Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ವಿೂಕ


1 : ಸರ್ವೇಶ್ವರ ಹೇಳುವುದನ್ನು ಕೇಳಿರಿ: “ಎದ್ದೇಳು; ಬೆಟ್ಟಗಳ ಸಮ್ಮುಖದಲ್ಲಿ ನಿನ್ನ ವ್ಯಾಜ್ಯ ನಡೆಯಲಿ; ನಿನ್ನ ಧ್ವನಿ ಗುಡ್ಡಗಳಿಗೆ ಕೇಳಿಸಲಿ.
2 : “ಬೆಟ್ಟಗಳೇ, ಸರ್ವೇಶ್ವರಸ್ವಾಮಿಯ ಆಪಾದನೆಯನ್ನು ಕೇಳಿರಿ. ಭೂಮಿಯ ಸ್ಥಿರವಾದ ಅಸ್ತಿಭಾರಗಳೇ, ಕಿವಿಗೊಡಿ. ಆ ಸ್ವಾಮಿಗೆ ತನ್ನ ಪ್ರಜೆಯ ಮೇಲೆ ವ್ಯಾಜ್ಯವಿದೆ; ಅವರು ಇಸ್ರಯೇಲಿನ ವಿರುದ್ಧ ವಾದಿಸುವುದನ್ನು ಗಮನಿಸಿರಿ.”
3 : ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆ? ಯಾವ ವಿಷಯದಲ್ಲಿ ನಿನಗೆ ಬೇಸರವನ್ನುಂಟುಮಾಡಿದೆ? ಪ್ರಮಾಣವಾಗಿ ಹೇಳು.
4 : ಈಜಿಪ್ಟ್ ದೇಶದಿಂದ ನಾನು ನಿನ್ನನ್ನು ಕರೆತಂದೆ; ದಾಸತ್ವದ ಬಂಧನದಿಂದ ನಿನ್ನನ್ನು ಬಿಡುಗಡೆ ಮಾಡಿದೆ. ನಿನಗೆ ಮೋಶೆ, ಆರೋನ್ ಮತ್ತು ಮಿರ್ಯಾಮಳನ್ನು ನಾಯಕರನ್ನಾಗಿ ಕಳುಹಿಸಿದೆ.
5 : ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಕೊಟ್ಟ ಸಲಹೆಯನ್ನು ನೆನಪಿಗೆ ತಂದುಕೊಳ್ಳಿ. ಬೆಯೋರನ ಮಗನಾದ ಬಿಳಾಮನು ಕೊಟ್ಟ ಉತ್ತರವನ್ನು ಜ್ಞಾಪಿಸಿಕೊಳ್ಳಿ. ನೀವು ತಿಟ್ಟೀಮನ್ನು ಬಿಟ್ಟಂದಿನಿಂದ ಗಿಲ್ಗಾಲನ್ನು ಸೇರುವತನಕ ನಡೆದುದನೆಲ್ಲಾ ಸ್ಮರಿಸಿಕೊಳ್ಳಿ. ಆಗ ಸರ್ವೇಶ್ವರ ನಿಮ್ಮನ್ನು ರಕ್ಷಿಸಲು ಮಾಡಿದ ಮಹತ್ಕಾರ್ಯಗಳು ನಿಮಗೆ ಮನದಟ್ಟಾಗುವುವು.”
6 : ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ, ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡು ಹೋಗಲೇ?
7 : ಸಾವಿರಾರು ಟಗರುಗಳನ್ನೂ ಧಾರಾಕಾರವಾಗಿ ಹರಿಯುವ ತೈಲ ಪ್ರವಾಹಗಳನ್ನು ನೋಡಿ ಸರ್ವೇಶ್ವರ ಮೆಚ್ಚುವುದುಂಟೆ? ನಾನು ಮಾಡಿದ ದ್ರೋಹಕ್ಕಾಗಿ ನನ್ನ ಚೊಚ್ಚಲುಮಗನನ್ನೇ ಅರ್ಪಿಸಲೇ? ನನ್ನ ಪಾಪಕ್ಕಾಗಿ ನನ್ನ ಕರುಳ ಕುಡಿಯನ್ನೇ ಬಲಿಕೊಡಲೇ?
8 : ಇಲ್ಲ ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು.
9 : ಸರ್ವೇಶ್ವರ ಸ್ವಾಮಿಯಲ್ಲಿ ಭಯಭಕ್ತಿಯಿಂದಿರುವುದು ಸುಜ್ಞಾನ. ಇದು ಆ ಸ್ವಾಮಿಯ ವಾಣಿ; ಪಟ್ಟಣಕ್ಕೆ ನೀಡುವ ಎಚ್ಚರಿಕೆಯ ಕರೆ:
10 : “ನಗರದ ಸಭಿಕರೇ, ಕೇಳಿ! ಅಕ್ರಮವಾಗಿ ಗಳಿಸಿದ ಆಸ್ತಿ ದುರುಳರ ಮನೆಯಲ್ಲಿರುವುದು ನನಗೆ ಗೊತ್ತಿಲ್ಲವೆ? ಅವರ ಮೋಸದ ಅಳತೆಗಳನ್ನು ನಾನು ಒಪ್ಪುವುದು ಸಾಧ್ಯವೆ?
11 : ಕಳ್ಳ ತಕ್ಕಡಿಗಳಿಂದ ಮೋಸದ ಬಟ್ಟುಗಳಿಂದ ಅಳೆದು ಹಾಕುವವನು ನಿರ್ದೋಷಿಯೆಂದು ತೀರ್ಮಾನಿಸಲೆ?
12 : ನಿಮ್ಮ ಧನಿಕರು ಹಿಂಸಾತ್ಮಕರು; ನಿಮ್ಮ ನಿವಾಸಿಗಳು ಸುಳ್ಳುಗಾರರು! ಅವರ ಬಾಯಿ ಮಾತು ಕಪಟ.
13 : ಆದಕಾರಣ ನಿಮ್ಮನ್ನು ಕಠಿಣವಾಗಿ ದಂಡಿಸುವೆನು. ನಿಮ್ಮ ಪಾಪದ ನಿಮಿತ್ತ ನಾಶವಾಗುವಿರಿ.
14 : ಎಷ್ಟು ತಿಂದರೂ ನಿಮಗೆ ತೃಪ್ತಿಯಾಗದು; ನಿಮ್ಮಲ್ಲಿ ಹಸಿವು ಇದ್ದೇ ಇರುತ್ತದೆ. ನೀವು ಎಷ್ಟು ಕೂಡಿಸಿಟ್ಟರೂ ಅದು ನಿಮಗೆ ಉಳಿಯುವುದಿಲ್ಲ; ಏಕೆಂದರೆ ಉಳಿದುದ್ದನ್ನು ಕದನದಲ್ಲಿ ಹಾಳಾಗಿಸುವೆನು.
15 : ನೀವು ಬೀಜವನ್ನು ಬಿತ್ತಿದರೂ ಬೆಳೆಯನ್ನು ಕೊಯ್ಯಲಾರಿರಿ. ಕಾಳನ್ನು ಗಾಣಕ್ಕೆ ಸುರಿದರೂ ಎಣ್ಣೆಯನ್ನು ತೆಗೆಯಲಾರಿರಿ. ದ್ರಾಕ್ಷಿಯನ್ನು ಆಲೆಮನೆಗೆ ಹಾಕಿದರೂ ದ್ರಾಕ್ಷಾರಸವನ್ನು ಕುಡಿಯಲಾರಿರಿ.
16 : “ಒಮ್ರಿ ಅರಸನ ಆಜ್ಞೆಗಳನ್ನೂ ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದಕಾರಣ ನಿಮ್ಮನ್ನು ವಿನಾಶಗೊಳಿಸುವೆನು; ನಿಮ್ಮ ಜನರನ್ನು ಅಪಹಾಸ್ಯಕ್ಕೆ ಈಡುಮಾಡುವೆನು. ನೀವು ಜನಾಂಗಗಳ ನಿಂದೆಗೆ ಗುರಿಯಾಗುವಿರಿ.”

· © 2017 kannadacatholicbible.org Privacy Policy