1 : ಆ ಮೀನಿನ ಹೊಟ್ಟೆಹೊಳಗಿಂದಲೇ ಯೋನನು ಸರ್ವೇಶ್ವರಸ್ವಾಮಿ ದೇವರಿಗೆ ಈ ರೀತಿ ಪ್ರಾರ್ಥನೆ ಮಾಡಿದನು:
2 : “ಸಂಕಟದಲಿ, ಸರ್ವೇಶ್ವರಾ, ನಾ ನಿನಗೆ
ಮೊರೆಯಿಟ್ಟೆ
ನೀನೆನ್ನ ಮೊರೆಗೆ ಕಿವಿಗೊಟ್ಟೆ.
ಪಾತಾಳದಂತರಾಳದಿಂದ ನಿನ್ನ ನೆರವನ್ನು
ಬೇಡಿದೆ
ನೀನೆನ್ನ ಪ್ರಾರ್ಥನೆಯನ್ನಾಲಿಸಿದೆ.
3 : ಸಾಗರದ ಉದರಕೆ ನೀನೆನ್ನ ತಳ್ಳಿರುವೆ
ಅಗಾಧ ಜಲದೊಳಕೆ ದೂಡಿರುವೆ.
ಸುತ್ತಮುತ್ತಲಿದೆ ಪ್ರವಾಹದ ಹೊಡೆತ
ಮೇಲ್ಗಡೆ ಅಬ್ಬರಿಪ ಅಲೆಗಳ ಭೋರ್ಗರೆತ!
4 : ನಿನ್ನ ಸನ್ನಿಧಿಯಿಂದ ನಾನಿನ್ನು ಬಹಿಷ್ಕøತ
ಕಾಣೆನೆಂದೂ ನಿನ್ನ ಪವಿತ್ರಾಲಯ ನಿರುತ.
ಈ ಭಾಗ್ಯಗಳೆಲ್ಲ ಎನಗಿಲ್ಲವೆಂದು
ಪರಿಪರಿಯಾಗಿ ಮರುಗುತಿರುವೆನಿಂದು
5 : ಸುತ್ತುವರಿಯೆ ಜಲರಾಶಿ, ಉಸಿರು
ಕಟ್ಟಿದಂತಾಯ್ತು
ಸಾಗರವು ಸಂಪೂರ್ಣವಾಗೆನ್ನ ಆವರಿಸಿತು;
ಎನ್ನ ಶಿರವನು ಜೊಂಡು ಸುತ್ತುಗಟ್ಟಿತು.
6 : ಪರ್ವತಗಳ ತಳಹದಿಗೆ ದೇವಾ, ನಾನಿಳಿದೆ
ಮುಚ್ಚಿಕೊಂಡವು ಜಗದ ದ್ವಾರಗಳು ನನ್ನ ಹಿಂದೆ.
ಎನ್ನ ಕಾಪಾಡಿದೆ ಅಂಥ ಕೋಪದಿಂದ
ಸರ್ವೇಶ್ವರಾ, ಮೇಲಕ್ಕೆತ್ತಿದೆಯೆನ್ನ ಜೀವಸಹಿತ.
7 : ನಂದಿದಂತಾಗಲು ಎನ್ನ ಪ್ರಾಣ ದೀವಿಗೆ
ಮೊರೆಯಿಟ್ಟೆ, ಸರ್ವೇಶ್ವರಾ, ನಾ ನಿನಗೆ
ನಿನ್ನ ಪರಿಶುದ್ಧ ಆಲಯದಲಿ ನೀನಾಸೀನನಿದ್ದೆ
ಎನ್ನ ಪ್ರಾರ್ಥನೆಯನು ನೀನಾಲಿಸಿದೆ.
8 : ನಿರರ್ಥಕ ವಿಗ್ರಹಗಳನಾರಾಧಿಪ ಜನರು
ತೊರೆದಿಹರು ಹಾರ್ದಿಕ ಭಕ್ತಿಯನು
9 : ನಾನಾದರೋ ಹಾಡಿ ಹೊಗಳುವೆ ನಿನ್ನನು
ನಿನಗರ್ಪಿಸುವೆ ಸಮರ್ಪಕ ಬಲಿಯನು
ಬಿಡದೆ ಸಲ್ಲಿಸುವೆ ಹೊತ್ತ ಹರಕೆಯನು
ಹೊಂದುವೆ ಸ್ವಾಮಿಯಿಂದಲೆ ರಕ್ಷಣೆಯನು.”
10 : ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು.