Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೊವೇಲ


1 : ಸರ್ವೇಶ್ವರಸ್ವಾಮಿಯ ನುಡಿಯಿದು: “ಆ ದಿನಗಳಲ್ಲಿ ಜುದೇಯ ಹಾಗೂ ಜೆರುಸಲೇಮಿನ ಸಿರಿಸಂಪತ್ತನ್ನು ಮರಳಿ ಕೊಡುವೆನು.
2 : ಎಲ್ಲಾ ರಾಷ್ಟ್ರಗಳನ್ನು ನ್ಯಾಯತೀರ್ಪಿನ ಜೊಸೆಫಾತ್ ಕಣಿವೆಗೆ ಬರಮಾಡುವೆನು. ನನ್ನ ಪ್ರಜೆಯೂ ಸ್ವಜನರೂ ಆದ ಇಸ್ರಯೇಲರಿಗೆ ಅವರು ಮಾಡಿದ ಹಿಂಸೆಗಾಗಿ ನ್ಯಾಯಕೇಳುವೆನು. ಅವರು ನನ್ನ ಪ್ರಜೆಯನ್ನು ದೇಶವಿದೇಶಗಳಿಗೆ ಚದರಿಸಿದ್ದಾರೆ. ನನ್ನ ನಾಡನ್ನು ಹಂಚಿಕೊಂಡಿದ್ದಾರೆ.
3 : ನನ್ನ ಜನರಿಗಾಗಿ ಚೀಟುಹಾಕಿದ್ದಾರೆ. ವೇಶ್ಯಾಚಾರಕ್ಕಾಗಿ, ಮದ್ಯಪಾನಕ್ಕಾಗಿ, ಗಂಡುಮಕ್ಕಳನ್ನೂ ಹೆಣ್ಣುಮಕ್ಕಳನ್ನೂ ಮಾರಾಟ ಮಾಡಿದ್ದಾರೆ.
4 : “ಟೈರ್, ಸಿದೋನ್ ಮತ್ತು ಫಿಲಿಷ್ಟಿಯ ಪ್ರಾಂತ್ಯಗಳೇ, ನನ್ನ ಮೇಲೆ ನಿಮಗಿರುವ ದೂರು ಯಾವುದು? ನನಗೆ ಪ್ರತೀಕಾರ ಮಾಡಬೇಕೆಂದಿರುವಿರೋ? ಹಾಗೇನಾದರೂ ಮಾಡಿದ್ದೇ ಆದರೆ, ನೀವು ಮಾಡಿದ ಕೇಡನ್ನು ತಡಮಾಡದೆ ನಿಮ್ಮ ತಲೆಗೇ ತರುವೆನು.
5 : ನನ್ನ ಬೆಳ್ಳಿಬಂಗಾರಗಳನ್ನು, ಅತ್ಯಮೂಲ್ಯವಾದ ಬೊಕ್ಕಸಗಳನ್ನು ದೋಚಿಕೊಂಡು ನಿಮ್ಮ ದೇವಾಲಯಗಳಿಗೆ ಕೊಂಡೊಯ್ದಿದ್ದೀರಿ.
6 : ಜುದೇಯ ಮತ್ತು ಜೆರುಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿದ್ದೀರಿ; ಅವರನ್ನು ತಾಯ್ನಾಡಿನಿಂದ ದೂರಮಾಡಿದ್ದೀರಿ.
7 : ಇಂತಿರಲು, ನೀವು ಅವರನ್ನು ಮಾರಿದ ಊರುಗಳಿಂದ ದಂಗೆಯೆದ್ದು ಹೊರಬರುವಂತೆ ಅವರನ್ನು ಹುರಿ ದುಂಬಿಸುವೆನು. ನೀವು ಮಾಡಿದ ಕೇಡನ್ನು ನಿಮ್ಮ ತಲೆಗೇ ತರುವೆನು.
8 : ನಿಮ್ಮ ಪುತ್ರಪುತ್ರಿಯರನ್ನು ಯೆಹೂದ್ಯರಿಗೆ ಮಾರುವೆನು. ಅವರು ಆ ಮಕ್ಕಳನ್ನು ದೂರದಲ್ಲಿರುವ ಶೆಬದವರಿಗೆ ಮಾರಿಬಿಡುವರು. ಸರ್ವೇಶ್ವರನಾದ ನನ್ನ ನುಡಿಯಿದು.”
9 : “ರಾಷ್ಟ್ರಗಳಿಗೆ ಹೀಗೆ ಪ್ರಕಟಿಸಿರಿ: ರಾಷ್ಟ್ರಗಳೇ, ಯುದ್ಧಸನ್ನದ್ಧರಾಗಿರಿ. ಶೂರರನ್ನು ಎಚ್ಚರಗೊಳಿಸಿರಿ; ಯೋಧರೆಲ್ಲರೂ ಒಟ್ಟುಗೂಡಲಿ; ಯುದ್ಧಕ್ಕೆ ಹೊರಡಲಿ.
