1 : ಯೋಥಾಮ, ಆಹಾಜ, ಹಿಜ್ಕೀಯ ಇವರು ಜುದೇಯದ ಅರಸರು. ಇವರ ಕಾಲದಲ್ಲಿ ಮೋರೆಷೆತ್ ಊರಿನವನಾದ ಮೀಕನಿಗೆ ಒಂದು ದೈವದರ್ಶನವಾಯಿತು. ಅದು ಸಮಾರ್ಯ ಮತ್ತು ಜೆರುಸಲೇಮನ್ನು ಕುರಿತದ್ದಾಗಿತ್ತು.
2 : ಕೇಳಿರಿ ಸರ್ವಜನಾಂಗಗಳೇ
ಕಿವಿಗೊಡಿ ಬುವಿಯ ಸರ್ವನಿವಾಸಿಗಳೇ.
3 : ಸಾಕ್ಷಿನುಡಿದಿಹನು ನಿಮ್ಮ ವಿರುದ್ಧ ಸರ್ವೇಶ್ವರ
ಪವಿತ್ರಾಲಯದಿಂದ
ಇಳಿದುಬರುತಿಹನಿದೋ ಸ್ವಾಮಿ ತನ್ನ
ಆಸ್ಥಾನದಿಂದ
ಜಗದ ಉನ್ನತ ಪ್ರದೇಶಗಳಲ್ಲಿ
ಸಂಚರಿಸಲಿಹನಾತ.
4 : ಬೆಂಕಿಗೆ ಕರಗುವ ಮೇಣದಂತೆ
ಇಳಿಜಾರು ಪ್ರದೇಶದ ನೀರು ನೆಲವನ್ನು
ಕೊರೆವಂತೆ
ಕರಗಿಹೋಗುವುವು ಆತನ ಪಾದದಡಿ
ಪರ್ವತಗಳು;
ಸೀಳಿಹೋಗುವುವು ಕೊಲ್ಲಿಗಳು.
5 : ಇದಕ್ಕೆಲ್ಲಾ ಕಾರಣ ಯಕೋಬನ ದ್ರೋಹ. ಇಸ್ರಯೇಲ್ ಮನೆತನದ ಪಾಪ. ಯಕೋಬನ ದ್ರೋಹಕ್ಕೆ ಕಾರಣ ಯಾವುದು? ಸಮಾರ್ಯ ಅಲ್ಲವೆ? ಜುದೇಯದ ವಿಗ್ರಹಾರಾಧನೆಯ ಸ್ಥಳ ಯಾವುದು? ಜೆರುಸಲೇಮ್ ಅಲ್ಲವೆ?
6 : ಆದಕಾರಣ “ನಾನು ಸಮಾರ್ಯವನ್ನು ಧೂಳಿನ ರಾಶಿಯನ್ನಾಗಿಯೂ ದ್ರಾಕ್ಷಾತೋಟಕ್ಕೆ ಒಳ್ಳೆಯ ಬಯಲನ್ನಾಗಿಯೂ ಮಾಡುವೆನು. ಕಲ್ಲುಹೆಂಟೆಗಳನ್ನು ಕಣಿವೆಗೆ ಸುರಿದು ಬಿಡುವೆನು. ಅದರ ತಳಪಾಯವೇ ತೆರೆದು ಕಾಣುವಂತೆ ಮಾಡುವೆನು.
7 : ಅದರಲ್ಲಿನ ಎರಕದ ಪ್ರತಿಮೆಗಳನ್ನು ಪುಡಿಪುಡಿ ಮಾಡುವೆನು. ಅದರ ಸಂಪಾದನೆಯೆಲ್ಲ ಅಗ್ನಿಗೆ ಆಹುತಿಯಾಗುವುದು. ಅವು ಸೂಳೆತನದಿಂದ ಸಂಪಾದನೆಯಾದುವು, ಸೂಳೆತನದ ಸಂಪಾದನೆಯಾಗಿಯೇ ಪರರ ಪಾಲಾಗುವುದು,” ಎಂದು ಸರ್ವೇಶ್ವರ ಹೇಳುತ್ತಾರೆ.
8 : ಆಗ ಮೀಕನು: “ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು; ಬೆತ್ತಲೆಯಾಗಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವೆನು; ಗುಳ್ಳೆನರಿಗಳಂತೆ ಊಳಿಡುವೆನು, ಗೂಬೆಯಂತೆ ಘೂಂಕರಿಸುವೆನು.
