Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಆಮೋಸ


1 : ಸರ್ವೇಶ್ವರ ಇಂತೆನ್ನುತ್ತಾರೆ: “ಮೋವಾಬಿನ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣಮಾಡಿದ್ದಾರೆ.
2 : ಆದಕಾರಣ ಮೋವಾಬಿನ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಕೆರಿಯೋತಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಸೈನಿಕರ ಆರ್ಭಟ, ರಣಕಹಳೆಗಳ ಗರ್ಜನೆ, ಯುದ್ಧದ ಕೋಲಾಹಲ - ಇವುಗಳ ಮಧ್ಯೆ ಮೋವಾಬಿನ ಜನರು ಮಡಿಯುವರು.
3 : ನಾನು ಅವರ ಅಧಿಪತಿಯನ್ನು ಕೊಂದು, ರಾಜ್ಯಾಧಿಕಾರಿಗಳನ್ನು ಸಂಹರಿಸುವೆನು.” ಇದು ಸರ್ವೇಶ್ವರಸ್ವಾಮಿಯ ನುಡಿ.
4 : ಸರ್ವೇಶ್ವರ ಇಂತೆನ್ನುತ್ತಾರೆ: “ಜುದೇಯದ ಜನರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಏಕೆಂದರೆ ಅವರು ನನ್ನ ಧರ್ಮಶಾಸ್ತ್ರವನ್ನು ತೃಣೀಕರಿಸಿದ್ದಾರೆ. ನನ್ನ ವಿಧಿನಿಯಮಗಳನ್ನು ಮೀರಿದ್ದಾರೆ. ಅವರ ಪೂರ್ವಜರು ಆರಾಧಿಸಿದ ಸುಳ್ಳುದೇವತೆಗಳನ್ನು ಪೂಜಿಸುತ್ತಾ ದಾರಿತಪ್ಪಿದ್ದಾರೆ.
5 : ಆದಕಾರಣ ನಾನು ಜುದೇಯದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಜೆರುಸಲೇಮಿನ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.”
6 : ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲಿನ ಜನರು ಪದೇ ಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಬೆಳ್ಳಿಬಂಗಾರಕ್ಕಾಗಿ ಸಜ್ಜನರನ್ನು ಮಾರಿಬಿಡುತ್ತಾರೆ. ಒಂದು ಜೊತೆ ಜೋಡುಗಳ ಸಾಲವನ್ನು ಸಹ ತೀರಿಸಲಾಗದ ಬಡಬಗ್ಗರನ್ನೂ ವಿಕ್ರಯಿಸುತ್ತಾರೆ.
7 : ದಿಕ್ಕಿಲ್ಲದವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. ದೀನದಲಿತರಿಗೆ ನ್ಯಾಯದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು ನನ್ನ ಪವಿತ್ರನಾಮಕ್ಕೆ ಅಪಕೀರ್ತಿ ತರುತ್ತಾರೆ.
8 : ಪ್ರತಿಯೊಂದು ಪ್ರಾರ್ಥನಾಲಯದಲ್ಲಿಯೂ ಮಲಗುತ್ತಾರೆ. ಬಡವರಿಂದ ಅಡವಾಗಿ ಇಟ್ಟುಕೊಂಡ ಬಟ್ಟೆಗಳ ಮೇಲೆಯೇ ಬಿದ್ದಿರುತ್ತಾರೆ. ವಿಧಿ ಇಲ್ಲದೆ ದಂಡತೆರ ಬೇಕಾದವರಿಂದ ಹೆಂಡವನ್ನು ತಂದು ದೇವರ ಮಂದಿರದಲ್ಲೇ ಕುಡಿಯುತ್ತಾರೆ.
9 : “ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವರನ್ನು ಧ್ವಂಸಮಾಡಿದೆನು. ದೇವ ದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವರನ್ನು ನಾಶಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತುಹಾಕುವಂತೆ ಅವರನ್ನು ನಿರ್ಮೂಲ ಮಾಡುವೆನು.
10 : ಈಜಿಪ್ಟಿನಿಂದ ನಿಮ್ಮನ್ನು ಹೊರತಂದವನು ನಾನೇ. ನಲವತ್ತು ವರ್ಷಗಳ ಕಾಲ ಅರಣ್ಯದ ಮಾರ್ಗವಾಗಿ ನಿಮ್ಮನ್ನು ನಡೆಸಿ ಕರೆತಂದು, ಅಮೋರ್ಯದವರ ನಾಡನ್ನು ನಿಮಗೆ ದೊರಕಿಸಿ ಕೊಟ್ಟವನು ನಾನೇ.
11 : ನಿಮ್ಮ ಪುತ್ರರಲ್ಲಿ ಕೆಲವರನ್ನು ಪ್ರವಾದಿಗಳನ್ನಾಗಿ, ನಿಮ್ಮ ಯುವಜನರಲ್ಲಿ ಕೆಲವರನ್ನು ನಾಜೀರರನ್ನಾಗಿ ಸಿದ್ಧಪಡಿಸಿದವನು ನಾನೇ. ಇಸ್ರಯೇಲಿನ ಜನರೇ, ಇದು ನಿಜವಲ್ಲವೇ? ನೀವೇ ಹೇಳಿ.
12 : “ನೀವಾದರೋ, ನಾಜೀರರು ವ್ರತ ಮುರಿದು ಮದ್ಯಪಾನ ಸೇವಿಸುವಂತೆ ಮಾಡಿದಿರಿ. ಪ್ರವಾದಿಗಳು ಪ್ರವಾದನೆ ಹೇಳದಂತೆ ಆಜ್ಞೆ ಮಾಡಿದಿರಿ.
13 : ಆದ್ದರಿಂದ ಧಾನ್ಯ ತುಂಬಿದ ಬಂಡೆ ನಸುಕುವಂತೆ ನಿಮ್ಮನ್ನು ಇದ್ದಲ್ಲಿಯೇ ನಸುಕಿ ಬಿಡುವೆನು.
14 : ನಿಮ್ಮಲ್ಲಿ ದೌಡೋಡುವವನು ಕೂಡ ತಲೆತಪ್ಪಿಸಿಕೊಳ್ಳಲಾರನು. ಬಲಿಷ್ಠನೂ ಬಲಹೀನನಾಗುವನು. ಪರಾಕ್ರಮಿಯೂ ಪ್ರಾಣ ಉಳಿಸಿಕೊಳ್ಳಲಾರನು.
15 : ಬಿಲ್ಲುಹಿಡಿದವನೂ ನಿಲ್ಲಲಾರನು. ಓಟಗಾರನೂ ಸಿಕ್ಕಿಬೀಳುವನು. ರಾಹುತನು ರಕ್ಷಣೆ ಪಡೆಯಲಾರನು.
16 : ಪ್ರಬಲವಾಗಿದ್ದವರಲ್ಲಿ ಧೀರನಾದವನು ಸಹ ನಗ್ನನಾಗಿ ಪಲಾಯನ ಮಾಡುವನು.” ಇದು ಸರ್ವೇಶ್ವರ ಸ್ವಾಮಿಯ ನುಡಿ.

· © 2017 kannadacatholicbible.org Privacy Policy