1 : ಜುದೇಯದಲ್ಲಿ ಮಹಾ ಭೂಕಂಪ ಆಗುವುದಕ್ಕೆ ಎರಡು ವರ್ಷಗಳ ಮುಂಚೆ, ತೆಕೋವದ ಕುರುಬರಲ್ಲೊಬ್ಬನಾದ ಆಮೋಸನಿಗೆ ಇಸ್ರಯೇಲಿನ ವಿಷಯವಾಗಿ ದೇವರಿಂದ ಬಂದ ಪ್ರಕಟಣೆಗಳು ಇವು. ಆಗ ಜುದೇಯ ನಾಡನ್ನು ಉಜ್ಜೀಯನೆಂಬ ಅರಸನು ಆಳುತ್ತಿದ್ದ ಕಾಲ. ಅಂತೆಯೇ, ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರಯೇಲನ್ನು ಆಳುತ್ತಿದ್ದ ಕಾಲ.
2 : ಆಮೋಸನ ಪ್ರಕಟಣೆ: ಗರ್ಜಿಸುತಿಹನು ಸರ್ವೇಶ್ವರ ಸಿಯೋನಿನಿಂದ ಧ್ವನಿಗೈಯುತಿಹನು ಜೆರುಸಲೇಮಿನಿಂದ: ಬಾಡಿಹೋಗುತ್ತಿವೆ ಕುರುಬರಾ ಹುಲ್ಲುಗಾವಲುಗಳು ಒಣಗಿಹೋಗುತಿವೆ ಕಾರ್ಮೆಲ್ ಗುಡ್ಡದ ನೆತ್ತಿಯ ಗಿಡಗಳು.
3 : ಸರ್ವೇಶ್ವರ ಇಂತೆನ್ನುತ್ತಾರೆ: ದಮಸ್ಕದ ಜನರು ಪದೇಪದೇ ಮಾಡಿರುವ ದ್ರೋಹಗಳಿಗಾಗಿ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಕಬ್ಬಿಣದ ಬಡಿಗೆಯಿಂದ ಧಾನ್ಯಗಳನ್ನು ಒಕ್ಕುವಂತೆ ಅವರು ಗಿಲ್ಯಾದ್ ಜನರನ್ನು ಬಡಿದುಬಿಟ್ಟಿದ್ದಾರೆ.
4 : ನಾನು ಹಜಾಯೇಲನ ಅರಮನೆಯ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಬೆನ್‍ಹದದನ ಕೋಟೆಕೊತ್ತಲಗಳನ್ನು ಕಬಳಿಸಿ ಬಿಡುವುದು.
5 : ದಮಸ್ಕದ ಮಹಾದ್ವಾರಗಳನ್ನು ಕೆಡವಿಹಾಕುವೆನು. ಆವೇನಿನ ಕಣಿವೆಯಲ್ಲಿ ಸಿಂಹಾಸನಾರೂಢನಾಗಿರುವವನನ್ನು ಮತ್ತು ಬೆತ್ – ಏದೆನ್‍ನಿಂದ ಆಡಳಿತಾಧಿಕಾರಿಯನ್ನು ನಿರ್ಮೂಲಮಾಡುವೆನು. ಸಿರಿಯದ ಜನರು ಕೀರ್ ಪ್ರಾಂತ್ಯಕ್ಕೆ ಸೆರೆಯಾಳುಗಳಾಗಿ ಹೋಗುವರು.” ಇದು ಸರ್ವೇಶ್ವರಸ್ವಾಮಿಯ ನುಡಿ.
6 : ಸರ್ವೇಶ್ವರ ಇಂತೆನ್ನುತ್ತಾರೆ: “ಗಾಜದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಇಡೀ ಜನಾಂಗವನ್ನೇ ಸೆರೆಹಿಡಿದು ಎದೋಮ್ ನಾಡಿಗೆ ಗಡೀಪಾರು ಮಾಡಿದ್ದಾರೆ.
