1 : ಆಗ ನಾನು ಇಂತೆಂದೆನು: “ಯಕೋಬ ವಂಶದ ಮುಖಂಡರೇ, ಇಸ್ರಯೇಲ್ ವಂಶದ ಅಧಿಪತಿಗಳೇ, ಕಿವಿಗೊಟ್ಟು ಕೇಳಿರಿ. ನ್ಯಾಯನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೆ?
2 : ಆದರೂ ನೀವು ಒಳಿತನ್ನು ದ್ವೇಷಿಸುತ್ತೀರಿ. ಕೆಟ್ಟದ್ದನ್ನು ಬಯಸುತ್ತೀರಿ. ನನ್ನ ಜನರ ಚರ್ಮವನ್ನು ಜೀವಸಹಿತ ಸುಲಿಯುತ್ತೀರಿ. ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ತಿನ್ನುತ್ತೀರಿ.
3 : ನನ್ನ ಪ್ರಜೆಯ ಮೈ ಚರ್ಮವನ್ನು ಸುಲಿಯುವುದಲ್ಲದೆ ಅವರ ಎಲುಬುಗಳನ್ನು ಮುರಿದುಹಾಕುತ್ತೀರಿ. ಹಂಡೆಯಲ್ಲಿನ ತುಂಡುಗಳಂತೆ, ಆವಿಗೆಯಲ್ಲಿನ ಮಾಂಸದ ಚೂರುಗಳಂತೆ ನನ್ನ ಪ್ರಜೆಯನ್ನು ಚೂರುಚೂರಾಗಿ ಕತ್ತರಿಸಿಹಾಕಿದ್ದೀರಿ.
4 : ಇಷ್ಟೆಲ್ಲಾ ಮಾಡಿದಂಥ ನೀವು ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತೀರಿ. ಆದರೆ ಅವರು ನಿಮಗೆ ಉತ್ತರ ಕೊಡುವುದಿಲ್ಲ. ಬದಲಿಗೆ ನಿಮ್ಮ ದುಷ್ಕøತ್ಯಗಳ ನಿಮಿತ್ತ ನಿಮಗೆ ವಿಮುಖರಾಗುವರು.”
5 : ಜನರನ್ನು ಸನ್ಮಾರ್ಗದಿಂದ ದುರ್ಮಾರ್ಗಕ್ಕೆ ಎಳೆಯುವ ಪ್ರವಾದಿಗಳಿಗೆ ತಿನ್ನಲು ಏನಾದರೂ ಕೊಟ್ಟರೆ “ಶಾಂತಿ” ಎನ್ನುತ್ತಾರೆ. ಆದರೆ ತಿನ್ನಲು ಯಾರಾದರೂ ಕೊಡದಿದ್ದರೆ ಯುದ್ಧದ ಬೆದರಿಕೆ ಹಾಕುತ್ತಾರೆ.
6 : ಅಂಥ ಪ್ರವಾದಿಗಳಿಗೆ ಸರ್ವೇಶ್ವರ: “ಅಂಧಕಾರ ನಿಮ್ಮನ್ನು ಆವರಿಸುವುದು. ದಿವ್ಯ ದರ್ಶನ ನಿಮಗೆ ದೊರಕದು. ನಿಮಗೆ ಕತ್ತಲು ಕವಿದಂತಾಗಿ ಕಣಿಹೇಳಲು ಸಾಧ್ಯವಾಗದು. ಸೂರ್ಯ ನಿಮ್ಮ ಪಾಲಿಗೆ ಮುಳುಗಿದಂತೆಯೇ. ಹಗಲು ನಿಮಗೆ ಕಾರ್ಗತ್ತಲೆಯಂತೆಯೆ.”
7 : ಹೀಗಾಗಿ ದಿವ್ಯದರ್ಶಿಗಳಿಗೆ ಅವಮಾನವಾಗುವುದು. ಕಣಿ ಹೇಳುವವರಿಗೆ ನಾಚಿಕೆಯಾಗುವುದು. ಅವರೆಲ್ಲರೂ ಬಟ್ಟೆಯಿಂದ ಬಾಯಿ ಮುಚ್ಚಿಕೊಳ್ಳಬೇಕಾಗುವುದು. ಕಾರಣ, ಅವರಿಗೆ ದೇವರಿಂದ ಯಾವ ಪ್ರತ್ಯುತ್ತರವೂ ಬರದು.
8 : ನಾನಾದರೋ ಸರ್ವೇಶ್ವರಸ್ವಾಮಿಯ ಆತ್ಮಪ್ರೇರಣೆಯಿಂದ, ಅವರ ಬಲಪರಾಕ್ರಮದಿಂದ, ನ್ಯಾಯ ನೀತಿಯಿಂದ ತುಂಬಿದವನು. ಯಕೋಬ ವಂಶಕ್ಕೆ ಅದರ ದ್ರೋಹವನ್ನು, ಇಸ್ರಯೇಲ್ ವಂಶಕ್ಕೆ ಅದರ ಪಾಪವನ್ನು ಪ್ರಕಟಿಸಲು ಸಮರ್ಥನು.
9 : ನ್ಯಾಯಕ್ಕೆ ಹೇಸಿ, ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಕೋಬ ವಂಶದ ಮುಖಂಡರೆ, ಇಸ್ರಯೇಲ್ ವಂಶದ ಅಧಿಪತಿಗಳೇ, ಗಮನಿಸಿರಿ.
10 : ಸಿಯೋನನ್ನು ನರಹತ್ಯೆಯಿಂದ, ಜೆರುಸಲೇಮನ್ನು ಅನ್ಯಾಯದಿಂದ ಕಟ್ಟುತ್ತಿರುವ ನೀವು ಕಿವಿಗೊಟ್ಟು ಕೇಳಿರಿ.
11 : ನಿಮ್ಮ ಮುಖಂಡರು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ. ನಿಮ್ಮ ಯಾಜಕರು ಸಂಬಳಕ್ಕಾಗಿ ಉಪದೇಶ ಮಾಡುತ್ತಾರೆ. ಆದರೂ ಸರ್ವೇಶ್ವರ ಸ್ವಾಮಿಯ ಮೇಲೆ ಭಾರಹಾಕಿದವರಂತೆ, “ಸ್ವಾಮಿ ನಮ್ಮೊಡನೆ ಇಲ್ಲವೆ? ನಮಗೆ ಕೇಡು ಸಂಭವಿಸುವುದಾದರೂ ಹೇಗೆ?” ಎಂದುಕೊಳ್ಳುತ್ತಾರೆ.
12 : ಆದುದರಿಂದ ನಿಮ್ಮ ದೆಸೆಯಿಂದಲೇ ಸಿಯೋನ್ ಪಟ್ಟಣವನ್ನು ಹೊಲದಂತೆ ಉಳಲಾಗುವುದು. ಜೆರುಸಲೇಮ್ ನಗರ ಹಾಳುದಿಬ್ಬವಾಗುವುದು. ದೇವಾಲಯದ ಪರ್ವತ ಕಾಡು ಗುಡ್ಡದಂತಾಗುವುದು.