1 : ಒಡೆಯರಾದ ಸರ್ವೇಶ್ವರ ನನಗೆ ಈ ದರ್ಶನವನ್ನು ತೋರಿಸಿದರು: ಮಾಗಿದ ಹಣ್ಣಿನ ಬುಟ್ಟಿಯೊಂದು ಕಾಣಿಸಿತು.
2 : ಅವರು ನನಗೆ: “ಆಮೋಸನೆ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಿದರು. “ಮಾಗಿದ ಹಣ್ಣಿನ ಒಂದು ಬುಟ್ಟಿ” ಎಂದು ಉತ್ತರಿಸಿದೆ. ಆಗ ಸರ್ವೇಶ್ವರ ನನಗೆ ಹೀಗೆಂದರು: “ಇಸ್ರಯೇಲರಾದ ನನ್ನ ಜನರಿಗೆ ಕಡೆಗಾಲ ಮಾಗುತ್ತಾ ಬಂದಿದೆ. ಇನ್ನು ಅವರನ್ನು ಕಂಡೂ ಕಾಣದಂತೆ ಇರಲಾರೆ. ಅವರನ್ನು ದಂಡಿಸಿಯೇ ತೀರುವೆನು.
3 : ಆ ದಿನದಲ್ಲಿ ಆಸ್ಥಾನದ ಗೀತೆಗಳು ಶೋಕಗೀತೆಗಳಾಗಿ ಮಾರ್ಪಡುವುವು. ಹೆಣಗಳು ಎಲ್ಲೆಲ್ಲೂ ಬಿದ್ದಿರುವುವು. ಅವುಗಳನ್ನು ಸದ್ದುಗದ್ದಲವಿಲ್ಲದೆ ಬಿಸಾಡಲಾಗುವುದು,” ಇದು ಸರ್ವೇಶ್ವರ ಸ್ವಾಮಿಯ ನುಡಿ.
4 : ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ,
5 : “ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ? ಕೊಳಗವನ್ನು ಕಿರಿದು ಮಾಡೋಣ, ತೊಲವನ್ನು ಹಿರಿದು ಮಾಡೋಣ, ಕಳ್ಳತಕ್ಕಡಿಯನ್ನು ಬಳಸೋಣ:
6 : ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವನನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ,” ಎಂದುಕೊಳ್ಳುತ್ತೀರಿ, ಅಲ್ಲವೆ?
7 : ಯಕೋಬನ ಮಹಿಮಾನ್ವಿತ ಸರ್ವೇಶ್ವರ ಆಣೆಯಿಟ್ಟು ಹೇಳುವುದೇನೆಂದರೆ; “ಖಂಡಿತವಾಗಿ ಅವರ ದುಷ್ಕøತ್ಯಗಳಲ್ಲಿ ಯಾವುದನ್ನೂ ಎಂದಿಗೂ ನಾನು ಮರೆಯಲಾರೆ.
8 : ಅವರ ದುಷ್ಕøತ್ಯಗಳ ನಿಮಿತ್ತವೇ ನಾಡು ಕಂಪಿಸುವುದು; ನಿವಾಸಿಗಳೆಲ್ಲರು ದುಃಖಿಸುವರು. ನಾಡೆಲ್ಲವು ನೈಲ್ ನದಿಯಂತೆ ಉಬ್ಬುವುದು. ಅಲ್ಲೋಲ ಕಲ್ಲೋಲವಾಗಿ ಈಜಿಪ್ಟಿನ ನದಿಯಂತೆ ಕುಗ್ಗಿ ಕರಗಿಹೋಗುವುದು.
9 : ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಆ ದಿನದಂದು ನಡು ಮಧ್ಯಾಹ್ನದಲ್ಲಿ ಸೂರ್ಯನನ್ನು ಮುಳುಗಿಸುವೆನು. ಹಾಡು ಹಗಲಲ್ಲೇ ಭೂಮಿಯನ್ನು ಕತ್ತಲಾಗಿಸುವೆನು.
10 : ನಿಮ್ಮ ಕೊಂಡಾಟದಿನಗಳನ್ನು ಗೋಳಾಟ ದಿನಗಳನ್ನಾಗಿ ಮಾರ್ಪಡಿಸುವೆನು. ನಿಮ್ಮ ಹರ್ಷ ಗೀತೆಗಳನ್ನು ಶೋಕಗೀತೆಗಳನ್ನಾಗಿ ಬದಲಾಯಿಸುವೆನು. ನೀವೆಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆ ಬೋಳಿಸಿಕೊಳ್ಳುವಂತೆ ಮಾಡುವೆನು. ಏಕಮಾತ್ರ ಪುತ್ರನನ್ನು ಕಳೆದುಕೊಂಡವರಂತೆ ನೀವು ಅತ್ತು ಪ್ರಲಾಪಿಸುವಿರಿ. ಆ ದಿನವೆಲ್ಲಾ ನಿಮಗೆ ಕರಾಳ ದಿನವಾಗುವುದು.”
11 : ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: “ದಿನಗಳು ಬರಲಿವೆ. ಅಂದು ನಾಡಿನಲ್ಲಿ ಕ್ಷಾಮವನ್ನುಂಟುಮಾಡುವೆನು. ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವೂ ಅಲ್ಲ; ಸರ್ವೇಶ್ವರನ ಸಂದೇಶಕ್ಕಾಗಿ ಹಸಿದು ಹಂಬಲಿಸುವ ಕ್ಷಾಮ.
12 : ಜನರು ಸಮುದ್ರದಿಂದ ಸಮುದ್ರದವರೆಗೆ ಉತ್ತರದಿಂದ ಪೂರ್ವದವರೆಗೆ ಅತ್ತಿತ್ತ ಹುಡುಕುತ್ತಾ ಬಳಲಿಹೋಗುವರು. ಆದರೂ ಅದು ಸಿಗದು.
13 : ಆ ದಿನದಂದು ಗಟ್ಟಿಮುಟ್ಟಾದ ಯುವಕ ಯುವತಿಯರೂ ಬಾಯಾರಿಕೆಯಿಂದ ಮೂರ್ಛೆ ಹೋಗುವರು.
14 : ದಾನೇ, ನಿನ್ನ ದೇವರ ಜೀವದಾಣೆ’ ಎಂದೂ, ‘ಬೇರ್ಷೆಬಾ ಯಾತ್ರೆಯ ಜೀವದಾಣೆ’ ಎಂದೂ ಸಮಾರ್ಯದ ವಿಗ್ರಹಗಳ ಮೇಲೆ ಪ್ರಮಾಣ ಮಾಡುವವರು ಮತ್ತೆ ಏಳದಂತೆ ಬಿದ್ದು ಹೋಗುವರು.”