1 : ಸಿಯೋನ್ ನಗರಿಯೇ, ನಿನ್ನ ಸೇನಾ ವ್ಯೂಹಗಳನ್ನು ಒಟ್ಟುಗೂಡಿಸು. ಇಗೋ, ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ. ಅವರು ಇಸ್ರಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು!
2 : ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು.
3 : ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು.
4 : ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.
5 : ಆತನೇ ನಮಗೆ ಶಾಂತಿದಾತನು. ಅಸ್ಸೀರಿಯದವರು ನಮ್ಮ ಮೇಲೆ ದಾಳಿಮಾಡಿ ಆಕ್ರಮಣ ಮಾಡುವಾಗ, ಅವರಿಗೆ ವಿರುದ್ಧ ಏಳುಮಂದಿ ಪಾಲಕರನ್ನು ಹಾಗೂ ಎಂಟುಮಂದಿ ಪುರುಷೋತ್ತಮರನ್ನು ನೇಮಿಸುವೆನು.
6 : ಅಸ್ಸೀರಿಯದವರು ಇವರ ಶಸ್ತ್ರಾಸ್ತ್ರಗಳಿಗೆ ತುತ್ತಾಗುವರು. ನಿಮ್ರೋದ್ ಸೀಮೆಯ ಪ್ರವೇಶದ್ವಾರಗಳು ಧ್ವಂಸವಾಗುವುವು. ಅಸ್ಸೀರಿಯದವರು ನಮ್ಮ ನಾಡಿಗೆ ನುಗ್ಗಿ ನಮ್ಮ ಕೋಟೆಯನ್ನು ಆಕ್ರಮಿಸುವಾಗ, ಆ ಶಾಂತಿದಾತನು ನಮ್ಮನ್ನು ರಕ್ಷಿಸುವನು.
7 : ಸರ್ವೇಶ್ವರಸ್ವಾಮಿಯ ಕೃಪೆಯಿಂದ ಇಬ್ಬನಿಯೂ ತುಂತುರುಮಳೆಯೂ ಮಾನವನ ನೆರವನ್ನು ನಿರೀಕ್ಷಿಸದೆ, ಹುಲ್ಲನ್ನು ಸಮೃದ್ಧಿಗೊಳಿಸುತ್ತವೆ. ಅಂತೆಯೇ ಯಕೋಬನ ಅಳಿದುಳಿದ ವಂಶದವರು ಹಲವಾರು ಜನಾಂಗಗಳ ಮಧ್ಯೆ ನೆಲಸಿ, ಅವರ ಅಭ್ಯುದಯಕ್ಕೆ ಕಾರಣರಾಗುವರು.
8 : ಸಿಂಹವು ತಿರುಗಾಡುತ್ತಾ ಕಾಡುಮೃಗಗಳನ್ನು ಕಬಳಿಸುತ್ತದೆ. ಪ್ರಾಯದ ಸಿಂಹವು ಓಡಾಡುತ್ತಾ ಸುರಕ್ಷಣೆಯಿಲ್ಲದ ಕುರಿಮಂದೆಗಳನ್ನು ಸೀಳಿ ಹಾಕುತ್ತದೆ. ಅಂತೆಯೇ ಯಕೋಬನ ಅಳಿದುಳಿದ ಜನರು ದೇಶವಿದೇಶಗಳ ಹಲವಾರು ರಾಷ್ಟ್ರಗಳ ನಡುವೆ ನಾಶಕರವಾಗಿರುವರು.
9 : ಯಕೋಬ ವಂಶಜರೇ, ನಿಮ್ಮ ಎದುರಾಳಿಗಳ ಮೇಲೆ ನಿಮಗೆ ಜಯ ಲಭಿಸಲಿ. ನಿಮ್ಮ ಶತ್ರುಗಳೆಲ್ಲಾ ನಿರ್ಮೂಲವಾಗಲಿ.
10 : ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಂದು ಕುದುರೆಗಳನ್ನು ಕಡಿದುಬಿಡುವೆನು. ನಿಮ್ಮ ರಥಗಳನ್ನು ಧ್ವಂಸಮಾಡುವೆನು.
11 : ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು; ನಿಮ್ಮ ಕೋಟೆ ಕೊತ್ತಲಗಳನ್ನು ಕೆಡವಿಬಿಡುವೆನು.
12 : ನಿನ್ನ ನುರಿತ ಮಂತ್ರತಂತ್ರಗಳನ್ನು ನಿಲ್ಲಿಸಿಬಿಡುವೆನು. ನಿನ್ನ ಮಂತ್ರವಾದಿಗಳನ್ನು ನಿರ್ಮೂಲ ಮಾಡುವೆನು.
13 : ನೀನು ಕೆತ್ತಿದ ವಿಗ್ರಹಗಳನ್ನು ಒಡೆದುಹಾಕಿ, ನೀನು ನಿಲ್ಲಿಸಿದ ಕಲ್ಲುಕಂಬಗಳನ್ನು ಉರುಳಿಸಿ ಬಿಡುವೆನು. ನಿನ್ನ ಕೈಗೆಲಸವಾದ ವಿಗ್ರಹಗಳನ್ನು ನೀನು ಪೂಜಿಸದಂತೆ ಮಾಡುವೆನು.
14 : ನಿನ್ನ ಆಶೇರಾ ದೇವತೆಯ ವಿಗ್ರಹಗಳನ್ನು ಕಿತ್ತೊಗೆದು, ನಿನ್ನ ಪಟ್ಟಣಗಳನ್ನು ನೆಲಸಮ ಮಾಡುವೆನು. ನನ್ನ ಮಾತನ್ನು ಕೇಳದ ರಾಷ್ಟ್ರಗಳಿಗೆ ಉಗ್ರಕೋಪದಿಂದ ಮುಯ್ಯಿತೀರಿಸುವೆನು.”