Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆಮೋಸ


1 : ಆಗ ಸರ್ವೇಶ್ವರಸ್ವಾಮಿ ಬಲಿಪೀಠದ ಪಕ್ಕದಲ್ಲಿ ನಿಂತಿರುವುದನ್ನು ಕಂಡೆನು. ಅವರು ನನಗೆ ಹೀಗೆಂದು ಅಪ್ಪಣೆ ಮಾಡಿದರು: “ಹೊಸ್ತಿಲುಗಳು ಕದಲುವಂತೆ ಕಂಬಳಗಳ ಬೋದಿಗೆಗೆ ಬಲವಾಗಿ ಹೊಡೆ. ಅವು ಕುಸಿದು ಎಲ್ಲರ ತಲೆಯ ಮೇಲೆ ಬೀಳಲಿ. ಅಳಿದುಳಿದವರನ್ನು ಖಡ್ಗಕ್ಕೆ ತುತ್ತಾಗಿಸುವೆನು. ಅವರಲ್ಲಿ ಯಾರೂ ಓಡಿಹೋಗರು; ಯಾರೂ ತಪ್ಪಿಸಿಕೊಳ್ಳರು.
2 : ಅವರು ಪಾತಾಳಕ್ಕೆ ಇಳಿದುಹೋದರೂ ಅಲ್ಲಿಂದ ಅವರನ್ನು ಎಳೆದುತರುವೆನು. ಆಕಾಶಕ್ಕೆ ಹತ್ತಿಹೋದರೂ ಅಲ್ಲಿಂದ ಇಳಿಸುವೆನು.
3 : ಕರ್ಮೆಲ್ ಬೆಟ್ಟದ ತುದಿಯಲ್ಲಿ ಅವಿತುಕೊಂಡರೂ ಅವರನ್ನು ಹುಡುಕಿ ಅಲ್ಲಿಂದ ಹಿಡಿದು ತರುವೆನು. ನನ್ನ ಕಣ್ಣುತಪ್ಪಿಸಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ, ಅಲ್ಲಿಯೂ ಅವರನ್ನು ಕಚ್ಚುವಂತೆ ಘಟಸರ್ಪಕ್ಕೆ ಆಜ್ಞೆಮಾಡುವೆನು.
4 : ಶತ್ರುವಶವಾಗಿ ಸೆರೆಗೆ ಹೋಗಿದ್ದರೂ ಅಲ್ಲಿಯೂ ಖಡ್ಗವು ನನ್ನ ಆಜ್ಞಾನುಸಾರ ಅವರನ್ನು ಕೊಲ್ಲುವುದು; ಅವರ ಮೇಲಿಗಾಗಿ ಅಲ್ಲ, ಕೇಡಿಗಾಗಿಯೇ ಅವರ ಮೇಲೆ ಕಣ್ಣಿಡುವೆನು.
5 : ಸೇನಾಧೀಶ್ವರ ದೇವರಾದ ಸರ್ವೇಶ್ವರ ಮುಟ್ಟಿದ ಮಾತ್ರಕ್ಕೆ ಕರಗುವುದು ಭೂಮಿ, ಗೋಳಿಡುವುದು ಸಕಲ ಜನತೆ ಉಬ್ಬುವುದು ನಾಡೆಲ್ಲ ನೈಲ್ ನದಿಯಂತೆ ಕುಗ್ಗಿ ಕರಗುವುದು ಈಜಿಪ್ಟಿನ ನದಿಯಂತೆ.
6 : ಉನ್ನತದಲ್ಲಿ ಹಲವು ಉಪ್ಪರಿಗೆಗಳನ್ನು ನಿರ್ಮಿಸುವವ ಆತನೆ ಭುವಿಯಲ್ಲಿ ಗುಮ್ಮಟವನ್ನು ಸ್ಥಾಪಿಸಿ ಕೊಂಡವನು ಆತನೆ ಸಾಗರದ ನೀರನ್ನು ಸೇದಿ ಧರೆಯ ಮೇಲೆ ಸುರಿಯುವವ ಆತನೆ ಆತನ ನಾಮಧೇಯ ಸರ್ವೇಶ್ವರಸ್ವಾಮಿ ಎಂಬುದೇ.
7 : “ಇಸ್ರಯೇಲಿನ ಜನರೇ, ನನ್ನ ದೃಷ್ಟಿಯಲ್ಲಿ ನೀವಾಗಲೀ ಎಥಿಯೋಪಿಯದವರಾಗಲೀ, ಒಂದೇ ಅಲ್ಲವೆ? ನಾನು ನಿಮ್ಮನ್ನು ಈಜಿಪ್ಟಿನಿಂದ ಕರೆತಂದಂತೆ ಫಿಲಿಷ್ಟಿಯರನ್ನು ಕಫ್ತೋರಿನಿಂದಲೂ, ಅರಾಮ್ಯರನ್ನು ಕೀರ್ ನಾಡಿನಿಂದಲೂ ಕರೆತರಲಿಲ್ಲವೆ?
8 : ಒಡೆಯ ಸರ್ವೇಶ್ವರನಾದ ನಾನು ಈ ಪಾಪಮಯ ರಾಜ್ಯದ ಮೇಲೆ ಕಣ್ಣಿಟ್ಟಿದ್ದೇನೆ ಎಂಬುದನ್ನು ಗಮನಿಸಿರಿ. ಇದನ್ನು ಭೂಮಂಡಲದಿಂದ ನಾಶಮಾಡುವೆನು. ಆದರೆ ಯಕೋಬ ಮನೆತನವನ್ನು ಸಂಪೂರ್ಣವಾಗಿ ನಾಶಮಾಡೆನು.” ಇದು ಸರ್ವೇಶ್ವರಸ್ವಾಮಿಯ ನುಡಿ.
9 : “ಇಗೋ, ಧಾನ್ಯವನ್ನು ಜರಡಿಯಲ್ಲಿ ಜಾಲಿಸುವಂತೆ ಇಸ್ರಯೇಲರನ್ನು ಸಕಲ ಜನಾಂಗಗಳೊಡನೆ ಸೇರಿಸಿ ಜಾಲಿಸಬೇಕೆಂದು ಆಜ್ಞಾಪಿಸುವೆನು. ಹೀಗೆ ಕಾಳನ್ನೂ ಜೊಳ್ಳನ್ನೂ ಬೇರ್ಪಡಿಸುವೆನು.
10 : ‘ನಮಗೆ ಯಾವುದೇ ಆಪತ್ತು ತಟ್ಟದು. ಯಾವುದೇ ವಿಪತ್ತು ಅಡ್ಡಬರದು’ ಎಂದುಕೊಳ್ಳುವ ನನ್ನ ಜನರಲ್ಲಿನ ಪಾಪಿಗಳೆಲ್ಲರು ಖಡ್ಗದಿಂದ ಹತರಾಗುವರು.”
11 : ಸರ್ವೇಶ್ವರ ಇಂತೆನ್ನುತ್ತಾರೆ: “ದಿನ ಬರಲಿದೆ. ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದುದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು.
12 : ಹೀಗೆ ನನ್ನ ಜನರು ಎದೋಮಿನ ಮಿಕ್ಕ ಭಾಗವನ್ನೂ ಸರ್ವೇಶ್ವರನ ಪ್ರಜೆ ಎನ್ನಿಸಿಕೊಂಡ ಸಕಲ ಜನಾಂಗಗಳನ್ನೂ ಸ್ವಾಧೀನಪಡಿಸಿಕೊಳ್ಳುವರು.” ಈ ಕಾರ್ಯವನ್ನು ಸಾಧಿಸುವಂಥ ಸರ್ವೇಶ್ವರಸ್ವಾಮಿಯ ನುಡಿಯಿದು:
13 : ಕಾಲ ಬರುವುದು: ಆಗ – ಹೊಸಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೆ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷೆ ತುಳಿಯುವವನ ಮುಂದೆಯೆ. ಸುರಿಸುವುವು ದ್ರಾಕ್ಷಾರಸವನು ಬೆಟ್ಟಗಳು ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು.
14 : ಸನಾತನ ಸೌಭಾಗ್ಯಕ್ಕೆ ಮರಳಿಸುವೆನು ನನ್ನ ಜನರಾದ ಇಸ್ರಯೇಲರನು. ವಾಸಮಾಡುವರವರು ಪಾಳುಬಿದ್ದ ಪಟ್ಟಣಗಳನು ಮತ್ತೆ ಕಟ್ಟಿಕೊಂಡು. ಕುಡಿಯುವರು ಸಮೃದ್ಧಿಯಾಗಿ ದ್ರಾಕ್ಷಾತೋಟಗಳನು ಮಾಡಿಕೊಂಡು. ತಿನ್ನುವರು ಯಥೇಚ್ಛವಾಗಿ ಫಲವೃಕ್ಷಗಳನು ಬೆಳೆಸಿಕೊಂಡು.
15 : ಬೇರೂರಿಸುವೆನು ಅವರನು ಸ್ವಂತನಾಡಲಿ ಕೀಳರಾರೂ ಅವರನು ಅಲ್ಲಿಂದ ಮರಳಿ.” ಇದು ನಿನ್ನ ದೇವರಾದ ಸರ್ವೇಶ್ವರನ ನುಡಿ.

· © 2017 kannadacatholicbible.org Privacy Policy