1 : ಕಾಲಾಂತ್ಯದೊಳು ಸರ್ವೇಶ್ವರನ
ದೇವಾಲಯವಿರುವ ಪರ್ವತ
ಬೆಳೆದು ನೆಲೆಗೊಳ್ಳುವುದು ಸರ್ವ
ಪರ್ವತಗಳಿಗಿಂತ ಉನ್ನತೋನ್ನತ
ಹರಿದು ಬರುವುವಾಗ ಜನಾಂಗಗಳು
ಪ್ರವಾಹದಂತೆ ಅದರತ್ತ.
2 : ಈ ಪರಿ ಬಂದ ಹಲವು ನಾಡಿಗರು ಪೇಳ್ವರು
ಆನರಿಗೆ:
ಬನ್ನಿ, ಹೋಗೋಣ, ಸರ್ವೇಶ್ವರನ ಪರ್ವತಕೆ
ಯಕೋಬ್ಯರಾ ದೇವರ ಮಂದಿರಕೆ.
ಬೋಧಿಸುವನಾತ ತನ್ನ ಮಾರ್ಗವನು ನಮಗೆ
ನಡೆಯುವೆವು ನಾವು ಆತನ
ದಾರಿಗನುಗುಣವಾಗ್ಗೆ.
ಬರುವುದು ಧರ್ಮೋಪದೇಶ ಸಿಯೋನಿಂದ
ಸರ್ವೇಶ್ವರನಾ ವಾಕ್ಯ ಜೆರುಸಲೇಮಿನಿಂದ.
3 : ಬಗೆಹರಿಸುವನಾತ ಹಲವು ರಾಷ್ಟ್ರಗಳಾ
ವ್ಯಾಜ್ಯವನು
ತೀರಿಸುವನು ಪ್ರಬಲ ಜನಾಂಗಗಳಿಗೆ
ನ್ಯಾಯವನು.
ಹಾಕುವರವರು ಕುಲುಮೆಗೆ ತಮ್ಮ ಕತ್ತಿಗಳನು
ಮಾರ್ಪಡಿಸುವರು ಅವುಗಳನ್ನು ಗುಳಗಳನ್ನಾಗಿ
ಭರ್ಜಿಗಳನ್ನೂ ಕುಡುಗೋಲುಗಳನ್ನಾಗಿ.
4 : ನಿಲ್ಲದು ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ
ಅವಶ್ಯವಿರದವಕ್ಕೆ ಯುದ್ಧವಿದ್ಯೆಯ ಕಲಿಕೆ.
ಕೂರುವರು ಪ್ರತಿಯೋರ್ವರು ತಂತಮ್ಮ
ದ್ರಾಕ್ಷಲತೆಗಳಡಿಯಲೆ
ಕೂರುವರವರು ತಂತಮ್ಮ ಅಂಜೂರ ಗಿಡಗಳ
ನೆರಳಲೆ
ಈ ಪರಿ ನುಡಿದಿಹನು ಸೇನಾಧೀಶ್ವರನಾದ
ಸರ್ವೇಶ್ವರನೆ.
5 : ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ನಾಮಸ್ಮರಣೆ ಮಾಡಿ, ಅದರಂತೆ ನಡೆದುಕೊಳ್ಳುತ್ತಾರೆ. ನಾವಾದರೋ ನಮ್ಮ ದೇವರಾದ ಸರ್ವೇಶ್ವರಸ್ವಾಮಿಯ ನಾಮವನ್ನು ಸ್ಮರಿಸಿ ಅದಕ್ಕನುಗುಣವಾಗಿ ಸದಾಕಾಲವೂ ನಡೆದುಕೊಳ್ಳುವೆವು.
6 : ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನಗಳಲ್ಲಿ ನಾನು ಅಂಗಹೀನರಾದವರನ್ನು ಒಟ್ಟುಗೂಡಿಸುವೆನು. ಹೊರದೂಡಲಾದವರನ್ನು ಮತ್ತು ಸಂಕಟಕ್ಕೆ ಈಡಾದವರನ್ನು ಒಂದಾಗಿ ಸೇರಿಸುವೆನು.
7 : ಅಂಗಹೀನ ಜನರನ್ನು ಉದ್ಧರಿಸಿ ಕಾಪಾಡುವೆನು. ಹೊರದೂಡಲಾದ ಪ್ರಜೆಯನ್ನು ಪ್ರಬಲ ರಾಷ್ಟ್ರವನ್ನಾಗಿ ಮಾಡುವೆನು. ಸರ್ವೇಶ್ವರ ಸಿಯೋನ್ ಪರ್ವತದಲ್ಲಿ ಇಂದಿನಿಂದ ಎಂದೆಂದಿಗೂ ಅವರಿಗೆ ಅರಸರಾಗಿರುವರು.”
