Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿೂಕ


1 : ಅಯ್ಯೋ, ನನ್ನ ಗತಿ ಏನೆಂದು ಹೇಳಲಿ? ಬೇಸಿಗೆಯಲ್ಲಿ ಬೆಳೆಯನ್ನು ಕೊಯ್ಯಲು ಬಂದವನಂತೆ ಇದ್ದೇನೆ. ಹಕ್ಕಲನ್ನು ಆಯ್ದಮೇಲೆ ದ್ರಾಕ್ಷಿಹಣ್ಣನ್ನು ಕೊಯ್ಯಲು ಬಂದವನಂತೆ ಇದ್ದೇನೆ. ತಿನ್ನುವುದಕ್ಕೆ ಒಂದು ಗೊಂಚಲು ಸಹ ಉಳಿದಿಲ್ಲ. ನನಗೆ ಇಷ್ಟವಾದ ದೋರೆ ಅಂಜೂರ ಕೂಡ ಸಿಕ್ಕುತ್ತಿಲ್ಲ.
2 : ನಾಡಿನಲ್ಲಿ ದೈವಭಕ್ತರೆಲ್ಲರು ನಾಶವಾದರು; ಸಜ್ಜನರಾರೂ ಉಳಿದಿಲ್ಲ. ಇರುವವರು ಬಲೆಯೊಡ್ಡಿ ಒಬ್ಬರನ್ನೊಬ್ಬರು ಬೇಟೆಯಾಡುತ್ತಾರೆ. ರಕ್ತಪಾತಕ್ಕಾಗಿ ಹೊಂಚುಹಾಕುತ್ತಾರೆ.
3 : ದುಷ್ಕøತ್ಯಗಳನ್ನು ಮಾಡುವುದರಲ್ಲಿ ಅವರದು ನುರಿತಕೈ. ಅಧಿಕಾರಿಗಳು ಮತ್ತು ನ್ಯಾಯಾಧಿಪತಿಗಳು ಲಂಚಕ್ಕಾಗಿ ಕೈಯೊಡ್ಡುತ್ತಾರೆ. ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ಅಂತರಂಗದ ದುರಾಸೆಯನ್ನು ವ್ಯಕ್ತಪಡಿಸುತ್ತಾರೆ. ಎಲ್ಲರು ಒಟ್ಟಿಗೆ ಸೇರಿ ಒಳಸಂಚು ಮಾಡುತ್ತಾರೆ.
4 : ಅವರಲ್ಲಿ ಅತ್ತುತ್ತಮನಾದವನೂ ಮುಳ್ಳಿನ ಪೊದೆಗೆ ಸಮಾನ. ಸತ್ಯವಂತನೂ ಮುಳ್ಳುಬೇಲಿಗಿಂತ ಕಡೆ. ಜನರ ದಂಡನೆಯ ದಿನ ಸಮೀಪಿಸಿದೆ. ಅವರ ಕಾವಲುಗಾರರಾದ ಪ್ರವಾದಿಗಳು ಮುಂತಿಳಿಸಿದ ಕಾಲ ಬಂದಿದೆ. ಜನರೆಲ್ಲರು ದಿಗ್ಭ್ರಾಂತರಾಗುವರು.
5 : ನೆರೆಯವನನ್ನು ನಂಬಬೇಡ, ಆಪ್ತನಲ್ಲಿ ಭರವಸೆ ಇಡಬೇಡ. ನಿನ್ನೊಡನೆ ಮಲಗುವ ಮಡದಿಯೊಂದಿಗೂ ಬಾಯಿಬಿಡಬೇಡ.
6 : ಮಗನು ತಂದೆಯನ್ನು ತುಚ್ಛೀಕರಿಸುವನು; ಮಗಳು ತಾಯಿಗೆ ಎದುರಾಗಿರುವಳು; ಸೊಸೆ ಅತ್ತೆಯೊಂದಿಗೆ ಜಗಳವಾಡುವಳು. ಹೀಗೆ ಮನುಷ್ಯನಿಗೆ ತನ್ನ ಮನೆಯವರೇ ವೈರಿಗಳಾಗುವರು.
7 : ನಾನಾದರೋ ಸರ್ವೇಶ್ವರನ ಕಡೆಗೆ ಕಣ್ಣೆತ್ತಿ ನೋಡುವೆನು. ನನ್ನ ಉದ್ಧಾರಕ ದೇವರನ್ನು ನಿರೀಕ್ಷಿಸಿ ಕೊಂಡಿರುವೆನು. ನನ್ನ ದೇವರು ನನಗೆ ಕಿವಿಗೊಡುವರು. ಸರ್ವೇಶ್ವರನಿಂದ ಜೀವೋದ್ಧಾರ
8 : ನನ್ನ ಶತ್ರುಗಳೇ, ನನ್ನನ್ನು ನೋಡಿ ಹಿಗ್ಗಬೇಡಿ. ನಾನು ಬಿದ್ದು ಹೋದರೂ, ಎದ್ದೇಳುವೆನು; ಕತ್ತಲೆಯಲ್ಲಿ ಕುಳಿತಿದ್ದರೂ ಸರ್ವೇಶ್ವರ ನನಗೆ ಬೆಳಕಾಗುವರು.
