Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆಮೋಸ


1 : ಇಸ್ರಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯನ್ನು ಕೇಳಿ:
2 : “ಕನ್ಯೆ ಇಸ್ರಯೇಲಳು ಬಿದ್ದಿಹಳು ಕೆಳಗೆ ಅಶಕ್ತಳು ಆಕೆ ಮರಳಿ ಏಳಲು ಮೇಲಕೆ ದಿಕ್ಕಿಲ್ಲದೆ ಒರಗಿಹಳು ಧರೆಯ ಮೇಲೆ ಮೇಲೆತ್ತಲು ಯಾರೂ ಗತಿಯಿಲ್ಲದ ಅಬಲೆ.”
3 : ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಯುದ್ಧಕ್ಕೆ ಹೊರಟ ಸಾವಿರ ಮಂದಿ ಸೈನಿಕರಲ್ಲಿ ಪಟ್ಟಣಕ್ಕೆ ಮರಳಿದವರು ನೂರೇ ಮಂದಿ; ರಣರಂಗಕ್ಕೆ ಹೊರಟ ನೂರು ಮಂದಿ ಯೋಧರಲ್ಲಿ ಇಸ್ರಯೇಲಿಗೆ ಮರಳಿದವರು ಹತ್ತೇ ಮಂದಿ.”
4 : ಇಸ್ರಯೇಲ್ ಮನೆತನಕ್ಕೆ ಸರ್ವೇಶ್ವರ ಹೇಳುವುದೇನೆಂದರೆ: “ನನ್ನನ್ನು ಅರಸಿರಿ, ನೀವು ಬದುಕುವಿರಿ.
5 : ಬೇತೇಲಿಗೆ ಹೋಗಬೇಡಿ, ಗಿಲ್ಗಾಲನ್ನು ಸೇರಬೇಡಿ. ಬೆರ್ಷೆಬಾಕ್ಕೆ ಯಾತ್ರೆ ಹೋಗಬೇಡಿ. ಗಿಲ್ಗಾಲ್ ಗಡೀಪಾರಾಗುವುದು. ಬೇತೇಲ್ ಬಯಲಾಗುವುದು.”
6 : ಸರ್ವೇಶ್ವರಸ್ವಾಮಿಗೆ ಅಭಿಮುಖರಾಗಿರಿ, ನೀವು ಬದುಕುವಿರಿ. ಇಲ್ಲವಾದರೆ ಅವರು ಬೆಂಕಿಯೋಪಾದಿ ಜೋಸೆಫನ ಮನೆತನದ ಮೇಲೆ ಎರಗಿಯಾರು. ಬೇತೇಲಿನ ಜನರನ್ನು ಭಸ್ಮಮಾಡಿಯಾರು. ಆ ಬೆಂಕಿಯನ್ನು ಯಾರೂ ಆರಿಸರು.
7 : ನ್ಯಾಯವನ್ನು ಕಹಿಯಾಗಿಸುವವರೇ, ಧರ್ಮವನ್ನು ಕಸವಾಗಿಸುವವರೇ, ನಿಮಗೆ ಧಿಕ್ಕಾರ!
8 : ಕೃತ್ತಿಕೆ, ಮೃಗಶಿರ, ನಕ್ಷತ್ರಪುಂಜಗಳನು ಸೃಜಿಸಿದಾತನು ಕತ್ತಲನು ಬೆಳಕಾಗಿ, ಹಗಲನು ಇರುಳಾಗಿ ಮಾಡುವವನು, ಕಡಲಿನ ಜಲವನು ಮೇಲೆತ್ತಿ, ಧರೆಗೆ ಮಳೆಗರೆವಾತನು,
9 : ಬಲಾಢ್ಯರನ್ನು ತಟ್ಟನೆ ಬಡಿದು ಕೋಟೆಗಳ ಕೆಡವುವಾತನು ಆತನೇ, ಸರ್ವೇಶ್ವರಸ್ವಾಮಿ ಎಂಬುದೇ ಆತನ ನಾಮಧೇಯ.
10 : ಕಂಡ ದೋಷವನ್ನು ಮಂಟಪದಲ್ಲಿ ಖಂಡಿಸುವವನನ್ನು ನೀವು ಹಗೆಮಾಡುತ್ತೀರಿ; ನ್ಯಾಯವಾದಿಗಳ ಮೇಲೆ ದ್ವೇಷ ಸಾಧಿಸುತ್ತೀರಿ.
11 : ಬಡಬಗ್ಗರನ್ನು ತುಳಿಯುತ್ತೀರಿ; ಅವರ ದವಸ ಧಾನ್ಯಗಳನ್ನು ಕಸಿದುಕೊಳ್ಳುತ್ತೀರಿ. ಆದ್ದರಿಂದ ನೀವು ಕಟ್ಟಿರುವ ಕೆತ್ತನೆಯ ಕಲ್ಲುಮನೆಗಳಲ್ಲಿ ವಾಸಮಾಡಲಾರಿರಿ. ನೀವು ನೆಟ್ಟಿರುವ ಫಲಭರಿತ ದ್ರಾಕ್ಷಾಬಳ್ಳಿಗಳಿಂದ ರಸವನ್ನು ಕುಡಿಯಲಾರಿರಿ.
12 : ಸಜ್ಜನರನ್ನು ಹಿಂಸಿಸಿ, ಲಂಚಕ್ಕೆ ಕೈ ಒಡ್ಡುವವರೇ, ನ್ಯಾಯಮಂಟಪದಲ್ಲಿ ಬಡವರಿಗೆ ನ್ಯಾಯದೊರಕಿಸದಿರುವವರೇ, ನಿಮ್ಮ ಪಾಪಗಳು ಅಪಾರ! ನಿಮ್ಮ ದ್ರೋಹಗಳು ಬಹಳ! ಇದು ನನಗೆ ಗೊತ್ತು.
13 : ಕಾಲವು ಕೆಟ್ಟದ್ದಾಗಿ ಇರುವುದರಿಂದ ವಿವೇಕಿಯಾದವನು ಸುಮ್ಮನಿರುವುದು ಲೇಸು.
14 : ಕೆಟ್ಟದ್ದನ್ನು ಬಿಟ್ಟುಬಿಡಿ, ಒಳ್ಳೆಯದನ್ನು ಆಸಕ್ತಿಯಿಂದ ಮಾಡಿ; ನೀವು ಬಾಳುವಿರಿ. ಆಗ ನೀವು ಹೇಳಿಕೊಳ್ಳುವಂತೆ, ಸೇನಾಧೀಶ್ವರ ದೇವರಾದ ಸರ್ವೇಶ್ವರ ನಿಮ್ಮೊಡನೆ ಇರುವರು.
15 : ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ. ನ್ಯಾಯ ಮಂಟಪದಲ್ಲಿ ಸತ್ಯಕ್ಕೆ ಜಯವಾಗುವಂತೆ ನೋಡಿಕೊಳ್ಳಿರಿ. ಆಗ ಬಹುಶಃ ಸೇನಾಧೀಶ್ವರ ದೇವರಾದ ಸರ್ವೇಶ್ವರ ಅಳಿದುಳಿದ ಜೋಸೆಫನ ವಂಶಕ್ಕೆ ಕರುಣೆತೋರಿಯಾರು.
16 : ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬೀದಿ ಚೌಕಗಳಲ್ಲೆಲ್ಲ ಗೋಳಾಟ ಇರುವುದು. ಹಾದಿಬೀದಿಗಳಲ್ಲೆಲ್ಲ ‘ಅಯ್ಯಯ್ಯೋ’ ಎಂದು ಜನರು ಪ್ರಲಾಪಿಸುವರು. ರೈತರನ್ನು ಕಣ್ಣೀರಿಡುವುದಕ್ಕೂ ಶೋಕವೃತ್ತಿಯವರನ್ನು ಗೋಳಾಡುವುದಕ್ಕೂ ಕರೆಯಲಾಗುವುದು.
17 : ಪ್ರತಿಯೊಂದು ದ್ರಾಕ್ಷಾತೋಟದಲ್ಲಿ ಜನರು ರೋದಿಸುವರು. ಏಕೆಂದರೆ ನಿಮ್ಮನ್ನು ದಂಡಿಸಲು ನಿಮ್ಮ ಮಧ್ಯೆ ಹಾದು ಹೋಗಲಿದ್ದೇನೆ, ಇದು ಸರ್ವೇಶ್ವರಸ್ವಾಮಿಯ ನುಡಿ.”
18 : ಸ್ವಾಮಿಯ ಆ ದಿನಕ್ಕಾಗಿ ಕಾತುರದಿಂದ ಕಾದಿರುವರೇ, ಅಯ್ಯೋ ನಿಮಗೆ ಕೇಡು; ಆ ದಿನ ಏನಾಗುತ್ತದೆಂದು ನಿಮಗೆ ಗೊತ್ತೆ? ಸ್ವಾಮಿಯ ಆ ದಿನ ನಿಮಗೆ ಬೆಳಕಾಗಿರದು, ಕತ್ತಲೆಯ ದಿನವಾಗಿರುವುದು.
19 : ಅದು ಹೇಗೆಂದರೆ: “ಸಿಂಹದ ಬಾಯಿಯಿಂದ ತಪ್ಪಿಸಿಕೊಂಡು ಓಡುತ್ತಿರುವವನು ಕರಡಿಯನ್ನು ಎದುರುಗೊಳ್ಳುವಂತೆ ಆಗುವುದು ಅಥವಾ ಅವನು ಅಲ್ಲಿಂದ ಮನೆಗೆ ಓಡಿಬಂದು ಗೋಡೆಯ ಮೇಲೆ ಕೈಯೂರಲು ಅವನಿಗೆ ಹಾವು ಕಚ್ಚಿದಂತೆ ಆಗುವುದು.
20 : ಖಂಡಿತವಾಗಿ ಸ್ವಾಮಿಯ ದಿನ ಬೆಳಕಾಗಿರದು, ಕತ್ತಲೆಯಾಗಿರುತ್ತದೆ, ಒಂದು ಚುಕ್ಕೆಯೂ ಇಲ್ಲದ ಕಾರಿರುಳಂತಿರುತ್ತದೆ.
21 : “ನಿಮ್ಮ ಹಬ್ಬಹುಣ್ಣಿಮೆಗಳನ್ನು ಹಗೆ ಮಾಡುತ್ತೇನೆ, ತುಚ್ಛೀಕರಿಸುತ್ತೇನೆ. ನಿಮ್ಮ ಉತ್ಸವಗಳ ವಾಸನೆಯೂ ನನಗೆ ಬೇಡ.
22 : ನೀವು ನನಗೆ ದಹನಬಲಿದಾನಗಳನ್ನು, ಧಾನ್ಯ ನೈವೇದ್ಯಗಳನ್ನು ಅರ್ಪಿಸುವುದಕ್ಕೆ ಬಂದರೂ ನಾನು ಅವುಗಳನ್ನು ಸ್ವೀಕರಿಸುವುದಿಲ್ಲ. ಸಮಾಧಾನದ ಯಜ್ಞವಾಗಿ ನೀವು ಒಪ್ಪಿಸುವ ಕೊಬ್ಬಿದ ಪಶುಗಳನ್ನು ನಾನು ಕಟಾಕ್ಷಿಸೆನು.
23 : ನಿಮ್ಮ ಭಜನೆ ನಿಂತುಹೋಗಲಿ; ನಿಮ್ಮ ವೀಣಾವಾದ್ಯಗಳು ತೊಲಗಲಿ.
24 : ನ್ಯಾಯನೀತಿ ಹೊಳೆಯಂತೆ ಹರಿಯಲಿ; ಸದ್ಧರ್ಮ ಮಹಾನದಿಯಂತೆ ಪ್ರವಹಿಸಲಿ.
25 : “ಇಸ್ರಯೇಲಿನ ವಂಶದವರೇ, ನಲವತ್ತು ವರ್ಷಗಳ ಕಾಲ ನೀವು ಮರಳುಗಾಡಿನಲ್ಲಿದ್ದಾಗ, ಬಲಿಪ್ರಾಣಿಗಳನ್ನಾಗಲೀ, ಧಾನ್ಯನೈವೇದ್ಯಗಳನ್ನಾಗಲಿ ನೀವು ಅರ್ಪಿಸಬೇಕೆಂದು ನಾನು ಕೇಳಿದ್ದುಂಟೋ?
26 : ಆದರೆ ಈಗ ನೀವು ನಿರ್ಮಿಸಿಕೊಂಡಿರುವ ಮೂರ್ತಿಗಳಾದ ಸಿಕ್ಕುತ್ ರಾಜೇಶ್ವರನನ್ನೂ ಕಿಯೂನ್ ಎಂಬ ನಕ್ಷತ್ರ ದೇವತೆಯನ್ನೂ ನೀವೇ ಹೊತ್ತುಕೊಂಡು ಹೋಗಬೇಕಾಗುವುದು.
27 : ಏಕೆಂದರೆ ನಾನು ನಿಮ್ಮನ್ನು ದಮಸ್ಕದಿಂದ ಆಚೆ ತಳ್ಳಿ ಸೆರೆಯಾಳುಗಳನ್ನಾಗಿ ಕಳುಹಿಸುವೆನು.” ಇದು ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ನುಡಿ.

· © 2017 kannadacatholicbible.org Privacy Policy