10 : ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿ ಮಾಡಿರಿ; ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ; ಬಲಹೀನನು ಸಹ ಬಲಾಢ್ಯನಂತೆ ಯುದ್ಧಕ್ಕೆ ನಿಂತುಕೊಳ್ಳಲಿ.
11 : ಸುತ್ತಮುತ್ತಲಿನ ರಾಷ್ಟ್ರಗಳೇ, ನೀವೆಲ್ಲರೂ ತ್ವರೆಮಾಡಿ ಕೂಡಿಬನ್ನಿ,” ಸರ್ವೇಶ್ವರ, ನಿಮ್ಮ ಯೋಧರನ್ನು ರಣರಂಗಕ್ಕೆ ಇಳಿಸಿರಿ.
12 : “ರಾಷ್ಟ್ರಗಳು ಎಚ್ಚೆತ್ತು ಸರ್ವೇಶ್ವರ ಸ್ವಾಮಿಯ ನ್ಯಾಯತೀರ್ಪಿನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ರಾಷ್ಟ್ರಗಳಿಗೆ ನ್ಯಾಯ ತೀರಿಸಲು ಅಲ್ಲಿ ನಾನು ಅಸೀನನಾಗಿರುವೆನು.
13 : ಸ್ವಾಮಿಯ ಶೂರರೇ, ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ. ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಅಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮೀರಿದೆ.
14 : “ಇಗೋ, ನ್ಯಾಯತೀರ್ಪಿನ ಕಣಿವೆಯಲ್ಲಿ ತಂಡೋಪತಂಡವಾದ ಜನಸ್ತೋಮ! ತೀರ್ಪಿನ ಕಣಿವೆಯಲ್ಲಿರುವವರಿಗೆ ಸರ್ವೇಶ್ವರನ ದಿನ ಸನ್ನಿಹಿತ!
15 : ಸೂರ್ಯಚಂದ್ರಗಳು ಮಂಕಾಗುತ್ತವೆ. ನಕ್ಷತ್ರಗಳು ಕಾಂತಿಗುಂದುತ್ತವೆ.
16 : ಸ್ವಾಮಿ ಸಿಯೋನಿನಿಂದ ಗರ್ಜಿಸುತ್ತಾರೆ, ಜೆರುಸಲೇಮಿನಿಂದ ಅವರ ಧ್ವನಿ ಮೊಳಗುತ್ತದೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೂ ಸರ್ವೇಶ್ವರ ತಮ್ಮ ಜನರಿಗೆ ಆಶ್ರಯ; ಇಸ್ರಯೇಲರಿಗೆ ರಕ್ಷಣಾ ದುರ್ಗ.
17 : “ಇಸ್ರಯೇಲರೇ, ಕೇಳಿ, ಪವಿತ್ರ ಪರ್ವತವಾದ ಸಿಯೋನಿನಲ್ಲಿ ನೆಲೆಯಾಗಿರುವ ನಿಮ್ಮ ಸರ್ವೇಶ್ವರಸ್ವಾಮಿ ದೇವರು ನಾನೇ ಎಂದು ಆಗ ನಿಮಗೆ ಮನದಟ್ಟಾಗುವುದು. ಜೆರುಸಲೇಮ್ ಪುಣ್ಯಕ್ಷೇತ್ರವೆನಿಸಿಕೊಳ್ಳುವುದು. ಪರಕೀಯರು ಅದನ್ನೆಂದಿಗೂ ಆಕ್ರಮಿಸರು.
18 : ಆ ದಿನಗಳಲ್ಲಿ ಬೆಟ್ಟಗುಟ್ಟಗಳಿಂದ ದ್ರಾಕ್ಷಾರಸ ಮತ್ತು ಹಾಲು ತುಪ್ಪ ಹರಿಯುವುದು. ಜುದೇಯ ನಾಡಿನ ಹಳ್ಳಕೊಳ್ಳಗಳು ನೀರಿನಿಂದ ತುಂಬಿರುವುವು. ದೇವಾಲಯದಿಂದ ನೀರು ಚಿಮ್ಮಿ ಬಂದು ಆಕಾಚಿಯದ ಹಳ್ಳವನ್ನು ತಂಪಾಗಿಸುವುದು.
19 : “ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ಧಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ.
20 : ಹತರಾದವರು ನಿರ್ದೋಷಿಗಳೆಂದು ನಿರ್ಣಯಿಸುವೆನು. ಕೊಲೆಪಾತಕರನ್ನು ದಂಡಿಸಿಯೇ ತೀರುವೆನು.
21 : ಆದರೆ ಜುದೇಯ ನಾಡು, ಜೆರುಸಲೇಮ್ ನಗರ ಜನಭರಿತವಾಗಿ ಇರುವುದು. ಸರ್ವೇಶ್ವರ ಸ್ವಾಮಿಯಾದ ನಾನು ಸಿಯೋನ್ ಪರ್ವತದಲ್ಲಿ ನೆಲೆಯಾಗಿರುವೆನು.”

· © 2017 kannadacatholicbible.org Privacy Policy