9 : ಆ ಸ್ವಾಮಿಗೆ ವಿರುದ್ಧ ನಾನು ಪಾಪಮಾಡಿದ್ದರಿಂದ ಅವರ ಕೋಪವನ್ನು ನಾನು ಸಹಿಸಿಕೊಳ್ಳಬೇಕಾಗುತ್ತದೆ. ಅವರು ನನ್ನ ಪರವಾಗಿ ವಾದಿಸಿ ನನಗಾದ ಅನ್ಯಾಯವನ್ನು ನೀಗಿಸುವರು; ನನ್ನನ್ನು ಕತ್ತಲೆಯಿಂದ ಬೆಳಕಿಗೆ ತರುವರು. ಅವರಿಂದ ಬರುವ ರಕ್ಷಣಾನೀತಿಯನ್ನು ಆಗ ಸವಿಯುವೆನು.
10 : ಇದನ್ನು ನನ್ನ ಶತ್ರುಗಳು ನೋಡುವರು. “ನಿನ್ನ ದೇವರಾದ ಸರ್ವೇಶ್ವರನೆಲ್ಲಿ?” ಎಂದು ನನ್ನನ್ನು ಜರೆದವರೇ ನಾಚಿಕೆಪಡುವರು. ಇದನ್ನು ನಾನು ಕಣ್ಣಾರೆ ಕಾಣುವೆನು. ಆ ಶತ್ರುಗಳಾದರೋ ಬೀದಿಯ ಕಸದಂತೆ ದಾರಿಹೋಕರ ತುಳಿತಕ್ಕೆ ಈಡಾಗುವರು.
11 : ಜೆರುಸಲೇಮಿನ ನಿವಾಸಿಗಳೇ, ನಿಮ್ಮ ಕೋಟೆಯ ಗೋಡೆಗಳನ್ನು ಮರಳಿ ಎಬ್ಬಿಸುವ ದಿನ ಬರುವುದು. ಅಂದು ನಿಮ್ಮ ಗಡಿಯ ವಿಸ್ತರಣೆ ಆಗುವುದು.
12 : ಅಂದು ಜನರು ಅಸ್ಸೀರಿಯದಿಂದಲೂ ಈಜಿಪ್ಟಿನಿಂದಲೂ ನಿಮ್ಮ ಬಳಿಗೆ ಬಂದುಸೇರುವರು. ಸಮುದ್ರದಿಂದ ಸಮುದ್ರದವರೆಗೂ ಪರ್ವತದಿಂದ ಪರ್ವತದವರೆಗೂ ಈಜಿಪ್ಟಿನಿಂದ ಯೂಫ್ರೆಟಿಸ್ ನದಿಯವರೆಗೂ ಚದರಿಹೋಗಿರುವ ಜನರೆಲ್ಲರು ನಿನ್ನೆಡೆಗೆ ಬರುವರು.
13 : ಆದರೆ ನಾಡು ಅದರ ನಿವಾಸಿಗಳ ನಿಮಿತ್ತ ಹಾಗೂ ಅವರ ದುಷ್ಕøತ್ಯಗಳ ಪರಿಣಾಮವಾಗಿ, ಮರಳುಗಾಡಾಗಿ ಮಾರ್ಪಡುವುದು.
14 : ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ.
15 : ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ.
16 : ಅನ್ಯ ರಾಷ್ಟ್ರಗಳು ಇವನ್ನು ನೋಡಿ ಅವುಗಳ ಮುಂದೆ ತಮ್ಮ ಶಕ್ತಿಸಾಮಥ್ರ್ಯ ಏನೂ ಇಲ್ಲವೆಂದು ನಾಚಿಕೆಪಟ್ಟು ಬಾಯಮೇಲೆ ಕೈಯಿಟ್ಟುಕೊಳ್ಳುವರು; ಅವರ ಕಿವಿ ಕಿವುಡಾಗುವುದು.
17 : ನೆಲದ ಮೇಲೆ ಹರಿದಾಡುವ ಹಾವುಹಲ್ಲಿಗಳಂತೆ ಅವರು ಮಣ್ಣು ಮುಕ್ಕುವರು; ಗಡಗಡನೆ ನಡುಗುತ್ತಾ ಬಿಲದಿಂದ ಈಚೆ ಬರುವರು. ಸರ್ವೇಶ್ವರ ಎಂಬ ನಮ್ಮ ದೇವರಾದ ನಿಮ್ಮ ಕಡೆಗೆ ಭಯಭಕ್ತಿಯಿಂದ ತಿರುಗಿಕೊಳ್ಳುವರು.
18 : ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ.
19 : ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ.
20 : ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

· © 2017 kannadacatholicbible.org Privacy Policy