9 : ಸಮಾರ್ಯಕ್ಕೆ ಬಿದ್ದ ಪೆಟ್ಟು ಗಡುಸಾದುದು. ಅದು ಜುದೇಯಕ್ಕೂ ತಾಕಿದೆ. ಅದು ನನ್ನ ಊರಾದ ಜೆರುಸಲೇಮಿನ ಪುರದ್ವಾರವನ್ನು ಮುಟ್ಟಿದೆ,” ಎಂದನು.
10 : ಈ ವಿಷಯವನ್ನು ಗಾತ್ ಊರಿನವರಿಗೆ ತಿಳಿಸಬೇಡಿ; ಅಳಲೂಬೇಡಿ. ಬೇತ್ಲೆಯಪ್ರದಲ್ಲಿ, ಧೂಳಿನಲ್ಲಿ ಬಿದ್ದು ಹೊರಳಾಡಿ.
11 : ಶಾಫೀರಿನವರೇ, ಬೆತ್ತಲೆಯಾಗಿ ಲಜ್ಜೆಗೆಟ್ಟು ತೊಲಗಿರಿ. ಚಾನಾನಿನವರಿಗೆ ಹೊರಬರಲು ಧೈರ್ಯವಿಲ್ಲ. ಬೇತೇಲಿನವರ ಗೋಳಾಟ ಕೇಳಿಬಂದಾಗ, ಅಲ್ಲಿ ನಿಮಗೆ ಆಶ್ರಯವಿಲ್ಲವೆಂದು ಗೊತ್ತಾಗುವುದು.
12 : ಮಾರೋತಿನ ನಿವಾಸಿಗಳು ತಮ್ಮ ಸಂಕಟ ಪರಿಹಾರವಾಗುವುದೋ ಇಲ್ಲವೋ ಎಂದು ವೇದನೆ ಪಡುತ್ತಾರೆ: ಏಕೆಂದರೆ ಸ್ವಾಮಿಯಿಂದ ಬಂದ ವಿಪತ್ತು ಜೆರುಸಲೇಮಿನ ಪುರದ್ವಾರವನ್ನು ಮುಟ್ಟಿದೆ.
13 : ಲಾಕೀಷಿನ ನಿವಾಸಿಗಳೇ, ನಿಮ್ಮ ಕುದುರೆಗಳನ್ನು ರಥಕ್ಕೆ ಹೂಡಿರಿ. ನಿಮ್ಮ ಊರೇ ಸಿಯೋನ್ ನಗರದ ಪಾಪಕ್ಕೆ ಮೂಲ ಕಾರಣ. ಹೌದು, ಇಸ್ರಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಕಾಣಿಸಿಕೊಂಡವು.
14 : ಆದಕಾರಣ ನೀವು ಮೋರೆತಷತ್‍ಗಾತ್ ಪಟ್ಟಣ ನಿವಾಸಿಗಳಿಗೆ ಕಪ್ಪ ಕಾಣಿಕೆಯಿತ್ತು ಬೀಳ್ಕೊಡಬೇಕಾಗುವುದು. ಇಸ್ರಯೇಲಿನ ಅರಸರಿಗೆ ಅಕ್ಜೀಬಿನ ಮನೆತನದವರಿಂದ ವಂಚನೆಯಾಗುವುದು.
15 : ಮಾರೇಷದವರೇ, ಆಕ್ರಮಣಕಾರನೊಬ್ಬನನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಯೇಲಿನ ವೈಭವವು ಅದುಲ್ಲಾಮಿನ ಪಾಲಾಗುವುದು.
16 : ಜುದೇಯದ ನಿವಾಸಿಗಳೇ, ನಿಮ್ಮ ಮಕ್ಕಳು ಅಗಲಿ ಸೆರೆಹೋಗಿದ್ದಾರೆ. ನಿಮ್ಮ ಮುದ್ದು ಮಕ್ಕಳಿಗಾಗಿ ತಲೆಬೋಳಿಸಿಕೊಳ್ಳಿ, ಮುಂಡನ ಮಾಡಿಸಿಕೊಳ್ಳಿ. ನಿಮ್ಮ ಬೋಳುತಲೆಯ ರಣಹದ್ದಿನಂತೆ ನುಣ್ಣಗಿರಲಿ.