1 : ತಮ್ಮ ಹಾಸಿಗೆಯಲ್ಲೇ ಕುತಂತ್ರವನ್ನು ಕಲ್ಪಿಸಿಕೊಂಡು ಕೇಡನ್ನು ಬಗೆಯುವವರಿಗೆ ಧಿಕ್ಕಾರ! ಬೆಳಗಾದದ್ದೇ ಅವರು ಕುತಂತ್ರವನ್ನು ಕಾರ್ಯಗತ ಮಾಡುತ್ತಾರೆ. ಆ ಸಾಮಥ್ರ್ಯ ಅವರ ಕೈಯಲ್ಲಿದೆ.
2 : ಇತರರ ಹೊಲಗದ್ದೆಗಳನ್ನು ದುರಾಸೆಯಿಂದ ಆಕ್ರಮಿಸಿಕೊಳ್ಳುತ್ತಾರೆ. ಅಂತೆಯೇ ಮನೆಗಳನ್ನು ಅಪಹರಿಸುತ್ತಾರೆ. ಈ ರೀತಿಯಲ್ಲಿ ಮನೆಯನ್ನೂ ಮಾಲೀಕನನ್ನೂ ಸ್ವತ್ತನ್ನೂ ಹಕ್ಕುದಾರನನ್ನೂ ತುಳಿದುಬಿಡುತ್ತಾರೆ.
3 : ಆದುದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: “ಈ ಪೀಳಿಗೆಯ ಮೇಲೆ ನಾನೇ ವಿನಾಶವನ್ನು ಬರಮಾಡುತ್ತೇನೆ. ಆ ಕೇಡಿನಿಂದ ನೀವು ತಲೆತಪ್ಪಿಸಿಕೊಳ್ಳಲಾರಿರಿ. ತಲೆಯೆತ್ತಿ ನಡೆಯಲು ನಿಮಗೆ ಸಾಧ್ಯವಾಗದು. ಕಾಲವು ಅಷ್ಟು ಹದಗೆಟ್ಟಿರುವುದು.
4 : ಆ ದಿನದಲ್ಲಿ ಜನರು ನಿಮ್ಮ ಬಗ್ಗೆ ಪರಿಹಾಸ್ಯಮಾಡಿ, ಲಾವಣಿ ಕಟ್ಟುವರು. “ಅಯ್ಯೋ, ಸಂಪೂರ್ಣವಾಗಿ ಸೂರೆಹೋದೆವಲ್ಲಾ, ಸ್ವಾಮಿ ನಮ್ಮ ಜನರ ಸ್ವತ್ತನ್ನು ಪರಾಧೀನ ಮಾಡಿಬಿಟ್ಟಿರಲ್ಲಾ. ಅಕಟಾ, ನಮ್ಮ ಹೊಲಗದ್ದೆಗಳನ್ನು ಕಸಿದುಕೊಂಡು ದೇವದ್ರೋಹಿಗಳಿಗೆ ಹಂಚಿಕೊಟ್ಟರಲ್ಲಾ!” ಎಂದು ರೋದಿಸುವರು.
5 : ಹೀಗಿರಲು ನೂಲೆಳೆದು ಭೂಮಿಯನ್ನು ಹಂಚಿಕೊಡಲು ಸ್ವಾಮಿಯ ಸಭೆಯಲ್ಲಿ ಯಾರೂ ಇರುವುದಿಲ್ಲ.
6 : ಆಗ ಆ ಕೆಡುಕರು, “ಪ್ರವಾದನೆ ಮಾಡಬೇಡ. ಇಂಥ ವಿಷಯಗಳಲ್ಲಿ ಪ್ರವಾದನೆಯ ಮಾತೆತ್ತಕೂಡದು. ಆ ವಿನಾಶ ನಮಗೆ ತಟ್ಟುವುದಿಲ್ಲ.
7 : ಯಕೋಬ ವಂಶವು ಶಾಪಗ್ರಸ್ಥವಾಗಲು ಸಾಧ್ಯವೆ? ಸರ್ವೇಶ್ವರ ತಾಳ್ಮೆಗೆಡುವುದುಂಟೆ? ಇಂಥ ಕೃತ್ಯಗಳನ್ನು ಅವರು ಮಾಡಿಯಾರೆ? ಸನ್ಮಾರ್ಗದಲ್ಲಿ ನಡೆಯುವವರಿಗೆ ಸ್ವಾಮಿಯ ವಾಕ್ಯ ಒಳಿತನ್ನುಂಟು ಮಾಡುವುದಿಲ್ಲವೆ?” ಎನ್ನುವರು.
