1 : ನಿನೆವೆಯೇ,
ನಿನಗೆದುರಾಗಿ ನಿಂತಿಹನು, ನಿನ್ನನ್ನು
ಚದುರಿಸುವವನು !
ಕಾವಲಿಡು ಕೋಟೆಯ ಸುತ್ತಲು, ಪಹರೆಯಿಡು
ದಾರಿ ಕಾಯಲು;
ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ
ನಿಲ್ಲು.
2 : (ಸರ್ವೇಶ್ವರ, ಕೊಳ್ಳೆಗಾರರು ಸುಲಿಗೆ ಮಾಡಿದ್ದನ್ನೂ ಮುರಿದುಹಾಕಿದ ದ್ರಾಕ್ಷಿಯ ತೋಟಗಳನ್ನೂ ಸರಿಪಡಿಸಲಿದ್ದಾರೆ. ಯಕೋಬಿನ ಮಹತ್ವವನ್ನು ಹಾಗೂ ಇಸ್ರಯೇಲಿನ ಮಹಿಮೆಯನ್ನು ಈಗ ಮತ್ತೆ ಸ್ಥಾಪಿಸಲಿದ್ದಾರೆ).
3 : ಶತ್ರುವಿನ ಶೂರರ ಗುರಾಣಿ ರಕ್ತಗೆಂಪು,
ಪರಾಕ್ರಮಿಗಳ ಉಡುಪು ಕಡುಗೆಂಪು.
ರಣರಂಗದೊಳು ಥಳಥಳಿಸುತ್ತವೆ ರಥಗಳು
ಝಳಪಿಸುತ್ತವೆ ಈಟಿಗಳು.
ಕಾಳಗಕ್ಕೆ ಕಾತರದಿಂದಿವೆ ಕುದುರೆಗಳು.
4 : ಹಾದಿಬೀದಿಗಳಲಿ ಓಡಾಡುತ್ತಿವೆ ರಥಗಳು
ರಭಸದಿಂದ
ನಗರ ಚೌಕಗಳಲ್ಲಿ ಅವು ಅಡ್ಡಾಡುತ್ತವೆ
ವೇಗದಿಂದ
ಅವು ಬೆಳಗುತ್ತಿವೆ ಪಂಜುಗಳಂತೆ,
ಹೊಳೆಯುತ್ತಿವೆ ಮಿಂಚಿನಂತೆ.
5 : ಹಾಜರಾಗಲು ಕರೆಬಂದಿದೆ ಅರಸನಿಂದ
ಸೇನಾಪತಿಗಳಿಗೆ;
ಎದ್ದುಬಿದ್ದು ಓಡಾಡುತ್ತಿರೆ ಅವರು
ಪೌಳಿಗೋಡೆ ಕಡೆಗೆ
ಅಡ್ಡ ಗುರಾಣಿಗಳನೊಡ್ಡುತ್ತಿರೆ ಟಗರು
ದಿಮ್ಮಿಗಳಿಗೆ.
6 : ತೆರೆಯಲಾಗಿವೆ ನದಿಯ ದ್ವಾರಗಳು
ಕುಸಿದುಬಿದ್ದಿವೆ ಅರಮನೆಯ ಗೋಡೆಗಳು.
7 : ಸೆರೆಹಿಡಿದಿರುವರು ರಾಣಿಯನು; ತಂದಿಹರು
ಆಕೆಯನು ಬೈಲಿಗೆ.
ದಾಸಿಯರು ಬಡಿದುಕೊಳ್ಳುತಿಹರು ಎದೆ;
ರೋದಿಸುತಿಹರು ಪಾರಿವಾಳಗಳಂತೆ.
8 : ನಿನೆವೆ ಕಟ್ಟೆಯೊಡೆದ ಕೆರೆಯಂತಿದೆ;
“ನಿಲ್ಲಿರಿ! ನಿಲ್ಲಿರಿ!” ಎಂಬ ಕೂರು
ಕೇಳುತ್ತಿದೆ;
ಆದರೂ ಓಡುತಿಹರು ಜನರೆಲ್ಲರು ಹಿಂದೆ
ನೋಡದೆ.
9 : ಸೂರೆ ಮಾಡಿರಿ ಅದರ ಬೆಳ್ಳಿಯನು,
ಕೊಳ್ಳೆಹೊಡೆಯಿರಿ ಬಂಗಾರವನು.
ಮಿತಿಯಿಲ್ಲ ಅದರ ಧನಕನಕಕೆ,
ಎಲ್ಲೆಯಿಲ್ಲ ಅದರ ಅಮೂಲ್ಯ ಆಸ್ತಿಪಾಸ್ತಿಗೆ.
10 : ನಿನೆವೆ ಬರಿದಾಗಿದೆ; ಬಟ್ಟಬರಿದಾಗಿ ಪಾಳು
ಬಿದ್ದಿದೆ;
ಎದೆಕರಗಿದೆ, ಮೊಣಕಾಲುಗಳು ಅದರುತ್ತಿವೆ.
ಎಲ್ಲರ ಸೊಂಟಗಳು ಮುರಿದಂತಾಗಿವೆ, ಅವರ
ಮುಖಗಳು ಬಾಡಿಹೋಗಿವೆ.
11 : ಮೃಗರಾಜನ ಗವಿಯೆಲ್ಲಿ? ಯುವಸಿಂಹಗಳ
ಹಕ್ಕೆಯೆಲ್ಲಿ?
ಸಿಂಹ ಸಿಂಹಿಣಿಗಳು, ಅವುಗಳ ಮರಿಗಳು
ಹೆದರದೆ
ತಿರುಗಾಡುತ್ತಿದ್ದ ಎಡೆಯೆಲ್ಲಿ?
13 : ಇಂತೆನ್ನುತ್ತಾರೆ ಸರ್ವಶಕ್ತ ಸರ್ವೇಶ್ವರ:
“ನಿನಗೆ ವಿರುದ್ಧವಾಗಿದ್ದೇನೆ ನಾನು;
ಸುಟ್ಟು ಭಸ್ಮಮಾಡುವೆ ನಿನ್ನ ರಥಗಳನು;
ಸಂಹರಿಸಿಬಿಡುವೆನು ನಿನ್ನ ಯುವಸಿಂಹಗಳನು;
ನಿನಗೆ ಜಗದಲ್ಲೆಲ್ಲ ಬೇಟೆ ಸಿಗದಂತೆ
ಮಾಡುವೆನು;
ಯಾರೂ ಕೇಳರು ನಿನ್ನ ರಾಯಭಾರಿಗಳ
ಮಾತನು.”