 : “ಅಸ್ಸೀರಿಯಾದ ಅರಸನೇ, ನಿನ್ನ ರಾಜ್ಯಪಾಲರು ದೀರ್ಘನಿದ್ರೆಯಲ್ಲಿದ್ದಾರೆ. ನಿನ್ನ ಪ್ರಮುಖರು ಜಡವಾಗಿ ಬಿದ್ದಿದ್ದಾರೆ. ನಿನ್ನ ಪ್ರಜೆಗಳು ಬೆಟ್ಟಗುಡ್ಡಗಳಲ್ಲಿ ಚದರಿಹೋಗಿದ್ದಾರೆ. ಅವರನ್ನು ಒಟ್ಟುಗೂಡಿಸತಕ್ಕವರು ಯಾರೂ ಇಲ್ಲದಿದ್ದಾರೆ.
19 : ನಿನ್ನ ಗಾಯಕ್ಕೆ ಮದ್ದಿಲ್ಲ. ನಿನಗೆ ಬಿದ್ದಿರುವ ಪೆಟ್ಟು ಪ್ರಾಣನಾಶಕ. ನಿನ್ನ ವಿನಾಶದ ಸಮಾಚಾರವನ್ನು ಕೇಳುವರೆಲ್ಲ ಚಪ್ಪಾಳೆ ಹಾಕುತ್ತಾರೆ. ಏಕೆಂದರೆ ನೀನು ಮಾಡಿರುವ ಕೇಡಿಗೆ ಕೊನೆಯಿಲ್ಲ. ಅದರಿಂದ ತಪ್ಪಿಸಿಕೊಂಡವರು ಯಾರೂ ಇಲ್ಲ.”