8 : ಜೆರುಸಲೇಮೇ, ಮಂದೆಗೆ ರಕ್ಷೆ ಕೊಡುವ ಗೋಪುರವೇ, ಸಿಯೋನ್ ಕುವರಿಯ ಸುಭದ್ರ ಕೋಟೆಯೇ, ಹಿಂದಿನ ಆಡಳಿತ ನಿನಗೆ ಮರಳಿ ಲಭಿಸುವುದು. ಪ್ರಾಚೀನ ರಾಜ್ಯಾಧಿಕಾರ ಪುನಃ ನಿನಗೆ ದೊರಕುವುದು.
9 : ನೀನೀಗ ರೋದಿಸುವುದೇಕೆ? ಪ್ರಸವವೇದನೆ ಪಡುವವಳಂತೆ ನರಳುವುದೇಕೆ? ನಿನಗೆ ರಾಜನಿಲ್ಲವೇ? ನಿನ್ನ ಸಲಹೆಗಾರ ಸತ್ತುಹೋದನೇ?
10 : ಸಿಯೋನ್ ಕುವರಿಯೇ, ಪ್ರಸವವೇದನೆಯಿಂದ ನರಳಾಡು; ಪಟ್ಟಣವನ್ನು ಬಿಟ್ಟು, ಬಯಲಿನಲ್ಲಿ ವಾಸಮಾಡು. ಬಾಬಿಲೋನಿಗೆ ತೆರಳು. ಅಲ್ಲೇ ನಿನಗೆ ಉದ್ಧಾರವಾಗುವುದು. ಅಲ್ಲೇ ನಿನ್ನ ಶತ್ರುಗಳಿಂದ ಸರ್ವೇಶ್ವರ ಬಿಡುಗಡೆ ಮಾಡುವರು.
11 : ಹಲವು ರಾಷ್ಟ್ರಗಳು ನಿನಗೆ ವಿರುದ್ಧ ಕೂಡಿಬಂದು: “ಜೆರುಸಲೇಮನ್ನು ಹೊಲಸುಮಾಡೋಣ, ‘ಸಿಯೋನಿನ ನಾಶವನ್ನು ಕಣ್ಣಾರೆ ನೋಡೋಣ’ ಎನ್ನುತ್ತಿವೆ.
12 : ಆದರೆ ಸರ್ವೇಶ್ವರಸ್ವಾಮಿಯ ಆಲೋಚನೆಗಳನ್ನು ಅವರು ಅರಿತುಕೊಂಡಿಲ್ಲ. ಆ ಸ್ವಾಮಿಯ ಉದ್ದೇಶವನ್ನು ಅವರು ಗ್ರಹಿಸಿಕೊಂಡಿಲ್ಲ; ಕಣಕ್ಕೆ ಹಾಕಿದ ಕಂತೆಗಳಂತೆ ಅವರನ್ನು ಸ್ವಾಮಿ ಸೇರಿಸಿದ್ದಾರೆ ಎಂಬುದನ್ನು ಅವರು ಅರ್ಥೈಸಿಕೊಂಡಿಲ್ಲ.”
13 : ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನ್ ನಗರಿಯೇ, ಎದ್ದು ಒಕ್ಕಣೆ ಮಾಡು. ಇದಕ್ಕಾಗಿ ನಿನ್ನ ಕೊಂಬನ್ನು ಕಬ್ಬಿಣವಾಗಿಸುವೆನು. ನಿನ್ನ ಗೊರಸನ್ನು ಕಂಚನ್ನಾಗಿ ಮಾಡುವೆನು. ಅನೇಕ ರಾಷ್ಟ್ರಗಳನ್ನು ನೀನು ತುಳಿದು ಧ್ವಂಸಮಾಡುವೆ. ಅವುಗಳನ್ನು ಕೊಳ್ಳೆಹೊಡೆದು ತಂದ ಸ್ವತ್ತನ್ನು ಸರ್ವೇಶ್ವರಸ್ವಾಮಿಗೆ ಮೀಸಲಾಗಿಡುವೆ. ಅವುಗಳಿಂದ ಬಂದ ಆಸ್ತಿಯನ್ನು ಲೋಕದೊಡೆಯನಿಗೆ ಪ್ರತ್ಯೇಕಿಸಿಡುವೆ.”