8 : ಅದಕ್ಕೆ ಸರ್ವೇಶ್ವರ: “ಇತ್ತೀಚೆಗೆ ನನ್ನ ಜನರಿಗೆ ನೀವೇ ಶತ್ರುಗಳು. ಜಗಳಮಾಡಲು ಒಪ್ಪದೆ, ಸಮಾಧಾನದಿಂದ ತಿರುಗಾಡುವವರ ಮೇಲಂಗಿಯನ್ನು ಕಸಿದುಕೊಳ್ಳುತ್ತೀರಿ.
9 : ನನ್ನ ಜನಾಂಗಕ್ಕೆ ಸೇರಿದ ಮಹಿಳೆಯರನ್ನು ಪ್ರಿಯವಾದ ಅವರ ಗೃಹಗಳಿಂದ ಹೊರದಬ್ಬುತ್ತೀರಿ. ಅವರ ಹಸುಳೆಗಳಿಗೆ ನನ್ನ ಆಶೀರ್ವಾದ ಇನ್ನೆಂದಿಗೂ ಲಭಿಸದಂತೆ ಮಾಡುತ್ತೀರಿ.
10 : ಎದ್ದು ತೊಲಗಿರಿ! ಇದು ನಿಮ್ಮ ನೆಮ್ಮದಿಯ ನೆಲೆಯಲ್ಲ. ನಿಮಗೆ ನಾಶವನ್ನು, ವಿಪರೀತ ನಾಶವನ್ನು ಉಂಟುಮಾಡುವ ಹೊಲಸು ಈ ನಾಡಿಗೆ ಅಂಟಿಕೊಂಡಿದೆ.
11 : ಗಾಳಿಮಾತಿನಿಂದ ಮೋಸಮಾಡುವಂಥ ಸುಳ್ಳುಗಾರನೊಬ್ಬನು: ‘ದ್ರಾಕ್ಷಾರಸ, ಮದ್ಯ ಪಾನಗಳ ಕುರಿತು ಪ್ರವಾದನೆ ಮಾಡುತ್ತೇನೆ,’ ಎಂದು ಹೇಳಿದರೆ ಅಂಥವನೇ ಈ ಜನರಿಗೆ ಸರಿಯಾದ ಪ್ರವಾದಿ ಎನಿಸಿಕೊಳ್ಳುವನು.
12 : “ಯಕೋಬ ವಂಶಜರೇ, ನಾನು ನಿಮ್ಮನ್ನೆಲ್ಲಾ ಖಂಡಿತವಾಗಿ ಒಟ್ಟುಗೂಡಿಸುವೆನು. ಇಸ್ರಯೇಲಿನ ಅಳಿದುಳಿದ ಜನರನ್ನು ಸೇರಿಸಿಯೇ ಸೇರಿಸುವೆನು. ಹಟ್ಟಿಯಲ್ಲಿರುವ ಕುರಿಗಳಂತೆ ಅವರನ್ನು ಒಟ್ಟಿಗೆ ಸೇರಿಸುವೆನು. ಹುಲ್ಲುಗಾವಲಿನಲ್ಲಿರುವ ಕುರಿಮಂದೆಯಂತೆ ಒಂದುಗೂಡಿಸುವೆನು,” ಎನ್ನುತ್ತಾರೆ.
13 : ಬಾಗಿಲನ್ನು ಒಡೆದು ತೆರೆಯುವಂಥವನು ಜನರ ಮುಂದಾಳಾಗಿ ಹೊರಡುವನು; ಅವರೂ ಬಾಗಿಲನ್ನು ಒಡೆದು ನುಗ್ಗುವರು; ಅವರ ಅರಸನು ಮುಂದಾಳಾಗಿ ಹೋಗುವನು. ಸರ್ವೇಶ್ವರಸ್ವಾಮಿಯೇ ಅವರ ಮುಂದಾಳತ್ವವನ್ನು ವಹಿಸುವರು.