7 : ಆದಕಾರಣ ನಾನು ಗಾಜದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಕೊತ್ತಲಗಳನ್ನು ಕಬಳಿಸಿ ಬಿಡುವುದು.
8 : ನಾನು ಅಷ್ಡೋದಿನಲ್ಲಿ ಸಿಂಹಾಸನಾರೂಢನಾಗಿ ಇರುವವನನ್ನೂ ಅಷ್ಕೆಲೋನಿನಲ್ಲಿ ಆಡಳಿತಾಧಿಕಾರಿಯನ್ನೂ ನಿರ್ಮೂಲಮಾಡುವೆನು. ಎಕ್ರೋನಿನ ಪಟ್ಟಣವನ್ನು ಶಿಕ್ಷಿಸುವೆನು. ಫಿಲಿಷ್ಟಿಯರಲ್ಲಿ ಅಳಿದುಳಿದವರೆಲ್ಲರೂ ನಾಶವಾಗಿ ಹೋಗುವರು,” ಇದೂ ಸರ್ವೇಶ್ವರಸ್ವಾಮಿಯ ನುಡಿ.
9 : ಸರ್ವೇಶ್ವರ ಇಂತೆನ್ನುತ್ತಾರೆ: “ಟೈರ್ ಪ್ರಾಂತ್ಯದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಸೋದರಪ್ರೇಮದ ಒಡಂಬಡಿಕೆಯನ್ನು ಅವರು ಮರೆತುಬಿಟ್ಟರು. ಅವರು ಇಡೀ ರಾಷ್ಟ್ರವನ್ನೇ ಸೆರೆಹಿಡಿದು ಎದೋಮ್ ನಾಡಿಗೆ ಗಡೀಪಾರು ಮಾಡಿದ್ದಾರೆ.
10 : ಆದಕಾರಣ ನಾನು ಟೈರಿನ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಕೊತ್ತಲಗಳನ್ನು ಕಬಳಿಸಿ ಬಿಡುವುದು.”
11 : ಸರ್ವೇಶ್ವರ ಇಂತೆನ್ನುತ್ತಾರೆ: ಎದೋಮ್ ಪ್ರಾಂತ್ಯದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ತಮ್ಮ ಸೋದರ ನಾಡಿನವರಾದ ಇಸ್ರಯೇಲರನ್ನು ಓಡಿಸಿದರು. ಅವರಿಗೆ ಕರುಣೆತೋರದೆ, ಕೊನೆಯವರೆವಿಗೂ ರೋಷವನ್ನೇ ಸಾಧಿಸಿದರು.
12 : ಆದುದರಿಂದ ನಾನು ತೇಮಾನ್ ಪಟ್ಟಣದ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಬೊಚ್ರದ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು.
13 : ಸರ್ವೇಶ್ವರ ಇಂತೆನ್ನುತ್ತಾರೆ: “ಅಮ್ಮೋನ್ಯರು ಪದೇಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ತಮ್ಮ ನಾಡಿನ (ಗಡಿ) ವಿಸ್ತರಣೆಗಾಗಿ ಗರ್ಭಿಣಿಯರ ಹೊಟ್ಟೆಯನ್ನೇ ತಿವಿದು ಸೀಳಿಬಿಟ್ಟಿದ್ದಾರೆ.
14 : ಆದಕಾರಣ ನಾನು ರಬ್ಬದ ಪ್ರಾಕಾರಗಳ ಮೇಲೆ ಬೆಂಕಿಯನ್ನು ಸುರಿಸುವೆನು. ಅದು ಅದರ ಕೋಟೆಕೊತ್ತಲಗಳನ್ನು ಕಬಳಿಸಿಬಿಡುವುದು. ಆಗ ಯುದ್ಧಾರ್ಭಟವೂ ಚಂಡಮಾರತದಂಥ ಪ್ರಚಂಡ ಕಾದಾಟವೂ ಉಂಟಾಗುವುವು.
15 : ಅರಸನೂ ರಾಜ್ಯಾಧಿಕಾರಿಗಳೂ ಒಟ್ಟಾಗಿ ಸೆರೆಹೋಗುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ.